ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ಸಿದ್ಧತೆ: ಗೋಮಯ, ಮಣ್ಣಿನ ಹಣತೆ, ಗೂಡು ದೀಪಗಳಿಗೆ ಬೇಡಿಕೆ
Team Udayavani, Nov 13, 2020, 4:18 AM IST
ಮಹಾನಗರ: ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ಮಂಗಳೂರು ನಗರ ಸಿದ್ಧಗೊಂಡಿದ್ದು, ಜನ ಹಬ್ಬದ ಖರೀದಿಯಲ್ಲಿ ತೊಡಗಿದ್ದಾರೆ. ಗೂಡುದೀಪ, ಮಣ್ಣಿನ ಹಣತೆ ಮತ್ತು ಸೆಗಣಿಯ ಹಣತೆಗಳಿಗೆ ಉತ್ತಮ ಬೇಡಿಕೆ ಕುದುರಿದ್ದು, ವ್ಯಾಪಾರಿಗಳು ಕೂಡ ಬಿರುಸಿನ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.
ದೀಪಾವಳಿಗೆ ಇನ್ನು ಒಂದು ದಿನವಷ್ಟೇ ಬಾಕಿ ಉಳಿದಿದೆ. ವಾರದಿಂದಲೇ ಖರೀದಿ ಪ್ರಕ್ರಿಯೆ ನಡೆಯುತ್ತಿದ್ದು, ಗುರು ವಾರ ಖರೀದಿ ಇನ್ನಷ್ಟು ಬಿರುಸುಗೊಂಡಿ ತ್ತು. ನಗರದ ಫ್ಯಾನ್ಸಿ ಅಂಗಡಿಗಳು ಸಹಿತ ಗೂಡುದೀಪ ಮಾರಾಟ ಅಂಗಡಿಗಳ ಮುಂಭಾಗದಲ್ಲಿ ವಿವಿಧ ಬಣ್ಣಗಳ ವೈವಿಧ್ಯಮಯ ಗೂಡುದೀಪಗಳು ರಾರಾಜಿಸುತ್ತಿದ್ದು, ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿವೆ. ಸುಮಾರು 100 ರೂ. ಗಳಿಂದ ಗೂಡುದೀಪಗಳ ಬೆಲೆ ಆರಂಭವಾಗುತ್ತವೆ.
ಮಣ್ಣು, ಸೆಗಣಿಯ ಹಣತೆಗೆ ಬೇಡಿಕೆ
ಈ ವರ್ಷದ ದೀಪಾವಳಿಗೆ ಮಾರು ಕಟ್ಟೆಯಲ್ಲಿ ಸೆಗಣಿಯ ಹಣತೆಗೆ ಬೇಡಿಕೆ ಕೇಳಿಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಆತ್ಮನಿರ್ಭರ ಭಾರತ ಪರಿಕಲ್ಪನೆಯನ್ನು ಘೋಷಿಸಿದಂತೆ ಸ್ವದೇಶಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಮೌಲ್ಯ ವೃದ್ಧಿಯಾಗಿದೆ. ಹಂಪನಕಟ್ಟೆ, ರಥಬೀದಿ ಮುಂತಾದೆಡೆಗಳಲ್ಲಿ ಸೆಗಣಿಯಿಂದ ಮಾಡಲ್ಪಟ್ಟ ಹಣತೆಗಳಿಗೆ ಬೇಡಿಕೆ ಬಂದಿದೆ ಎನ್ನುತ್ತಾರೆ ಮಾರಾಟಗಾರರು.
ಸುರತ್ಕಲ್‌ನ ಎಚ್ಚಣ್ಣ ಡೈರಿ ಸರ್ವೀಸಸ್ ಮುಖಾಂತರ ಸೆಗಣಿಯ ಹಣತೆಗಳನ್ನು ತಯಾರಿಸಿ ಮಂಗಳೂರಿನ ವಿವಿಧ ಅಂಗಡಿಗಳಿಗೆ ಒದಗಿಸಲಾಗುತ್ತಿದ್ದು, ದಿನಕ್ಕೆ ಸಾವಿರಾರು ಹಣತೆಗಳು ಮಾರಾಟ ವಾಗುತ್ತಿವೆ ಎಂದು ಸಂಸ್ಥೆಯ ಮಾಲಕ ಹರಿಕೃಷ್ಣ ಹೇಳುತ್ತಾರೆ.
ಈ ನಡುವೆ ಪ್ರತಿ ವರ್ಷದಂತೆ ಈ ವರ್ಷವೂ ಮಣ್ಣಿನ ಹಣತೆಗಳಿಗೂ ಬೇಡಿಕೆ ಕುದುರಿದ್ದು, ವಿವಿಧ ಬಣ್ಣ, ಆಕಾರಗಳಲ್ಲಿ ಅಲಂಕೃತಗೊಂಡ ಮತ್ತು ಯಾವುದೇ ಬಣ್ಣ ಬಳಸದ ಮಣ್ಣಿನ ಹಣತೆಗಳನ್ನು ಖರೀದಿಸುವಲ್ಲಿ ಜನ ನಿರತರಾಗಿದ್ದಾರೆ. ದೀಪಾವಳಿ ಹಬ್ಬದ ವೇಳೆ ಕೊರೊನಾ ಇಳಿಮುಖವಾಗುತ್ತಿದೆ. ಹೀಗಾಗಿ ವ್ಯಾಪಾರ ಚೇತರಿಸಿಕೊಂಡಿದೆ. ಕಳೆದ ವರ್ಷಕ್ಕಿಂತ ಸ್ವಲ್ಪ ಕಡಿಮೆ ವ್ಯಾಪಾರ ಇದ್ದರೂಜನ ಖರೀದಿಗೆ ಬರುತ್ತಿದ್ದಾರೆ. ಇನ್ನೂ ಒಂದು ದಿನ ಹಬ್ಬಕ್ಕೆ ಬಾಕಿ ಇದ್ದು, ಶುಕ್ರವಾರ ಖರೀದಿ ಇನ್ನಷ್ಟು ಜಾಸ್ತಿಯಾಗಬಹುದು ಎನ್ನುತ್ತಾರೆ ಅಂಗಡಿಯೊಂದರ ಸಿಬಂದಿ ರಾಧಾಕೃಷ್ಣ.
ವೈವಿಧ್ಯ ಲೈಟಿಂಗ್ಸ್‌ನತ್ತ ಜನರ ಚಿತ್ತ
ನಗರದ ಕೆಲವು ಕಡೆ ಬೆಳಕಿನಹಬ್ಬದಂದು ಮನೆಗಳನ್ನು ಎಲ್‌ಇಡಿ ಲೈಟ್‌ಗಳಿಂದ ಶೃಂಗರಿಸಲಾಗುತ್ತದೆ. ಹೀಗಾಗಿ ಮಾಲೆ ಮಾದರಿಯ ಎಲ್‌ಇಡಿ ಲೈಟ್‌ಗಳಿಗೆ ಹೆಚ್ಚು ಬೇಡಿಕೆಯಿದೆ. ನಗರದ ಮಾರ್ಕೆಟ್ ರಸ್ತೆ, ದುಬಾೖಮಾರ್ಕೆಟ್ ಮುಂತಾದೆಡೆ ಜನ ಎಲ್‌ಇಡಿ ಲೈಟ್‌ಗಳನ್ನು ಖರೀದಿ ಮಾಡುವುದು ಕಂಡುಬರುತ್ತಿದೆ.