Special Interview: ಸೈಬರ್ ಪ್ರಕರಣಗಳ ತನಿಖೆಗೂ ಎಲ್ಲ ಠಾಣೆ ಸನ್ನದ್ಧ: ಡಿಐಜಿಪಿ
ಪಶ್ಚಿಮ ವಲಯ ನೂತನ ಡಿಐಜಿಪಿ ಡಾ| ಎಂ.ಬಿ. ಬೋರಲಿಂಗಯ್ಯ
Team Udayavani, Feb 9, 2024, 8:19 AM IST
ಮಂಗಳೂರು: ಕಳ್ಳತನ, ಹಲ್ಲೆ, ಕೊಲೆ ಮುಂತಾದ ಪ್ರಕರಣಗಳು ಮಾತ್ರವಲ್ಲದೆ ಸೈಬರ್ ಅಪರಾಧಗಳನ್ನು ಕೂಡ ಠಾಣೆಯ ಮಟ್ಟದಲ್ಲಿಯೇ ನಿಭಾಯಿಸುವ ಸಾಮರ್ಥ್ಯ ಪ್ರತೀ ಪೊಲೀಸ್ ಠಾಣೆಯ ಅಧಿಕಾರಿ, ಸಿಬಂದಿಗೂ ಬರಲಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡ ಪಶ್ಚಿಮ ವಲಯದ ನೂತನ ಡಿಐಜಿಪಿ ಡಾ| ಎಂ.ಬಿ. ಬೋರಲಿಂಗಯ್ಯ ಹೇಳಿದ್ದಾರೆ.
ಡಿಐಜಿಪಿಯಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭ “ಉದಯವಾಣಿ’ ನಡೆಸಿದ ಸಂದರ್ಶನದಲ್ಲಿ ಅವರು ಸೈಬರ್ ಅಪರಾಧ, ಡ್ರಗ್ಸ್, ಅಪಘಾತಗಳ ತಡೆಗೆ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವ ನಿಲುವನ್ನು ವ್ಯಕ್ತಪಡಿಸಿದ್ದಾರೆ.
ಪೊಲೀಸರ ಮೇಲೆ ಜನತೆಯ ವಿಶ್ವಾಸ ವೃದ್ಧಿಗೆ ಏನು ಮಾಡುತ್ತೀರಿ?
ಪೊಲೀಸರು ಜನರಿಗೆ ಸಹಾಯ ಮಾಡುವುದಕ್ಕಾಗಿ ಇರುವವರೆಂಬ ಭಾವನೆ ಮೂಡಿಸಬೇಕಾಗಿದೆ. ಜನಸ್ನೇಹಿ ಪೊಲೀಸಿಂಗ್‌ಗೆ ಆದ್ಯತೆ ನೀಡುತ್ತೇವೆ. ಠಾಣೆಗೆ ಯಾರೇ ಬಂದರೂ ಅಹವಾಲುಗಳನ್ನು ಆಲಿಸಿ ನಿರ್ಲಕ್ಷ್ಯ ತೋರದೆ ಅಗತ್ಯ ಇರುವ ಎಲ್ಲ ಸಂದರ್ಭದಲ್ಲಿಯೂ ಪ್ರಕರಣ ದಾಖಲಿಸಿಕೊಳ್ಳಲಾಗುವುದು.
ಅಕ್ರಮ, ಅಪರಾಧಗಳ ತಡೆಗೆ ತತ್‌ಕ್ಷಣದ ಕ್ರಮ?
ಪ್ರತೀ ಪ್ರದೇಶಕ್ಕೂ ಪೊಲೀಸರ ಭೇಟಿ, ಓಡಾಟವನ್ನು ಕೂಡಲೇ ಹೆಚ್ಚಿಸಲಾಗುವುದು. ನೈಟ್ ಬೀಟ್, ನೈಟ್ ರೌಂಡ್ಸ್ ವ್ಯಾಪಕಗೊಳಿಸಲಾಗುವುದು. ನಾಕಾಬಂದಿ ಕೂಡ ಹೆಚ್ಚಿಸಲಾಗುವುದು. ಹಳೆಯ ಪ್ರಕರಣಗಳು, ಆರೋಪಿಗಳ ಮೇಲೆ ನಿಗಾ ಇಡಲಾಗುವುದು.
ಆನ್‌ಲೈನ್ ವಂಚನೆಯಿಂದ ಜನರನ್ನು ಹೇಗೆ ರಕ್ಷಿಸುತ್ತೀರಿ?
ಆನ್‌ಲೈನ್, ಡಿಜಿಟಲ್ ವ್ಯವಹಾರಗಳು ಹೆಚ್ಚುತ್ತಿರುವ ಜತೆಗೇ ವಂಚನೆ, ಅಪರಾಧಗಳೂ ಹೆಚ್ಚುತ್ತಿವೆ. ಗ್ರಾಮೀಣ ಜನತೆ ಕೂಡ ಸೈಬರ್ ವಂಚಕರ ಬಲೆಗೆ ಬೀಳುತ್ತಿದ್ದಾರೆ. ಇದನ್ನು ತಡೆಯಲು ಪೊಲೀಸ್ ಮಹಾನಿರ್ದೇಶಕರು ಸ್ಪಷ್ಟ ಸೂಚನೆ ನೀಡಿದ್ದಾರೆ. ಅದರಂತೆ ಪ್ರತೀ ಠಾಣೆಯಲ್ಲಿ ಸೈಬರ್ ಅಪರಾಧಗಳ ಪತ್ತೆ, ತಡೆಗೆ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಎಲ್ಲ ಠಾಣೆಯಲ್ಲೂ ಸೈಬರ್ ಪ್ರಕರಣಗಳ ನಿರ್ವಹಣೆ, ಪತ್ತೆಗೆ ಪೂರಕವಾಗಿ ಸಬ್ ಇನ್‌ಸ್ಪೆಕ್ಟರ್, ಕೆಲವು ಸಿಬಂದಿಗೆ ವಿಶೇಷ ತರಬೇತಿ ನೀಡಲಾಗುವುದು. ತುಂಬಾ ಕ್ಲಿಷ್ಟ ಪ್ರಕರಣಗಳನ್ನು ಮಾತ್ರವೇ ಸೈಬರ್ ಠಾಣೆಗೆ ವರ್ಗಾಯಿಸಿ ಉಳಿದವನ್ನು ಸ್ಥಳೀಯ ಠಾಣೆಯಲ್ಲೇ ನಿಭಾಯಿಸುವಂತೆ ಠಾಣೆಗಳನ್ನು ಸನ್ನದ್ಧಗೊಳಿಸಲಾಗುವುದು.
ಮಾದಕ ಪದಾರ್ಥಗಳು ಹಳ್ಳಿಗಳಿಗೂ ವ್ಯಾಪಿಸುತ್ತಿವೆಯಲ್ಲಾ?
ಹೌದು. ಈ ಬಗ್ಗೆಯೂ ವಿಶೇಷ ನಿಗಾ ಇಡಲಾಗುವುದು. ಜಾಗೃತಿ ಮೂಡಿಸುವ ಜತೆಗೆ ಕಠಿನ ಕಾನೂನು ಕ್ರಮಗಳನ್ನು ಕೂಡ ತೆಗೆದುಕೊಳ್ಳಲಾಗುವುದು. ಮಾದಕ ದ್ರವ್ಯ ಸೇವನೆ ಮಾಡುವವರನ್ನು ಪತ್ತೆಹಚ್ಚಿ ಕೌನ್ಸೆಲಿಂಗ್‌ಗೆ ಒಳಪಡಿಸಲಾಗುವುದು. ಪೂರೈಕೆ ದಾರರ ಮೇಲೆ ಕಠಿನ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಡ್ರಗ್ಸ್ ಸಾಮಾಜಿಕ ಪಿಡುಗು. ಇದನ್ನು ಹೋಗಲಾಡಿಸಲು ವಿಶೇಷ ಆದ್ಯತೆ ಅಗತ್ಯ. ಈ ಹಿಂದೆ ಉಡುಪಿ ಎಸ್ ಪಿಯಾಗಿ, ಅನಂತರ ಕೆಲವು ದಿನಗಳ ಕಾಲ ದ.ಕ. ಎಸ್‌ಪಿಯಾಗಿ ಸೇವೆ ಸಲ್ಲಿಸಿದ್ದೆ. ಆ ಸಂದರ್ಭದಲ್ಲಿಯೂ ಕೆಲವು ಡ್ರಗ್ಸ್ ಚಟುವಟಿಕೆ ಗಮನಿಸಿ ಕ್ರಮ ಕೈಗೊಂಡಿದ್ದೆ.
ರಸ್ತೆ ಸಂಚಾರ ಸುರಕ್ಷೆಗೆ ಪೊಲೀಸರ ಕ್ರಮ ಏನು?
ಸಂಚಾರ ನಿಯಮ ಉಲ್ಲಂ ಸುವ ವಾಹನ ಚಾಲಕರು, ಸವಾರರ ವಿರುದ್ಧ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಾಗುವುದು. ರಸ್ತೆ ಅಪಘಾತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಜೀವ ಕಳೆದುಕೊಳ್ಳುತ್ತಿದ್ದಾರೆ. ರಸ್ತೆಗಳಲ್ಲಿ ಮ್ಯಾಪಿಂಗ್ ನಡೆಸಿ ಅಪಘಾತ ತಡೆಗೆ ಎಚ್ಚರಿಕೆ, ಸೂಚನಾ ಫಲಕ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುವುದು. ರಸ್ತೆಗಳ ಅವೈಜ್ಞಾನಿಕ ವಿನ್ಯಾಸ, ದುಸ್ಥಿತಿ ಕಾರಣವಾಗಿದ್ದರೆ ಸಂಬಂಧಿಸಿದವರಿಗೆ ಸೂಚನೆ ನೀಡಲಾಗುವುದು.
ಮುಂಬರುವ ಚುನಾವಣೆಗೆ ಸಿದ್ಧತೆ ಹೇಗಿದೆ?
ನಕ್ಸಲ್ ಚಟುವಟಿಕೆ ಇದ್ದ ಪ್ರದೇಶಗಳು ಸೇರಿದಂತೆ ಎಲ್ಲ ಸೂಕ್ಷ್ಮ ಪ್ರದೇಶಗಳಲ್ಲಿ ಈಗಿಂದಲೇ ಹೆಚ್ಚಿನ ನಿಗಾ ಇಡಲಾಗುತ್ತಿದೆ. ಹೆಚ್ಚುವರಿ ಪೊಲೀಸ್ ಸಿಬಂದಿಯನ್ನು ನಿಯೋಜಿಸಲಾಗುವುದು. ಗಡಿಭಾಗದಲ್ಲಿ ವಿಶೇಷ ಕಣ್ಗಾವಲು ಏರ್ಪಡಿಸಲಾಗುತ್ತಿದೆ.
ನೈತಿಕ ಪೊಲೀಸ್‌ಗಿರಿ ತಡೆ ಹೇಗೆ?
ಯಾವುದೇ ರೀತಿಯಲ್ಲಿ ಕಾನೂನು ಉಲ್ಲಂಘನೆಗೆ ಅವಕಾಶ ನೀಡುವುದಿಲ್ಲ. ಕಾನೂನು, ಶಾಂತಿ ಸುವ್ಯವಸ್ಥೆ ನಮ್ಮ ಮೊದಲ ಆದ್ಯತೆ. ಎಲ್ಲರೂ ಇದಕ್ಕೆ ಸಹಕರಿಸುವರೆಂಬ ವಿಶ್ವಾಸವಿದೆ.
ಉದಯವಾಣಿ ಸಂದರ್ಶನ:- ಸಂತೋಷ್ ಬೊಳ್ಳೆಟ್ಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
Doctor; ಖ್ಯಾತ ಹೃದ್ರೋಗ ತಜ್ಞ ಡಾ.ಎಸ್.ಜಿ.ಸರ್ವೋತ್ತಮ ಪ್ರಭು ವಿಧಿವಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.