Mangaluru: ನಗರದಲ್ಲಿ ಮುಂದುವರಿದ ಟೈಗರ್ ಕಾರ್ಯಾಚರಣೆ
ಕಂಕನಾಡಿ, ಪಂಪ್‌ವೆಲ್: ಅನಧಿಕೃತ ಗೂಡಂಗಡಿ ತೆರವು ಆಯುಕ್ತರ ಕೊಠಡಿ ಎದುರು ಧರಣಿ
Team Udayavani, Jul 31, 2024, 12:52 PM IST
![maha](https://www.udayavani.com/wp-content/uploads/2024/07/maha-620x342.jpg)
![maha](https://www.udayavani.com/wp-content/uploads/2024/07/maha-620x342.jpg)
ಮಹಾನಗರ: ಬೀದಿ ಬದಿಯಲ್ಲಿ ಅನಧಿಕೃತ ಗೂಡಂಗಡಿಗಳ ತೆರವಿಗಾಗಿ ಪಾಲಿಕೆಯಿಂದ ನಡೆಯುತ್ತಿದ್ದ “ಟೈಗರ್ ಕಾರ್ಯಾಚರಣೆ’ ಮಂಗಳವಾರವೂ ಮುಂದುವರಿದಿದೆ. ಈ ಮಧ್ಯೆ ತೆರವು ವಿರೋಧಿಸಿ ಪಾಲಿಕೆ ಆಯುಕ್ತರ ಕಚೇರಿ ಮುಂಭಾಗ ವ್ಯಾಪಾರಸ್ಥ ಸಂಘದ ಪದಾಧಿಕಾರಿಗಳು, ವ್ಯಾಪಾರಸ್ಥರು ಧರಣಿ ನಡೆಸಿದ ವಿದ್ಯಮಾನವೂ ನಡೆಯಿತು.
ಪಾಲಿಕೆಯ ವಲಯ ಆಯುಕ್ತೆ ರೇಖಾ ಜೆ. ಶೆಟ್ಟಿ ಅವರ ನೇತೃತ್ವದಲ್ಲಿ ಕಂಕನಾಡಿ, ಪಳ್ನೀರ್ ರಸ್ತೆ, ವೆಲೆನ್ಸಿಯ, ಪಂಪ್‌ವೆಲ್, ಫಾದರ್ ಮುಲ್ಲರ್ ರಸ್ತೆ ಸಹಿತ ಸುತ್ತಮುತ್ತಲಿನ ಪ್ರದೇಶಗಳ ಸುಮಾರು 14ಅಂಗಡಿಗಳನ್ನು ತೆರವು ಮಾಡಲಾಯಿತು. ಮನಪಾ ಆರೋಗ್ಯಾ ಧಿಕಾರಿ ಡಾ| ಮಂಜಯ್ಯ ಶೆಟ್ಟಿ, ಕಂದಾಯಾಧಿಕಾರಿ ವಿಜಯ ಕುಮಾರ್ ಸಹಿತ ಪಾಲಿಕೆ ಅಧಿಕಾರಿಗಳು, ಸಿಬಂದಿ ಇದ್ದರು.
ಆಸ್ಪತ್ರೆ ರಸ್ತೆಯಲ್ಲಿ ಟ್ರಾಫಿಕ್ ಜಾಮ್
ತೆರವು ಕಾರ್ಯಾಚರಣೆ ಕಂಕನಾಡಿ ಬಳಿಯಿಂದ ಅತ್ತಾವರ ಕಡೆಗೆ ತೆರಳಿತು. ಅಲ್ಲಿ ಕೆಲವೇ ಮೀಟರ್ ಅಂತರದಲ್ಲಿಎರಡು ಆಸ್ಪತ್ರೆಗಳಿದ್ದು, ಪೊಲೀಸರ ಸಹಕಾರದಿಂದ ಗೂಡಂಗಡಿ ತೆರವು ನಡೆದರೂ, ಸುತ್ತಲಿನ ರಸ್ತೆಯಲ್ಲಿ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಯಿತು.
ಆಯುಕ್ತರ ಕೊಠಡಿ ಎದುರು ಧರಣಿ
“ಟೈಗರ್’ ಕಾರ್ಯಾಚರಣೆ ವಿರೋಧಿಸಿ ಬೀದಿ ಬದಿ ವ್ಯಾಪಾರಿಗಳು ಮಹಾನಗರ ಪಾಲಿಕೆ ಆಯುಕ್ತರ ಕೊಠಡಿ ಎದುರು ಮಂಗಳವಾರ ಬೆಳಗ್ಗೆ ಧರಣಿ ಕುಳಿತರು. ಪಾಲಿಕೆ ಆಯುಕ್ತರು ಬಂದು ಸಮಸ್ಯೆ ಆಲಿಸಬೇಕು ಎಂದು ಒತ್ತಾಯಿಸಿದರು. ಪಾಲಿಕೆಯ ಕಾರಿಡಾರ್‌ನಲ್ಲಿ ಕುಳಿತಿದ್ದವರು ಬಳಿಕ ಆಯುಕ್ತರ ಕೊಠಡಿ ಎದುರಿಗೆ ಬಂದರು. ಕಚೇರಿ ಸಿಬಂದಿ-ಧರಣಿ ನಿರತರ ನಡುವೆ ಮಾತಿನ ಚಕಮಕಿ ನಡೆಯಿತು.
ಅಮಾನುಷ ಕೃತ್ಯ: ಸಿಐಟಿಯು
ಬೀದಿಬದಿ ವ್ಯಾಪಾರಸ್ಥರ ಮೇಲೆ ನಡೆಸಿದ ಬುಲ್ಡೋಜರ್ ದಾಳಿ ಅತ್ಯಂತ ಅಮಾನುಷಕೃತ್ಯ ಎಂದು ಸಿಐಟಿಯು ದ.ಕ. ಜಿಲ್ಲಾ ಸಮಿತಿ ಖಂಡಿಸಿದೆ. ಎಲ್ಲಾ ವಸ್ತುಗಳನ್ನು ಕೂಡಲೇ ವಾಪಸ್ ನೀಡಬೇಕು, ಧ್ವಂಸಗೊಳಿಸಿದ ವಸ್ತುಗಳಿಗೆ ಕೂಡಲೇ ಪರಿಹಾರ ನೀಡಬೇಕು, ಕಾನೂನು ಬಾಹಿರ ಬುಲ್ಡೋಜರ್ ದಾಳಿಯನ್ನು ನಿಲ್ಲಿಸಬೇಕು. ದಾಳಿಗೆ ಕಾರಣಕರ್ತರಾದ ಮೇಯರ್, ಆಯುಕ್ತರು ಇತರ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.
ಕಣ್ಣೀರು ಹಾಕಿದ ವ್ಯಾಪರಸ್ಥರು
ಮಂಗಳವಾರ ಬೆಳ್ಳಂಬೆಳಗ್ಗೆ ಕಂಕನಾಡಿ ಮಾರುಕಟ್ಟೆ ಸಹಿತ ಸುತ್ತಮುತ್ತಲಿನ ಪ್ರದೇಶದಲ್ಲಿ ತೆರವು ಕಾರ್ಯ ನಡೆದಿದೆ. ಕೆಲವು ವ್ಯಾಪಾರಿಗಳಿಗೆ ಮಾಹಿತಿ ಇರದ ಕಾರಣ ಅವರು ಪಾಲಿಕೆ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ ಘಟನೆಯೂ ನಡೆಯಿತು. ಹಲವು ಸಮಯದಿಂದ ವ್ಯಾಪಾರ ನಡೆಸುತ್ತಿದ್ದ ಗಾಡಿಗಳು ಜೆಸಿಬಿ ಮೂಲಕ ತನ್ನ ಕಣ್ಣಮುಂದೆ ಪುಡಿ ಮಾಡುತ್ತಿದ್ದಾಗ ಕೆಲವು ವ್ಯಾಪಾರಸ್ಥರು ಕಣ್ಣೀರು ಹಾಕುತ್ತಿದ್ದರು.