“ಮಾರ್ಗ ಬದಲಿಸಿ ಬಸ್ ಚಲಾಯಿಸಿದರೆ ಮಾಲಕರ ವಿರುದ್ಧ ಕ್ರಮ’
Team Udayavani, Jul 13, 2019, 5:00 AM IST
ಮಹಾನಗರ: ಬಸ್‌ಗಳನ್ನು ಮಾರ್ಗ ಬದಲಾಯಿಸಿ ಚಲಾಯಿಸುವ ಚಾಲಕರು ಮತ್ತು ಮಾಲಕರಿಗೆ ಲಿಖೀತ ನೋಟಿಸ್ ನೀಡಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದರು.
ಶುಕ್ರವಾರ ತಮ್ಮ ಕಚೇರಿಯಲ್ಲಿ ನಡೆದ ಫೋನ್-ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ದೂರುಗಳಿಗೆ ಸ್ಪಂದಿಸಿ ಅವರು ಮಾತನಾಡಿದರು. ರೂಟ್ ನಂ. 60 ಬಸ್ ಮಾಲೆಮಾರ್ ಮಾರ್ಗವಾಗಿ ಸಂಚರಿಸ ಬೇಕಾಗಿತ್ತು; ಆದರೆ ಅದು ಮಾರ್ಗ ಬದಲಾಯಿಸಿ ಓಡಾಡುತ್ತಿದೆ. 15 ನಂಬ್ರದ ಸಿಟಿ ಬಸ್‌ಗಳು ಮೋರ್ಗನ್ಸ್‌ಗೆàಟ್ ಮಾರ್ಗವಾಗಿ ಸಂಚರಿಸ ಬೇಕಾಗಿದ್ದರೂ ಅವುಗಳನ್ನು ಬೆಳಗ್ಗೆ ಮತ್ತು ಸಂಜೆ ಹೊತ್ತು ಮಾರ್ಗ ಬದಲಾಯಿಸಿ ಮಾರ್ನಮಿಕಟ್ಟೆ – ಕಾಸ್ಸಿಯಾ ಶಾಲೆ ಮಾರ್ಗದಲ್ಲಿ ಚಲಾಯಿಸಲಾಗುತಿªದೆ. ಇದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ ಎಂದು ನಾಗರಿಕರು ದೂರು ನೀಡಿದರು.
ಕೆಲವು ಮಂದಿ ಬಸ್ ಚಾಲಕರು ವೇಗವಾಗಿ, ಅಜಾಗ್ರತೆಯಿಂದ ಬಸ್ ಚಲಾಯಿಸುತ್ತಿದ್ದಾರೆ. ಬಸ್‌ನಲ್ಲಿ ಹಿರಿಯ ನಾಗರಿಕರಿಗೆ ಸೀಟು ಬಿಟ್ಟು ಕೊಡುತ್ತಿಲ್ಲ ಎಂದು ನಾಗರಿಕರೊಬ್ಬರು ದೂರು ನೀಡಿದರು. ಈ ಬಗ್ಗೆ ಬಸ್ ಮಾಲಕರ ಗಮನಕ್ಕೆ ತರಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದರು.
ಜನ ಪ್ರತಿನಿಧಿಗಳೇ ಹೀಗೆ ಮಾತಾಡಿದರೆ ಹೇಗೆ?
ಮಾಜಿ ಕಾರ್ಪೊರೇಟರ್ ಮೋಹನ್ ಪಡೀಲ್ ಕರೆ ಮಾಡಿ, ಬಿಕರ್ನಕಟ್ಟೆ ಕೈಕಂಬದಲ್ಲಿ ತರಕಾರಿ ಸಂತೆಗೆ ಬರುವ ಗ್ರಾಹಕರು ರಸ್ತೆ ಬದಿ ವಾಹನ ನಿಲ್ಲಿಸಿದರೆ ಅದನ್ನು ಟೋಯಿಂಗ್ ಮಾಡಲಾಗುತ್ತಿದೆ. ವಾಹನವನ್ನು ಬೇರೆ ಎಲ್ಲಿ ನಿಲ್ಲಿಸಬೇಕು ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಆಯುಕ್ತರು, ಜನ ಪ್ರತಿನಿಧಿಗಳಾಗಿ ಕೆಲಸ ಮಾಡಿದ ಅನುಭವ ಇರುವ ನೀವು ನಗರದ ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿತ್ತು; ಆದರೆ ನಿಮ್ಮಂಥವರೇ ಹೀಗೆ ಮಾತನಾಡಿದರೆ ಹೇಗೆ? ಸಮಸ್ಯೆ ಪರಿಹರಿಸುವವರು ಯಾರು ಎಂದು ಮರು ಪ್ರಶ್ನಿಸಿದರು.
ಶಾಲಾ ವಾಹನ ಬಿಕ್ಕಟ್ಟು ಪರಿಹರಿಸಲು ಆಗ್ರಹ
ಶಾಲಾ ಮಕ್ಕಳನ್ನು ಸಾಗಿಸುವ ವಾಹನಗಳ ಚಾಲಕ/ ಮಾಲಕರು ಎರಡು ದಿನಗಳಿಂದ ಮುಷ್ಕರ ನಡೆಸುತ್ತಿದ್ದು, ಇದರ ಪರಿಣಾಮವಾಗಿ ಕೆಲವು ಮಂದಿ ಪೋಷಕರು ಕೆಲಸಕ್ಕೆ ರಜೆ ಹಾಕಿ ಮನೆಯಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ಇದೆ. ಹಾಗಾಗಿ ಈ ಬಿಕ್ಕಟ್ಟು ಪರಿಹರಿಸಲು ಕ್ರಮ ಕೈಗೊಳ್ಳಬೇಕೆಂದು ಹಲವಾರು ಮಂದಿ ಕರೆ ಮಾಡಿ ಆಗ್ರಹಿಸಿದರು. ಈ ಬಗ್ಗೆ ಕೂಡಲೇ ಗಮನ ಹರಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದರು.
ರಿಕ್ಷಾಗಳ ಓವರ್ ಲೋಡ್ ಬಗ್ಗೆ ಮಾತ್ರ ಕ್ರಮ ಜರಗಿಸುತ್ತಿದ್ದು, ಸಿಟಿ ಬಸ್‌ಗಳ ಓವರ್ ಲೋಡ್‌ಗಳ ಬಗ್ಗೆ ಕ್ರಮ ಯಾಕಿಲ್ಲ ಎಂದು ರಿಕ್ಷಾ ಚಾಲಕರೊಬ್ಬರು ಪ್ರಶ್ನಿಸಿದರು. ಓವರ್‌ಲೋಡ್ ಮಾಡುವ ಎಲ್ಲ ವಾಹನಗಳ ಮೇಲೆ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ. ಈ ವಿಷಯದಲ್ಲಿ ತಾರತಮ್ಯ ಇಲ್ಲ ಎಂದು ಆಯುಕ್ತರು ವಿವರಿಸಿದರು.
ಬಿಜೈ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ತೊಕ್ಕೊಟ್ಟು- ಕೊಣಾಜೆ ಮಾರ್ಗವಾಗಿ ಅಮ್ಮೆಂಬಳ ದರ್ಗಾಕ್ಕೆ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್ ಬಿಜೈನಿಂದ ಅಪರಾಹ್ನ 3 ಗಂಟೆ ಬದಲು 3.15ಕ್ಕೆ ಬಿಡುವಂತಾಗಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ ಎಂದು ಅಮ್ಮೆಂಬಳದ ನಾಗರಿಕರೊಬ್ಬರು ಮನವಿ ಮಾಡಿದರು.
ಕಾರು ವಾಶ್ ನೀರಿನ ಸಮಸ್ಯೆ
ಕಾರು ವಾಶ್ ಮಾಡುವ ಹೆಚ್ಚಿನ ತಾಣಗಳು ರಸ್ತೆ ಬದಿ ಇದ್ದು, ಇದರಿಂದ ಪುಟ್‌ಪಾತ್‌ನಲ್ಲಿ ಚಲಿಸುವ ಪಾದಚಾರಿಗಳಿಗೆ ಗಲೀಜು ನೀರು ಎರಚಲ್ಪಡುತ್ತಿದೆ. ವಾಶ್ ಮಾಡಿದ ನೀರು ಚರಂಡಿ/ ರಸ್ತೆಗೆ ಸೇರಿ ಪರಿಸರ ಮಾಲಿನ್ಯ ಉಂಟಾಗುತ್ತಿದೆ ಎಂಬ ದೂರು ಬಂತು. ಈ ಬಗ್ಗೆ ಸಂಬಂಧ ಪಟ್ಟ ಕಾರ್‌ವಾಶ್ ಮಾಲಕರಿಗೆ ನೋಟಿಸ್ ನೀಡಲಾಗುವುದು ಎಂದರು.
120ನೇ ಫೋನ್ ಇನ್ ಕಾರ್ಯಕ್ರಮವಾಗಿದ್ದು, 29 ಕರೆಗಳು ಬಂದವು. ರಾಜವರ್ಮ ಬಲ್ಲಾಳ್, ಡಿಸಿಪಿ ಗಳಾದ ಹನುಮಂತರಾಯ, ಲಕ್ಷ್ಮೀ ಗಣೇಶ್, ಎಸಿಪಿ ಮಂಜುನಾಥ ಶೆಟ್ಟಿ, ಟ್ರಾಫಿಕ್ ಇನ್‌ಸ್ಪೆಕ್ಟರ್‌ಗಳಾದ ಗುರುದತ್ತ ಕಾಮತ್, ಅನಂತ್ ಮುಡೇìಶ್ವರ, ಸಬ್ ಇನ್‌ಪೆಕ್ಟರ್ ಪೂವಪ್ಪ ಎಚ್.ಎಂ., ಎಎಸ್‌ಐ ಪಿ. ಯೋಗೇಶ್ವರನ್, ಹೆಡ್‌ಕಾನ್ಸ್‌ಟೆಬಲ್ ಪುರುಷೋತ್ತಮ ಉಪಸ್ಥಿತರಿದ್ದರು.
ಪ್ರಮುಖ ದೂರುಗಳು
ಗುರುಪುರ ಕೈಕಂಬ ವೃತ್ತದಲ್ಲಿ ಆಗಿಂದಾಗ್ಗೆ ಟ್ರಾಫಿಕ್ ಜಾಮ್ ಆಗುತ್ತಿದ್ದು, ಅಲ್ಲಿ ಪೀಕ್ ಆವರ್‌ನಲ್ಲಿ ಸಂಚಾರ ನಿಯಂತ್ರಣಕ್ಕೆ ಪೊಲೀಸ್ ಸಿಬಂದಿ ನೇಮಿಸಬೇಕು.
ಸುರತ್ಕಲ್ ಜಂಕ್ಷನ್‌ನಲ್ಲಿ ರಸ್ತೆ ಬದಿ ವಾಹನ ನಿಲುಗಡೆ ಮಾಡುತ್ತಿದ್ದು, ಟ್ರಾಫಿಕ್ ಜಾಂ ಆಗುತ್ತಿದೆ.
ಕೊಡಿಯಾಲಬೈಲ್‌ನಲ್ಲಿ ಸಾಕು ನಾಯಿಗಳಿಂದ ಗಲೀಜು ಮಾಡಿಸುತ್ತಿದ್ದು, ಪಾದಚಾರಿಗಳಿಗೆ ಕಷ್ಟವಾಗುತ್ತಿದೆ.
ಫಳ್ನೀರ್ ಸೈಂಟ್ ಮೇರೀಸ್ ಶಿಕ್ಷಣ ಸಂಸ್ಥೆಯ ಬಳಿ ಬೆಳಗ್ಗೆ ಮತ್ತು ಸಂಜೆ ಹೊತ್ತು ಟ್ರಾಫಿಕ್ ಸಮಸ್ಯೆ ನಿವಾರಿಸಲು ಪೊಲೀಸ್ ಸಿಬಂದಿ ನೇಮಿಸಿ.
ಉಳ್ಳಾಲ ನೇತ್ರಾವತಿ ಸೇತುವೆ ಮೇಲೆ ಮಳೆಗಾಲದಲ್ಲಿ ಬಸ್‌ಗಳನ್ನು ಪೈಪೋಟಿಯಿಂದ ಚಲಾಯಿಸುವುದು ಅಪಾಯಕಾರಿ; ಈ ಬಗ್ಗೆ ಕ್ರಮ ಜರಗಿಸಬೇಕು.
ಉಳ್ಳಾಲ, ಕೋಟೆಪುರ, ಪಣಂಬೂರು, ಸಸಿಹಿತ್ಲು ಬೀಚ್‌ಗಳಲ್ಲಿ ಹೊರ ಜಿಲ್ಲೆಯ ಮಂದಿ ವಿಹಾರಕ್ಕೆ ಬಂದು ಸಮುದ್ರ ಪಾಲಾಗುತ್ತಿದ್ದು, ಇದನ್ನು ತಡೆಯಲು ಬೀಚ್‌ಗಳಲ್ಲಿ ಪೊಲೀಸ್ ಸಿಬಂದಿ ನಿಯೋಜಿಸಿ.
ಕೋಡಿಕಲ್‌ಗೆ ಹೋಗುವ 1 ಸಿ ನಂಬ್ರದ ಸಿಟಿ ಬಸ್ ಸಂಚಾರ ಮತ್ತೆ ಆರಂಭಿಸಬೇಕು; 61 ನಂಬ್ರದ ಬಸ್‌ಗಳು ಮಧ್ಯಾಹ್ನ ಟ್ರಿಪ್ ಕಡಿತದಿಂದ ಜನರಿಗೆ ಸಮಸ್ಯೆ ಆಗಿದೆ.
ಎಕ್ಕೂರಿನಲ್ಲಿ ಬಸ್ ತಂಗುದಾಣ ಇರುವಲ್ಲಿ ಬಸ್‌ಗಳನ್ನು ನಿಲ್ಲಿಸುತ್ತಿಲ್ಲ.
ಹತ್ತು ರೂಪಾಯಿ ನಾಣ್ಯವನ್ನು ಬಸ್ ಕಂಡಕ್ಟರ್‌ಗಳು ಸ್ವೀಕಸುತ್ತಿಲ್ಲ.
ಕಾರ್ ಇಂಡಿಕೇಟರ್ ಯಾವ ಕಲರ್‌ನಲ್ಲಿ ಇರಬೇಕು?
ಮೂಡುಫೆರಾರ್‌ನಲ್ಲಿ ಮನೆಯಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ.