Padil ಹೆದ್ದಾರಿಗೆ ಡಾಮರು, ಜಂಕ್ಷನ್‌ಗೆ ಇಲ್ಲ !
ರಾ. ಹೆದ್ದಾರಿ ಇಲಾಖೆ, ಮಹಾನಗರ ಪಾಲಿಕೆ ಎರಡರಿಂದಲೂ ದಿವ್ಯ ನಿರ್ಲಕ್ಷ್ಯ
Team Udayavani, Nov 13, 2024, 2:33 PM IST
![7(1](https://www.udayavani.com/wp-content/uploads/2024/11/71-2-620x331.jpg)
![7(1](https://www.udayavani.com/wp-content/uploads/2024/11/71-2-620x331.jpg)
ಪಡೀಲ್: ರಾಷ್ಟ್ರೀಯ ಹೆದ್ದಾರಿ 73ರ ನಗರದ ಪಡೀಲ್ ಭಾಗದಲ್ಲಿ ಹೊಂಡ-ಗುಂಡಿಗಳಿಂದ ಹದಗೆಟ್ಟಿದ್ದ ಭಾಗವನ್ನು ಡಾಮರು ಹಾಕಿ ದುರಸ್ತಿ ಮಾಡಲಾಗಿದೆ. ಈ ಮೂಲಕ ವಾಹನ ಚಾಲಕ/ ಸವಾರರ ಸಂಕಷ್ಟಕ್ಕೆ ಕೊನೆಗೂ ಮುಕ್ತಿ ಸಿಕ್ಕಿದೆ. ಆದರೆ, ಅತ್ಯಂತ ಪ್ರಮುಖವಾಗಿರುವ ಜಂಕ್ಷನ್‌ನಲ್ಲಿ ಡಾಮರು ಹಾಕದೆ ಹಾಗೆಯೇ ಬಿಡಲಾಗಿದೆ.
ಪಡೀಲ್ ಜಂಕ್ಷನ್‌ನಲ್ಲಿ ಹೆದ್ದಾರಿಯಿಂದ ನಗರಕ್ಕೆ ಪ್ರವೇಶಿಸುವಲ್ಲಿರುವ ಯು.ಎಸ್. ಮಲ್ಯ ವೃತ್ತದ ಬಳಿ ರಸ್ತೆಯಲ್ಲಿ ಹೊಂಡ ಗುಂಡಿಗಳು ಉಂಟಾಗಿವೆ. ಗುಂಡಿಗಳಿಗೆ ಈ ಹಿಂದೆ ಹಾಕಲಾಗಿದ್ದು, ಜಲ್ಲಿ ಮಿಕ್ಸ್ ಎದ್ದು ಹೋಗಿದೆ. ಇದರಿಂದಾಗಿ ಜಲ್ಲಿ ಎಲ್ಲೆಡೆ ಹರಡಿ ಹೋಗಿದೆ. ಇದು ದ್ವಿಚಕ್ರ ವಾಹನ ಸವಾರರಿಗೆ ಅಪಾಯಕಾರಿ ಪರಿಣಮಿಸಿದೆ. ಮಳೆ ಬಂದರೆ ರಸ್ತೆಯಲ್ಲೇ ನೀರು ಸಂಗ್ರಹವಾಗುವುದರಿಂದ ರಸ್ತೆ ಯಾವುದು, ಗುಂಡಿ ಯಾವುದು ಎಂದು ತಿಳಿಯುವುದಿಲ್ಲ.
ಹೆದ್ದಾರಿ ಇಲಾಖೆ ಹೆದ್ದಾರಿಯಲ್ಲಿರುವ ಗುಂಡಿಗಳಿಗೆ ಡಾಮರು ಹಾಕಿ ದುರಸ್ತಿ ಮಾಡಲಾಗಿದೆ. ಆದರೆ ನಗರ ಪ್ರವೇಶಿಸುವ ರಸ್ತೆಯನ್ನು ಹಾಗೆಯೇ ಬಿಡಲಾಗಿದೆ. ರಸ್ತೆ ಮಹಾನಗರ ಪಾಲಿಕೆಗೆ ಸೇರಿದ್ದಾಗಿರುವುದರಿಂದ, ಹೆದ್ದಾರಿ ಇಲಾಖೆಯವರು ಡಾಮರು ಹಾಕುವ ಗೋಜಿಗೆ ಹೋಗಿಲ್ಲ. ಇನ್ನೊಂದೆಡೆ ಪಾಲಿಕೆಯೂ ಜಂಕ್ಷನ್ ಪ್ರದೇಶವನ್ನು ನಿರ್ಲಕ್ಷಿಸಿದಂತಿದೆ. ಪಕ್ಕದಲ್ಲೇ ಪಂಪ್‌ವೆಲ್ – ಪಡೀಲ್ ರಸ್ತೆ ಅಭಿವೃದ್ಧಿಯ ಕಾಮಗಾರಿ ನಡೆದಿದ್ದು, ಆದರೆ ಈ ಒಂದು ಸಣ್ಣ ಪ್ರದೇಶವನ್ನು ನಿರ್ಲಕ್ಷಿಸಲಾಗಿದೆ.
ರೈಲ್ವೇ ಕೆಳಸೇತುವೆ ಬಳಿ ಗುಂಡಿಗಳಿಗೆ ಮುಕ್ತಿ
ಪಡೀಲ್ ರೈಲ್ವೇ ಕೆಳಸೇತುವೆ ಬಳಿ ಬಿರುಸಿನ ಮಳೆ ಹಾಗೂ ನಿರಂತರ ವಾಹನ ಸಂಚಾರದಿಂದ ಹೆದ್ದಾರಿ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿತ್ತು. ರಸ್ತೆಯಲ್ಲೇ ನೀರು ಹರಿದು ಹೋಗುತ್ತಿದ್ದ ಪರಿಣಾಮ ಗುಂಡಿಗಳು ಉಂಟಾಗಿತ್ತು. ಇದರಿಂದಾಗಿ ವಾಹನ ಸಂಚಾರ ದುಸ್ತರವಾಗಿತ್ತು. ಈ ಬಗ್ಗೆ ‘ಉದಯವಾಣಿ ಸುದಿನ’ ಅ. 15ರಂದು ‘ದ್ವಿಚಕ್ರ ವಾಹನ ಸವಾರರಿಗೆ ಭಾರೀ ಅಪಾಯ!’ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಲಾಗಿತ್ತು. ಇದೀಗ ಆ ಭಾಗಕ್ಕೆ ಡಾಮರು ಹಾಕಲಾಗಿದೆ.