Mangaluru: ಬಾಯ್ತೆರೆದ ಕೋರೆಗಳಿಂದ ಅಪಾಯದ ಕರೆ!
ಮೃತ್ಯುಕೂಪಗಳಾಗುತ್ತಿವೆ ಭದ್ರತೆ ಇಲ್ಲದ ಕೆಂಪು ಕಲ್ಲಿನ ಕೋರೆಗಳು ; ಮುನ್ನೆಚ್ಚರಿಕೆ ಅಗತ್ಯ
Team Udayavani, Aug 8, 2024, 12:52 PM IST
ಮಹಾನಗರ: ಕಲ್ಲು ತೆಗೆದು ಹಾಗೇ ಬಿಟ್ಟ, ಕಲ್ಲಿನ ಪರೀಕ್ಷೆಗಾಗಿ ಅಗೆದ ಕೋರೆಗಳು ಮಳೆಗಾಲದಲ್ಲಿ ಜೀವ ತೆಗೆಯುವ ಮೃತ್ಯು ಕೂಪಗಳಾಗಿ ಪರಿವರ್ತ ನೆಯಾಗುತ್ತಿದ್ದು, ಸ್ಥಳೀಯ ಮತ್ತು ಜಿಲ್ಲಾಡಳಿತಗಳು ಈ ಬಗ್ಗೆ ಎಚ್ಚರಿಕೆ ವಹಿ ಸಬೇಕಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಈ ರೀತಿ ಕೋರೆಗಳು ಬಾಯ್ತೆರೆದು ಕುಳಿತಿವೆ. 600ಕ್ಕೂ ಅಧಿಕ ಕೋರೆಗಳು ಎಲ್ಲೆಡೆ ಹರಡಿಕೊಂಡಿದ್ದು, ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿವೆ. ಆದರೆ ಇವುಗಳಲ್ಲಿ ಪರವಾನಿಗೆ ಪಡೆದ ಕೋರೆಗಳು ಕೇವಲ 100ರಷ್ಟು ಮಾತ್ರ.
ಕಲ್ಲು ತೆಗೆದು ಬಿಟ್ಟ ಕೋರೆಗಳಲ್ಲಿ ಮಳೆಗಾಲದಲ್ಲಿ ನೀರು ತುಂಬುವುದರಿಂದ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚು. ಹೀಗಾಗಿ ಕೋರೆಯ ಸುತ್ತ ತಡೆಬೇಲಿ ಹಾಕಿ ಸೂಕ್ತ ಭದ್ರತೆ ಕೈಗೊಳ್ಳುವಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಸ್ಪಷ್ಟ ಸೂಚನೆ ನೀಡಿದೆ. ಆದರೆ ಹೆಚ್ಚಿನ ಕಡೆಗಳಲ್ಲಿ ಇದು ಇದು ಪರಿಣಾಮಕಾರಿಯಾಗಿ ಅನುಷ್ಠಾನವಾಗಿಲ್ಲ.
ಬೇಕಾಬಿಟ್ಟಿ ಹೊಂಡ ನಿರ್ಮಾಣ
ಕಲ್ಲಿನ ಕೋರೆ ಮಾಡಬೇಕಿದ್ದರೆ ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆದು ಜಾಗವನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ ಜತೆ ಲೀಸ್‌ನಲ್ಲಿ ಒಪ್ಪಂದ ಮಾಡಿಕೊಂಡಿರಬೇಕು. ಆದರೆ ಅನೇಕ ಪ್ರಕರಣಗಳಲ್ಲಿ ಈ ರೀತಿ ಲೀಸ್ ಪಡೆಯದೆ ಅಕ್ರಮವಾಗಿಯೇ ಗಣಿಗಾರಿಕೆ ನಡೆಯುತ್ತದೆ. ಹೀಗೆ ನಿರ್ಮಾಣಗೊಂಡ ಹೊಂಡಗಳಲ್ಲಿ ಮಳೆ ನೀರು ಸಂಗ್ರಹವಾಗುತ್ತದೆ. ಆದರೆ, ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಆಟವಾಡಲು ಅಥವಾ ಇತರ ಕಾರಣಕ್ಕಾಗಿ ಹೋದ ಕೆಲವರು ಕಲ್ಲಿನ ಕೋರೆಗೆ ಬಿದ್ದ ಮೃತಪಟ್ಟ ಘಟನೆ ಈ ಹಿಂದೆ ಹಲವು ಬಾರಿ ಸಂಭವಿಸಿದೆ.
ನಿಗಾ ವಹಿಸುವವರು ಯಾರು?
ಕಲ್ಲಿನ ಕೋರೆ ಮಾಡಿ ಕೆಲಸ ಮುಗಿದ ಬಳಿಕ ಮುಂದೇನು? ಎಂಬುದಕ್ಕೆ ಸ್ಪಷ್ಟ ಉತ್ತರ ಇಲ್ಲ. ಸಾಮಾನ್ಯವಾಗಿ ಕೆಂಪು ಕಲ್ಲಿನ ಅಗೆತ 10ರಿಂದ 18 ಅಡಿಯವರೆಗೂ ಇರುತ್ತದೆ. ಆಳದವರೆಗೆ ಹೊಂಡ ಮಾಡಿದ ನಂತರ ಇಂತಹ ಕೋರೆಯನ್ನು ಕೇಳುವವರೇ ಇಲ್ಲ ಎನ್ನುವ ಪರಿಸ್ಥಿತಿ. ಕೃತಕ ಕೆರೆಯ ಸ್ವರೂಪದಲ್ಲಿ ಇದು ಬದಲಾಗುತ್ತದೆ. ಕೆಲವು ಜನನಿಬಿಡ ಪ್ರದೇಶದ ಕೋರೆಗಳ ಸಮೀಪ ಜನ ಸಂಚಾರವನ್ನು ನಿಯಂತ್ರಿಸುವುದು ಕೂಡಾ ಕಷ್ಟವಾಗುತ್ತದೆ. ಇದರ ಮೇಲೆ ನಿಗಾ ಇಡುವವರು ಯಾರು ಎಂಬ ಪ್ರಶ್ನೆಯೂ ಇದೆ.
ಖಾಸಗಿ ಜಾಗದಲ್ಲೂ ಮೃತ್ಯುಕೂಪ
ಖಾಸಗಿ ಪಟ್ಟಾ ಜಮೀನನ್ನು ಕಲ್ಲು ತೆಗೆಯಲು ಕೊಟ್ಟರೆ ಒಳ್ಳೆಯ ಆದಾಯ ತರುತ್ತದೆ ಎಂಬ ಕಾರಣಕ್ಕೆ ಜಿಲ್ಲೆಯ ಹಲವೆಡೆ ಕೋರೆಗಾಗಿ ಗುತ್ತಿಗೆದಾರರಿಗೆ ಕೊಡುತ್ತಾರೆ. ಕೋರೆಯವರು ಮೊದಲು ಕಲ್ಲು ಹೇಗಿದೆ ಎಂದು ನೋಡಲು ಹೊಂಡ ಮಾಡುತ್ತಾರೆ, ಕಲ್ಲು ಚೆನ್ನಾಗಿದ್ದಾರೆ ಮುಂದುವರಿಯುತ್ತಾರೆ, ಇಲ್ಲವಾದರೆ ಹಾಗೇ ಬಿಟ್ಟು ಹೋಗುತ್ತಾರೆ. ಇಂತಹ ಹೊಂಡಗಳೇ ಅನೇಕ ಜೀವ ತೆಗೆದ ಉದಾಹರಣೆ ಇದೆ. ಮೂಡುಬಿದಿರೆಯ ಬೆಳುವಾಯಿಯಲ್ಲಿ ಕೆಲವು ವರ್ಷದ ಹಿಂದೆ 6 ಮಕ್ಕಳು ಪ್ರಾಣ ಕಳೆದುಕೊಂಡಿದ್ದರು!
ಮುನ್ನೆಚ್ಚರಿಕೆ ವಹಿಸಲು ಸೂಚನೆ
ಮಳೆ ಸಂದರ್ಭದಲ್ಲಿ ಯಾವುದೇ ಗಣಿಗಾರಿಕೆ ನಡೆಸದಂತೆ ಈಗಾಗಲೇ ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ. ಜತೆಗೆ ಮಳೆ ಸಂದರ್ಭ ಯಾವುದೇ ಅಪಾಯ ಆಗದಂತೆ ಕೋರೆಗಳ ವ್ಯಾಪ್ತಿಯಲ್ಲಿ ಮುನ್ನೆಚ್ಚರಿಕೆ ವಹಿಸುವಂತೆಯೂ ಈಗಾಗಲೇ ನಿರ್ದೇಶನ ನೀಡಲಾಗಿದೆ. ಈ ಕುರಿತಂತೆ ಪರಿಶೀಲನೆ ನಡೆಸಲಾಗುವುದು.
-ದ್ವಿತೀಯ, ಉಪನಿರ್ದೇಶಕರು, ಗಣಿ ಮತ್ತು ಭೂವಿಜ್ಞಾನ ಇಲಾಖೆ, ದ.ಕ.
ಅಲ್ಲಲ್ಲಿ ಇವೆ ಕೆಲವು ಕೋರೆಗಳು!
ಮಂಗಳೂರು, ಮೂಡಬಿದಿರೆ ತಾಲೂಕಿನ ಆದ್ಯಪಾಡಿ, ಬಡಗ ಎಕ್ಕಾರು, ಕೊಂಪದವು, ಪುತ್ತಿಗೆ, ಬೆಳುವಾಯಿ, ತೆಂಕಮಿಜಾರು, ತೆಂಕ ಎಕ್ಕಾರು, ಮುನ್ನೂರು, ಬಂಟ್ವಾಳ ತಾಲೂಕಿನ ಕರಿಯಂಗಳ, ಮಂಚಿ, ಕಸಬಾ, ಉಳ್ಳಾಲ ತಾಲೂಕಿನ ಮೂಳೂರು-ಇರಾ, ಕಂಚಿನಡ್ಕಪದವು, ನರಿಂಗಾನ ಮುಂತಾದ ಕಡೆಗಳಲ್ಲಿ ಕಲ್ಲಿನ ಕೋರೆಗಳಿವೆ. ಇಲ್ಲಿ ಎಲ್ಲಾ ಕಡೆ ಅಪಾಯ ಎಂದಲ್ಲ. ಆದರೆ, ಕೆಲವು ಕಡೆಗಳಲ್ಲಿ ಅಪಾಯವಿದ್ದು, ಗಣಿ ಇಲಾಖೆ-ಸ್ಥಳೀಯಾಡಳಿತ ಮುನ್ನೆಚ್ಚರಿಕೆ ವಹಿಸಬೇಕಾಗಿದೆ.
ನೀರು ಇಂಗಿಸುವುದಾದರೂ ಭದ್ರತೆ ಅಗತ್ಯ!
ಮಳೆಗಾಲದಲ್ಲಿ ನೀರು ತುಂಬಿ ಬೃಹತ್ ಕೆರೆಗಳಾಗಿ ಪರಿವರ್ತನೆಯಾಗುವುದರಿಂದ ಅಂತಹ ಕೋರೆಗಳನ್ನೇ ಮುಚ್ಚಿಸಲಾಗುತ್ತದೆ. ಅಪಾಯಕಾರಿ ಕೋರೆಗಳಿಂದ ಜೀವಹಾನಿ ಸಂಭವಿಸುವ ಸಾಧ್ಯತೆ ಇರುವುದರಿಂದ ಮುಚ್ಚಿಸುವುದು ಕೂಡ ಅನಿವಾರ್ಯ. ಆದರೆ ಇಂತಹ ಕೋರೆಯಲ್ಲಿಯೇ ಸೂಕ್ತ ಭದ್ರತಾ ವ್ಯವಸ್ಥೆಯನ್ನು ಕೈಗೊಂಡು ಜಲಸಂರಕ್ಷಣೆ ಮಾಡಲು ಕೂಡ ಅವಕಾಶವಿದೆ ಎಂಬ ಪ್ರಯತ್ನವೂ ಕೆಲವೆಡೆ ಆಗುತ್ತಿದೆ. ನಿರುಪಯುಕ್ತ ಕಲ್ಲಿನ ಕೋರೆಗಳಲ್ಲಿ ನಾಲ್ಕೂ ಸುತ್ತಲು ಸೂಕ್ತ ಭದ್ರತೆಯನ್ನು ಕೈಗೊಂಡು ಮಳೆ ನೀರು ಸಂಗ್ರಹಿಸಿ ನೀರು ಇಂಗಿಸುವಂತೆ ಮಾಡುವ ಪ್ರಯತ್ನ ಕೆಲವರು ನಡೆಸುತ್ತಿದ್ದಾರೆ; ಆದರೆ, ಅಲ್ಲೂ ಗರಿಷ್ಠ ಭದ್ರತೆ ವ್ಯವಸ್ಥೆ ಮಾಡಬೇಕು.
ಮಳೆಗಾಲದಲ್ಲಿ ಕೆರೆಗಳಾಗುವ ಕೋರೆಗಳು!
ಸಾರ್ವಜನಿಕ ಜಾಗದಲ್ಲಿರುವ ದೊಡ್ಡ ಕೆಂಪುಕಲ್ಲು ಕೋರೆಗಳು ಅಪಾಯವನ್ನು ಸೃಷ್ಟಿಸಿದಂತೆಯೇ, ಖಾಸಗಿ ಜಾಗದಲ್ಲಿರುವ ಚಿಕ್ಕ, ಮಧ್ಯಮ ಗಾತ್ರದ ಕೋರೆಗಳು ಕೂಡ ಅಪಾಯಕಾರಿಯೇ. ಖಾಸಗಿ ಜಾಗದಲ್ಲಿ ತೆಗೆದ ಸಣ್ಣ ಕೋರೆಗಳನ್ನು ಜನ ಕೆರೆಯ ರೀತಿಯಲ್ಲಿ ಬಳಸುವುದಕ್ಕಾಗಿ ಹಾಗೆಯೇ ಉಳಿಸಿಕೊಳ್ಳುತ್ತಾರೆ. ಆದರೆ, ತಡೆಗೋಡೆ ಇಲ್ಲದೆ ಅವುಗಳು ಕೂಡಾ ಮೃತ್ಯುಕೂಪಗಳಾದ ಘಟನೆಗಳು ಹಲವೆಡೆ ನಡೆದಿವೆ.
– ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Surathkal: ಅಡುಗೆ ಅನಿಲ ಸೋರಿಕೆ ಪ್ರಕರಣ; ಸುಧಾರಿಸದ ಗಾಯಾಳುಗಳ ಆರೋಗ್ಯ
Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ
Mangaluru: ನಂತೂರು ವೃತ್ತ; ಸಂಚಾರ ಸ್ವಲ್ಪ ನಿರಾಳ
Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ
Surathkal: ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಮುಲ್ಕಿ ಕಂದಾಯ ನಿರೀಕ್ಷಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.