ಮೀನುಗಾರಿಕೆ ಸ್ತಬ್ಧ: ಕಾರ್ಮಿಕರು, ವ್ಯಾಪಾರಿಗಳು ಕಂಗಾಲು !
Team Udayavani, Apr 15, 2020, 9:48 AM IST
ಮಂಗಳೂರು: ಕೋವಿಡ್ ಕಾರಣದಿಂದ ಮೀನುಗಾರಿಕೆ ಸ್ತಬ್ಧವಾಗಿ ಮೀನುಗಾರರು ಸಂಕಷ್ಟ ಅನುಭವಿಸು ತ್ತಿದ್ದು, ಇದನ್ನೇ ನಂಬಿಕೊಂಡು ಬೇರೆ ಬೇರೆ ಉದ್ಯೋಗ ನಡೆಸುತ್ತಿರುವ ಸಾವಿರಾರು ಮಂದಿಯೂ ಕಂಗಾಲಾಗಿದ್ದಾರೆ.
ನದಿ, ಕಡಲಿನಲ್ಲಿ ಮೀನು ಹಿಡಿಯುವುದು ಹಾಗೂ ಮಾರಾಟ ಮಾಡುವುದರ ಜತೆಗೆ ಮೀನುಗಾರಿಕೆಯ ಬೋಟ್‌ಗಳಿಗೆ ಬೇಕಾದ ಡೀಸೆಲ್ ಪೂರೈಸುವ ಪಂಪ್, ಫಿಶ್‌ಮೀಲ್, ಐಸ್‌ಪ್ಲಾಂಟ್, ಲೋಡ್- ಅನ್‌ಲೋಡ್ ಮಾಡುವವರು, ಮೀನು ಮಾರಾಟಗಾರರು, ಸಾಗಾಟದ ವಾಹನಗಳು, ಮೀನು ಕತ್ತರಿಸುವವರು… ಹೀಗೆ ಬೇರೆ ಬೇರೆ ಸ್ತರದಲ್ಲಿ ಮೀನುಗಾರಿಕೆಯನ್ನೇ ನಂಬಿರುವವರಿಗೆ ಆತಂಕ ಶುರುವಾಗಿದೆ. ಮೀನುಗಾರಿಕೆ ಸದ್ಯ ನಡೆಯು ತ್ತಿಲ್ಲವಾ ದ್ದರಿಂದ ಇದನ್ನೇ ಆಶ್ರಯಿಸಿರುವ ಉದ್ಯಮ-ಕೆಲಸ ಕಾರ್ಯಗಳಿಗೆ ದೊಡ್ಡ ಹೊಡೆತ ಬಿದ್ದಂತಾಗಿದೆ.
ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಸುಮಾರು 50ಕ್ಕೂ ಅಧಿಕ ಫಿಶ್‌ಮೀಲ್‌ಗಳಿವೆ. ಕೆಲವು ಮೀನುಗಳನ್ನು ಬಾಯ್ಲರ್‌ಗೆ ಹಾಕಿದಾಗ ಅದರಿಂದ ಬರುವ ಎಣ್ಣೆಯನ್ನು ಮಾರಾಟ ಮಾಡುವುದು ಫಿಶ್‌ಮೀಲ್‌ನ ಕಾರ್ಯ. ಜತೆಗೆ, ಮೀನಿನ ಸಾಕಾಣಿಕೆ ಮಾಡುವುದಕ್ಕೆ ಬೇಕಾಗುವ ಆಹಾರ ಇಲ್ಲೇ ಉತ್ಪಾದನೆ ಯಾಗುತ್ತದೆ. ಸರಿಸುಮಾರು 50,000ಕ್ಕೂ ಅಧಿಕ ಕಾರ್ಮಿಕರು ಇದನ್ನೇ ನಂಬಿಕೊಂಡು ಬೇರೆ ಬೇರೆ ರೀತಿಯಲ್ಲಿ ಉದ್ಯೋಗ ನಡೆಸುತ್ತಿದ್ದಾರೆ. ಸದ್ಯ ಫಿಶ್‌ಮೀಲ್ ಬಂದ್ ಆಗಿ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ.
ಐಸ್‌ಪ್ಲ್ಯಾಂಟ್‌ನದ್ದೂ ಇದೇ ಕಥೆ
ಮೀನುಗಾರಿಕೆಗೆ ಬಹುಮುಖ್ಯವಾಗಿ ಬೇಕಾಗುವ ಐಸ್‌ಪ್ಲ್ಯಾಂಟ್‌ನದ್ದೂ ಇದೇ ಕಥೆ. ಕರಾವಳಿಯಲ್ಲಿ ಸುಮಾರು 100ಕ್ಕೂ ಅಧಿಕ ಐಸ್‌ಪ್ಲ್ಯಾಂಟ್‌ಗಳಿವೆ. ಒಂದೊಂದು ಪ್ಲ್ರಾಂಟ್‌ನಲ್ಲಿ ಸುಮಾರು 25ಕ್ಕೂ ಅಧಿಕ ಕಾರ್ಮಿಕರಿದ್ದರು. ಅವರೆಲ್ಲ ಈಗ ಅತಂತ್ರ ರಾಗಿದ್ದಾರೆ. ಇನ್ನು ಲೋಡ್-ಅನ್‌ಲೋಡ್ ಮಾಡುವ ಕಾರ್ಮಿಕರದ್ದೂ ಇದೇ ಪಾಡು. ಬೋಟ್ ನಿಂದ ಮೀನನ್ನು ಇಳಿಸುವವರು, ಅದನ್ನು ಮಾರಾಟ ಸ್ಥಳದತ್ತ ತರುವವರು, ಖರೀದಿಸಿದ ಮೀನನ್ನು ವಾಹನಗಳಿಗೆ ತುಂಬಿಸುವವರು ಸಹಿತ ಸಾವಿರಾರು ಜನರು ಬೇರೆ ಬೇರೆ ರೀತಿಯಲ್ಲಿ ಕೆಲಸ ಮಾಡುತ್ತಾರೆ. ಐಸ್‌ಲೋಡ್-ನೀರು ತುಂಬಿಸುವವರೂ ಇದ್ದಾರೆ. ಜತೆಗೆ ಇಂತಹ ಕೆಲಸ ಮಾಡುವ ಸುಮಾರು 3,000ಕ್ಕೂ ಅಧಿಕ ಕಾರ್ಮಿಕರು ಊರಿಗೂ ತೆರಳಲಾಗದೆ ಅಸಹಾಯಕರಾಗಿದ್ದಾರೆ.
3,000ಕ್ಕೂ ಅಧಿಕ ಬೋಟ್‌ಗಳಿವೆ
ನಾಡದೋಣಿ, ಸಾಂಪ್ರದಾಯಿಕ, ಪರ್ಸಿನ್, ಗಿಲ್‌ನೆಟ್, ಟ್ರಾಲ್‌ಬೋಟ್ ಸಹಿತ ದ.ಕ. ದಲ್ಲಿ ಸುಮಾರು 3,000ಕ್ಕೂ ಅಧಿಕ ಸಣ್ಣ ಹಾಗೂ ದೊಡ್ಡ ಬೋಟುಗಳು ಮೀನುಗಾರಿಕೆಯಲ್ಲಿ ತೊಡಗಿಕೊಂಡಿವೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಾ. 22ರಿಂದ ಮೀನುಗಾರಿಕೆ ಸಂಪೂರ್ಣ ಸ್ಥಗಿತಗೊಂಡಿದೆ. ಎ. 12ರಿಂದ ನಾಡದೋಣಿ ಮೀನುಗಾರಿಕೆಗೆ ಮಾತ್ರ ಅವಕಾಶ ನೀಡಲಾಗಿದೆ.
ಸಂಕಷ್ಟದ ದಿನಗಳು
ಮೀನುಗಾರಿಕೆ ಸ್ಥಗಿತಗೊಂಡ ಪರಿಣಾಮ ಐಸ್‌ಪ್ಲ್ಯಾಂಟ್‌ಗಳನ್ನು ಬಂದ್ ಮಾಡುವಂತಾಗಿದೆ. ಬಂದ್ ಆಗಿದ್ದರೂ ಐಸ್‌ಪ್ಲ್ಯಾಂಟ್‌ನವರು ಮೆಸ್ಕಾಂ ಹಾಗೂ ತೆರಿಗೆ ಸೇರಿ 50,000 ರೂ.ಗಳಷ್ಟು ಪಾವತಿ ಮಾಡಬೇಕಾದ ಸಂಕಷ್ಟ ಎದುರಾಗಿದೆ. ಜತೆಗೆ ಇದರಲ್ಲಿ ಕೆಲಸ ಮಾಡುತ್ತಿರುವ ಹೊರರಾಜ್ಯ ಹಾಗೂ ಹೊರಜಿಲ್ಲೆಯ ಕಾರ್ಮಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಅವರಿಗೆ ಸೂಕ್ತ ವ್ಯವಸ್ಥೆ ಮಾಡಲಾಗುತ್ತಿದೆ.
– ರೋಶನ್ ಮೊಂತೇರೋ
ಮಾಲಕರು, ಇಂಡಿಯನ್ ಐಸ್ ಆ್ಯಂಡ್ ಕೋಲ್ಡ್ ಸ್ಟೋರೇಜ್ ಮಂಗಳೂರು.
ಗಾಳದ ಮೀನಿಗೆ ಭರ್ಜರಿ ಬೇಡಿಕೆ !
ಮಂಗಳೂರು : ಹಿನ್ನೆಲೆಯಲ್ಲಿ ಆಳ ಸಮುದ್ರ ಮೀನುಗಾರಿಕೆ ನಿಷೇಧ ನಡುವೆಯೂ ಕರಾವಳಿಯ ಮತ್ಸéಪ್ರಿಯ ರಿಗೆ ತಾಜಾ ಮೀನುಗಳು ನಾಡದೋಣಿ ಮೂಲಕ ದೊರೆಯುತ್ತಿವೆ. ವಿಶೇಷವೆಂದರೆ ಗಾಳ ಹಾಕಿ ಮೀನು ಹಿಡಿಯುವವರಿಗೆ ಈಗ ಭರ್ಜರಿ ಡಿಮ್ಯಾಂಡ್!
ನಾಡದೋಣಿ ಮೀನುಗಾರಿಕೆ ನಡೆಸಲು ಸರಕಾರ ಆದೇಶ ನೀಡಿದ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ನಾಡದೋಣಿಗಳು ಕಡಲಿಗಿಳಿದಿವೆ. ಇದರ ಮಧ್ಯೆ ಗಾಳ ಹಾಕಿಯೂ ಮೀನು ಹಿಡಿಯಲಾಗುತ್ತಿದೆ.
ಗಾಳ ಹಾಕುವ ಹವ್ಯಾಸಿಗಳು ಈಗ ಚುರುಕಾಗಿದ್ದಾರೆ. ಬೋಳಾರ ಮುಳಿ ಹಿತ್ಲು, ಮಳವೂರು ಡ್ಯಾಂ, ಪಾವಂಜೆ ಹೊಳೆ, ಮೂಲ್ಕಿ ಫಲ್ಗುಣಿ ನದಿ, ಬೆಂಗರೆ, ಸೋಮೇಶ್ವರ ಪ್ರದೇಶಗಳಲ್ಲಿ ಹವ್ಯಾಸಿ ಮೀನು ಬೇಟೆಗಾರರು ಕಂಡು ಬರುತ್ತಿ ದ್ದಾರೆ. ಗಾಳ ಹಾಕಿ ಹಿಡಿಯುವ ಏರಿ, ಕಡುವಾಯಿ, ಕಾಂಡಾಯಿ, ಕ್ಯಾವೇಜ್ ಮೀನುಗಳಿಗೆ ಒಳ್ಳೆಯ ಬೇಡಿಕೆ ಇದೆ. ಸಾಮಾನ್ಯ ದರಕ್ಕಿಂತ 2-3 ಪಟ್ಟು ಅಧಿಕ ದರದಲ್ಲಿ ಮಾರಾಟವಾಗುತ್ತಿದೆ. ಗಾಳದಲ್ಲಿ ಹಿಡಿದ ಮೀನಿನ ಫೋಟೋ ತೆಗೆದು ನಮ್ಮ ಲೋಕಲ್ ವಾಟ್ಸಪ್ ಗ್ರೂಪ್‌ನಲ್ಲಿ ಹಾಕಿದರೆ ಸಾಕು, ತತ್‌ಕ್ಷಣ ಒಳ್ಳೆಯ ಬೆಲೆಗೆ ಮೀನು ಖರೀದಿಸುವ ಗ್ರಾಹಕರು ಲಭ್ಯವಾಗುತ್ತಾರೆ ಎನ್ನುತ್ತಾರೆ ಗಾಳದಲ್ಲಿ ಮೀನು ಹಿಡಿಯುವ ಆಸಕ್ತರೊಬ್ಬರು.
ಸುಮಾರು 1,500ರಷ್ಟು ನಾಡ ದೋಣಿಗಳಲ್ಲಿ 400ರಷ್ಟು ದೋಣಿ ಗಳು ಮೀನುಗಾರಿಕೆ ಆರಂಭಿಸಿವೆ. ಮೀನು ಗಾರರು ಮೀನು ಹಿಡಿದು ತಂದು ಚಿಲ್ಲರೆಯಾಗಿ ಮಾರುವಂತಿಲ್ಲ. ನಿಗದಿತ ಸ್ಥಳಕ್ಕೆ ದೋಣಿ ತಂದು ಹರಾಜು ಕೂಗಿ ನಿಗದಿಪಡಿಸಿದ ಖರೀದಿದಾರರಿಗೆ ಮಾತ್ರ ಮಾರಾಟ ಮಾಡಬೇಕಿದೆ.
ಮೀನು ಮಾರಾಟದ 11ಸ್ಥಳಗಳು
ದ.ಕ. ಜಿಲ್ಲೆಯಲ್ಲಿ ಒಟ್ಟು 11 ಸ್ಥಳಗಳಲ್ಲಿ ನಾಡದೋಣಿಯಲ್ಲಿ ತಂದ ಮೀನುಗಳನ್ನು ಮಾರಾಟ ಮಾಡಲು ಸ್ಥಳಗಳನ್ನು ದ.ಕ. ಜಿಲ್ಲಾಡಳಿತ ನಿಗದಿಪಡಿಸಿದೆ. ಬೈಕಂಪಾಡಿ, ಗುಡ್ಡೆಕೊಪ್ಪ, ಮುಕ್ಕ, ಸಸಿಹಿತ್ಲು, ಸುಲ್ತಾನ್ ಬತ್ತೇರಿ, ಹೊಗೆ ಬಜಾರ್, ಉಳ್ಳಾಲ ಕೋಡಿ, ಕೋಟೆಪುರ, ಮೊಗವೀರಪಟ್ಣ, ಉಳ್ಳಾಲ, ಸೋಮೇಶ್ವರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.