Dakshinakannada: ಪೊಲೀಸ್ ಆಯುಕ್ತರ ವರ್ಗಾವಣೆ ಆದೇಶ ಹಿಂಪಡೆಯಲು ಆಗ್ರಹ
Team Udayavani, Sep 7, 2023, 12:59 PM IST
ಮಂಗಳೂರು: ಮಂಗಳೂರು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್. ಜೈನ್ ಅವರ ವರ್ಗಾವಣೆ ಆದೇಶವನ್ನು ಸರಕಾರ ಕೂಡಲೇ ಹಿಂಪಡೆಯಬೇಕು ಎಂದು ಮಂಗಳೂರಿನ ಕೆಲವು ಸಾಮಾಜಿಕ ಕಾರ್ಯಕರ್ತರು, ರಾಜಕೀಯ ಮುಖಂಡರು ಮತ್ತು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳ ಮೂಲಕ ಆಗ್ರಹಿಸಿದ್ದಾರೆ.
ಡ್ರಗ್ಸ್, ಅಕ್ರಮ ಮರಳುಗಾರಿಕೆ ಮೊದಲಾದ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಲ್ಲಿಸಲು, ಕೋಮು ಸಾಮರಸ್ಯ ಕಾಪಾಡಲು ದಿಟ್ಟ, ನಿಷ್ಪಕ್ಷ ಕ್ರಮ ತೆಗೆದುಕೊಂಡಿದ್ದ ಕುಲದೀಪ್ ಅವರನ್ನು ಯಾವುದೋ ಒತ್ತಡಕ್ಕೆ ಮಣಿದು ಸರಕಾರ ವರ್ಗಾವಣೆ ಮಾಡಿರುವ ಸಂದೇಹ ಉಂಟಾಗಿದೆ ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಡ್ರಗ್ಸ್ ಮುಕ್ತ ಮಂಗಳೂರಿಗಾಗಿ
ಕುಲದೀಪ್ ಕುಮಾರ್ ಅವಧಿಯಲ್ಲಿ “ಡ್ರಗ್ಸ್ ಮುಕ್ತ ಮಂಗಳೂರು’ ವಿಶೇಷ ಅಭಿಯಾನ ದಡಿ ಶಾಲಾ ಕಾಲೇಜು ಗಳಲ್ಲಿ ವ್ಯಾಪಕ ಜಾಗೃತಿ, ಹಳೆ ಡ್ರಗ್ಸ್ ವ್ಯಸನಿ, ಪೆಡ್ಲರ್‌ಗಳ ಕೌನ್ಸೆಲಿಂಗ್, ವ್ಯಾಪಕ ಕಾರ್ಯಾಚರಣೆ ನಡೆಸಲಾಗಿದೆ. ಕಳೆದ 5 ತಿಂಗಳಲ್ಲಿ ಡ್ರಗ್ಸ್ ದಂಧೆಯ ಕಿಂಗ್‌ಪಿನ್ ಬೆಂಗಳೂರು ನಿವಾಸಿ ನೈಜೀರಿಯಾ ಮಹಿಳೆ ಸಹಿತ 65 ಮಂದಿ ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸಲಾಗಿದೆ. ಗಾಂಜಾ ಸಹಿತ ಮಾದಕ ವಸ್ತು ಸೇವಿಸಿದ 200ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ. ಇ-ಸಿಗರೇಟ್, ವಿದೇಶಿ ಸಿಗರೇಟ್ ಅಕ್ರಮ ಮಾರಾಟ, ಗಾಂಜಾ ಮಿಶ್ರಿತ ಚಾಕೊಲೆಟ್‌ಗಳ ಮಾರಾಟವನ್ನು ಪತ್ತೆ ಹಚ್ಚಿ ಕಠಿನ ಕ್ರಮ ಕೈಗೊಳ್ಳಲಾಗಿದೆ.
ಹಳೆ ಆರೋಪಿಗಳಿಗೆ ಬಲೆ
ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಈ ಹಿಂದೆ ಗಂಭೀರ ಪ್ರಕರಣಗಳಲ್ಲಿ ಪಾಲ್ಗೊಂಡು ಹಲವಾರು ವರ್ಷಗಳಿಂದ ತಲೆಮರೆಸಿಕೊಂಡಿದ್ದ 34 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ನ್ಯಾಯಾಲಯದಲ್ಲಿ ವಿಚಾರಣೆಗೆ ಬರುವ ಪ್ರಕರಣಗಳ ಮೇಲೆ ನಿರಂತರ ನಿಗಾ ಇರಿಸಿ ಸಂತ್ರಸ್ತರಿಗೆ ನ್ಯಾಯ ಸಿಗುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಇದಕ್ಕಾಗಿಯೇ ಎಸಿಪಿ ಮಟ್ಟದಲ್ಲಿ ಸಭೆಗಳನ್ನು ನಡೆಸಲಾಗುತ್ತಿತ್ತು.
ಜನಸ್ನೇಹಿ ಪೊಲೀಸಿಂಗ್
ಒಂದೊಮ್ಮೆ ಸ್ಥಗಿತಗೊಂಡಿದ್ದ ಪೊಲೀಸ್ ಪೋನ್-ಇನ್ ಕಾರ್ಯ ಕ್ರಮವನ್ನು ಪುನರಾರಂಭಿಸ ಲಾಗಿತ್ತು. ಮಟ್ಕಾ ಜುಗಾರಿ, ಅಕ್ರಮ ಮರಳುಗಾರಿಕೆ ವಿರುದ್ಧವೂ ವ್ಯಾಪಕ ಕಾರ್ಯಾಚರಣೆ ನಡೆದಿತ್ತು.
ಸಂಚಾರ ಸಮಸ್ಯೆಗಳಿಗೆ ಸ್ಪಂದಿಸು ವುದಕ್ಕಾಗಿ ಠಾಣಾ ಮಟ್ಟದಲ್ಲಿಯೇ “ಸಂಚಾರ ಸಂಪರ್ಕ ದಿವಸ’, ಪೊಲೀಸ್ ಠಾಣೆಗಳಲ್ಲಿ ದೊರೆಯುವ ಸ್ಪಂದನೆ ಬಗ್ಗೆ ಫೀಡ್‌ಬ್ಯಾಕ್ ನೀಡುವುದಕ್ಕಾಗಿ ಕ್ಯೂ ಆರ್ ಕೋಡ್ ಸ್ಕ್ಯಾನಿಂಗ್ ವ್ಯವಸ್ಥೆ, ಠಾಣೆಗಳಿಗೆ ದೂರು ನೀಡಲು ಹೋದವರಿಗೆ ಆಯುಕ್ತರ ಕಚೇರಿಯಿಂದಲೇ ಕರೆ ಮಾಡಿ ಅಲ್ಲಿ ದೊರೆತ ಸ್ಪಂದನೆಯ ಬಗ್ಗೆ ಮಾಹಿತಿ ಪಡೆಯುವ ವ್ಯವಸ್ಥೆಯೂ ಆರಂಭವಾಗಿತ್ತು.
ಸುರಕ್ಷಿತ ಸಂಚಾರಕ್ಕೆ ಕ್ರಮ ವಹಿಸುತ್ತಿದ್ದರು
ಸಂಚಾರ ನಿಯಮ ಉಲ್ಲಂಘನೆ ಪುನರಾವರ್ತನೆ ಪ್ರಕರಣಗಳಲ್ಲಿ ಜು. 27ರಿಂದ ಆ. 21ರ ವರೆಗೆ ಒಟ್ಟು 897 ಮಂದಿ ವಾಹನ ಚಾಲಕರು/ಸವಾರರ ಡಿಎಲ್ ಅಮಾನತಿಗೆ ಆರ್‌ಟಿಒಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಬಸ್‌ಗಳ ಫುಟ್‌ಬೋರ್ಡ್‌ನಲ್ಲಿ ನಿಲ್ಲುವ ಕಂಡಕ್ಟರ್, ಪ್ರಯಾಣಿಕರ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ: Davanagere; ಜಾಲಿ ರೈಡ್ ಗೆ ಹೊರಟಿದ್ದ ಯುವಕರಿಗೆ ಅಪಘಾತ; ಸ್ಥಳದಲ್ಲೇ ಇಬ್ಬರ ದುರ್ಮರಣ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.