Bajpe: ಹಳ್ಳಿಯ ತೋಡು, ಗದ್ದೆ, ತೋಟಗಳನ್ನೂ ಬಿಡದ ಪ್ಲಾಸ್ಟಿಕ್!
ತೋಡಿನ ಮೂಲಕ ಗದ್ದೆ ಸೇರುತ್ತಿರುವ ತ್ಯಾಜ್ಯದಿಂದ ಸಮಸ್ಯೆ; ಉಳುಮೆಗೂ ತೊಂದರೆ, ಬಿತ್ತಿದ ಬೀಜಕ್ಕೂ ಹಾನಿ; ಮಣ್ಣಿನ ಫಲವತ್ತತೆಯನ್ನೇ ನಾಶಪಡಿಸುವ ಪ್ಲಾಸ್ಟಿಕ್‌ನಿಂದ ಅನ್ನದಾತರೂ ಕಂಗಾಲು; ಜಲಮೂಲಗಳಿಗೂ ಕಂಟಕ
Team Udayavani, Nov 6, 2024, 1:17 PM IST
ಬಜಪೆ: ಪ್ಲಾಸ್ಟಿಕ್ ತ್ಯಾಜ್ಯ ಎನ್ನುವುದು ನಗರದ ಸಮಸ್ಯೆ ಎನ್ನುವಂತೆ ಎಲ್ಲ ಕಡೆ ಬಿಂಬಿತವಾಗುತ್ತಿದೆ. ಆದರೆ, ಈ ಮಾರಿಯ ಹಾವಳಿ ಗ್ರಾಮೀಣ ಬದುಕನ್ನೂ ಬಿಟ್ಟಿಲ್ಲ. ಗಂಭೀರವಾಗಿ ಯೋಚನೆ ಮಾಡಿದರೆ ಪ್ಲಾಸ್ಟಿಕ್ ನಗರಕ್ಕಿಂತಲೂ ಗ್ರಾಮೀಣ ಭಾಗದಲ್ಲೇ ಹೆಚ್ಚು ಅನಾಹುತಗಳನ್ನು ಸೃಷ್ಟಿಸುತ್ತಿದೆ. ಅದರಲ್ಲೂ ನಗರಕ್ಕೆ ಹೊಂದಿಕೊಂಡಂತಿರುವ ಗ್ರಾಮೀಣ ಭಾಗಗಳು ಹೆಚ್ಚು ಆಕ್ರಮಣಕ್ಕೆ ಒಳಗಾಗಿವೆ.
ನಗರಗಳಲ್ಲಿ ರಸ್ತೆ ಬದಿ ಪ್ಲಾಸ್ಟಿಕ್ ತ್ಯಾಜ್ಯ ಎಸೆಯುತ್ತಾರೆ, ಕಸ ವಿಂಗಡಣೆ ಮಾಡಿ ಕೊಡದೆ ಇದ್ದರೆ ಪ್ಲಾಸ್ಟಿಕ್-ಕಸದ ಪರ್ವತಗಳು ಸೃಷ್ಟಿಯಾಗುತ್ತವೆ. ತೋಡುಗಳಲ್ಲಿ ಪ್ಲಾಸ್ಟಿಕ್ ತುಂಬಿ ನೀರಿನ ಹರಿವಿಗೆ ತಡೆಯಾಗುತ್ತದೆ. ಮೈಕ್ರೋ ಪ್ಲಾಸ್ಟಿಕ್‌ಗಳು ಜೀವಜಲವನ್ನೇ ನಾಶ ಮಾಡುತ್ತವೆ. ಆದರೆ, ಗ್ರಾಮೀಣ ಭಾಗದಲ್ಲಿ ಪ್ಲಾಸ್ಟಿಕ್ ನಿಧಾನವಾಗಿ ನಮ್ಮ ಅನ್ನದ ಬಟ್ಟಲಿಗೇ ಕಲ್ಲು ಹಾಕುತ್ತಿದೆ. ಹೇಗೆ ಅಂತೀರಾ?
ತೋಡು, ಗದ್ದೆಯಲ್ಲೆಲ್ಲ ಪ್ಲಾಸ್ಟಿಕ್!
ನಮ್ಮ ಆಹಾರದ ಮೂಲ ಇರುವುದು ಗದ್ದೆಗಳಲ್ಲಿ, ತೋಟಗಳಲ್ಲಿ. ಅದಕ್ಕೆ ಆಧಾರ ವಾಗಿರುವುದು ಮಣ್ಣು. ನಿಜವೆಂದರೆ ಪ್ಲಾಸ್ಟಿಕ್‌ನ ಎರ್ರಾಬಿರ್ರಿ ಬಳಕೆಯಿಂದಾಗಿ ಮಣ್ಣಿನಲ್ಲೂ ಪ್ಲಾಸ್ಟಿಕ್ ಸೇರಿಕೊಂಡು ಅನಾಹುತಗಳಿಗೆ ಕಾರಣವಾಗುತ್ತಿದೆ.
ಮನೆಗಳಿಗೆ ಬಂದ ಪ್ಲಾಸ್ಟಿಕ್ ಕೂಡಾ ಇತ್ತೀಚಿನ ದಿನಗಳಲ್ಲಿ ಗಾಳಿಯಲ್ಲಿ ಹಾರಿ ಹೋಗಿ ಗದ್ದೆ, ತೋಟ ಸೇರುತ್ತಿದೆ. ಅದಕ್ಕಿಂತಲೂ ಹೆಚ್ಚಾಗಿ ತೋಡುಗಳ ಮೂಲಕ ದೊಡ್ಡ ಪ್ರಮಾಣದಲ್ಲಿ ಪ್ಲಾಸ್ಟಿಕ್ ತೋಟ ಸೇರುತ್ತಿವೆ.
ಸಾರ್ವಜನಿಕರು ನೀರಿನಲ್ಲಿ ಹರಿದು ಹೋಗುತ್ತದೆ ಎಂಬ ಕಾರಣಕ್ಕಾಗಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತೋಡಿಗೆ ಎಸೆಯುವುದನ್ನು ರೂಢಿ ಮಾಡಿಕೊಂಡಿದ್ದಾರೆ! ಅದು ನೀರಿನ ಮೂಲಕ ಸಾಗಿ ಸೇರುವುದು ತಗ್ಗು ಪ್ರದೇಶದ ಗದ್ದೆ, ತೋಟಗಳನ್ನೇ! ಅಲ್ಲಿ ಅದು ಉಂಟು ಮಾಡುವ ಅವಾಂತರ ಭಾರಿ ದೊಡ್ಡದು.
ಮೊದಲ ಮಳೆಗೆ ಪ್ಲಾಸ್ಟಿಕ್ ಹೆಕ್ಕುವ ಕೆಲಸ!
ಮೊದಲ ಮಳೆಗೆ ತೋಡಿನಲ್ಲಿ ರಾಶಿಬಿದ್ದ ಪ್ಲಾಸ್ಟಿಕ್ ತ್ಯಾಜ್ಯ ಹಲವು ತಗ್ಗು ಪ್ರದೇಶದಲ್ಲಿರುವ ಗದ್ದೆಯಲ್ಲಿ ಶೇಖರವಾಗುವ ದೃಶ್ಯವನ್ನು ಎಲ್ಲೆಲ್ಲೂ ಕಾಣಬಹುದು. ಗದ್ದೆ ಸೇರುವ ಪ್ಲಾಸ್ಟಿಕ್ ಬಾಟಲಿಗಳು, ಪ್ಲಾಸ್ಟಿಕ್ ಚೀಲಗಳನ್ನು ಹೆಕ್ಕುವುದೇ ಕೃಷಿಕರಿಗೆ ಒಂದು ದೊಡ್ಡ ಕೆಲಸವಾಗುತ್ತದೆ.
ಗದ್ದೆಯಲ್ಲಿ ಪ್ಲಾಸ್ಟಿಕ್ ಚೀಲ, ಬಾಟಲಿಗಳು ಎಷ್ಟರ ಮಟ್ಟಿಗೆ ಶೇಖರವಾಗಿವೆ ಎನ್ನುವುದು ಟಿಲ್ಲರ್‌ನಲ್ಲಿ ಉಳುಮೆ ಮಾಡುವಾಗ ಗೊತ್ತಾಗುತ್ತದೆ. ಇವುಗಳೆಲ್ಲ ಸಿಕ್ಕಿಹಾಕಿಕೊಂಡಾಗ ಯಂತ್ರಕ್ಕೇ ಉಳುಮೆ ಕಷ್ಟವಾಗುತ್ತದೆ.
ತೋಡುಗಳಿಗೆ ಪ್ಲಾಸ್ಟಿಕ್ ಎಸೆತ ಅವ್ಯಾಹತ!
ಗ್ರಾಮೀಣ ಭಾಗದಲ್ಲಿ ರಸ್ತೆ ಪಕ್ಕದ ತೋಡುಗಳಿಗೆ ಮನೆಯ ತ್ಯಾಜ್ಯ ವಸ್ತುಗಳನ್ನು ಎಸೆಯುವ ಪ್ರವೃತ್ತಿ ಹೆಚ್ಚಾಗಿದೆ. ರಸ್ತೆ ಬದಿ ಇರುವ ತೋಟ ಮತ್ತು ಗದ್ದೆಗಳು ಕೂಡಾ ತಿಪ್ಪೆಗುಂಡಿಯಾಗುತ್ತಿವೆ.
ಹರಿಯುವ ನೀರಿಗೆ ತ್ಯಾಜ್ಯ ಎಸೆದರೆ ಏನೂ ತೊಂದರೆ ಇಲ್ಲ. ಅದು ನೀರಿನಲ್ಲಿ ಹರಿದು ಹೋಗುತ್ತದೆ ಎಂದು ಕೆಲವರು ಈ ರೀತಿ ಮಾಡುತ್ತಾರೆ. ಬೈಕೋ, ಕಾರಿನಲ್ಲೋ ಸಾಗುತ್ತಾ ರಪ್ಪನೆ ಎಸೆದು ಬಾಗಿಲು ಮುಚ್ಚಿಕೊಳ್ಳುತ್ತಾರೆ. ಆದರೆ, ಇದರಿಂದ ಹಳ್ಳಿಯ ಪರಿಸರದ ಮೇಲೆಯೇ ದೊಡ್ಡ ಹೊಡೆತ ಬೀಳುತ್ತದೆ. ತೋಡುಗಳು ತ್ಯಾಜ್ಯ ಗುಂಡಿಗಳಾಗುತ್ತವೆ, ಅಲ್ಲಿಂದ ಅದು ಹೊಲ, ತೋಟಗಳನ್ನು ಮಲಿನಗೊಳಿಸುತ್ತದೆ.
ಎರೆಹುಳ ನಾಶಕ್ಕೂ ಕಾರಣ
ಮಳೆ ನೀರಿನಲ್ಲಿ ಹರಿದುಬಂದು ಗದ್ದೆ, ತೋಟ ಸೇರುವ ಪ್ಲಾಸ್ಟಿಕನ್ನು ವಿಲೇವಾರಿ ಮಾಡುವುದೇ ಒಂದು ದೊಡ್ಡ ಕೆಲಸವಾಗಿ ಬಿಟ್ಟಿದೆ. ಗದ್ದೆಯಲ್ಲಿ ಪ್ಲಾಸ್ಟಿಕ್ ಹೆಚ್ಚುತ್ತಿರುವುದು ಎರೆಹುಳ ನಾಶಕ್ಕೆ ಕಾರಣವಾಗಿದೆ. ಗದ್ದೆಯ ನೀರು ಬಿಸಿಯಾಗಿ ಗಿಡಗಳ ಬೇರುಗಳಿಗೆ ತೊಂದರೆಯಾಗುತ್ತಿದೆ. ಇಳುವರಿಗೆ ದೊಡ್ಡ ಹೊಡೆತವಾಗುತ್ತಿದೆ. ಕೃಷಿಕರು ನಷ್ಟ ಅನುಭವಿಸಲು ಇದೂ ಒಂದು ಕಾರಣವಾಗುತ್ತಿದೆ.
-ಪ್ರತಿಭಾ ಹೆಗ್ಡೆ, ಕುಳವೂರಿನ ಪ್ರಗತಿಪರ ಕೃಷಿಕೆ
ಬೇರುಗಳಿಗೆ ಪೋಷಕಾಂಶ ತಡೆ
ತೋಡಿನಲ್ಲಿ ಹರಿದು ಬರುವ ಪ್ಲಾಸ್ಟಿಕ್ ಗದ್ದೆ, ತೋಟಗಳಲ್ಲಿ ತುಂಬುತ್ತಿದೆ. ಇದರಿಂದಾಗಿ ಭತ್ತ ಮತ್ತು ಇತರ ಗಿಡಗಳ ಬೆಳವಣಿಗೆಗೆ ದೊಡ್ಡ ಹೊಡೆತ ಬೀಳುತ್ತದೆ. ಪ್ಲಾಸ್ಟಿಕ್ ಇರುವ ಪ್ರದೇಶದಲ್ಲಿ ಗಿಡದ ಬೇರುಗಳಿಗೆ ಪೋಷಕಾಂಶ ಸಿಗದೇ ಇಳುವರಿಗೆ ಕಡಿಮೆಯಾಗಲು ಕಾರಣವಾಗಿದೆ. ಪ್ಲಾಸ್ಟಿಕ್ ಮಣ್ಣಿನಲ್ಲಿ ಕರಗುವುದಿಲ್ಲ, ಬದಲಾಗಿ ಮಣ್ಣನ್ನೇ ಕರಗಿಸುತ್ತದೆ. ದಯವಿಟ್ಟು ಪ್ಲಾಸ್ಟಿಕನ್ನು ಅಲ್ಲಲ್ಲಿ ಎಸೆಯಬೇಡಿ. ಮನೆಗೆ ತರುವ ವಸ್ತುಗಳಲ್ಲಿರುವ ಪ್ಲಾಸ್ಟಿಕನ್ನು ಸಂಗ್ರಹಿಸಿ ಮಾರಾಟ ಮಾಡಿ. ಹಳ್ಳಿಯ ತೋಡುಗಳಿಗೆ ತ್ಯಾಜ್ಯ, ಪ್ಲಾಸ್ಟಿಕ್ ಎಸೆಯುವ ಕೃತ್ಯ ಮಾಡಬೇಡಿ.
– ರಾಮಚಂದ್ರ ಕಾವ, ಪಡುಪೆರಾರದ ಪ್ರಗತಿ ಪರ ಕೃಷಿಕ
ಎಲ್ಲ ಕಡೆಯೂ ಇದೆ ಪ್ಲಾಸ್ಟಿಕ್ ಸಮಸ್ಯೆ
ನಗರ ಮಾತ್ರವಲ್ಲ, ಪ್ರತಿಯೊಂದು ಗ್ರಾಮ ಪಂಚಾಯತ್ ಕೂಡಾ ಪ್ಲಾಸ್ಟಿಕ್ ಸಮಸ್ಯೆಯಿಂದ ತತ್ತರಿಸಿ ಹೋಗಿವೆ. ಪ್ಲಾಸ್ಟಿಕ್ ಹಳ್ಳಿ ಹಳ್ಳಿಗಳ ಅಂಗಡಿಗಳನ್ನು ವ್ಯಾಪಿಸಿವೆ. ರಸ್ತೆ ಬದಿ, ಅಂಗಡಿ ಮುಂಗಟ್ಟುಗಳಲ್ಲಿ ಎಸೆಯುವ ಪ್ಲಾಸ್ಟಿಕ್‌ನಿಂದ ಆಗುತ್ತಿರುವ ಅನಾಹುಗಳನ್ನು ತಡೆಯಲು ದಾರಿ ಕಾಣದಂತಾಗಿದೆ.
ಗ್ರಾಮೀಣ ಭಾಗದಲ್ಲಿ ದನ ಕರುಗಳು ಪ್ಲಾಸ್ಟಿಕ್ ತಿಂದು ಪ್ರಾಣ ಕಳೆದುಕೊಳ್ಳುತ್ತಿವೆ. ಪಂಚಾಯತ್‌ಗಳಿಗೆ ಸರಿಯಾದ ತ್ಯಾಜ್ಯ ವಿಲೇವಾರಿ ಘಟಕವಿಲ್ಲದೆ ತೊಂದರೆಯಾಗಿದೆ. ಎಲ್ಲಿ ವಿಲೇವಾರಿ ಮಾಡಬೇಕು ಎಂಬ ವಿಚಾರದಲ್ಲಿ ಗಡಿ ಗಲಾಟೆಗಳೇ ನಡೆದಿವೆ.
ಮೂಡುಬಿದಿರೆ, ಕಿನ್ನಿಗೋಳಿ, ಮೂಲ್ಕಿ, ಕೈಕಂಬ, ಉಳ್ಳಾಲ ಹೀಗೆ ಪ್ರಮುಖ ಪಟ್ಟಣಗಳು ಪ್ಲಾಸ್ಟಿಕ್ ತ್ಯಾಜ್ಯವನ್ನು ವಿಲೇವಾರಿ ಮಾಡಲು ಒದ್ದಾಡುತ್ತಿವೆ. ಕೆಲವೊಂದು ಗ್ರಾಮ ಪಂಚಾಯತ್‌ಗಳು ಪ್ಲಾಸ್ಟಿಕ್ ವಿಲೇವಾರಿ ಮೂಲಕ ಗಮನ ಸೆಳೆದರೆ ಹೆಚ್ಚಿನವು ನಿರ್ಲಕ್ಷ್ಯ ವಹಿಸಿವೆ.
ಬಿತ್ತನೆ ಮಾಡಿದ ಬೀಜಕ್ಕೂ ಹಾನಿ
ಭತ್ತ ಬೆಳೆಯುವ ಗದ್ದೆಯ ಮಣ್ಣು ಹಸನಾಗಿರಬೇಕು ಎನ್ನುವುದು ನಿಯಮ. ಹಾಗಿದ್ದಾಗ ಮಾತ್ರ ಬಿತ್ತಿದ ಬೀಜ ಏಕಪ್ರಕಾರವಾಗಿ ಬೆಳೆಯುತ್ತದೆ. ಆದರೆ, ಇತ್ತೀಚೆಗೆ ಗದ್ದೆಯಲ್ಲಿ ಪ್ಲಾಸ್ಟಿಕ್ ಸೇರಿಕೊಳ್ಳುವುದರಿಂದ ಬಿತ್ತನೆ ಮಾಡಿದ ಬೀಜ ಮೊಳಕೆ ಬಾರದೇ ಕೃಷಿಕರು ತೊಂದರೆ ಅನುಭವಿಸುತ್ತಿದ್ದಾರೆ. ಎಲ್ಲಿ ಪ್ಲಾಸ್ಟಿಕ್ ಚೀಲ ಇದೆಯೋ ಅಲ್ಲಿ ಬೀಜ ಮೊಳಕೆ ಬಾರದೆ ಎರಡನೇ ಬಾರಿ ಬಿತ್ತನೆ ಮಾಡುವ ಪ್ರಸಂಗಗಳು ಬಂದಿದೆ.
ಪ್ಲಾಸ್ಟಿಕ್ ಎಲ್ಲಿ ಮಣ್ಣಿನೊಳಗೆ ಬೆರೆತು ಹೋಗಿದೆಯೋ ಅಲ್ಲಿ ಯಾವುದೇ ಬೆಳೆಗಳ ಬೆಳವಣಿಗೆ ಕುಂಠಿತವಾಗುತ್ತಿದೆ. ಬೇರುಗಳು ಸಮರ್ಪಕವಾಗಿ ಇಳಿಯಲು ಪ್ಲಾಸ್ಟಿಕ್ ಚೀಲಗಳು ಬಿಡದೇ ಇರುವುದು ಮುಖ್ಯಕಾರಣವಾಗಿದೆ.
ಪ್ಲಾಸ್ಟಿಕ್ ಹೆಚ್ಚಾದಾಗ ಗದ್ದೆಯಲ್ಲಿ ನೀರು ನಿಲ್ಲುವುದಿಲ್ಲ, ಬೇರುಗಳಿಗೆ ಕೂಡಾ ತೊಂದರೆಯಾಗಿ ಇಳುವರಿಗೂ ಹೊಡೆತ ಬೀಳುತ್ತದೆ. ಮಣ್ಣಿನ ಫಲವತ್ತತೆಯನ್ನು ಕಡಿಮೆ ಮಾಡುತ್ತದೆ.
ಸುಬ್ರಾಯ ನಾಯಕ್ ಎಕ್ಕಾರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.