ಫಾಸ್ಟ್ಯಾಗ್ ಸ್ಟಿಕ್ಕರ್ ಖರೀದಿ ಜೋರು, ಕೆಲವೆಡೆ ನೀರಸ, ಗೊಂದಲ, ಆಕ್ರೋಶ
Team Udayavani, Nov 28, 2019, 6:00 AM IST
ರಾಷ್ಟ್ರೀಯ ಹೆದ್ದಾರಿಯ ಟೋಲ್‌ಗೇಟ್‌ಗಳಲ್ಲಿ ಡಿ. 1ರಿಂದ ಫಾಸ್ಟಾಗ್ ಕಡ್ಡಾಯವಾಗಿ ಅನುಷ್ಠಾನವಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಾಹನ ಮಾಲಕರು ಫಾಸ್ಟಾಗ್ ಸ್ಟಿಕ್ಕರ್ ಖರೀದಿಗಾಗಿ ವಿವಿಧ ಬ್ಯಾಂಕ್, ಟೋಲ್‌ಗೇಟ್‌ಗಳಿಗೆ ತೆರಳುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಸ್ಟಿಕ್ಕರ್ ಖರೀದಿಸಲು ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಪೇಟಿಎಂ ಮೂಲಕ ಆನ್‌ಲೈನ್‌ನಲ್ಲೂ ಸ್ಟಿಕ್ಕರ್ ಪಡೆಯುತ್ತಿದ್ದಾರೆ. ಕೇಂದ್ರ ಸರಕಾರ ಉಚಿತವಾಗಿ ಫಾಸ್ಟಾಗ್ ವಿತರಿಸಲಿದೆ ಎಂದು ಹೇಳಿದರೂ ಎನ್‌ಎಚ್‌ಎಐಯ ಉಚಿತ ಸ್ಟಿಕ್ಕರ್ ಸಂಗ್ರಹ ಖಾಲಿಯಾಗಿದೆ. ಹಾಗಾಗಿ ಜನರು ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆದಿದೆ.
ಮಂಗಳೂರಿನಲ್ಲಿ ಖರೀದಿ ಜೋರು – ಹಲವೆಡೆ ಗೊಂದಲ
ಮಂಗಳೂರು: ಫಾಸ್ಟ್ಯಾಗ್ ಕಡ್ಡಾಯ ಆಗಿರುವುದರಿಂದ ಮಂಗಳೂರಿನ ವಿವಿಧ ಬ್ಯಾಂಕ್‌ಗಳಲ್ಲಿ ಈಗಾಗಲೇ ಫಾಸ್ಟಾಗ್ ಖರೀದಿ ಜೋರಾಗಿದೆ. ಆದರೆ, ಕೆಲವು ಬ್ಯಾಂಕ್‌ಗಳಲ್ಲಿ ಸೂಕ್ತ ಮಾಹಿತಿ ಹಾಗೂ ಸವಲತ್ತುಗಳಿಲ್ಲದೆ ಗ್ರಾಹಕರು ಗೊಂದಲ ಎದುರಿಸುತ್ತಿದ್ದಾರೆ. ನಗರ ಪ್ರದೇಶದಲ್ಲಿ ವಾಹನಗಳನ್ನು ಹೊಂದಿರುವವರು ಹತ್ತಿರದ ಬ್ಯಾಂಕ್‌ಗಳಿಗೆ ತೆರಳಿ ಫಾಸ್ಟ್ಯಾಗ್ ಖರೀದಿಯಲ್ಲಿದ್ದಾರೆ. ಕೆಲವರು ಎನ್‌ಐಟಿಕೆ, ಬ್ರಹ್ಮರ ಕೂಟ್ಲು ಹಾಗೂ ತಲಪಾಡಿ ಟೋಲ್‌ಗಳಲ್ಲಿ ಸ್ಟಿಕ್ಕರ್ ಪಡೆಯುತ್ತಿದ್ದಾರೆ.
ರಾಷ್ಟ್ರೀಕೃತ ಬ್ಯಾಂಕ್‌ಗಳ ವಿವಿಧ ಶಾಖೆ ಗಳಲ್ಲಿ ಫಾಸ್ಟಾಗ್ ಸ್ಟಿಕ್ಕರ್ ಪಡೆಯಬಹುದು. ಪೇಟಿಎಂ ಮೂಲಕ ಆನ್‌ಲೈನ್‌ನಲ್ಲಿಯೂ ಫಾಸ್ಟ್ಯಾಗ್ ಪಡೆಯುತ್ತಿದ್ದಾರೆ. ಇಷ್ಟಿದ್ದರೂ, ನಗರದ ಕೆಲವು ಬ್ಯಾಂಕ್‌ಗಳಲ್ಲಿ ಫಾಸ್ಟಾಗ್ ಬಗ್ಗೆ ಗ್ರಾಹಕರಿಗೆ ಮಾಹಿತಿ ಕೇಂದ್ರಗಳು ಇಲ್ಲದೆ, ಸಿಬಂದಿಯನ್ನು ಪ್ರಶ್ನಿಸುವಂತಾಗಿದೆ. ಬ್ಯಾಂಕ್ ಸಿಬಂದಿ ಕೂಡ ಇದಕ್ಕೆ ಸೂಕ್ತ ಸ್ಪಂದನೆ ನೀಡುತ್ತಿಲ್ಲ ಎಂಬ ದೂರು ಕೇಳಿ ಬರುತ್ತಿದೆ.
ಜತೆಗೆ, ಒಂದೊಂದು ಬ್ಯಾಂಕ್‌ನವರು ತಮಗೆ ಬೇಕಾಗುವ ರೀತಿಯ ನಿಯಮಾವಳಿ ರೂಪಿಸಿದ್ದಾರೆ.
ಸುರತ್ಕಲ್: ನೋಂದಣಿಗೆ ಸೀಮಿತ, ಸ್ಟಿಕ್ಕರ್ ಇಲ್ಲ !
ಸುರತ್ಕಲ್: ಫಾಸ್ಟ್ಯಾಗ್ ಕಡ್ಡಾಯ ಮಾಡಿ ಸರಕಾರ ಆದೇಶ ಹೊರಡಿಸಿದ್ದರೂ ಸ್ಟಿಕ್ಕರ್ ಮಾತ್ರ ಎಲ್ಲೂ ಸಿಗುತ್ತಿಲ್ಲ. ಸುರತ್ಕಲ್ ಟೋಲ್ ಕೇಂದ್ರದ ಬಳಿ ಇರುವ ಬೂತ್‌ನಲ್ಲಿ ಕೇವಲ ದಾಖಲಾತಿ ನೀಡಿ ನೋಂದಣಿ ಮಾಡಲಾಗುತ್ತಿದೆ. ಸ್ಟಿಕ್ಕರ್ ಪೋಸ್ಟ್ ಮೂಲಕ ಬರುತ್ತದೆ ಎಂಬ ಉತ್ತರ ಸಿಗುತ್ತಿದೆ. ಸುರತ್ಕಲ್ ಕೆನರಾ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್‌ಗಳಲ್ಲಿ ಫಾಸ್ಟ್ಯಾಗ್ ಪಡೆಯಲು ಅವಕಾಶವಿದ್ದರೂ ಇಲ್ಲೂ ಕೊಟ್ಟಿದ್ದು ಕೇವಲ ಹತ್ತು. ಆ್ಯಕ್ಸಿಸ್ ಬ್ಯಾಂಕ್‌ನಲ್ಲಿ ಆನ್‌ಲೈನ್ ಪಾವತಿ ಮೂಲಕ ಸ್ಟಿಕ್ಕರ್ ಪಡೆಯಬಹುದು.
ಉಳ್ಳಾಲ: ಸ್ಟಿಕ್ಕರ್ ವಿತರಣೆ ನಿರಾತಂಕ
ಉಳ್ಳಾಲ: ತಲಪಾಡಿ ಟೋಲ್‌ಗೇಟ್‌ನಲ್ಲಿ ಫಾಸ್ಟಾಗ್‌ಗೆ ಸರ್ವ ಸಿದ್ಧತೆ ನಡೆದಿದ್ದು, ಟೋಲ್ ಪ್ಲಾಝಾದಲ್ಲಿ ಪೇಟಿಎಂ, ಆ್ಯಕ್ಸಿಸ್ ಬ್ಯಾಂಕ್ ಮತ್ತು ಎನ್‌ಎಚ್‌ಎಐನಿಂದ ಫಾಸ್ಟ್ಯಾಗ್ ಸ್ಟಿಕ್ಕರ್ ವಿತರಣೆ ಮತ್ತು ರಿಚಾರ್ಜ್ ಮಾಡುವ ಕಾರ್ಯ ಭರದಿಂದ ಸಾಗುತ್ತಿದೆ.
ಕಳೆದ ನಾಲ್ಕು ದಿನಗಳಿಂದ ತಲಪಾಡಿ ಟೋಲ್ ಪ್ಲಾಝಾದಲ್ಲಿ 500ಕ್ಕೂ ಹೆಚ್ಚು ಫಾಸ್ಟ್ಯಾಗ್ ಸಿಕ್ಕರ್ ವಿತರಿಸಲಾಗಿದೆ. ಟೋಲ್ ಪ್ಲಾಝಾದ ಎರಡು ಬದಿಯ ಒಟ್ಟು 10 ಟೋಲ್‌ಗೇಟ್‌ಗಳಲ್ಲಿ ಫಾಸ್ಟಾಗ್ ಸ್ಕ್ಯಾನರ್ ಅಳವಡಿಸಲಾಗಿದ್ದು ಪ್ರಾಯೋಗಿಕ ವಾಗಿ ಎಲ್ಲ ಗೇಟ್‌ಗಳಲ್ಲಿ ಫಾಸ್ಟ್ಯಾಗ್ ಸ್ಟಿಕ್ಕರ್ ಹೊಂದಿರುವ ವಾಹನಗಳು ನಿರಾತಂಕವಾಗಿ ಸಂಚರಿಸುತ್ತಿವೆ.
2 ಗೇಟ್‌ನಲ್ಲಿ ಮಾತ್ರ ನಗದು
ಡಿ. 1ರಿಂದ ತಲಪಾಡಿ ಟೋಲ್‌ನ 10 ಗೇಟ್‌ಗಳಲ್ಲಿ ಎಂಟು ಗೇಟ್‌ಗಳಲ್ಲಿ ಫಾಸ್ಟಾ éಗ್ ಸ್ಟಿಕ್ಕರ್ ಅಳವಡಿಸಿರುವ ವಾಹನಗಳಿಗೆ ಮಾತ್ರ ಸಂಚರಿಸಲು ಅವಕಾಶವಿದ್ದರೆ, ಎರಡು ಗೇಟ್‌ಗಳಲ್ಲಿ ನಗದು ಸ್ವೀಕಾರಕ್ಕೆ ಅವಕಾಶವಿದೆ.
ಪಡುಬಿದ್ರಿ: 1 ಸಾವಿರ ಸ್ಟಿಕ್ಕರ್ ಲಭ್ಯ
ಪಡುಬಿದ್ರಿ: ಮಂಗಳೂರು ವಿಭಾಗದಿಂದ ಸುಮಾರು 50,000 ಫಾಸ್ಟ್ಯಾಗ್ ಸ್ಟಿಕ್ಕರ್‌ಗಳಿಗೆ ಬೇಡಿಕೆ ಸಲ್ಲಿಸಲಾಗಿದ್ದರೂ ಕೇವಲ 1,000ದಷ್ಟೇ ಲಭ್ಯವಾಗುತ್ತಿದೆ ಎಂದು ಐಎಚ್‌ಎಂಸಿಎಲ್‌ನ ಅಂಕಿಅಂಶ ಹೇಳುತ್ತಿವೆ. ಅಲ್ಲಿಂದ ಜಿಲ್ಲೆಯ 5 ಟೋಲ್‌ಗಳಿಗೆ ವಿತರಣೆಯಾಗಬೇಕು. ಹಾಗಾಗಿ ಹೆಜಮಾಡಿ, ತಲಪಾಡಿ, ಸಾಸ್ತಾನಗಳಿಗೆ ತಲಾ 200 ಹಾಗೂ ಗಣ್ಯರಿಗೆ ನೀಡಲು ಮತ್ತು ಬಿಸಿ ರೋಡ್, ಸುರತ್ಕಲ್‌ಗಳಿಗೆ ಇತರ ಸ್ಟಿಕ್ಕರ್‌ಗಳು ಮತ್ತೆ ಹಂಚಿಕೆಯಾಗಲಿದೆ.
ಬ್ಯಾಂಕ್‌ಗಳಲ್ಲಿ ನೀರಸ ಪ್ರತಿಕ್ರಿಯೆ
ರಾಷ್ಟ್ರೀಕೃತ ಬ್ಯಾಂಕ್‌ಗಳ ಗ್ರಾಮೀಣ ಶಾಖೆಗಳಲ್ಲಿ ಫಾಸ್ಟ್ಯಾಗ್ ಖರೀದಿಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪಡುಬಿದ್ರಿ ಸಿಂಡಿಕೇಟ್ ಬ್ಯಾಂಕಿನಿಂದ 12 ಮಂದಿ ಅರ್ಜಿ ಪಡೆದುಕೊಂಡಿ ದ್ದರೆ ಎಸ್‌ಬಿಐ ಏಜೆಂಟ್ ವ್ಯವಸ್ಥೆಯನ್ನು ಕಲ್ಪಿಸಿದ್ದು ಆ ಮೊಬೈಲ್ “ನೋ ರಿಪ್ಲೆ„ ಇದೆ. ಕಾರ್ಪೊರೇಶನ್ ಬ್ಯಾಂಕ್‌ನಲ್ಲಿ ಈ ಸೇವೆ ಲಭ್ಯವಿಲ್ಲ.
ಟೋಲ್‌ಗಳಲ್ಲಿ ಮಾರಾಟ
ಹೆಜಮಾಡಿ ಟೋಲ್‌ಗೇಟ್‌ನಲ್ಲಿನ ಆ್ಯಕ್ಸಿಸ್ ಬ್ಯಾಂಕ್ ಹಾಗೂ ಪೇಟಿಎಂ ಕೌಂಟರ್‌ಗಳಲ್ಲಿ 400 ರೂ. ಪಡೆದು ಫಾಸ್ಟಾ éಗ್ ಸ್ಟಿಕ್ಕರ್ ನೀಡಲಾಗುತ್ತಿದೆ. ಎನ್‌ಎಚ್‌ಎಐ ಅವರ ಕೌಂಟರ್ ಕೂಡ ಇಲ್ಲಿದ್ದು ಅಲ್ಲಿ ಡಿ.1ರ ವರೆಗೆ ಮಾತ್ರ ಉಚಿತವಾಗಿ ನೀಡುವ ಫಾಸ್ಟ್ಯಾಗ್ ಸ್ಟಿಕ್ಕರ್‌ಗಳ ಸಂಗ್ರಹವು ಮುಗಿದಿದೆ.
ಬ್ರಹ್ಮರಕೂಟ್ಲು: ಫಾಸ್ಟ್ಯಾಗ್ ಖಾಲಿ; ಆಕ್ರೋಶ!
ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಝಾಗಳಲ್ಲಿ ವಾಹನಗಳ ಸರತಿಯನ್ನು ತಪ್ಪಿಸುವ ನಿಟ್ಟಿನಲ್ಲಿ ಎಲ್ಲ ಕಡೆಯೂ ಫಾಸ್ಟ್ಯಾಗ್ ಕಡ್ಡಾಯಗೊಳಿಸಿದ್ದು, ಡಿ. 1ರ ತನಕ ಪ್ರತಿ ಟೋಲ್ ಪ್ಲಾಝಾಗಳಲ್ಲೂ ಉಚಿತವಾಗಿ ಫಾಸ್ಟ್ಯಾಗ್ ವಿತರಣೆ ನಡೆಯುತ್ತಿದೆ. ಆದರೆ ಬ್ರಹ್ಮರಕೂಟ್ಲು ಟೋಲ್‌ನಲ್ಲಿ ಫಾಸ್ಟ್ಯಾಗ್ ಖಾಲಿಯಾಗಿದ್ದು, ಫಾಸ್ಟ್ಯಾಗ್‌ಗಾಗಿ ಆಗಮಿಸಿದವರು ಪರದಾಡಬೇಕಾದ ಸ್ಥಿತಿ ಇದೆ. ಫಾಸ್ಟ್ಯಾಗ್ ಖಾಲಿ ಮಾತ್ರವಲ್ಲದೇ ಸಮರ್ಪಕ ಮಾಹಿತಿ ನೀಡದಿರುವ ಕಾರಣ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸಾಸ್ತಾನ: ಮಂದಗತಿ
ಕೋಟ: ಸರ್ವರ್ ಸಮಸ್ಯೆಯಿಂದಾಗಿ ಸಾಸ್ತಾನ ಟೋಲ್‌ನಲ್ಲಿ ಫಾಸ್ಟ್ಯಾಗ್ ಹಂಚಿಕೆ ನಿಧಾನಗತಿಯಲ್ಲಿ ನಡೆಯುತ್ತಿದೆ. ಆ್ಯಕ್ಸಿಸ್ ಬ್ಯಾಂಕ್ ಹಾಗೂ ಪೇಟಿಎಂಗಳು ಟೋಲ್‌ನಲ್ಲಿ ಸ್ಟಾಲ್ ತೆರೆದು ಸ್ಟಿಕ್ಕರ್ ವಿತರಿಸುತ್ತಿದ್ದಾರೆ.
“ಸಮಸ್ಯೆ ಇದ್ದರೆ ಪರಿಶೀಲನೆ’
ದ.ಕ. ಜಿಲ್ಲೆಯ ಬಹುತೇಕ ಬ್ಯಾಂಕ್‌ಗಳಲ್ಲಿ ಫಾಸ್ಟ್ಯಾಗ್ ಪಡೆಯಲು ಅವಕಾಶವಿದೆ. ನಿಗದಿಪಡಿಸಿದ ಯಾವುದೇ ಬ್ಯಾಂಕಿನಲ್ಲಿಯೂ ವಾಹನ ಮಾಲಕರು ಫಾಸ್ಟ್ಯಾಗ್ ಸ್ಟಿಕ್ಕರ್ ಖರೀದಿಸಬಹುದು. ವಾಹನದ ಹಾಗೂ ಮಾಲಕರ ಸೂಕ್ತ ದಾಖಲೆ ಇದ್ದರೆ ಸಂಬಂಧಿತ ಬ್ಯಾಂಕ್‌ನಲ್ಲಿ 10 ನಿಮಿಷದ ಒಳಗೆ ಫಾಸ್ಟ್ಯಾಗ್ ಸ್ಟಿಕ್ಕರ್ ನೀಡಲಾಗುತ್ತದೆ. ಆದರೆ, ಕೆಲವು ಬ್ಯಾಂಕ್‌ಗಳಲ್ಲಿ ಗ್ರಾಹಕರಿಗೆ ಸಮಸ್ಯೆ ಆಗುತ್ತಿರುವ ದೂರಿನ ಬಗ್ಗೆ ಪರಿಶೀಲಿಸಲಾಗುವುದು.
- ಪ್ರವೀಣ್ ಎಂ.ಪಿ., ಚೀಫ್ ಮ್ಯಾನೆಜರ್ ಲೀಡ್ ಬ್ಯಾಂಕ್-ದ.ಕ.
ಫಾಸ್ಟ್ಯಾಗ್ ಎಲ್ಲೆಲ್ಲಿ ಲಭ್ಯ
ಡಿ. 1ರ ವರೆಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಉಚಿತ ಫಾಸ್ಟ್ಯಾಗ್‌ಗೆ ತಮ್ಮ ವಾಹನದ ನೋಂದಣಿ ಪತ್ರ (ಆರ್‌ಸಿ) ಮತ್ತು ಚಾಲನಾ ಪರವಾನಿಗೆ ಅಥವಾ ಆಧಾರ್ ಕಾರ್ಡ್ ನೀಡಿ ನೋಂದಣಿ ಮಾಡಕೊಳ್ಳಬಹುದಾಗಿದೆ.
ವಿವಿಧ ರಾಷ್ಟ್ರೀಕೃತ ಬ್ಯಾಂಕ್‌ಗಳು, ಪೇಟಿಎಂ ಮೂಲಕ ಆನ್‌ಲೈನ್‌ನಲ್ಲಿ ಸ್ಟಿಕ್ಕರ್ ಖರೀದಿಸಬಹುದು.
ಡಿ. 1ರ ಬಳಿಕ 100 ರೂ. ನೀಡಿ ಫಾಸ್ಟ್ಯಾಗ್ ನೋಂದಣಿ ಮಾಡಿಸಿಕೊಳ್ಳಬೇಕೆ ಅಥವಾ ಉಚಿತ ನೀಡಿಕೆಯು ಮುಂದುವರಿಯುವುದೇ ಎನ್ನುವ ಬಗೆಗೆ ಕೇಂದ್ರ ಸರಕಾರದ ಸ್ಪಷ್ಟನೆ ಇದುವರೆಗೂ ಇಲ್ಲ.
ನೋಂದಣಿಯ ಎಲ್ಲ ಪಾವತಿಗಳಲ್ಲೂ 200 ರೂ. ಭದ್ರತಾ ಠೇವಣಿ, 150 – 200 ರೂ. ಕನಿಷ್ಟ ಮಿತಿ ಸೇರಿ 400ರೂ. ಇದ್ದೇ ಇರುತ್ತದೆ. ಆ್ಯಕ್ಸಿಸ್ ಬ್ಯಾಂಕ್ 200 ರೂ. ಭದ್ರತಾ ಠೇವಣಿ ಹಾಗೂ 200 ರೂ. ಕನಿಷ್ಠ ಮಿತಿಯನ್ನು ಹೊಂದಿದ್ದರೆ, ಪೇಟಿಎಂ 250ರೂ. ಭದ್ರತಾ ಠೇವಣಿ ಮತ್ತು 150ರೂ. ಕನಿಷ್ಠ ಮಿತಿಯನ್ನು ಹೊಂದಿರುತ್ತದೆ. ಭದ್ರತಾ ಠೇವಣಿಯು ಮಾಲಕ ಬಯಸಿದಾಗ ಆ ವಾಹನದ ಮಾಲಕತ್ವ ಬದಲಾಗುವ ವೇಳೆ ಹಿಂಪಡೆಯಬಹುದಾಗಿದೆ.
ಫಾಸ್ಟ್ಯಾಗ್ ನೋಂದಣಿ ಬಳಿಕ ಮೈ ಫಾಸ್ಟ್ಯಾಗ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ರೀಚಾರ್ಜ್ ಮಾಡಿಸಿಕೊಳ್ಳಬಹುದಾಗಿದೆ. ಕನಿಷ್ಠ ಮಿತಿ ಇರುವಾಗ ವಾಹನ ಮಾಲಕನಿಗೆ ಸಂದೇಶ ಬರುತ್ತಿರುತ್ತವೆ. ಆ್ಯಪ್ ಮೂಲಕವೂ ಇದನ್ನು ಗಮನಿಸಬಹುದಾಗಿದೆ. ಮುಂದೆ ರೀಚಾರ್ಜ್ ಮಾಡಿಕೊಂಡೇ ಟೋಲ್ ಗೇಟ್ ಪ್ರವೇಶಿಸಬೇಕು.
ಟೋಲ್ ಗೇಟ್‌ನ ನಗದು ಪಾವತಿ ಕೌಂಟರ್ ದ್ವಾರವನ್ನು ಅಂತಹ ರೀಚಾರ್ಜ್ ಮಾಡಿಸದ ವಾಹನ ಸವಾರರು ಪ್ರವೇಶಿಸಿ ಅಲ್ಲಿ ಕಾದು ಸರಿಯಾದ ಮೊತ್ತ ಪಾವತಿಸಿ ತನ್ನ ಪ್ರಯಾಣವನ್ನು ಮುಂದುವರಿಸಬೇಕು.
ಹೆಜಮಾಡಿ ಟೋಲ್‌ಗೇಟ್‌ಗೆ ಸಂಬಂಧಿಸಿ ಸ್ಥಳಿಯರು ಮಾತ್ರ ಯಾವಾಗಲೂ ನಗದು ಪಾವತಿ ಕೌಂಟರ್ ಮೂಲಕವೇ ಹಾದು ಹೋಗಬೇಕಿದೆ. ಅಲ್ಲಿ ಯಾವುದೇ ಪಾವತಿ ಮಾಡದೇ ಪ್ರಯಾಣ ಮುಂದುವರಿಸಬಹುದು. ಒಂದು ವೇಳೆ ಅವರು ಇತರ ಗೇಟ್ ಮೂಲಕ ಪ್ರವೇಶಿಸಿದರೆ ದುಪ್ಪಟ್ಟು ಪಾವತಿಸಿ ತೆರಳಬೇಕಾಗುತ್ತದೆ. ಇಂತಹ ವಾಹನ ಮಾಲಕರು ಇತರ ಇತರ ಟೋಲ್‌ಗೇಟ್‌ಗಳಿಗಾಗಿ ಫಾಸ್ಟ್ಯಾಗ್ ಸ್ಟಿಕ್ಕರ್ ನೋಂದಣಿ ಮಾಡಿಸಿಕೊಳ್ಳಲೇಬೇಕು. ಸ್ಥಳೀಯರ ಫಾಸ್ಟ್ಯಾಗ್ ವಿವರಗಳನ್ನು ಹೆಜಮಾಡಿ ಟೋಲ್‌ನಲ್ಲಿ ಡಾಟಾ ಸಂಗ್ರಹಕ್ಕೆ ವರ್ಗಾಯಿಸದಿರುವ ಕಾರಣ ಇದು ಅನಿವಾರ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.