ಸಾವಿರಕ್ಕೂ ಹೆಚ್ಚು ವಾಹನಗಳಿಗೂ ಚುನಾವಣ ಡ್ಯೂಟಿ; ಬಿಲ್ ಪಾವತಿಗೆ ಸರಕಾರ ಹಿಂದೇಟು ಆರೋಪ
ಕರ್ತವ್ಯದಲ್ಲಿರುವ ಸಮಯ ಡ್ರೈವರ್‌ಗಳಿಗೆ ಊಟ-ತಿಂಡಿ ವ್ಯವಸ್ಥೆಯೂ ಸರಿಯಾಗಿ ಸಿಗದು.
Team Udayavani, Apr 3, 2023, 4:40 PM IST
ಮಂಗಳೂರು: ಚುನಾವಣ ಕಾರ್ಯ ನಿಮಿತ್ತ ಅಧಿಕಾರಿ ವರ್ಗದವರ ಓಡಾಟ ಹಾಗೂ ಮತ್ತು ಮತದಾನದ ದಿನದಂದು ಬಳಕೆಗಾಗಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಸುಮಾರು ಒಂದು ಸಾವಿರಕ್ಕೂ ಅಧಿಕ ವಾಹನಗಳು ಬೇಕು! ಕಳೆದ ವಿಧಾನಸಭಾ ಚುನಾವಣ ವೇಳೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 8 ವಿ.ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮ್ಯಾಕ್ಸಿ ಕ್ಯಾಬ್, ಜೀಪು, ವ್ಯಾನ್, ಬಸ್ ಹಾಗೂ ಮಿನಿ ಬಸ್ ಸೇರಿದಂತೆ ಒಟ್ಟು 652 ವಾಹನಗಳನ್ನು ಬಳಸಲಾಗಿತ್ತು.
ಉಡುಪಿಯಲ್ಲಿಯೂ 500ರಷ್ಟು ವಾಹನಗಳನ್ನು ಬಳಸಲಾಗಿತ್ತು. ಬಳಿಕ ನಡೆದ ಲೋಕಸಭಾ ಚುನಾವಣೆಗೂ ಇದೇ ಪ್ರಮಾಣದಲ್ಲಿ ವಾಹನಗಳು ಬಳಕೆಯಾಗಿವೆ. ಈಗಾಗಲೇ ಟ್ಯಾಕ್ಸಿ ಚಾಲಕರು/ಮಾಲಕರ ಜತೆಗೆ ಒಂದು ಸುತ್ತಿನ ಸಭೆ ನಡೆಸಿದ ಆರ್‌ಟಿಒ ಅಧಿಕಾರಿಗಳು ಕೆಲವೇ ದಿನಗಳಲ್ಲಿ ಟ್ಯಾಕ್ಸಿ ಪಡೆದುಕೊಳ್ಳುವ ಬಗ್ಗೆ ಸೂಚನೆ ನೀಡಿದ್ದಾರೆ. ಈ ಸಂದರ್ಭ ಟ್ಯಾಕ್ಸಿ ಚಾಲಕರು/ ಮಾಲಕರ ಸಂಘದವರೂ ತಮ್ಮ ಬೇಡಿಕೆಯನ್ನು ಆರ್ ಟಿಒಗೆ ಸಲ್ಲಿಸಿದ್ದು, ನಿಗದಿತ ಸಮಯದೊಳಗೆ ಹಣ ಪಾವತಿಸಬೇಕು. ಅಧಿಕಾರಿಗಳ ಚುನಾವಣ ಕರ್ತವ್ಯಕ್ಕೆ ಮಾತ್ರ ವಾಹನ ಬಳಸಬೇಕು. ಇತರ ಕಾರ್ಯಕ್ಕೆ ವಾಹನ ಬಳಸಬಾರದು ಎಂಬಿತ್ಯಾದಿ ಮನವಿ ಮಾಡಿದ್ದಾರೆ.
ಮಂಗಳೂರು, ಮಂ.ಉತ್ತರ, ಮಂ.ದಕ್ಷಿಣ ಹಾಗೂ ಮೂಡುಬಿದಿರೆ ವಿ.ಸಭಾ ಕ್ಷೇತ್ರ ವ್ಯಾಪ್ತಿಗೆ ಮಂಗಳೂರು ಆರ್‌ಟಿಒ ಕಚೇರಿಯಿಂದ, ಬಂಟ್ವಾಳ-ಬೆಳ್ತಂಗಡಿ ವಿ.ಸಭಾ ಕ್ಷೇತ್ರ ವ್ಯಾಪ್ತಿಗೆ ಬಂಟ್ವಾಳ ಆರ್‌ಟಿಒ ಕಚೇರಿ, ಪುತ್ತೂರು-ಸುಳ್ಯ ವಿ.ಸಭಾ ಕ್ಷೇತ್ರ ವ್ಯಾಪ್ತಿಗೆ ಪುತ್ತೂರು ಆರ್ ಟಿಒ ಕಚೇರಿಯಿಂದ ವಾಹನಗಳನ್ನು ಒದಗಿಸಲಾಗುತ್ತದೆ. ಉಡುಪಿ ಜಿಲ್ಲೆಯ ವ್ಯಾಪ್ತಿಗೆ ಉಡುಪಿ ಆರ್‌ಟಿಒ ಕಚೇರಿಯಿಂದ ವಾಹನ ವ್ಯವಸ್ಥೆ ಮಾಡಲಾಗುತ್ತದೆ.
ಯಾಕಾಗಿ ವಾಹನ?
ಕಂದಾಯ, ಪೊಲೀಸ್ ಹಾಗೂ ಭದ್ರತಾ ದಳಗಳು ಜಿಲ್ಲೆಯಾದ್ಯಂತ ಸುತ್ತಾಡಲು ವಾಹನಗಳು ಅಗತ್ಯ ವಿದೆ. ಚುನಾವಣ ಆಯೋಗದಿಂದ ವಾಹನ ಸೌಲಭ್ಯ ಮಂಜೂರು ಮಾಡಲಾಗುತ್ತದೆಯಾದರೂ ಆಯಾ ವ್ಯಾಪ್ತಿಯ ಆರ್‌ಟಿಒಗಳು ವಾಹನ ಒದಗಿಸಬೇಕಿದೆ. “ಚುನಾವಣ ಕಾರ್ಯನಿಮಿತ್ತ ವಾಹನ ನೀಡುವ ಸಂಬಂಧ ಆರ್‌ಟಿಒ/ಪೊಲೀಸ್ ಇಲಾಖೆ ಬಲವಂತ ವಾಗಿ ಪ್ರವಾಸಿ ಕಾರು/ವಾಹನಗಳನ್ನು ರಸ್ತೆಯಲ್ಲಿ ತಡೆದು ನಿಲ್ಲಿಸಿ ಇಲಾಖೆಯ ಸುಪರ್ದಿಗೆ ಪಡೆಯಬಾರದು.
ಸರಿಯಾದ ಪ್ರಮಾಣದಲ್ಲಿ ಬಾಡಿಗೆ ಹಣ ಹಾಗೂ ಚುನಾವಣೆ ನಿಮಿತ್ತ ತೆರಳುವ ವಾಹನಗಳ ಡ್ರೈವರ್‌ಗಳಿಗೆ ಊಟ-ವಸತಿ ವ್ಯವಸ್ಥೆ ಕಲ್ಪಿಸಬೇಕು’ ಎಂದು ಆಗ್ರಹಿಸುತ್ತಾರೆ ದ.ಕ. ಟ್ಯಾಕ್ಸಿ ಮೆನ್ಸ್ ಮ್ಯಾಕ್ಸಿ ಕ್ಯಾಬ್ ಅಸೋಸಿಯೇಶನ್‌ನ ಪ್ರಮುಖರಾದ ಅಬೆಲ್ ಡಿಸೋಜ.
ಹಣ ಸಿಗುವುದಿಲ್ಲ-ಕಾರು ಕೊಡಲ್ಲ !
ನಗರಗಳಿಗೆ ಹೊರಭಾಗದಿಂದ ಬರುವ ಗಣ್ಯರ ಭದ್ರತೆ, ಚುನಾವಣೆ, ಪಲ್ಸ್ ಪೋಲಿಯೊ ಹಾಗೂ ಇತರ ತುರ್ತು ಸಂದರ್ಭ ಸೇರಿದಂತೆ ವಿವಿಧ ಕಾರಣಗಳಿಗೆ ಟ್ಯಾಕ್ಸಿ ಮ್ಯಾಕ್ಸಿ ಕ್ಯಾಬ್‌ಗಳನ್ನು ಆರ್ ಟಿಒ/ಪೊಲೀಸರು ಬಳಸಿಕೊಳ್ಳುವ ಅವಕಾಶವಿದೆ. ಕಾರಿಗೆ ದಿನ ಬಾಡಿಗೆಯ ರೀತಿಯಲ್ಲಿ ಹಣ ನಿಗದಿ ಮಾಡಿ ಚಾಲಕರ ಸಮೇತ ವಾಹನಗಳನ್ನು ಆರ್ ಟಿಒ/ಪೊಲೀಸರು ಪಡೆದುಕೊಳ್ಳುತ್ತಾರೆ. ತಮ್ಮ ಕೆಲಸದ ಬಳಿಕ ಹಣವನ್ನು ನೀಡಿ ವಾಹನವನ್ನು ಹಿಂದಿರುಗಿಸುವುದು ನಿಯಮ. ಆದರೆ ಕಳೆದ ಕೆಲವು ವರ್ಷಗಳಲ್ಲಿ ಚುನಾವಣೆ ಹಾಗೂ ಗಣ್ಯರ ಆಗಮನದ ಸಂದರ್ಭ ಬಳಕೆಯಾಗುವ ವಾಹನ ಗಳ ಬಿಲ್ ಮೊತ್ತ ಪಾವತಿ ಮಾಡಲು ಸರಕಾರ ಹಿಂದೇಟು ಹಾಕಿದ ಉದಾಹರಣೆಗಳಿವೆ. ಹಾಗಾಗಿ ಪ್ರವಾಸಿ ಕಾರು/ಜೀಪು, ವ್ಯಾನ್‌ನವರು ವಾಹನ ನೀಡಲು ನಿರಾಕರಿಸುವ ಪ್ರಮೇಯವೇ ಅಧಿಕ!
ಡ್ರೈವರ್‌ಗಳ ಸಮಸ್ಯೆ ಕೇಳುವವರೇ ಇಲ್ಲ
ಚುನಾವಣ ಸಂದರ್ಭ ಟ್ಯಾಕ್ಸಿಗಳಲ್ಲಿ 16 ಗಂಟೆ ದುಡಿಸಿ, 200 ಕಿ.ಮೀ. ಓಡಿಸಿ ಕೇವಲ 2,400 ರೂ. ಮಾತ್ರ ನಿಗದಿ ಮಾಡಲಾಗುತ್ತದೆ. ಈ ಹಣ ಸಿಗಲು ಬರೋಬ್ಬರಿ 5-6 ತಿಂಗಳು ಕಾಯಬೇಕು. ದಿನದ ನಿರ್ವಹಣೆಗೆ, ಬ್ಯಾಂಕ್ ಲೋನ್ ಪಾವತಿಸಲು ಡ್ರೈವರ್‌ಗಳು ಸಮಸ್ಯೆ ಎದುರಿಸುವಂತಾಗಿದೆ. ಕರ್ತವ್ಯದಲ್ಲಿರುವ ಸಮಯ ಡ್ರೈವರ್‌ಗಳಿಗೆ ಊಟ-ತಿಂಡಿ ವ್ಯವಸ್ಥೆಯೂ ಸರಿಯಾಗಿ ಸಿಗದು.
-ಹರಿಶ್ಚಂದ್ರ, ಉಪಾಧ್ಯಕ್ಷರು,
ದ.ಕ. ಟ್ಯಾಕ್ಸಿ ಅಸೋಸಿಯೇಶನ್
ಚುನಾವಣ ಕೆಲಸ-ಹೋಗುವುದು ಗೋವಾ!
ಚುನಾವಣ ಕರ್ತವ್ಯಕ್ಕಾಗಿ ನಿಗದಿ ಮಾಡಿದ ವಾಹನಗಳನ್ನು ಕೆಲವು ಅಧಿಕಾರಿಗಳು ಖಾಸಗಿ ಪ್ರಯಾಣಕ್ಕೂ ಬಳಸುತ್ತಿದ್ದಾರೆ. ಚುನಾವಣ ಸಂದರ್ಭ ಕರ್ತವ್ಯಕ್ಕೆ ಬಂದ ಕೆಲವು ಸ್ತರದ ಅಧಿಕಾರಿಗಳು ತಮ್ಮ ಕರ್ತವ್ಯದ ಬಳಿಕ ಗೋವಾ, ಮಡಿಕೇರಿ ಮೊದಲಾದೆಡೆಗೆ ಪ್ರವಾಸ ಕರೆದೊಯ್ಯುವಂತೆ ಒತ್ತಡ ಹೇರುತ್ತಾರೆ. ಕಳೆದ ಚುನಾವಣೆ ವೇಳೆ ಇಂತಹ ಘಟನೆ ನಡೆದಿದೆ.
-ಶುಭಕರ ಶೆಟ್ಟಿ, ಟ್ಯಾಕ್ಸಿ ಚಾಲಕ
ವಾಹನಗಳ ನಿಗದಿ
ವಿಧಾನಸಭಾ ಚುನಾವಣ ಹಿನ್ನೆಲೆಯಲ್ಲಿ ಅಧಿಕಾರಿಗಳ ಪ್ರಯಾಣ ಹಾಗೂ ಇತರ ಕಾರ್ಯ ನಿಮಿತ್ತ ವಾಹನಗಳ ಬಳಕೆಗೆ ಈಗಾಗಲೇ ಸಿದ್ಧತೆ ನಡೆಸಲಾಗಿದೆ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ನೀಡುವ ಬೇಡಿಕೆಯಂತೆ ವಾಹನ ಹಂಚಿಕೆ ಮಾಡಲಾಗುವುದು. ಮೊದಲಿಗೆ ಸರಕಾರಿ ವಾಹನ ಬಳಸಿ ಬಳಿಕ ಖಾಸಗಿ ವಾಹನ ನಿಗದಿ ಮಾಡಲಾಗುತ್ತದೆ.
–ವಿಶ್ವನಾಥ ಅಜಿಲ, ಆರ್‌ಟಿಒ ನೋಡಲ್ ಅಧಿಕಾರಿ, ವಾಹನ ನಿರ್ವಹಣೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.