ಡೆಂಗ್ಯೂ: ಪರಿಸರದಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿ; ಆಗಬೇಕಾಗಿದೆ ಜಾಗೃತಿ
Team Udayavani, Jul 5, 2019, 5:00 AM IST
ಮಹಾನಗರ: ವಿವಿಧೆಡೆ ನೀರು ನಿಂತು ಸೊಳ್ಳೆ ಉತ್ಪತ್ತಿ ಕೇಂದ್ರ ಸೃಷ್ಟಿಯಾಗಿರುವ ಪರಿಣಾಮ ನಗರದಲ್ಲಿ ಡೆಂಗ್ಯೂ ವ್ಯಾಪಕವಾಗಿ ಹರಡುತ್ತಿದೆ. ಸೊಳ್ಳೆಗಳು ಅಧಿಕ ಪ್ರಮಾಣದಲ್ಲಿ ಉತ್ಪತ್ತಿಯಾಗಲು ಜನರ ನಿರ್ಲಕ್ಷ್ಯ ಮತ್ತು ತಿಳಿವಳಿಕೆಯ ಕೊರತೆ ಕಾರಣ ಎನ್ನುವುದು ಈಗ ಕೇಳಿ ಬರುತ್ತಿರುವ ಸಾರ್ವತ್ರಿಕ ಅಭಿಪ್ರಾಯ.
ಸೊಳ್ಳೆ ಉತ್ಪತ್ತಿಯ ಪ್ರಮುಖ ಮೂಲ ನೀರು. ಆದರೆ ಇಲ್ಲಿ ಸೊಳ್ಳೆ ಉತ್ಪತ್ತಿ ಆಗಲು ಮೂಲ ಕಾರಣ ನೀರಿನ ಕೊರತೆ. ಅದು ಹೇಗೆಂದರೆ ಈ ವರ್ಷ ಬೇಸಗೆ ಕಾಲದಲ್ಲಿ ನೀರಿನ ತೀವ್ರ ಅಭಾವ ಇದ್ದ ಕಾರಣ ನಳ್ಳಿಯಲ್ಲಿ 3- 4 ದಿನಗಳಿಗೊಮ್ಮೆ ಬಂದ ನೀರನ್ನು ಸಿಕ್ಕ ಸಿಕ್ಕ ಪಾತ್ರೆಗಳಲ್ಲಿ ತುಂಬಿಸಿಟ್ಟು ಅದರಲ್ಲಿ ಸೊಳ್ಳೆ ಉತ್ಪತ್ತಿಗೆ ಅವಕಾಶ ನೀಡಲಾಗಿತ್ತು. ಜಪ್ಪು ಸಮೀಪದ ಗುಜ್ಜರಕೆರೆ ಮತ್ತು ಗೋರಕ್ಷದಂಡು ಪ್ರದೇಶದಲ್ಲಿ ಇದು ಪ್ರಥಮವಾಗಿ ಬೆಳಕಿಗೆ ಬಂದಿದ್ದು, ಅದೇ ಪ್ರದೇಶ ಪ್ರಸಕ್ತ ನಗರದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಡೆಂಗ್ಯೂ ಕಾಯಿಲೆಯ ಮೂಲವೂ ಆಗಿದೆ.
ಕೆಲವು ಪಾತ್ರೆಗಳಲ್ಲಿ ತುಂಬಿಸಿ ಇಟ್ಟಿದ್ದ ನೀರನ್ನು ವಾರಗಟ್ಟಲೆ ಉಪಯೋಗಿಸದೆ ಹಾಗೆಯೇ ಇರಿಸಿದ್ದು, ಹಾಗಾಗಿ ಅದರಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿದ್ದವು. ಮಳೆ ಬಂದ ಬಳಿಕ ನಳ್ಳಿ ನೀರು ಬರಲು ಆರಂಭಿಸಿದ್ದ ಕಾರಣ ಈ ಪಾತ್ರೆಗಳಲ್ಲಿದ್ದ ನೀರು ಅಲ್ಲಿಯೇ ಇದ್ದು, ಸೊಳ್ಳೆಗಳು ವ್ಯಾಪಕ ಪ್ರಮಾಣದಲ್ಲಿ ಉತ್ಪತ್ತಿಯಾದವು. ಕ್ರಮೇಣ ಈ ಸೊಳ್ಳೆಗಳು ನಗರದ ಬೇರೆ ಪ್ರದೇಶಗಳಿಗೂ ಹರಡಿ ಡೆಂಗ್ಯೂ ವ್ಯಾಪಕವಾಗಲು ಕಾರಣವಾಯಿತು.
‘ಜಪ್ಪು ಗೋರಕ್ಷದಂಡು ಪ್ರದೇಶದಲ್ಲಿ ಡೆಂಗ್ಯೂ ಪ್ರಕರಣಗಳು ವರದಿಯಾದ ಬಳಿಕ ಆರೋಗ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಈ ವಿಷಯ ಬೆಳಕಿಗೆ ಬಂದಿತ್ತು. ಆದರೆ ಈ ವಿಷಯವನ್ನು ಸ್ಥಳೀಯ ನಿವಾಸಿಗಳ ಗಮನಕ್ಕೆ ತಂದಾಗ ಅವರು ಇದನ್ನು ನಂಬಲು ತಯಾರಿರಲಿಲ್ಲ. ಮನೆಯ ಒಳಗಿದ್ದ ನೀರು ತುಂಬಿದ್ದ ಪಾತ್ರೆಗಳಲ್ಲಿದ್ದ ಸೊಳ್ಳೆಯ ಲಾರ್ವಾಗಳನ್ನು (ಮರಿ) ತೊರಿಸಿದರೂ ಅವರಿಗೆ ನಂಬಿಕೆ ಬರುತ್ತಿರಲಿಲ್ಲ. ಇದಕ್ಕೆ ಕಾರಣ ತಿಳಿವಳಿಕೆಯ ಕೊರತೆ’ ಎಂದು ಮನಪಾ ಓರ್ವ ಅಧಿಕಾರಿ ತಿಳಿಸಿದ್ದಾರೆ.
‘ಪ್ರಿವೆನ್ಶನ್ ಈಸ್ ಬೆಟರ್ ದ್ಯಾನ್ ಕ್ಯೂರ್’
‘ಪ್ರಿವೆನ್ಶನ್ ಈಸ್ ಬೆಟರ್ ದ್ಯಾನ್ ಕ್ಯೂರ್’ ಎಂಬ ಮಾತಿದೆ. ಅದರಂತೆ ರೋಗ ಬಾರದಂತೆ ತಡಗಟ್ಟುವುದು ಲೇಸು. ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಇಂತಹ ಕ್ರಮಗಳನ್ನೇ ಹೆಚ್ಚಾಗಿ ಅನುಸರಿಸಲಾಗುತ್ತಿದೆ. ಈಗ ನಗರವನ್ನು ಕಾಡುತ್ತಿರುವ ಮಹಾ ಮಾರಿ ಡೆಂಗ್ಯೂ ರೋಗದ ನಿಯಂತ್ರಣಕ್ಕೆ ಜಿಲ್ಲಾಡಳಿತ ಇಂತಹುದೇ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಈ ದಿಶೆಯಲ್ಲಿ ಡೆಂಗ್ಯೂ ಹರಡುವ ಸೊಳ್ಳೆಗಳನ್ನು ನಾಶ ಪಡಿಸಲು ಹಾಗೂ ಅವುಗಳ ಸಂತಾನೋತ್ಪತ್ತಿಯನ್ನು ತಡೆಯಲು ಮಹಾನಗರ ಪಾಲಿಕೆ ಕಾಯೋನ್ಮುಖವಾಗಿದೆ. ಡೆಂಗ್ಯೂ ಬಾಧಿತ ಪ್ರದೇಶಗಳಲ್ಲಿ ವಿವಿಧ ತಂಡಗಳು ಫಾಗಿಂಗ್, ಸೊಳ್ಳೆ ಉತ್ಪತ್ತಿ ತಾಣಗಳ ನಾಶ ಪಡಿಸುವಿಕೆ, ಸೊಳ್ಳೆ ಉತ್ಪತ್ತಿಗೆ ಕಾರಣವಾಗುವ ಕಟ್ಟಡ ನಿರ್ಮಾಪಕರಿಗೆ ಮತ್ತು ಗುತ್ತಿಗೆದಾರರಿಗೆ ದುಬಾರಿ ದಂಡ, ಜನ ಜಾಗೃತಿ ಕಾರ್ಯಕ್ರಮ ಇತ್ಯಾದಿ ಕ್ರಮಗಳನ್ನು ಅನುಸರಿಸುತ್ತಿದೆ.
ನಗರದಲ್ಲಿ ಡೆಂಗ್ಯೂ ರೋಗ ಇಷ್ಟೊಂದು ಅಧಿಕ ಪ್ರಮಾಣದಲ್ಲಿ ಹಿಂದೆಂದೂ ಕಾಣಿಸಿಕೊಂಡಿರಲಿಲ್ಲ. 1991ರಿಂದ ನಗರದಲ್ಲಿ ಮಲೇರಿಯಾ ಕಾಣಿಸಿಕೊಂಡಿದ್ದು, ವ್ಯಾಪಕ ಜಾಗೃತಿ ಕಾರ್ಯಕ್ರಮಗಳಿಂದಾಗಿ ಇತ್ತೀಚೆಗೆ ಅದೂ ಕಡಿಮೆಯಾಗಿದೆ. ಈ ವರ್ಷ ಮೇ ತಿಂಗಳಲ್ಲಿ ನಗರದಲ್ಲಿ ವರದಿಯಾದ ಮಲೇ ರಿಯಾ ಪ್ರಕರಣ ಕೇವಲ 166 ಮಾತ್ರ.
ಮಲೇರಿಯಾ ನಿಯಂತ್ರಿಸಲು ಪಾಲಿಕೆಯ ಆಡಳಿತವು ಜನ ಜಾಗೃತಿಯ ಜತೆಗೆ ಸೊಳ್ಳೆಗಳ ನಿಯಂತ್ರಣಕ್ಕಾಗಿ ಸೊಳ್ಳೆ ಉತ್ಪತ್ತಿಯಾಗುವ ಮೂಲಗಳನ್ನು ನಾಶ ಪಡಿಸಲು ಕ್ರಮ ಜರಗಿಸಿತ್ತು. ಪರಿಸರಾಸಕ್ತರ ಒಕ್ಕೂಟ ಮತ್ತು ಇತರ ಕೆಲವು ಸಂಘ – ಸಂಸ್ಥೆಗಳು ಮಲೇರಿಯಾ ನಿರ್ಮೂಲನೆಗೆ ಜೈವಿಕ ನಿಯಂತ್ರಣ ಕ್ರಮಗಳು ಹೆಚ್ಚು ಸೂಕ್ತ ಎಂದು ಶಿಫಾರಸು ಮಾಡಿದ್ದು, ಅದರನ್ವಯ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿತ್ತು.
ದಂಡ ಮೊತ್ತ 10 ಪಟ್ಟು ಹೆಚ್ಚಳ
ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುವ ಕಟ್ಟಡ ಅಥವಾ ಜಾಗದ ಮಾಲಕರಿಗೆ, ಬಿಲ್ಡರ್‌ಗಳಿಗೆ ದಂಡ ವಿಧಿಸುವ ಕ್ರಮ ಈ ಹಿಂದೆಯೂ ಜಾರಿಯಲ್ಲಿತ್ತು. ಆಗ ಅದು 500 ರೂ. ಗಳಿಂದ 1,000 ರೂ. ತನಕ ಮಾತ್ರ ಇತ್ತು. ಈ ಬಾರಿ ಡೆಂಗ್ಯೂ ವ್ಯಾಪಕವಾಗಿ ಹರಡಿದ್ದರಿಂದ ದಂಡ ಮೊತ್ತವನ್ನು 5,000 ರೂ. ಗಳಿಂದ 10,000 ರೂ. ತನಕ ಏರಿಸಲಾಗಿದೆ.
ಜನರು ಜಾಗೃತರಾಗಬೇಕು
ಸಾಂಕ್ರಾಮಿಕ ರೋಗಗಳು ಉಲ್ಬಣಿಸಿದಾಗ ಪಾಲಿಕೆ ಅಥವಾ ಜಿಲ್ಲಾಡಳಿತ ರೋಗ ನಿಯಂತ್ರಿಸಲು ಕ್ರಮ ಜರಗಿಸುವುದು ಸಹಜ. ಆದರೆ ಈ ದಿಶೆಯಲ್ಲಿ ನಗರದ ನಾಗರಿಕರು ಕೂಡ ಸ್ವಯಂ ಪ್ರೇರಿತರಾಗಿ ಕಾರ್ಯ ಪ್ರವೃತ್ತರಾಗುವುದು ಅಗತ್ಯ.
ನಗರದಲ್ಲಿ ಡೆಂಗ್ಯೂ ಪ್ರಕರಣಗಳು ವರದಿಯಾಗಿ ಎರಡು ವಾರಗಳು ಕಳೆದಿದ್ದರೂ ಮನೆಯ ಟೆರೇಸ್‌ನಲ್ಲಿ, ಮನೆಯ ಸುತ್ತ ಮುತ್ತ, ಟೈರ್, ಎಳ ನೀರು ಚಿಪ್ಪು, ನಿರುಪಯುಕ್ತ ಪಾತ್ರೆ ಇತ್ಯಾದಿಗಳಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿಯ ತಾಣವಾಗಿರುವ ಬಗ್ಗೆ ಉದಯವಾಣಿ ಕಚೇರಿಗೆ ಹಲವಾರು ಜನರಿಂದ ದೂರವಾಣಿ ಕರೆಗಳು ಬರುತ್ತಿವೆ ಮತ್ತು ಕೆಲವು ಮಂದಿ ಫೋಟೋ ತೆಗೆದು ಕಳುಹಿಸುತ್ತಿದ್ದಾರೆ. ಶಾಲೆ, ಕಾಲೇಜು, ಹಾಸ್ಟೆಲ್‌ಗಳ ಆವರಣದಲ್ಲಿ ಟ್ಯಾಂಕುಗಳಲ್ಲಿ ನೀರು ತುಂಬಿರುವ ಬಗ್ಗೆ, ಶೌಚಾಲಯಗಳಲ್ಲಿ ಶುಚಿ¤ತ್ವ ಇಲ್ಲದಿರುವುದು, ಅವುಗಳ ಪರಿಸರದಲ್ಲಿ ನೀರು ನಿಂತಿರುವ ಬಗೆಗೆ ದೂರುಗಳು ಬಂದಿವೆ.
ಸೊಳ್ಳೆ ಉತ್ಪತ್ತಿ ತಾಣ ನಾಶ ಪ್ರಮುಖ ಪರಿಹಾರ
ಡೆಂಗ್ಯೂದಂತಹ ರೋಗ ನಿಯಂತ್ರಣಕ್ಕೆ ಸೊಳ್ಳೆಗಳ ಉತ್ಪತ್ತಿ ಆಗುವ ತಾಣಗಳನ್ನು ಪತ್ತೆ ಹಚ್ಚಿ ನಾಶ ಪಡಿಸುವುದು ಹಾಗೂ ಸೊಳ್ಳೆ ಉತ್ಪತ್ತಿ ಆಗದಂತೆ ನೋಡಿಕೊಳ್ಳುವುದು ಪ್ರಮುಖವಾಗಿ ಆಗ ಬೇಕಾದ ಕಾರ್ಯ ಎನ್ನುತ್ತಾರೆ ಪರಿಸರಾಸಕ್ತ ಒಕ್ಕೂಟದ ಪ್ರಮುಖರಾದ ಎ. ಸುರೇಶ್ ಶೆಟ್ಟಿ. ಡೆಂಗ್ಯೂ ಮತ್ತು ಮಲೇರಿಯಾ ಹರಡುವ ಸೊಳ್ಳೆಗಳು ಸ್ವತ್ಛ ನೀರಿನಲ್ಲಿ ಮಾತ್ರ ಉತ್ಪತ್ತಿ ಆಗುತ್ತಿದ್ದು , ಹಾಗಾಗಿ ಸ್ವತ್ಛ ನೀರು ಹೆಚ್ಚು ದಿನ ನಿಲ್ಲದಂತೆ ನೋಡಿಕೊಳ್ಳ ಬೇಕು, ನೀರಿನ ಡ್ರಮ್‌ಗಳನ್ನು ವಾರಕ್ಕೊಮ್ಮೆ ಸ್ವತ್ಛಗೊಳಿಸ ಬೇಕು, ಮನೆ ಮನೆಗೆ ಭೇಟಿ ನೀಡುವ ಆರೋಗ್ಯ ಕಾರ್ಯಕರ್ತರು ಜನರಿಗೆ ಸೊಳ್ಳೆ ಉತ್ಪತ್ತಿಯ ತಾಣಗಳ ಬಗ್ಗೆ ತಿಳುವಳಿಕೆ ನೀಡ ಬೇಕು ಮಾತ್ರವಲ್ಲದೆ ಸೊಳ್ಳೆಗಳ ಉತ್ಪತ್ತಿ ಆಗುತ್ತಿದ್ದರೆ ಸೊಳ್ಳೆಮರಿ ಲಾರ್ವಾಗಳನ್ನು ಜನರಿಗೆ ತೋರಿಸಿ ಮನದಟ್ಟು ಮಾಡ ಬೇಕು. ಅಲ್ಲದೆ ಸೊಳ್ಳೆ ಕಡಿತದಿಂದ ಪಾರಾಗಲು ನಿದ್ರಿಸುವ ಸಂದರ್ಭ ಸೊಳ್ಳೆ ಪರದೆ ಬಳಸ ಬಹುದು ಎಂದವರು ಸಲಹೆ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.