Kaikamba: ಸಚಿವರಿಗೆ ಭೀಕರ ನೆರೆ ದರ್ಶನ
ನೆರೆಪೀಡಿತ ಅದ್ಯಪಾಡಿ ಪ್ರದೇಶಕ್ಕೆ ಸಚಿವ ದಿನೇಶ್ ಗುಂಡೂರಾವ್, ಡಿಸಿ ಭೇಟಿ
Team Udayavani, Aug 3, 2024, 1:04 PM IST
ಕೈಕಂಬ: ಮಳೆ ಬಂದಾಗ ಮುಳುಗಡೆಯಾಗದಂತೆ ಎಚ್ಚರ ವಹಿಸಬೇಕು ಹಾಗೂ ಅದಕ್ಕೆ ವೈಜ್ಞಾನಿಕ ಮತ್ತು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌ಅವರು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರಿಗೆ ಸೂಚನೆ ನೀಡಿದರು.
ಶುಕ್ರವಾರ ಬೆಳಗ್ಗೆ ಕಂದಾವರ ಗ್ರಾ.ಪಂ. ವ್ಯಾಪ್ತಿಯ ಅದ್ಯಪಾಡಿ ನೆರೆ ಪೀಡಿತ ಕೊಲೊಟ್ಟು ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆ ಹಾಗೂ ನೆರೆ ಹಾವಳಿಯ ಬಗ್ಗೆ ಅಭಿಪ್ರಾಯ ಪಡೆದುಅವರು ಮಾತನಾಡಿದರು.
ಸ್ಥಳೀಯ ನಿವಾಸಿಗಳು ತಮಗೆ ಎದುರಾಗುತ್ತಿರುವ ಸಮಸ್ಯೆಗಳನ್ನು ವಿವರಿಸಿದರು. ಪ್ರತಿ ಮಳೆಗಾಲದಲ್ಲೂ ನೆರೆ ಸಾಮಾನ್ಯ ವಾಗಿದೆ. ಈ ವರ್ಷ ಇನ್ನೂ ಹೆಚ್ಚಾ ಗಿ ದೆ. ಭತ್ತ, ಅಡಿಕೆ, ತೆಂಗು, ಬಾಳೆ ಕೃಷಿ ನಾಶವಾಗಿದೆ. ರಸ್ತೆಗಳು ಜಲಾವೃತಗೊಂಡಿವೆ. ದೋಣಿ ಮೂಲಕ ಸಂಚಾರ ನಡೆಸುತ್ತಿದ್ದೇವೆ. 35 ಮನೆಗಳಿಗೆ ನೀರು ನುಗ್ಗಿದ್ದು ಮನೆಗಳ ನಿವಾಸಿಗಳು ಸ್ಥಳಾಂತರಗೊಂಡಿದ್ದಾರೆ. ಮನೆಯಲ್ಲಿದ್ದ ವಸ್ತುಗಳಿಗೆ ಹಾನಿಯಾಗಿದೆ ಎಂದು ಸಚಿವರಿಗೆ ಮಾಹಿತಿ ನೀಡಿದರು. ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳಿಗೆಸಚಿವ ದಿನೇಶ್ ಗುಂಡೂರಾವ್ ಸೂಚಿಸಿದರು.
ಜಿಪಂ ಸಿಇಒ ಡಾ| ಆನಂದ್, ಸಹಾಯಕ ಆಯುಕ್ತ ಹರ್ಷವರ್ಧನ್, ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್, ಆರೋಗ್ಯಾಧಿಕಾರಿ ಡಾ| ತಿಮ್ಮಯ್ಯ, ಪಾಲಿಕೆ ಆಯುಕ್ತ ಆನಂದ್ ಸಿ.ಎಲ್., ತಹಶೀಲ್ದಾರ್ ಪ್ರಶಾಂತ್ ಪಾಟೀಲ್, ತಾ.ಪಂ. ಇಒ ಮಹೇಶ್ ಹೊಳ್ಳ, ಡಿಸಿಪಿ ಸಿದಾರ್ಥ್ ಗೋಯಲ್, ರಾ. ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ ಜಾವೆದ್ ಅಜ್ಮೀ, ಕಾಂಗ್ರೆಸ್‌ಮುಖಂಡರಾದ ಇನಾಯತ್ ಅಲಿ, ಎ.ಸಿ.ವಿನಯ್‌ರಾಜ್, ಅನಿಲ್ ಕುಮಾರ್, ಸುರೇಂದ್ರ ಕಾಂಬ್ಳಿ, ಕಂದಾವರ ಗ್ರಾ.ಪಂ. ಮಾಜಿ ಅಧ್ಯಕ್ಷೆ ವಿಜಯ ಗೋಪಾಲ ಸುವರ್ಣ, ಉಪಾಧ್ಯಕ್ಷ ಉದಯ ರಾವ್, ವಿಜಯ ಗೋಪಾಲ ಸುವರ್ಣ, ಜೀವನ್ ಮಲ್ಲಿ, ಶಿವರಾಮ್ ಮೂಲ್ಯ ಉಪಸ್ಥಿತರಿದ್ದರು.
ಶಾಶ್ವತ ಪರಿಹಾರ : ತಜ್ಞರ ವರದಿಗೆ ಸೂಚನೆ ಅದ್ಯಪಾಡಿಯ ಅಕ್ಕ ಪಕ್ಕದ ಊರುಗಳಿಗೆ ನೆರೆ ಹಾವಳಿ ತಡೆಯಲು, ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತಜ್ಞರಿಂದ ವರದಿ ಪಡೆದುಕೊಳ್ಳಿ, ಪ್ರವಾಹ ಬಂದಿರುವ ಸಂದರ್ಭದಲ್ಲಿಯೇ ತಂತ್ರಜ್ಞರನ್ನು ಸ್ಥಳಕ್ಕೆ ಕರೆತನ್ನಿ. ಹಾಗೂ ಇಲ್ಲಿನ ವಸ್ತುಸ್ಥಿತಿ ವಿವರಿಸಿ ಎಂದು ಸಚಿವರು ಸೂಚಿಸಿದರು.
ಮುಳುಗದಿರಲಿ ಬದುಕು!
ಮರವೂರು ಡ್ಯಾಂ ನಿರ್ಮಾಣವಾದಾಗಿನಿಂದ ಪ್ರತೀ ವರ್ಷ ನೆರೆ ಹಾವಳಿ ಇದೆ. ಅದ್ಯಪಾಡಿ, ಕೊಳಂಬೆ, ಕಂದಾವರ, ಗುರುಪುರ ಸುತ್ತಮುತ್ತಲ ಪ್ರದೇಶದಲ್ಲಿ ಭತ್ತದ ಬೆಳೆ ಸಾಧ್ಯವಾಗುತ್ತಿಲ್ಲ. ಇದಲ್ಲದೆ ಸುಮಾರು 35 ಮನೆ ನಿವಾಸಿಗಳಿಗೆ ನಿತ್ಯ ನೆರೆ ಹಾವಳಿ ಇದೆ. ವೃದ್ಧ ದಂಪತಿ ವಾಸವಾಗಿದ್ದ ಮನೆಗೆ ನೀರು ನುಗ್ಗಿದ್ದು ಅವರನ್ನು, ಜಾನುವಾರುಗಳನ್ನು ಸ್ಥಳಾಂತರ ಮಾಡಿದ್ದೇವೆ. ಶಾಶ್ವತ ಪರಿಹಾರ ಬೇಕೆಂದು ಬೇಡಿಕೆ ಇಟ್ಟಿದ್ದೇವೆ. ನೆರೆಯ ವೇಳೆ ದೋಣಿಯನ್ನೇ ಅವಲಂಬಿಸಬೇಕಿದ್ದು, ಮುಳುಗುವ ಮುನ್ನ ಕ್ರಮ ವಹಿಸಿ.
-ಶಿವರಾಮ, ನೆರೆಪೀಡಿತ ಅದ್ಯಪಾಡಿ ನಿವಾಸಿ
ನೆರೆ ಪರಿಹಾರ ಪಡೆಯಲು ನಿರಾಕರಣೆ
ಶಾಶ್ವತ ಪರಿಹಾರ ಒದಗಿಸುವಂತೆ 11 ವರ್ಷದಿಂದ ಆಗ್ರಹಿಸುತ್ತಿರುವ ಸ್ಥಳೀಯರು ನೆರೆ ಪರಿಹಾರ ಪಡೆಯಲು ನಿರಾಕರಿಸಿದರು. ಈ ವೇಳೆ ನಿವಾಸಿಗಳ ಮನವೊಲಿಸಿದ ಸಚಿವರು, ನೆರೆ ಪರಿಹಾರಕ್ಕೂ ಶಾಶ್ವತ ಪರಿಹಾರಕ್ಕೂ ಸಂಬಂಧವಿಲ್ಲ. ನೆರೆ ಪರಿಹಾರ ಪಡೆದರೆ ಶಾಶ್ವತ ಪರಿಹಾರ ಸಿಗುವುದಿಲ್ಲ ಎಂಬ ಭಾವನೆ ಬೇಡ. ಒಂದಕ್ಕೊಂದು ಸಂಬಂಧವಿಲ್ಲ. ಭತ್ತದ ಗದ್ದೆ, ತೋಟ ಮುಳುಗಡೆಯಿಂದ ನಷ್ಟ ಅನುಭವಿಸಿದ್ದು, ಅದಕ್ಕೆ ಸಿಗುವ ನೆರೆ ಪರಿಹಾರ ಪಡೆದುಕೊಳ್ಳಿ. ಫಲ್ಗುಣಿ ನದಿಯಿಂದಾಗುವ ನೆರೆ ಹಾವಳಿ ತಡೆಯುವ ಶಾಶ್ವತ ಪರಿಹಾರದ ಜವಾಬ್ದಾರಿ ನಮ್ಮದು ಎಂದು ಸಚಿವ ದಿನೇಶ್ ಗುಂಡೂರಾವ್ ಮನವಿ ಮಾಡಿದರು. ಬಳಿಕ ನೆರೆ ಪರಿಹಾರ ಪಡೆಯಲು ನಿವಾಸಿಗಳು ಒಪ್ಪಿಗೆ ಸೂಚಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.