ಕುಡಿಯುವ ನೀರಿನ ಕೊರತೆ; ಕಾಲೇಜು ಶಿಕ್ಷಣಕ್ಕೆ ಹೊಡೆತ!
Team Udayavani, May 6, 2023, 7:37 AM IST
ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಹುತೇಕ ಕಡೆ ಉಲ್ಬಣಿಸಿದ್ದು, ಕಾಲೇಜು ವಿದ್ಯಾರ್ಥಿಗಳಿಗೆ ಸಂಕಟ ಎದುರಾಗಿದೆ.
ಎರಡೂ ಜಿಲ್ಲೆಗಳಲ್ಲಿ ಸದ್ಯ ಕಾಲೇಜು ತರಗತಿಗಳು ನಡೆಯುತ್ತಿದ್ದು ಈ ಪೈಕಿ ಬಹುತೇಕ ಕಾಲೇಜುಗಳಿಗೆ ನೀರು ಸರಬರಾಜು ಸಮಸ್ಯೆ ಕಾಡುತ್ತಿದೆ. ಅದರಲ್ಲಿಯೂ ಹಾಸ್ಟೆಲ್ ಹೊಂದಿರುವ ಕಾಲೇಜುಗಳಲ್ಲಿ ನೀರಿನ ಕೊರತೆ ಬಹುತೇಕ ಎದುರಾಗಿದೆ.
ಸೆಖೆ ಅಧಿಕವಾಗಿರುವುದು ಹಾಗೂ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿರುವ ಹಿನ್ನೆಲೆಯಲ್ಲಿ ಕೆಲವು ಕಾಲೇಜುಗಳಲ್ಲಿ ಆನ್‌ಲೈನ್ ತರಗತಿ ನಡೆಸಲು ಅವಕಾಶ ನೀಡಲಾಗಿದೆ. ಸಂಜೆ 4ರ ವರೆಗೆ ನಡೆಯುತ್ತಿದ್ದ ಕೆಲವು ಕಾಲೇಜುಗಳ ಸಮಯವನ್ನು ಬೆಳಗ್ಗೆ 9ರಿಂದ ಮಧ್ಯಾಹ್ನ 1.30ರ ವರೆಗೆ ಮಾತ್ರ ನಡೆಸಲಾಗುತ್ತಿದೆ.
ಮಂಗಳೂರಿನಲ್ಲಿ ಕೆಲವು ದಿನದ ಹಿಂದೆ 3 ದಿನ ನೀರಿನ ಪೂರೈಕೆ ಸ್ಥಗಿತವಾಗಿದ್ದ ಕಾರಣದಿಂದ ಮಂಗಳೂರು ವಿ.ವಿ. ಕಾಲೇಜಿನಲ್ಲಿ ಆನ್‌ಲೈನ್ ತರಗತಿ ನಡೆಸಲಾಗಿತ್ತು. ಬಳಿಕ ಟ್ಯಾಂಕರ್ ನೀರು ತರಿಸಿ ತರಗತಿ ನಡೆಸಲಾಗಿತ್ತು. ಜಿಲ್ಲೆಯ ವಿವಿಧ ಕಾಲೇಜುಗಳಲ್ಲಿ ಸ್ಥಳೀಯಾಡಳಿತದ ನೀರಿನ ವ್ಯವಸ್ಥೆ ಸರಿಯಾಗಿ ಲಭ್ಯವಿಲ್ಲದ ಕಾರಣದಿಂದ ಟ್ಯಾಂಕರ್ ನೀರನ್ನೇ ಆಶ್ರಯಿಸುವಂತಾಗಿದೆ.
ನೀರು ತನ್ನಿ!
ಕುಡಿಯುವ ನೀರನ್ನು ಬಾಟಲಿ ಮುಖಾಂತರ ವಿದ್ಯಾರ್ಥಿಗಳೇ ತಂದರೆ ಉತ್ತಮ ಎಂದು ಕೆಲವು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗಿದೆ. ಆದರೂ, ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿಗಳಿಗೆ ಅಲ್ಲೂ ನೀರಿನ ಲಭ್ಯತೆ ಸರಿಯಾಗಿ ಇಲ್ಲದೆ ಸಮಸ್ಯೆ ಎದುರಾಗಿದೆ. ಈ ಮಧ್ಯೆ ನೀರಿನ ವ್ಯವಸ್ಥೆ ಇಲ್ಲದಿದ್ದ ಕಾರಣದಿಂದ ಸಾವಿರಾರು ವಿದ್ಯಾರ್ಥಿಗಳಿರುವ ಮಂಗಳೂರಿನ ಕಾಲೇಜಿಗೆ ಇತ್ತೀಚೆಗೆ ರಜೆಯನ್ನೇ ನೀಡಲಾಗಿತ್ತು!
“ಬಿಸಿಲು ಏರುತ್ತಿದೆ. ಸೆಖೆಯಲ್ಲಿ ಮನೆಯಲ್ಲೇ ಕುಳಿತುಕೊಳ್ಳಲು ಆಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಶಾಲಾ-ಕಾಲೇಜು ತರಗತಿ ನಡೆಸಲಾಗುತ್ತಿದೆ. ಅದರಲ್ಲೂ ಈ ಬಾರಿ ನೀರಿನ ಕೊರತೆಯೂ ಉಂಟಾಗಿದೆ. ಹೀಗಿರುವಾಗ ತರಗತಿ ನಡೆಸುವ ಆವಶ್ಯಕತೆ ಏನಿದೆ ಎಂಬುದೇ ಗೊತ್ತಾಗುತ್ತಿಲ್ಲ. ಸುಡು ಬಿಸಿಲಿನ ಸಂದರ್ಭ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಯಾವುದಾದರೂ ಸೂಕ್ತ ನಿರ್ಧಾರವನ್ನು ಜಿಲ್ಲಾಡಳಿತ ತತ್‌ಕ್ಷಣ ಕೈಗೊಳ್ಳಬೇಕಿದೆ’ ಎನ್ನುತ್ತಾರೆ ಸಾಮಾಜಿಕ ಹೋರಾಟಗಾರ ವೇಣು ಶರ್ಮ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.