ಲಕ್ಷಾಂತರ ವೇತನದ ಉದ್ಯೋಗ ತ್ಯಜಿಸಿ ದೇಶ ರಕ್ಷಣೆ
Team Udayavani, Apr 1, 2018, 6:00 AM IST
ಮಂಗಳೂರು: ಲಕ್ಷಾಂತರ ರೂ. ಸಂಬಳ ನೀಡುವ ಎಂಜಿನಿಯರಿಂಗ್ ವೃತ್ತಿ ತೊರೆದು ಕಳೆದ ವರ್ಷವಷ್ಟೇ ದೇಶದ ಗಡಿ ಭದ್ರತಾ ಪಡೆಯತ್ತ ಹೆಜ್ಜೆ ಹಾಕಿದ ಉಪ್ಪಿನಂಗಡಿಯ ಯುವತಿ ಈಗ ಅಸಿಸ್ಟೆಂಟ್ ಕಮಾಂಡೆಂಟ್ ಆಗಿ ನಿಯೋಜನೆಗೊಳ್ಳುವುದರ ಮೂಲಕ ಅನೇಕ ಮಹಿಳೆಯರಿಗೆ “ಸ್ಫೂರ್ತಿ’ಯಾಗಿದ್ದಾರೆ. 51 ವರ್ಷಗಳ ಇತಿಹಾಸ ಇರುವ ಬಿಎಸ್‌ಎಫ್ನಲ್ಲಿ ರಾಜಸ್ಥಾನದ ತನುಶ್ರೀ ಪಾರೀಖ್ ಬಳಿಕ ಸೇವೆ ಸಲ್ಲಿಸಲು ಅವಕಾಶ ಪಡೆದಿರುವ ದೇಶದ ಎರಡನೇ ಮಹಿಳೆ ಸ್ಫೂರ್ತಿ!
ನಿವೃತ್ತ ಐಆರ್‌ಎಸ್ ಅಧಿಕಾರಿ, ಉಪ್ಪಿನಂಗಡಿಯ ಕೆ. ಬಾಲಸುಬ್ರಹ್ಮಣ್ಯ ಭಟ್ ಅವರ ಪುತ್ರಿ ಸ್ಫೂರ್ತಿ ಎಂಜಿನಿಯರಿಂಗ್ ವೃತ್ತಿ ತೊರೆದು ದೇಶ ರಕ್ಷಣೆಯ ಸವಾಲಿನ ಕೆಲಸದೆಡೆಗೆ ಹೆಜ್ಜೆ ಹಾಕಿದಾಕೆ. ಬಿಎಸ್‌ಎಫ್ ಸೇವೆಗೆ ನಿಯೋಜನೆಗೊಂಡಿರುವ ಈಕೆ ಒಂದು ವರ್ಷದ ಕಠಿನ ತರಬೇತಿಯ ಬಳಿಕ ಇದೇ ಎಪ್ರಿಲ್ 8ರಂದು ಕರ್ತವ್ಯಕ್ಕೆ ಗಡಿ ಭದ್ರತೆಯ ಕರ್ತವ್ಯಕ್ಕೆ ಸೇರ್ಪಡೆಗೊಳ್ಳಲಿದ್ದಾರೆ.
ಸ್ಫೂರ್ತಿ ಎಂಜಿನಿಯರಿಂಗ್ ವಿದ್ಯಾರ್ಥಿನಿ. 2013ರಲ್ಲಿ ಬೆಂಗಳೂರಿನ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಎಂಜಿನಿಯರಿಂಗ್ ಪದವಿ ಪಡೆದ ಬಳಿಕ ಬೆಂಗಳೂರಿನ ಬೋಶ್ ಕಂಪೆನಿಗೆ ಕ್ಯಾಂಪಸ್ ಸೆಲೆಕ್ಷನ್‌ನಲ್ಲಿ ಆಯ್ಕೆಯಾಗಿದ್ದರು. ಸುಮಾರು ಎರಡು ವರ್ಷಗಳ ಕಾಲ ಅಲ್ಲಿ ಉದ್ಯೋಗ ನಿರ್ವಹಿಸಿದ್ದರು. ಇದೇ ಸಮಯದಲ್ಲಿ ಬಿಎಸ್‌ಎಫ್ ಆಯ್ಕೆ ಕುರಿತು ಪತ್ರಿಕಾ ಪ್ರಕಟನೆ ಗಮನಿಸಿ ಅರ್ಜಿ ಸಲ್ಲಿಸಿದರು. ಬಳಿಕ ಲಿಖೀತ ಪರೀಕ್ಷೆ, ದೈಹಿಕ ಪರೀಕ್ಷೆ, ವೈದ್ಯಕೀಯ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಸಂದರ್ಶನಕ್ಕೆ ಆಯ್ಕೆಯಾದರು. ಅದನ್ನೂ ಯಶಸ್ವಿಯಾಗಿ ಎದುರಿಸಿ 2017ರ ಮಾರ್ಚ್ 20ರಂದು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ತರಬೇತಿಗೆ ತೆರಳಿದ್ದರು. ಸತತ ಒಂದು ವರ್ಷದ ತರಬೇತಿಯ ಬಳಿಕ ಎಪ್ರಿಲ್ 8ರಂದು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.
ಈ ಮೂಲಕ 51 ವರ್ಷಗಳ ಹಿಂದೆ ಸ್ಥಾಪನೆಯಾದ ಗಡಿ ಭದ್ರತಾ ಪಡೆಗೆ ಸೇರ್ಪಡೆಗೊಂಡಿರುವ ದೇಶದ ಎರಡನೇ ಮಹಿಳಾ ಅಧಿಕಾರಿ ಹಾಗೂ ಮೊದಲ ಕನ್ನಡಿಗ ಮಹಿಳೆ ಎಂಬ ಹೆಗ್ಗಳಿಕೆಗೆ ಸ್ಫೂರ್ತಿ ಪಾತ್ರರಾಗಿದ್ದಾರೆ. ಬಿಎಸ್‌ಎಫ್ 2008ರಲ್ಲಿ ಮಹಿಳಾ ಕಾನ್‌ಸ್ಟೆಬಲ್‌ಗಳನ್ನು, ಆ ಬಳಿಕ ಮಹಿಳಾ ಸಬ್‌ಇನ್‌ಸ್ಪೆಕ್ಟರ್‌ಗಳನ್ನು ನೇಮಿಸಿಕೊಳ್ಳಲು ಆರಂಭಿಸಿತ್ತು. 2017ರ ಮಾರ್ಚ್‌ನಲ್ಲಿ ರಾಜಸ್ಥಾನದ ತನುಶ್ರೀ ಪಾರೀಖ್ ಗಝೆಟೆಡ್ ಶ್ರೇಣಿಯ ಮೊದಲ ಮಹಿಳಾ ಅಧಿಕಾರಿಯಾಗಿ ಬಿಎಸ್‌ಎಫ್ಗೆ ಸೇರ್ಪಡೆಗೊಂಡಿದ್ದರು.
ಸವಾಲಿನ ಕೆಲಸ ನನ್ನ ಆಸಕ್ತಿ
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೂ ನನ್ನ ನಿಜವಾದ ಆಸಕ್ತಿ ಇದ್ದದ್ದು ಸವಾಲಿನ ಕೆಲಸಗಳಿಗೆ ಹೆಗಲು ಕೊಡುವುದರ ಕಡೆಗೆ. ಅದರಂತೆ ಬಿಎಸ್‌ಎಫ್ ಸೇರಿದ್ದೇನೆ. ದೇಶ ರಕ್ಷಣೆಯ ಈ ಕ್ಷೇತ್ರದ ಬಗ್ಗೆ ಎಲ್ಲ ಮಹಿಳೆಯರು ಒಲವು ಬೆಳೆಸಿಕೊಳ್ಳಬೇಕು ಎಂಬುದು ನನ್ನ ಇಚ್ಛೆ ಎನ್ನುತ್ತಾರೆ ಸ್ಫೂರ್ತಿ.
ಪತಿ ಅರೆಸೇನಾ ಪಡೆಯಲ್ಲಿ
ಸ್ಫೂರ್ತಿ ಅವರಿಗೆ ಕಳೆದ ಐದು ತಿಂಗಳ ಹಿಂದಷ್ಟೇ ವಿವಾಹವಾಗಿದೆ. ಕೇರಳ ಮೂಲದವರಾದ ಪತಿ ಶ್ಯಾಮ್‌ಕೃಷ್ಣ ಪಿ.ಎಸ್. ಅವರೂ ದೇಶ ರಕ್ಷಣೆಯ ಕಾಯಕದವರೇ; ಸಿಆರ್‌ಪಿಎಫ್‌ನಲ್ಲಿ ಅಸಿಸ್ಟೆಂಟ್ ಕಮಾಂಡೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ಅವರು ಹರ್ಯಾಣದ ಗುರ್‌ಗಾಂವ್ ಬಳಿಯ ಕಡಾರ್‌ಪುರದಲ್ಲಿರುವ ಸಿಆರ್‌ಪಿಎಫ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಸ್ಫೂರ್ತಿ ಅವರ ತಂದೆ ಕೆ. ಬಾಲಸುಬ್ರಹ್ಮಣ್ಯ ಭಟ್ ನಿವೃತ್ತರಾಗಿದ್ದಾರೆ. ಸಹೋದರಿ ಪ್ರಶಸ್ತಿ ಭಟ್ ಹೊಸದಿಲ್ಲಿಯ ರಾಷ್ಟ್ರೀಯ ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು ಪದವಿ ಪಡೆಯುತ್ತಿದ್ದಾರೆ.
2013ರಿಂದ ಮಹಿಳಾ ಅಧಿಕಾರಿಗಳು
2012ರವರೆಗೆ ಗಡಿ ಭದ್ರತಾ ಪಡೆಯಲ್ಲಿ ಮಹಿಳಾ ಅಧಿಕಾರಿಗಳನ್ನು ನೇಮಿಸಿಕೊಳ್ಳುತ್ತಿರಲಿಲ್ಲ. ಆದರೆ 2013ರಲ್ಲಿ ನೇಮಕ ನಿಯಮಗಳಲ್ಲಿ ಕೆಲವು ಬದಲಾವಣೆಗಳಾದ ತರುವಾಯ ಮಹಿಳಾ ಅಧಿಕಾರಿಗಳನ್ನು ಬಿಎಸ್ಸೆಫ್‌ಗೆ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ದೊರೆತಿತ್ತು. ಇದೀಗ ದಕ್ಷಿಣ ಕನ್ನಡ ಮೂಲದ ಯುವತಿ ಸ್ಫೂರ್ತಿ ಗಡಿ ಭದ್ರತಾ ಪಡೆಗೆ ಅಧಿಕಾರಿಯಾಗಿ ಹೋಗುವುದರ ಮೂಲಕ ಜಿಲ್ಲೆಯ ಕೀರ್ತಿಯನ್ನು ರಾಷ್ಟ್ರ ಮಟ್ಟದಲ್ಲಿ ಮಿನುಗಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.