ಗೃಹ ಬಳಕೆ ನೀರಿನ ದರ ಇಳಿಕೆಗೆ ಸರಕಾರ ಅನುಮೋದನೆ
ಮಂಗಳೂರು ಪಾಲಿಕೆಯ ಪ್ರಸ್ತಾವನೆಗೆ ಷರತ್ತುಬದ್ಧ ಅನುಮತಿ
Team Udayavani, Jul 19, 2022, 12:53 PM IST
ಲಾಲ್‌ಬಾಗ್: ಎರಡು ವರ್ಷ ಗಳಿಂದ ಮಂಗಳೂರು ನಗರದಲ್ಲಿ ಬಹು ಚರ್ಚಿತವಾಗಿದ್ದ ಗೃಹ ಬಳಕೆ ನೀರಿನ ದರ ಇಳಿಕೆ ಮಾಡುವ ಮಂಗಳೂರು ಪಾಲಿಕೆಯ ಮಹತ್ವದ ಪ್ರಸ್ತಾವನೆಗೆ ರಾಜ್ಯ ಸರಕಾರ ಸೋಮವಾರ ಅಧಿಕೃತ ಅನುಮೋದನೆ ನೀಡಿದ್ದು, ಪರಿಷ್ಕೃತ ನೀರಿನ ದರ ಆಗಸ್ಟ್ 1ರಿಂದ ಜಾರಿಗೆ ಬರಲಿದೆ.
ಗೃಹ ನೀರಿನ ದರ ಪರಿಷ್ಕರಣೆಯ ಕುರಿತು ಮೇ 31ರಂದು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಿದ ದರಗಳನ್ನು ವಿಧಿಸಲು ಷರತ್ತುಗಳನ್ವಯ ಸರಕಾರ ಅನುಮೋದನೆ ನೀಡಿದೆ. ಇದರಂತೆ ಪರಿಷ್ಕೃತ ನೀರಿನ ದರವು ಮಂಗಳೂರು ಮಹಾನಗರ ಪಾಲಿಕೆಗೆ ಮಾತ್ರ ಅನ್ವಯವಾಗುತ್ತದೆ. ಈ ಪರಿಷ್ಕೃತ ನೀರಿನ ದರವು ಆ. 1ರಿಂದ 1 ವರ್ಷದ ಅವಧಿಯವರೆಗೆ ಮಾತ್ರ ಜಾರಿಯಲ್ಲಿರುತ್ತದೆ. 1 ವರ್ಷದ ಅನಂತರ ಮಂಗಳೂರು ಪಾಲಿಕೆಯು ದರ ಪರಿಷ್ಕರಣೆ ಕುರಿತು ಸರಕಾರಕ್ಕೆ ಹೊಸ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆಯಬೇಕು ಎಂದು ಸರಕಾರದ ಆದೇಶದಲ್ಲಿ ತಿಳಿಸಲಾಗಿದೆ.
ನೀರಿನ ದರ ಇಳಿಕೆ ಮಾಡುವ ನೆಲೆಯಲ್ಲಿ ಶಾಸಕ ವೇದವ್ಯಾಸ ಕಾಮತ್ ಅವರು ವಿಶೇಷ ಒತ್ತು ನೀಡಿ ಸರಕಾರದ ಗಮನಸೆಳೆದ ಹಿನ್ನೆಲೆಯಲ್ಲಿ ಪರಿಷ್ಕರಣೆ ಆಗಿದೆ ಎಂದು ಮೂಲಗಳು ತಿಳಿಸಿವೆ.
ಗರಿಷ್ಠ ಮಿತಿ 20 ಕಿ.ಲೀ.ಗೆ ಏರಿಕೆ
2019 ಜೂ. 15ರಂದು ಪಾಲಿಕೆ ಆಡಳಿತಾಧಿಕಾರಿ ಕಾಲದಲ್ಲಿ ಗರಿಷ್ಠ 8 ಕಿ.ಲೀ. (1 ಕಿ.ಲೀ. ಅಂದರೆ 1000 ಲೀ.) ಪೈಕಿ ಪ್ರತೀ ಕಿ.ಲೀ.ಗೆ 7 ರೂ. ನಿಗದಿ ಮಾಡಲಾಗಿತ್ತು. ಇದು ಬಡ ಜನರಿಗೆ ದುಬಾರಿಯಾಗುತ್ತಿದೆ ಎಂಬ ಕಾರಣದಿಂದ ದರ ಪರಿಷ್ಕರಣೆಗೆ ಬಳಿಕ ಪಾಲಿಕೆ ಮುಂದಾಗಿತ್ತು. ಅದರಂತೆ 2020 ಮೇ 13ರಂದು ಪಾಲಿಕೆ ಸಾಮಾನ್ಯ ಸಭೆಯಲ್ಲಿ ದರ ಪರಿಷ್ಕರಣೆಗೆ ನಿರ್ಧರಿಸಲಾಗಿತ್ತು. ಇದರಲ್ಲಿ ನೀರಿನ ಪ್ರಮಾಣ 8 ಕಿ.ಲೀ.ನಿಂದ ಗರಿಷ್ಠ 10 ಕಿ.ಲೀ. ಎಂದು ನಿಗದಿ ಮಾಡಿ, ಪ್ರತೀ ಕಿ.ಲೀ.ಗೆ 6 ರೂ. ಮಾಡಿ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿತ್ತು. ಆದರೆ ನೀರಿನ ದರ ಪರಿಷ್ಕರಣೆ ಮಾಡಿದರೆ ಪಾಲಿಕೆಗೆ ಆರ್ಥಿಕವಾಗಿ ಬಹಳ ನಷ್ಟವಾಗಲಿದೆ; ಹೀಗಾಗಿ ಯಾವುದೇ ಆದಾಯ ಅಥವಾ ನಷ್ಟ ಆಗದಂತೆ ಹೊಸ ಪ್ರಸ್ತಾವನೆಯನ್ನು ಪುನರ್‌ಪರಿಶೀಲಿಸಿ ಸರಕಾರಕ್ಕೆ ಕಳುಹಿಸಲು ಫೆ. 8ರಂದು ಸೂಚಿಸಲಾಗಿತ್ತು. ಅದರಂತೆ ಮತ್ತೂಮ್ಮೆ ಪರಿಷ್ಕೃತ ಪ್ರಸ್ತಾವನೆಯನ್ನು ಈ ವರ್ಷದ ಮೇ 31ರಂದು ಸರಕಾರಕ್ಕೆ ಮತ್ತೆ ಕಳುಹಿಸಲಾಗಿತ್ತು. ಇದರಲ್ಲಿ ಗರಿಷ್ಠ ನೀರಿನ ಪ್ರಮಾಣವನ್ನು (ಪ್ರಸ್ತಾವಿತ)10 ಕಿ.ಲೀ.ನಿಂದ 20 ಕಿ.ಲೀ.ಗೆ ಏರಿಕೆ ಮಾಡಲಾಗಿತ್ತು. ಪ್ರತೀ ಕಿ.ಲೀ. ದರ 5 ರೂ.ಗೆ ಇಳಿಕೆ ಮಾಡಿ ಸರಕಾರಕ್ಕೆ ಕಳುಹಿಸಲಾಗಿತ್ತು. ಈ ಪ್ರಸ್ತಾವನೆಗೆ ಸರಕಾರ ಇದೀಗ ಷರತ್ತುಬದ್ಧ ಒಪ್ಪಿಗೆ ನೀಡಿದೆ. ದರ ಪರಿಷ್ಕರಣೆಯ ಮೂಲ ಉದ್ದೇಶ ಬಡ ಕುಟುಂಬಗಳಿಗೆ ಉಪಯೋಗವಾಗಬೇಕಾಗಿರುವ ಕಾರಣ, ಕಡಿಮೆ ನೀರಿನ ಬಳಕೆದಾರರಿಗೆ ಕಡಿಮೆ ಶುಲ್ಕ, ಗೃಹ ಬಳಕೆಯಲ್ಲಿ ಪಟ್ಟಿ ಮಾಡಿದ್ದಲ್ಲಿ ಪ್ರತೀ ತಿಂಗಳಿಗೆ 70 ಸಾವಿರ ಲೀ.ಗಿಂತ ಹೆಚ್ಚಿನ ನೀರಿನ ಬಳಕೆಯಾದಲ್ಲಿ ಪಾಲಿಕೆಗೆ ಹೆಚ್ಚಿನ ಆದಾಯ ಸಂಗ್ರಹವಾಗಲಿದೆ ಎಂದು ಪ್ರಸ್ತಾವನೆಯಲ್ಲಿ ವಿವರಿಸಲಾಗಿದೆ.
ದರ ಪರಿಷ್ಕರಣೆ ಸ್ವರೂಪ
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಗೃಹ ಬಳಕೆ ಕುಡಿಯುವ ನೀರಿನ ಪ್ರಮಾಣವನ್ನು ಗರಿಷ್ಠ 20 ಕಿ.ಲೀ.ಗೆ ಏರಿಸಿ, ದರವನ್ನು 5 ರೂ.ಗೆ ಇಳಿಕೆ ಮಾಡಲಾಗಿದೆ. 20 ಕಿ.ಲೀ.ನಿಂದ 25 ಕಿ.ಲೀ.ವರೆಗೆ ಕಿ.ಲೀ. ಗೆ 11 ರೂ., 25 ಕಿ.ಲೀ.ನಿಂದ ಅಧಿಕ ಬಳಕೆ ಮಾಡಿದರೆ 1 ಕಿ.ಲೀಗೆ 14 ರೂ.ಗಳಂತೆ ದರ ನಿಗದಿಯಾಗಲಿದೆ.
ಹೊಸದಾಗಿ ನಿಗದಿಪಡಿಸುವ ದರದಂತೆ 20 ಸಾವಿರ ಲೀ. ನೀರು ಬಳಕೆ ಮಾಡಿದರೆ ಈಗ 174 ರೂ. ಶುಲ್ಕವಿದ್ದರೆ, ಮುಂದೆ 100 ರೂ. ಆಗಲಿದೆ. ಪ್ರತೀ 70 ಸಾವಿರ ಲೀಟರಿಗೆ ಈಗ 814 ರೂ. ಇದ್ದರೆ ಮುಂದೆ 785 ರೂ. ಆಗಲಿದೆ. ಪ್ರತೀ 100 ಸಾವಿರ ಲೀ.ಗೆ ಈಗ 1,204 ರೂ. ಇದ್ದರೆ ಅದು 1,205 ರೂ. ಹಾಗೂ ಪ್ರತೀ 150 ಸಾವಿರ ಲೀ.ಗೆ 1,854 ರೂ. ಇರುವುದು 1,905 ರೂ. ಆಗಲಿದೆ.
ಕೊಟ್ಟ ಭರವಸೆಯಂತೆ ಕಾರ್ಯ: ಮಂಗಳೂರಿನ ಕುಡಿಯುವ ನೀರಿನ ದರವನ್ನು ಪರಿಷ್ಕರಿಸುವ ಬಗ್ಗೆ ಈ ಹಿಂದೆ ಜನರಿಗೆ ಆಶ್ವಾಸನೆ ನೀಡಲಾಗಿತ್ತು. ಆ ಮಾತಿನಂತೆ ಇದೀಗ ಕುಡಿಯುವ ನೀರಿನ ದರವನ್ನು ಗರಿಷ್ಠ ಪ್ರಮಾಣದಲ್ಲಿ ಇಳಿಕೆ ಮಾಡಲಾಗಿದೆ. ಇದರಿಂದ ನಗರದ ಸಾವಿರಾರು ಬಡ ಕುಟುಂಬಗಳಿಗೆ, ಕಡಿಮೆ ನೀರಿನ ಬಳಕೆ ಮಾಡುವ ಸಾವಿರಾರು ಮಂದಿಗೆ ಉಪಯೋಗವಾಗಲಿದೆ. ಆ. 1ರಿಂದ ಹೊಸ ನೀರಿನ ದರ ಜಾರಿಯಾಗಲಿದೆ. ಬಡವರ ಪರವಾಗಿ ಸರಕಾರ, ಮಂಗಳೂರು ಪಾಲಿಕೆ ನಿರಂತರವಾಗಿ ಕಾರ್ಯಯೋಜನೆಗಳನ್ನು ನಡೆಸಲಿದೆ. – ವೇದವ್ಯಾಸ ಕಾಮತ್, ಶಾಸಕರು ಮಂಗಳೂರು ದಕ್ಷಿಣ
ಮಿತ ನೀರಿನ ಬಳಕೆದಾರರಿಗೆ ಲಾಭ: ಮಂಗಳೂರು ಪಾಲಿಕೆಯ ಬಹು ಅಗತ್ಯದ ಪ್ರಸ್ತಾವನೆಗೆ ಸರಕಾರ ಇದೀಗ ಅನುಮೋದನೆ ನೀಡಿದೆ. ಕುಡಿಯುವ ನೀರಿನ ದರ ಕಡಿಮೆಯ ಬಗ್ಗೆ ಆದೇಶವಾಗಿದೆ. 20 ಸಾವಿರ ಲೀ.ವರೆಗೆ ಮಿತವಾಗಿ ನೀರು ಬಳಕೆ ಮಾಡುವವರಿಗೆ 174 ರೂ. ಬರುತ್ತಿದ್ದರೆ, ಹೊಸ ಪರಿಷ್ಕರಣೆಯ ಪ್ರಕಾರ ತಿಂಗಳಿಗೆ 100 ರೂ. ಬರಲಿದೆ. –ಪ್ರೇಮಾನಂದ ಶೆಟ್ಟಿ, ಮೇಯರ್ ಪಾಲಿಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.