ನೆಹರೂ ಮೈದಾನದ ಪ್ರವೇಶದ್ವಾರ ಉದ್ಘಾಟನೆ
Team Udayavani, Aug 15, 2018, 12:34 PM IST
ಸ್ಟೇಟ್‌ಬ್ಯಾಂಕ್ : ಮಹಾನಗರ ಪಾಲಿಕೆ ವತಿಯಿಂದ ಅಂದಾಜು 21 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ನೆಹರೂ ಮೈದಾನದ ಪ್ರವೇಶದ್ವಾರವನ್ನು ಮಂಗಳವಾರ ಮೇಯರ್ ಭಾಸ್ಕರ್ ಕೆ. ಅನಾವರಣಗೊಳಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆಹರೂ ಮೈದಾನಕ್ಕೆ ಹಲವು ವರ್ಷಗಳ ಇತಿಹಾಸವಿದೆ. ಭಾರತದ ಪ್ರಥಮ ಪ್ರಧಾನಿ ಜವಾಹರ ಲಾಲ್ ನೆಹರೂ ಅವರು ಇಲ್ಲಿ ಭಾಷಣ ಮಾಡಿ ಹೋಗಿರುವುದು ನಮ್ಮ ಹೆಮ್ಮೆ. ಇದೀಗ ನೆಹರೂ ಮೈದಾನಕ್ಕೆ ಅತ್ಯುತ್ತಮ ವಿನ್ಯಾಸದ ಪ್ರವೇಶ ದ್ವಾರ ಕಲ್ಪಿಸುವ ಮೂಲಕ ಈ ಮೈದಾನದ ಸೌಂದರ್ಯವನ್ನು ಇನ್ನಷ್ಟು ವೃದ್ಧಿಸಲಾಗಿದೆ ಎಂದರು.
ನೆಹರೂ ಮೈದಾನದ ಸುತ್ತಮುತ್ತಲಿನ ಪ್ರದೇಶ ಸ್ಮಾರ್ಟ್‌ಸಿಟಿ ಅಡಿಯಲ್ಲಿ ಅಭಿವೃದ್ಧಿಗೊಳ್ಳಲಿದೆ ಎಂದು ಅವರು ಇದೇ ವೇಳೆ ತಿಳಿಸಿದರು.
ಸಂಸ್ಕೃತಿ ಬಿಂಬಿಸುವ ಮಾದರಿ
ಮನಪಾ ಮುಖ್ಯ ಸಚೇತಕ ಶಶಿಧರ್ ಹೆಗ್ಡೆ ಮಾತನಾಡಿ, ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಮಾದರಿಯಲ್ಲಿ ಪ್ರವೇಶದ್ವಾರವನ್ನು ವಿನ್ಯಾಸಗೊಳಿಸಲಾಗಿರುವುದು ನಗರ ಸೌಂದರ್ಯವನ್ನು ವರ್ಧಿಸಿದೆ ಎಂದರು. ಉಪ ಮೇಯರ್ ಮಹಮ್ಮದ್ ಕುಂಜತ್ತಬೈಲ್, ಮಾಜಿ ಮೇಯರ್ ಗಳಾದ ಕವಿತಾ ಸನಿಲ್, ಹರಿನಾಥ್, ಸ್ಥಾಯೀ ಸಮಿತಿ ಅಧ್ಯಕ್ಷ ಪ್ರವೀಣ್‌ಚಂದ್ರ ಆಳ್ವ, ಕಾರ್ಪೊರೇಟರ್ ದಿವಾಕರ್, ಪಾಲಿಕೆ ಆಯುಕ್ತ ಮೊಹಮ್ಮದ್ ನಝೀರ್, ಕಾರ್ಯಪಾಲಕ ಅಭಿಯಂತರ ಲಿಂಗೇಗೌಡ, ಅಧಿಕಾರಿ ದೇವರಾಜ್ ಮತ್ತಿತರರು ಉಪಸ್ಥಿತರಿದ್ದರು. ಪ್ರವೇಶದ್ವಾರದ ಹೊರಭಾಗದಲ್ಲಿ ಗಿಡ ನೆಡುವ ಮೂಲಕ ಹಸಿರು ಕರ್ನಾಟಕ ಯೋಜನೆಗೆ ಈ ವೇಳೆ ಸಾಂಕೇತಿಕ ಚಾಲನೆ ನೀಡಲಾಯಿತು. ರೋಶನ್ ಲಸ್ರಾದೋ ನಿರೂಪಿಸಿದರು.
ಗುತ್ತುಮನೆ ಶೈಲಿ ಪ್ರವೇಶದ್ವಾರ
ಆರ್ಕಿಟೆಕ್ಟ್ ಚಂದ್ರಕಿರಣ್ ನೇತೃತ್ವದಲ್ಲಿ ತುಳುನಾಡಿನ ಗುತ್ತುಮನೆಯನ್ನು ಬಿಂಬಿಸುವ ಶೈಲಿಯಲ್ಲಿ ಪ್ರವೇಶದ್ವಾರವನ್ನು ನಿರ್ಮಾಣ ಮಾಡಲಾಗಿದೆ. ದ್ವಾರವು 30 ಅಡಿ ಎತ್ತರ ಮತ್ತು 44 ಅಡಿ ಅಗಲವನ್ನು ಹೊಂದಿದೆ. ದ್ವಾರದ ಎರಡೂ ಬದಿಗಳಲ್ಲಿ ಎರಡು ಕೋಣೆಗಳನ್ನು ನಿರ್ಮಿಸಲಾಗಿದ್ದು, ಗಣ್ಯ ವ್ಯಕ್ತಿಗಳಿಗೆ ವಿಶ್ರಾಂತಿ ಮುಂತಾದ ಕಾರಣಗಳಿಗಾಗಿ ಈ ವ್ಯವಸ್ಥೆ ಮಾಡಲಾಗಿದೆ ಎಂದು ಚಂದ್ರಕಿರಣ್ ಮಾಹಿತಿ ನೀಡಿದರು. ಹಿಂದಿನ ಮೇಯರ್ ಕವಿತಾ ಸನಿಲ್ ಅವರ ಅವಧಿಯಲ್ಲಿ ಈ ಪ್ರವೇಶದ್ವಾರ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತಲ್ಲದೆ, ಕಾಮಗಾರಿ ಮುಗಿದು ಉದ್ಘಾಟನೆಗೂ ಸಿದ್ಧವಾಗಿತ್ತು. ಆದರೆ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಪ್ರವೇಶದ್ವಾರ ಲೋಕಾರ್ಪಣೆ ವಿಳಂಬಗೊಂಡಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.