Bandaru: ದಕ್ಕೆಯ 1,2ನೇ ಮೀನುಗಾರಿಕೆ ಜೆಟ್ಟಿಗಳು ಶೀಘ್ರ ಮೇಲ್ದರ್ಜೆಗೆ
3ನೇ ದಕ್ಕೆ ಅಭಿವೃದ್ಧಿಯ ಜತೆಗೆ ಕಾಯಕಲ್ಪ; ಕುಸಿದ ಭಾಗಗಳ ಮರು ನಿರ್ಮಾಣ, ಮೂಲ ಸೌಕರ್ಯ ಅಭಿವೃದ್ಧಿ
Team Udayavani, Oct 29, 2024, 3:31 PM IST
ಬಂದರು: ಕೋಟ್ಯಂತರ ರೂ.ಗಳ ವ್ಯವಹಾರ ಕೇಂದ್ರ ಮಂಗಳೂರಿನ ಮೀನುಗಾರಿಕೆ ಬಂದರಿನಲ್ಲಿ ಮೂರನೇ ಹಂತದ ವಿಸ್ತರಣೆಯ ಜತೆಗೆ ಹಾಲಿ 1 ಹಾಗೂ 2 ನೇ ಹಂತದ ಜೆಟ್ಟಿಯನ್ನು ಮೇಲ್ದರ್ಜೆಗೇರಿಸುವ 37.50 ಕೋಟಿ ರೂ. ವೆಚ್ಚದ ಕಾಮಗಾರಿ ಶೀಘ್ರವೇ ಆರಂಭವಾಗಲಿದೆ.
ಕೇಂದ್ರ ಸರಕಾರದ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಲ್ಲಿ ಜೆಟ್ಟಿಯ 1, 2ನೇ ಹಂತದಲ್ಲಿ ಆಧುನೀಕರಣ ಕಾಮಗಾರಿಗೆ 1 ವರ್ಷದ ಹಿಂದೆಯೇ 37.50 ಕೋ.ರೂ. ಯೋಜನೆ ಅನುಮೋದನೆಗೊಂಡಿದೆ. ರಾಜ್ಯ ಸರಕಾರದಿಂದ ಆಡಳಿತಾತ್ಮಕ ಮಂಜೂರಾತಿ ಮತ್ತು ಸಿಆರ್‌ಝಡ್ ಅನುಮತಿ ಬಾಕಿ ಇದ್ದು, ಇದು ದೊರಕಿದ ಕೂಡಲೇ ಕಾಮಗಾರಿ ಪ್ರಕ್ರಿಯೆ ಆರಂಭವಾಗಲಿದೆ.
ಏನೆಲ್ಲ ಕಾಮಗಾರಿ?
ಸುಮಾರು 300 ಮೀ.ನಷ್ಟು ಇರುವ ಈಗಿನ ಹಳೆಯ ಜೆಟ್ಟಿಯ ಕೆಲವು ಭಾಗ ಅಲ್ಲಲ್ಲಿ ಕುಸಿಯುತ್ತಿದೆ. ಇದರ ಮರು ನಿರ್ಮಾಣವೇ ಈ ಯೋಜನೆಯ ಮುಖ್ಯ ಆದ್ಯತೆ. ಉಳಿದಂತೆ, ಕುಡಿಯುವ ನೀರಿನ ಬೃಹತ್ ಟ್ಯಾಂಕ್, ಮೊದಲ ಹಾಗೂ 2ನೇ ಜೆಟ್ಟಿಯಲ್ಲಿ ಹರಾಜು ಕೇಂದ್ರದ ಮರು ನಿರ್ಮಾಣ, ಮೀನುಗಾರಿಕೆ ಇಲಾಖೆಯ ಕಚೇರಿ ಕಟ್ಟಡ, ಶೌಚಾಲಯ, ಪ್ರವೇಶ ದ್ವಾರ ಅಭಿವೃದ್ಧಿ, ವಿದ್ಯುದೀಕರಣ, ಸಿಸಿಟಿವಿ, ಸೋಲಾರ್ ಲೈಟಿಂಗ್, ಚರಂಡಿ, ಒಳಚರಂಡಿ ವ್ಯವಸ್ಥೆ ದುರಸ್ತಿ ಸಹಿತ ವಿವಿಧ ಅಭಿವೃದ್ಧಿ ಯೋಜನೆ ಕೈಗೆತ್ತಿಕೊಳ್ಳಲಾಗುತ್ತದೆ.
200 ಮೀ. ಉದ್ದದಲ್ಲಿ ತಾತ್ಕಾಲಿಕವಾಗಿ ಪ್ರತ್ಯೇಕ ಜೆಟ್ಟಿ
ದಕ್ಕೆಯ 3ನೇ ಹಂತದ ವಿಸ್ತರಣೆಯಡಿ 49.50 ಕೋ.ರೂ.ಗಳ ಉಳಿಕೆ ಕಾಮಗಾರಿ ಹಾಗೂ 1 ಹಾಗೂ 2ನೇ ದಕ್ಕೆ 37.50 ಕೋ.ರೂಗಳಲ್ಲಿ ಆಧುನೀಕರಣ ಕಾಮಗಾರಿ ಮುಂದಿನ ಕೆಲವೇ ತಿಂಗಳಿನಲ್ಲಿ ಹಂತ ಹಂತವಾಗಿ ಆರಂಭ ಕಾಣಲಿದೆ. ಕಾಮಗಾರಿ ಸಂದರ್ಭ ಮೀನುಗಾರಿಕೆ ಬೋಟ್‌ಗಳ ನಿಲುಗಡೆ ಅಥವಾ ಮೀನು ಲೋಡಿಂಗ್ ಪ್ರಕ್ರಿಯೆಗೆ ಇಲ್ಲಿ ಸಮಸ್ಯೆ ಆಗಲಿದೆ. ಹೀಗಾಗಿ ಈ 2 ಯೋಜನೆಗಳು ಮುಕ್ತಾಯಗೊಳ್ಳುವವರೆಗೆ ಪರ್ಯಾಯ ವ್ಯವಸ್ಥೆಯಾಗಿ ಮೀನುಗಾರಿಕೆ ಬಂದರಿನ ಪಕ್ಕದಲ್ಲಿರುವ ಬಂದರು ಇಲಾಖೆಯ ವಾಣಿಜ್ಯ ದಕ್ಕೆಯ ಕನಿಷ್ಠ 200 ಮೀ. ಉದ್ದ ಜೆಟ್ಟಿಯನ್ನು ಮೀನುಗಾರಿಕೆ ಇಲಾಖೆಗೆ ಬಂದರು ಇಲಾಖೆಯಿಂದ ಹಸ್ತಾಂತರ ಪಡೆಯುವ ಪ್ರಸ್ತಾವವು ಸರಕಾರ ಮಟ್ಟದಲ್ಲಿ ಚಾಲ್ತಿಯಲ್ಲಿದೆ.
1991, 2003ರಲ್ಲಿ ಎರಡು ಜೆಟ್ಟಿ ನಿರ್ಮಾಣ
ಮೊದಲ ಹಂತದ ಜೆಟ್ಟಿ ನಿರ್ಮಾಣ 1986ರಲ್ಲಿ ಆರಂಭಗೊಂಡು 1991ರಲ್ಲಿ ಪೂರ್ಣವಾಗಿತ್ತು. 147.80 ಲಕ್ಷ ರೂ.ಗಳಲ್ಲಿ 138 ಮೀಟರ್ ಉದ್ದದ ಜೆಟ್ಟಿ, 675 ಚ.ಮೀ ವಿಸ್ತೀರ್ಣದ ಮೀನು ಹರಾಜು ಪ್ರಾಂಗಣ ನಿರ್ಮಿಸಲಾಗಿದೆ. ಆಗ 300ರಿಂದ 350 ಸಂಖ್ಯೆಯ 30 ಅಡಿಯಿಂದ 43 ಅಡಿ ಉದ್ದದ ಯಾಂತ್ರೀಕೃತ ದೋಣಿಗಳು ಇದ್ದವು. ಯಾಂತ್ರೀಕೃತ ದೋಣಿಗಳ ಸಂಖ್ಯೆಯಲ್ಲಿ ಹೆಚ್ಚಳವಾದ ಕಾರಣ 2ನೇ ಹಂತದ ವಿಸ್ತರಣೆ 2003ರಿಂದ 2004ರ ನಡುವೆ ನಡೆಯಿತು. 144.67 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ 67 ಮೀಟರ್ ಉದ್ದದ ಜೆಟ್ಟಿ ಇದಾಗಿದೆ.
ಅನುಮೋದನೆ ಲಭ್ಯ
ಮಂಗಳೂರು ಮೀನುಗಾರಿಕೆ ಬಂದರಿನ 1, 2ನೇ ಜೆಟ್ಟಿಯ ಅಭಿವೃದ್ಧಿ ಕಾಮಗಾರಿಗೆ ಈಗಾಗಲೇ ಕೇಂದ್ರ ಸರಕಾರದ ಅನುಮೋದನೆ ದೊರಕಿದೆ. ಸಿಆರ್‌ಝಡ್ ಅನುಮತಿ ಹಾಗೂ ರಾಜ್ಯ ಸರಕಾರದಿಂದ ಆಡಳಿತಾತ್ಮಕ ಒಪ್ಪಿಗೆ ದೊರಕಿದ ಕೂಡಲೇ ಟೆಂಡರ್ ಪ್ರಕ್ರಿಯೆ ನಡೆಸಲು ಸಾಧ್ಯವಾಗಲಿದೆ.
–ರೇವತಿ ಉಪನಿರ್ದೇಶಕರು, ಮೀನುಗಾರಿಕಾ ಬಂದರು, ಮಂಗಳೂರು
-ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
Doctor; ಖ್ಯಾತ ಹೃದ್ರೋಗ ತಜ್ಞ ಡಾ.ಎಸ್.ಜಿ.ಸರ್ವೋತ್ತಮ ಪ್ರಭು ವಿಧಿವಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.