ದ.ಕ. ಜಿಲ್ಲೆಗೆ 5.94 ಕೊ.ರೂ. ಅನುದಾನ
ಅಂಬೇಡ್ಕರ್ ಸ್ಮರಣೆಗೆ ಪಂಚತೀರ್ಥ ಯೋಜನೆ
Team Udayavani, Apr 15, 2019, 6:30 AM IST
ಮಂಗಳೂರು: ಭಾರತದ ಸಂವಿಧಾನ ಶಿಲ್ಪಿ, ಮಹಾನ್ ನಾಯಕ ಡಾ| ಅಂಬೇಡ್ಕರ್ ಅವರ ನೆನಪಿಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಪಂಚತೀರ್ಥ ಯೋಜನೆ ಗಳನ್ನು ರೂಪಿಸಿದೆ. ಮಾತ್ರವಲ್ಲದೆ 5 ವರ್ಷಗಳಲ್ಲಿ ದ.ಕ. ಕ್ಷೇತ್ರದಲ್ಲಿ ದಲಿತರ ಅಭಿವೃದ್ಧಿಗಾಗಿ 5.94 ಕೋ.ರೂ. ಅನುದಾನ ಒದಗಿಸಲಾಗಿದೆ ಎಂದು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಹೇಳಿದರು.
ಬಿಜೆಪಿ ಚುನಾವಣ ಕಚೇರಿಯಲ್ಲಿ ರವಿವಾರ ನಡೆದ ಡಾ| ಬಿ.ಆರ್. ಅಂಬೇಡ್ಕರ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಾ| ಅಂಬೇಡ್ಕರ್ ಅವರನ್ನು ನಾವು ಬೇರೆ ಬೇರೆ ಸಂದರ್ಭದಲ್ಲಿ ನೆನೆಪಿಸಿಕೊಳ್ಳುತ್ತೇವೆ. ಆದರೆ ಈ ದೇಶಕ್ಕಾಗಿ ತ್ಯಾಗ ಮಾಡಿದ ಅಂಬೇಡ್ಕರ್ ಅವರಿಗೆ ನೈಜ ಗೌರವ ಸಿಗಬೇಕಾದರೆ ಹಿಂದುಳಿದ ವರ್ಗಗಳ, ದಲಿತರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕಿದೆ. ಪ್ರಧಾನಿ ಮೋದಿ ಈ ನಿಟ್ಟಿನಲ್ಲಿ ಮಹತ್ತರ ಹೆಜ್ಜೆಗಳನ್ನಿರಿಸಿ ದ್ದಾರೆ. ಅಂಬೇಡ್ಕರ್ ಜನ್ಮಸ್ಥಳದಲ್ಲಿ ಸ್ಮಾರಕ ನಿರ್ಮಾಣ ಮಾಡುವ ಮೂಲಕ ಅವರನ್ನು ಗೌರವಿಸುವ ಕೆಲಸವಾಗಿದೆ. ಈಗ ಅವರ ಅಂತ್ಯಸಂಸ್ಕಾರ ನಡೆದ ಮುಂಬಯಿಯಲ್ಲಿ ಬೃಹತ್ ಸ್ಮಾರಕ ನಿರ್ಮಾಣವಾಗಲಿದೆ. ಇದುವರೆಗೆ ಯಾವ ಸರಕಾರಗಳು ಈ ಬಗ್ಗೆ ಚಿಂತನೆ ನಡೆಸಿರಲಿಲ್ಲ. ಅದು ಅಂಬೇಡ್ಕರ್ ಅವರ ಭವ್ಯ ಸ್ಮಾರಕವಾಗಲಿದೆ. ಹೊಸದಿಲ್ಲಿ
ಯಲ್ಲೂ ಅಂಬೇಡ್ಕರ್ ಸ್ಮಾರಕ ನಿರ್ಮಾಣ ಯೋಜನೆ ಇದೆ ಎಂದರು.
ಲಂಡನ್‌ನಲ್ಲಿ ಡಾ| ಅಂಬೇಡ್ಕರ್ ಓದುವ ಸಂದರ್ಭ ವಾಸವಾಗಿದ್ದ ಮನೆ ಹಾಗೂ ಸ್ಥಳ ಮಾರಾಟವಾಗುವ ವಿಷಯ ತಿಳಿದ ಮೋದಿ ಅವರು ತತ್‌ಕ್ಷಣ ಮಹಾರಾಷ್ಟ್ರ ಸರಕಾರದೊಂದಿಗೆ ಅದನ್ನು ಸ್ಮರಣೀಯ ಸ್ಥಳವನ್ನಾಗಿ ಪರಿವರ್ತಿಸಿದ್ದಾರೆ. ಇಂದು ಅದು ಅತ್ಯಂತ ಪ್ರೇಕ್ಷಣೀಯ ಸ್ಥಳಗಳಲ್ಲೊಂದಾ ಗಿದೆ. ಅಂಬೇಡ್ಕರ್ ಅವರ ನೆನಪಿ ಗಾಗಿ ಕೇಂದ್ರ ಸರಕಾರ ಪಂಚ ತೀರ್ಥ ಯೋಜನೆ ರೂಪಿಸಿದೆ ಎಂದರು.
ಸಂಸದರ ನಿಧಿಯಿಂದ ಜಿಲ್ಲೆಯಲ್ಲಿ ಎಸ್‌ಎ, ಎಸ್‌ಟಿ ವರ್ಗಗಳ ಅಭಿವೃದ್ಧಿಗಾಗಿ 5.94 ಕೋಟಿ ರೂ. ಅನುದಾನ ನೀಡಲಾಗಿದೆ. 4 ಅಂಬೇಡ್ಕರ್ ಭವನಗಳು ನಿರ್ಮಾಣ ಗೊಂಡಿವೆ. ದಲಿತ ಕಾಲನಿಗಳಿಗೆ ಹೋಗುವ ರಸ್ತೆಗಳ ಅಭಿವೃದ್ಧಿ, ಕುಡಿಯುವ ನೀರಿನ ಸೌಲಭ್ಯಕ್ಕೂ ಒತ್ತು ನೀಡಲಾಗಿದೆ. ಮುಂದಿನ ದಿನಗಳಲ್ಲೂ ದಲಿತರ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಅವರನ್ನು ಸಮಾಜದ ಮುಖ್ಯವಾಹಿನಿಗೆ ತಂದು ಸಾಮಾಜಿಕ ನ್ಯಾಯ ಒದಗಿಸ ಲಾಗುವುದು ಎಂದರು.
ಶಾಸಕ ಡಿ. ವೇದವ್ಯಾಸ್ ಕಾಮತ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರವಿಶಂಕರ್ ಮಿಜಾರ್, ಹರಿಕೃಷ್ಣ ಬಂಟ್ವಾಳ, ಜಗದೀಶ್ ಶೇಣವ, ಅನ್ವರ್
ಮಾಣಿಪ್ಪಾಡಿ, ವೈದ್ಯಕೀಯ ಪ್ರಕೋಷ್ಠದ ರಾಜ್ಯ ಸಹ ಸಂಚಾಲಕ ಡಾ| ಅಣ್ಣಯ್ಯ ಕುಲಾಲ್ ಉಪಸ್ಥಿತರಿದ್ದರು.