ಮಂಗಳೂರು: ಮಳೆಗಾಲದ ಪ್ರಾಕೃತಿಕ ವಿಕೋಪ ಎದುರಿಸಲು ಸಜ್ಜಾಗಿ
Team Udayavani, May 30, 2023, 7:30 AM IST
ಮಂಗಳೂರು: ಹಿಂದಿನ ವರ್ಷಗಳ ಪ್ರಾಕೃತಿಕ ವಿಕೋಪದ ಅನುಭವದ ಆಧಾರದ ಮೇಲೆ ಜನ ಸಾಮಾನ್ಯರಿಗೆ ಆಗಬಹುದಾದ ಕಷ್ಟನಷ್ಟ ಕಡಿಮೆ ಮಾಡಲು, ಜಾನುವಾರುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಸೂಕ್ತ ಸಮಯದಲ್ಲಿ ಸ್ಪಂದಿಸಲು ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ತಂಡ ಸದಾ ಸಿದ್ಧರಿರಬೇಕು ಎಂದು ರಾಜ್ಯ ವಿಧಾನ ಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ತಿಳಿಸಿದ್ದಾರೆ.
ಸೋಮವಾರ ಇಲ್ಲಿನ ಸಕೀìಟ್ ಹೌಸ್‌ನಲ್ಲಿ ಮುಂಗಾರು ಪೂರ್ವ ಸಿದ್ಧತೆ ಹಾಗೂ ಪ್ರಾಕೃತಿಕ ವಿಕೋಪ ಕುರಿತು ಸಭೆ ನಡೆಸಿದ ಬಳಿಕ ಪತ್ರಕರ್ತರೊಂದಿಗೆ ಅವರು ಮಾತನಾಡಿ, ಇನ್ನು ಕೆಲವೇ ದಿನಗಳಲ್ಲಿ ಮಳೆಗಾಲ ಪ್ರಾರಂಭವಾಗಲಿದೆ, ಈ ವೇಳೆ ಪ್ರಾಕೃತಿಕ ಅವಘಡ ಉಂಟಾದಲ್ಲಿ ಸರಕಾರ ಜನರೊಂದಿಗೆ ಇರುತ್ತದೆ ಎಂದರು.
ಮಳೆಗಾಲದ ವೇಳೆ ಮುಳುಗಡೆಯಾಗುವ ಪ್ರದೇಶಗಳನ್ನು ಗುರುತಿಸಿ ಪಟ್ಟಿ ಮಾಡಿ ಇರಿಸಬೇಕು, ಅಗತ್ಯವಿರುವ ಕಡೆ ಅಗ್ನಿಶಾಮಕ ಮತ್ತು ತುರ್ತುಸೇವಾ ಇಲಾಖೆ, ಗೃಹರಕ್ಷಕ ದಳ, ಎಸ್‌ಡಿಆರ್‌ಎಫ್ ಹಾಗೂ ಎನ್‌ಡಿಆರ್‌ಎಫ್ ತಂಡವನ್ನು ನಿಯೋಜಿಸುವುದು, ಜಿಲ್ಲಾಡಳಿತ, ಮಂಗಳೂರು ಮಹಾನಗರ ಪಾಲಿಕೆಯಿಂದ ಸಹಾಯವಾಣಿ ಪ್ರಾರಂಭಿಸುವ ಬಗ್ಗೆ ಸೂಚಿಸಲಾಗಿದೆ.
ಜಿಲ್ಲೆಯ ಗ್ರಾಮೀಣ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗಳಲ್ಲೂ ತಳಮಟ್ಟದಲ್ಲಿ ಅಧಿಕಾರಿ, ಸಿಬಂದಿಗಳ ತಂಡವನ್ನು ಈಗಲೇ ಸಿದ್ಧಪಡಿಸಬೇಕು, ಚಿಕ್ಕಮಗಳೂರು, ಕೊಡಗು ಹಾಗೂ ಸಕಲೇಶಪುರ ವ್ಯಾಪ್ತಿಯಲ್ಲಿ ಹೆಚ್ಚು ಮಳೆಯಾದರೆ ಅಧಿಕ ಪ್ರಮಾಣದ ನೀರು ಜಿಲ್ಲೆಗೆ ಹರಿದು ಬರಲಿದೆ ಆಗ ಸಮಸ್ಯೆ ಎದುರಾಗಲಿದೆ, ಕುಮಾರಧಾರಾ ಸಂಗಮ ಮುಳುಗಡೆಯಾಗುತ್ತದೆ, ಅಲ್ಲದೆ ನದಿಗಳು ಸಮುದ್ರ ಸೇರುವ ಪ್ರದೇಶಗಳಲ್ಲಿ ಪ್ರವಾಹದ ಭೀತಿ ಎದುರಾಗುತ್ತದೆ. ಈ ಸಂದರ್ಭದಲ್ಲಿ ಸ್ಥಳೀಯರಿಗೆ ಪ್ರತಿದಿನ ಜಾಗೃತಿ ಮೂಡಿಸಿ, ಯಾವುದೇ ಹಾನಿಯಾಗದಂತೆ ಉಸ್ತುವಾರಿ ವಹಿಸಬೇಕಾಗುತ್ತದೆ ಎಂದರು.
ಸ್ಥಳೀಯ ಸಂಘಟನೆಗಳು, ಮೀನುಗಾರ ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸಿ, ಕಾರ್ಯಾಚರಣೆಗೆ ಅಗತ್ಯವಿರುವ ಬೋಟ್‌ಗಳನ್ನು ಪಡೆದುಕೊಳ್ಳಬೇಕು, ಸಾಕುಪ್ರಾಣಿಗಳಿಗೆ ಕೂಡ ವಿಕೋಪದಿಂದ ಸಮಸ್ಯೆಯಾಗದಂತೆ ಬೇಕಾದ ಕ್ರಮ ಕೈಗೊಳ್ಳಬೇಕು ಎಂದರು.
ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಪ್ರತಿಕ್ರಿಯೆ ನೀಡಿ, ಈ ಹಿಂದೆ ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದ ಆಧಾರದ ಮೇಲೆ ಈಗಾಗಲೇ 87 ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದೆ, ಸಂತ್ರಸ್ತರ ಸ್ಥಳಾಂತರ ಸೇರಿದಂತೆ ಅಲ್ಲಿ ಊಟ, ಉಪಾಹಾರ ಸೇರಿದಂತೆ ಎಲ್ಲ ರೀತಿಯ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.
ಎಸ್‌ಡಿಆರ್‌ಎಫ್ ತಂಡಗಳು ಸಿದ್ಧವಿದ್ದು, ಎನ್‌ಡಿಆರ್‌ಎಫ್ ತಂಡ ಆಗಮಿಸಬೇಕಿದೆ, ಜಿಲ್ಲೆಗೆ ಮುಂಗಾರು ಜೂನ್ 4ಕ್ಕೆ ಪ್ರವೇಶವಾಗಲಿದ್ದು, ಜೂನ್ 1ಕ್ಕೆ ಎಲ್ಲ ರೀತಿಯ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡು ಸನ್ನದ್ದ ಸ್ಥಿತಿಯಲ್ಲಿರಿಸಲಾಗುವುದು, ಸದ್ಯ ಪರಿಹಾರ ನೀಡುವುದಕ್ಕಾಗಿ ತಹಶೀಲ್ದಾರರಿಗೆ 3.5 ಕೋಟಿ ರೂ.ನೀಡಿದ್ದು ಹೆಚ್ಚಿನ ಅನುದಾನಕ್ಕಾಗಿ ಸರಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು.
ರಸ್ತೆ ದುರಸ್ತಿಗೆ ಸೂಚನೆ
ಲೋಕೋಪಯೋಗಿ, ರಾಷ್ಟ್ರೀಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಆರ್‌ಡಿಪಿಆರ್ ಇಲಾಖೆ ವ್ಯಾಪ್ತಿಯ ರಸ್ತೆಗಳಲ್ಲಿ ಎಲ್ಲೆಲ್ಲಿ ಹೊಂಡ ಇದೆಯೋ ಮುಚ್ಚಿ, ಮಳೆಗಾಲದಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲು ತಿಳಿಸಲಾಗಿದೆ ಎಂದರು.
ಶಾಸಕ ಅಶೋಕ್ ಕುಮಾರ್ ರೈ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ದ.ಕ ಜಿ. ಪಂ. ಸಿಇಒ ಡಾ| ಕುಮಾರ್, ಮಂಗಳೂರು ಡಿಸಿಪಿ ಅನುÏಕುಮಾರ್, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಸಹಾಯಕ ಆಯುಕ್ತರಾದ ರಾಜು, ಗಿರೀಶ್ ನಂದನ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲೆಯ ಎಲ್ಲ ತಹಶೀಲ್ದಾರರು ಉಪಸ್ಥಿತರಿದ್ದರು.
ಮೆಸ್ಕಾಂ ಹಾಗೂ ಅರಣ್ಯ ಇಲಾಖೆ ಹೊಣೆ
ಮೆಸ್ಕಾಂ ಸಬ್‌ಸ್ಟೇಷನ್ ಹಾಗೂ ಸೆಕ್ಷನ್ ವ್ಯಾಪ್ತಿಯಲ್ಲಿ ಹೆಚ್ಚುವರಿ ಎರಡು ಜೀಪ್ ಹಾಗೂ ಸಿಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಅರಣ್ಯ ಇಲಾಖೆ ಹಾಗೂ ಮೆಸ್ಕಾಂ ಜಂಟಿಯಾಗಿ ಕೆಲಸ ಮಾಡಬೇಕು ಎಂದು ಸೂಚನೆ ನೀಡಲಾಗಿದೆ, ಮನೆಗಳು, ವಿದ್ಯುತ್ ಮಾರ್ಗದ ಮೇಲಿರುವ ಮರಗಳ ಗೆಲ್ಲು ತೆರವು ಮಾಡಬೇಕು, ತೆರವು ಮಾಡಲು ಅನುಮತಿ ಕೇಳಿದರೆ ತತ್‌ಕ್ಷಣ ಅನುಮತಿಯನ್ನೂ ನೀಡಬೇಕು ಎಂದು ಸೂಚಿಸಲಾಗಿದೆ.
ಒಂದು ವೇಳೆ ವಿದ್ಯುತ್ ತಂತಿ ತುಂಡಾಗಿ ಬಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿದರೆ ಅದಕ್ಕೆ ಆಯಾ ಜೆಇ ಮತ್ತು ವಲಯ ಅರಣ್ಯಾಧಿಕಾರಿ ಹೊಣೆಯಾಗುತ್ತಾರೆ, ಅವರ ವಿರುದ್ಧ ಕ್ರಮ ಜರಗಿಸಬೇಕಾಗುತ್ತದೆ ಎಂದು ಖಾದರ್ ಎಚ್ಚರಿಸಿದರು.
ಶಾಲಾರಂಭ ಮುಂದೂಡಿಕೆ ಇಲ್ಲ
ಜಿಲ್ಲೆಯಲ್ಲಿ ನಿಗದಿಯಂತೆ ಶಾಲೆ ಪುನರಾರಂಭಗೊಳ್ಳಲಿದೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಂಡು ಮಕ್ಕಳಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಸೂಚನೆ ನೀಡಲಾಗಿದೆ ಎಂದು ಯು.ಟಿ.ಖಾದರ್ ತಿಳಿಸಿದರು.
ಶಾಲೆ ಮುಂದೂಡಿದರೆ ವೇಳಾಪಟ್ಟಿಯಲ್ಲಿ ಸಮಸ್ಯೆಯಾಗಬಹುದು, ಹಾಗಾಗಿ ಸದ್ಯ ಶಾಲೆ ಮುಂದೂಡುವ ಪರಿಸ್ಥಿತಿ ಇಲ್ಲ. ಶಾಲೆಗಳಿಗೆ ಬೇಕಾದ ಪಠ್ಯಪುಸ್ತಕ, ಸಮವಸ್ತ್ರಗಳೂ ಶೇ.100ರಷ್ಟು ಲಭ್ಯವಿವೆ. ಶಾಲೆಗಳಿಗೆ ನಮ್ಮ ಜಿಲ್ಲೆಗೆ 1008 ಅತಿಥಿ ಶಿಕ್ಷಕರ ನಿಯೋಜನೆ ಮಾಡಿದ್ದು, ಇದರಿಂದಾಗಿ ಶೇ.60ರಷ್ಟು ಶಿಕ್ಷಕರ ಕೊರತೆಯೂ ನೀಗಿದಂತಾಗಿದೆ ಎಂದರು.
10 ದಿನದೊಳಗೆ ಪರಿಹಾರ
ವಿಕೋಪದಿಂದಾಗಿ ಮನೆಗೆ ಹಾನಿಯುಂಟಾದರೆ ಕೂಡಲೇ ತತ್‌ಕ್ಷಣದ ಪರಿಹಾರವಾಗಿ ಅಗತ್ಯ ವಸ್ತು ಖರೀದಿಗೆ 10 ಸಾವಿರ ರೂ. ನೀಡಲಾಗುವುದು, ಬಳಿಕ ಎರಡು ದಿನದೊಳಗೆ ಮನೆಹಾನಿಯನ್ನು ಅಂದಾಜಿಸಿ ವರದಿ ಪಡೆದುಕೊಂಡು 10 ದಿನದೊಳಗೆ ಸೂಕ್ತ ಪರಿಹಾರ ಒದಗಿಸಬೇಕು ಎಂಬ ಸೂಚನೆ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು
Kundapura: ಕಾರು ಢಿಕ್ಕಿ; ಸ್ಕೂಟರ್ ಸವಾರನಿಗೆ ಗಾಯ
Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.