ಇದು ಐಸ್‌ಕ್ರೀಮ್ ಕಹಾನಿ
Team Udayavani, Jul 15, 2018, 2:31 PM IST
ಪ್ರಪಂಚದಲ್ಲಿ ಪ್ರತಿಯೊಂದು ವಸ್ತುಗಳನ್ನೂ ಒಂದೊಂದು ದಿನಗಳ ಮುಖಾಂತರ ಗುರುತಿಸುವಾಗ ಐಸ್‌ಕ್ರೀಮ್‌ಗೂ ಇಲ್ಲದಿದ್ದರೆ ಹೇಗೆ? ಇದಕ್ಕಾಗಿಯೇ ಜುಲೈ ತಿಂಗಳ ಮೂರನೇ ರವಿವಾರ ಜಗತ್ತಿನಾದ್ಯಂತ ಐಸ್‌ಕ್ರೀಮ್ ದಿನವನ್ನಾಗಿ ಆಚರಿಸಲಾಗುತ್ತದೆ.
1533ರಲ್ಲಿ ಇಟಲಿಯ ರಾಣಿ ಡಚೆಸ್ ಕ್ಯಾಥರೀನ್ ಡಿ’ಮೆಡಿಸಿ ಅವರು ಒರ್ಲಿಯನ್ಸ್ ಡೂಕ್ ( ಫ್ರಾನ್ಸ್‌ನ ಎರಡನೇ ಹೆನ್ರಿ) ಅವರು ವಿವಾಹವಾಗುತ್ತಾರೆ. ವಿವಾಹವಾಗಿ ಗಂಡನ ಮನೆಗೆ ಬರುವಾಗ ಫ್ರಾನ್ಸ್‌ನ ಕೆಲವು ಬಾಣಸಿಗರನ್ನೂ ಅವರ ಜತೆ ಕಳುಹಿಸಲಾಗುತ್ತದೆ. ಅದರಲ್ಲಿ ಒಬ್ಬರು ಕೆಲವು ಹಣ್ಣು, ಸಕ್ಕರೆ,
ಸುವಾಸನೆ ಭರಿತ ನೀರು (ಐಸ್)ನಿಂದ ಹೊಸ ಪಾಕವನ್ನು ರಚಿಸುತ್ತಾರೆ. ಅದು ರಾಜ ಹಾಗೂ ರಾಣಿಗೆ ಪ್ರಿಯವಾಗುತ್ತದೆ. ಅದಕ್ಕೆ ರಾಜ ಆ ಐಸ್ ಕ್ರೀಮ್ ಮಾಡುವ ಕ್ರಮ ಯಾರಿಗೂ ತಿಳಿಸಬಾರದೆಂದು, ಕೇವಲ ರಾಜ ಮನೆತನಕ್ಕೆ ಮಾತ್ರ ಸಿಗುವಂತೆ ಆಗಬೇಕೆಂದು ಆತನಿಗೆ ಜೀವಿತಾವಧಿ ಸಂಭಾವನೆ ನೀಡುತ್ತಾರೆ.
ಆದರೆ 1674ರಲ್ಲಿ ಫ್ರೆಂಚ್ ನಲ್ಲಿ ಸುವಾಸನೆಯುಳ್ಳ ಐಸ್ ಪಾಕ ಕೆಲವೆಡೆ ಕಂಡುಬರುತ್ತದೆ. ಮತ್ತು ಅದು 1694ರಲ್ಲಿ ಐಸ್ ಪಾಕದ ಕುರಿತು ‘ದಿ ಮಾಡರ್ನ್ ಸ್ಟೆವಾರ್ಡ್’ ಪತ್ರಿಕೆಯಲ್ಲಿ ಪ್ರಕಟವಾಗುತ್ತದೆ. ಹೀಗೆ ಅದು ಯುರೋಪನ್ನು ಪ್ರವೇಶಿಸಿ ಎಲ್ಲರ ಬಾಯಲ್ಲೂ ಐಸ್ ಕ್ರೀಮ್ ಎನ್ನುವ ಹೊಸ ಕಹಾನಿಯಾಗಿ ದೇಶದಿಂದ ದೇಶಕ್ಕೆ ವಿಸ್ತರಿಸುತ್ತಾ ಹೋಗುತ್ತದೆ. ಈಜಿಪ್ಟ್ನಲ್ಲಿ ರಾಜ ವಂಶಸ್ಥರು ಬೆಳ್ಳಿಯ ಕಪ್‌ನಲ್ಲಿ ಪುಡಿ ಮಾಡಿದ ಐಸ್ ಹುಡಿಗೆ ಕೆಲವು ಹಣ್ಣುಗಳನ್ನು ಹಾಕಿ ತಿನ್ನುತ್ತಿದ್ದರು. ‘ಕುಲ್ಫಿ’ ಭಾರತದ ಸಾಂಪ್ರದಾಯಕ ಐಸ್ ಕ್ರೀಮ್. ಕುಲ್ಫಿ ಎನ್ನುವುದು ಪರ್ಷಿಯನ್ ಪದದಿಂದ ಬಂದಿದ್ದಾದರೂ 16ನೇ ಶತಮಾನದಲ್ಲಿ ಮೊಘಲ ಸಾಮ್ರಾಜ್ಯದ ಅಕ್ಬರನ ಕಾಲದಲ್ಲಿ ಇದನ್ನು ಮೊದಲಿಗೆ ಆವಿಷ್ಕಾರಗೊಳಿಸಲಾಯಿತು. ಹಾಲನ್ನು ಕುದಿಸಿ ಅದಕ್ಕೆ ಸಕ್ಕರೆ, ಪಿಸ್ತಾ ಅಥವಾ ಕೇಸರಿಯನ್ನು ಹಾಕಿ ತಿನ್ನುತ್ತಿದ್ದರು. ಆದರೆ ಒಂದು ದಿನ ಅದನ್ನು ಲೋಹದ ಕೋನ್ ಗಳಿಗೆ ಹಾಕಿ ಐಸ್‌ನಲ್ಲಿಡಲಾಯಿತು. ಅನಂತರ ಅದುವೇ ಕುಲ್ಫಿ ಎಂಬ ನಾಮಾಕಿಂತದೊಂದಿಗೆ ಪ್ರಸಿದ್ಧಿ ಪಡೆಯಿತು. ಕುಲ್ಫಿ ಈಗಾಗಲೇ ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ, ಬರ್ಮಾ, ಪಾಕಿಸ್ಥಾನ ಹೀಗೆ ಹಲವು ದೇಶಗಲ್ಲಿ ಜನಪ್ರಿಯವಾಗಿದೆ.
ಐಸ್ ಕ್ರೀಮ್ ಡೇ
1984ರಿಂದ ಯುನೈಟೆಡ್ ಸ್ಟೇಟ್ಸ್ ನಲ್ಲಿ 3ನೇ ರವಿವಾರವನ್ನು ನ್ಯಾಶನಲ್ ಐಸ್‌ಕ್ರೀಮ್ ಡೇ ಎಂದು ಆಚರಿಸುತ್ತಿದ್ದಾರೆ (ಈ ಬಾರಿ ಜು. 15). ಈ ಆಚರಣೆಗೆ ವಿಶ್ವ ಸಂಸ್ಥೆ ಮಾನ್ಯತೆ ನೀಡದಿದ್ದರೂ ಐಸ್‌ಕ್ರೀಮ್ ಆಸ್ವಾದಿಸುವವರು ಹೆಚ್ಚಾಗಿರುವುದರಿಂದ ಇದನ್ನು ಎಲ್ಲೆಡೆ ಆಚರಿಸಲಾಗುತ್ತಿದೆ.
ಮಂಗಳೂರಿನಲ್ಲಿಯೂ ಪುಟ್ಟ ಇತಿಹಾಸ
ಮಂಗಳೂರಿನಲ್ಲಿ ಈಗಾಗಲೇ ಸುಮಾರು 15ಕ್ಕೂ ಹೆಚ್ಚು ಐಸ್ ಕ್ರೀ ಮ್ ಪಾರ್ಲರ್‌ಗಳು ಈಗ ಕಾರ್ಯ ನಿರ್ವಹಿಸುತ್ತಿವೆ. ಮಂಗಳೂರು ಮತ್ತು ಐಸ್ ಕ್ರೀ ಮ್‌ಗೆ ಎಷ್ಟು ವರ್ಷದ ನಂಟು ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ. ಆದರೆ ಕೆಲವು ಐಸ್ ಕ್ರೀ ಮ್ ಪಾರ್ಲರ್‌ಗಳ ಸಿಬಂದಿ ಪ್ರಕಾರ, ಬಾವುಟಗುಡ್ಡೆಯಲ್ಲಿ ರೆಯಾನ್ಸ್ ಐಸ್ ಕ್ರೀಮ್ ಅಂಗಡಿ 1960ರ ಹೊತ್ತಿನಲ್ಲಿ ಕಾರ್ಯಾಚರಿಸುತ್ತಿದ್ದು, ಬಹುತೇಕ ವಿದ್ಯಾರ್ಥಿಗಳು, ಸಾರ್ವಜನಿಕರು ಅಲ್ಲಿನ ಐಸ್ ಕ್ರೀಮ್ ಸವಿದದ್ದು ನೆನಪಿದೆ.
ಆದರೆ ಅದಕ್ಕೂ ಹಿಂದೆ ಬೇರೆ ಐಸ್ ಕ್ರೀಮ್ ಅಂಗಡಿಗಳು ಇತ್ತೇ ಎನ್ನುವ ಬಗ್ಗೆ ಮಾಹಿತಿ ಇಲ್ಲ ಎನ್ನುತ್ತಾರೆ ಆ ಸಂದರ್ಭದಲ್ಲಿ ವಿದ್ಯಾರ್ಥಿಯಾಗಿದ್ದ, ಈಗ ಐಸ್ ಕ್ರೀ ಮ್ ಪಾರ್ಲರ್‌ವೊಂದರಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬಂದಿಯೋರ್ವರು. ಇದರೊಂದಿಗೆ ನಗರದ ಹಂಪನಕಟ್ಟೆ, ರಥಬೀದಿ ಮುಂತಾದೆಡೆಗಳಲ್ಲಿಯೂ 1970ರ ವೇಳೆಗೆ ಸಣ್ಣ ಸಣ್ಣ ಐಸ್ ಕ್ರೀ ಮ್ ಅಂಗಡಿಗಳು ಕಾರ್ಯಾಚರಿಸುತ್ತಿದ್ದವು. ಬಳಿಕ 1974ರಲ್ಲಿ ಐಡಿಯಲ್ ಐಸ್‌ಕ್ರೀಮ್ ಪಾರ್ಲರ್ ಆರಂಭವಾಯಿತು. ಬಹುಶಃ ಮಂಗಳೂರಿನಲ್ಲಿ ಆರಂಭವಾದ ಮೊದಲ ಪಾರ್ಲರ್ ಇದೇ ಆಗಿದೆ. ಬಳಿಕ ವಿವಿಧ ಪಾರ್ಲರ್‌ಗಳೂ ಆರಂಭವಾದವು ಎನ್ನುತ್ತಾರೆ ಅವರು.
ಹೊಸ ಐಸ್ ಕ್ರೀಮ್ ಪರಿಚಯ
ಆರಂಭಿಕ ಹಂತದಲ್ಲಿ ಬೌಲ್, ಕೋನ್, ಕಪ್ ಐಸ್ ಕ್ರೀಮ್ ಮಾತ್ರ ಪ್ರಚಲಿತದಲ್ಲಿತ್ತು. ಬರುತ್ತಾ ಐಸ್ ಕ್ರೀಮ್‌ನಲ್ಲಿಯೇ ಹೊಸ ರುಚಿಗಳ ಅನ್ವೇಷಣೆ ಆರಂಭವಾಗಿ ನೂತನ ಫ್ಲೇವರ್, ಗಡ್‌ಬಡ್ ಮುಂತಾದವುಗಳನ್ನು ಸವಿಯುವ ಭಾಗ್ಯ ಐಸ್‌ಕ್ರೀ ಮ್ ಪ್ರಿಯರಿಗೆ ಲಭಿಸಿತು. ಇದರ ಜತೆಗೆ ಈ ಎಲ್ಲ ಪಾರ್ಲರ್‌ಗಳೂ ಚಿಕ್ಕು, ಬೊಂಡ, ಬಾಳೆಹಣ್ಣು, ಹಲಸಿನ ಹಣ್ಣು ಮುಂತಾದವುಗಳಲ್ಲೂ ಐಸ್ ಕ್ರೀಮ್ ತಯಾರಿಸಿ ಯಶಸ್ವಿಯಾದವು. ಹೊಸತಾಗಿ ಫಿಜಾ ಐಸ್ ಕ್ರೀಮ್, ಪಾನ್ ಐಸ್ ಕ್ರೀಮ್ ಗಳೂ ಗ್ರಾಹಕರನ್ನು ಆಕರ್ಷಿಸುತ್ತಿವೆ.
ಗಡ್ ಬಡ್ ಕಥೆ
ಎಲ್ಲರ ಬಾಯಲ್ಲೂ ನೀರೂರಿಸುವಂತೆ ಮಾಡುವ ಐಸ್‌ಕ್ರೀಮ್‌ನಲ್ಲಿ ಹೆಸರು ಕೇಳಿದ್ರೆ ಮೊದಲು ನೆನಪಿಗೆ ಬರುವುದು ಗಡ್‌ಬಡ್. ಇದಕ್ಕೆ ಕನ್ನಡದಲ್ಲಿ ಎಡವಟ್ಟು ಎಂಬ ಅರ್ಥವಿದೆ. ಗಡ್‌ಬಡ್ ಹೆಸರಿನಷ್ಟೇ ವಿಚಿತ್ರ ಇದರ ಆರಂಭದ ಕಥೆ. ಗಡ್‌ಬಡ್ ಅನ್ನೋ ಐಸ್‌ಕ್ರೀಮ್ ಹುಟ್ಟಿದ್ದು ಉಡುಪಿಯ ಡಯಾನ ಸರ್ಕಲ್ ಬಳಿ ಇದ್ದ ಡಯಾನ ಹೊಟೇಲ್‌ನಲ್ಲಿ. ಹೊಟೇಲ್‌ಗೆ ಬಂದಿದ್ದ ಪ್ರವಾಸಿಗರು ಐಸ್‌ಕ್ರೀಮ್ ಕೇಳುತ್ತಾರೆ. ಆದರೆ ಇರುವ ಸ್ಟಾಕ್‌ನಲ್ಲಿ ಅಲ್ಲಿದ್ದವರಿಗೆ ಕೊಡುವಷ್ಟು ಐಸ್‌ಕ್ರೀಮ್ ಇರುವುದಿಲ್ಲ. ಆಗ ಹೊಟೇಲಿನ ಸಂಸ್ಥಾಪಕರಾದ ಮೋಹನ್‌ದಾಸ್ ಪೈ ಇರುವ ಐಸ್‌ಕ್ರೀಮ್ ಫ್ಲೇವರ್ ಗಳನ್ನು ಸೇರಿಸಿ ಒಂದು ಗ್ಲಾಸ್‌ಗೆ ಹಾಕಿ ಅದಕ್ಕೆ ಕತ್ತರಿಸಿದ ಹಣ್ಣುಗಳು, ಡ್ರೈಫ್ರುಟ್ಸ್, ಜೆಲ್ಲಿ ಮತ್ತು ಸಾಸ್ ಮಿಕ್ಸ್ ಮಾಡಿ ಕೊಟ್ಟರು. ಇದು ಪ್ರವಾಸಿಗರಿಗೆ ಪ್ರಿಯವಾಗುತ್ತದೆ. ಇದರ ಹೆಸರೇನು ಎಂದು ಅವರು ಕೇಳಿದಾಗ ಪೈ ಅವರು, ಗಡಿಬಿಡಿಯಲ್ಲಿ (ಅವಸರ) ಮಾಡಿದ್ದರಿಂದ ಅದರ ಹೆಸರು ‘ಗಡಿಬಿಡಿ’ ಎನ್ನುತ್ತಾರೆ. ಇದು ಮುಂದೆ ಗಡ್‌ಬಡ್ ಎಂದು ಖ್ಯಾತಿ ಪಡೆ ದು, ಹೊಟೇಲ್ ಮೆನುವಿನಲ್ಲೂ ಸೇರಿಕೊಂಡಿತು.
ಆರೋಗ್ಯಕಾರಿ ಐಸ್‌ಕ್ರೀಮ್
ಐಸ್ ಕ್ರೀಮ್ ತಿಂದರೆ ಶೀತ, ಜ್ವರ ಬರತ್ತೆ ಇಂತಹ ಹತ್ತಾರು ಮಾತುಗಳನ್ನು ನಾವೆಲ್ಲ ಕೇಳಿರುತ್ತೇವೆ. ಆದರೆ ಯಾರೂ ಹೇಳಿರದ ವಿಷಯ ಏನಪ್ಪಾ ಅಂದರೆ ಐಸ್ ಕ್ರೀಂ ತಿನ್ನೋದರಿಂದ ದೇಹಕ್ಕೆ ಒಂದಿಷ್ಟು ಲಾಭಗಳಿವೆ. ನೀವು ಯಾವ ತರಹದ ಐಸ್‌ಕ್ರೀಮ್ ಪ್ರಿಯರಾಗಿದ್ದರೂ ನೀವದನ್ನು ತಿಂದಾಗ ಅದರ ಜತೆ ಜತೆಗೆ ಒಂದಿಷ್ಟು ವಿಟಮಿನ್, ಖನಿಜಗಳು ದೇಹ ಸೇರೋದು ಮಾತ್ರ ಪಕ್ಕಾ.
ವಿಟಮಿನ್‌ಗಳ ಆಗರ
ಐಸ್‌ಕ್ರೀಮ್‌ನಲ್ಲಿ ವಿಟಮಿನ್ ಎ, ಬಿ6, ಬಿ12, ಸಿ, ಡಿ ಮತ್ತು ಇ ಗಳು ಹೇರಳವಾಗಿವೆ. ರಕ್ತ ಹೆಪ್ಪುಗಟ್ಟಿಕೆಯನ್ನು ತಡೆಗಟ್ಟಲು ಆವಶ್ಯಕ ವಾಗಿರುವ ವಿಟಮಿನ್ ಕೆ ಸಹ ಇದೆ. ಇವುಗಳಲ್ಲದೆ ನಿಯಾಸಿನ್, ತಿಯಾಮೈನ್, ರಿಬೋಫ್ಲಾವಿನಗಳು ಕೂಡ ಇವೆ. ಅಲ್ಲದೆ ದೇಹಕ್ಕೆ ಆವಶ್ಯಕವಾಗಿರುವ ಕಾಬೋìಹೈಡ್ರೇಟ್ಸ್, ಪ್ರೋಟಿನ್ಸ್ ಮತ್ತು ಕೊಬ್ಬನ್ನು ಹೊಂದಿವೆ. ಇವುಗಳು ದೇಹದ ಅಂಗಾಂಗ, ಸ್ನಾಯುಗಳ ಬೆಳವಣಿಗೆಗೆ ಸಹಕಾರಿ.
ಖನಿಜಗಳು
ಕ್ಯಾಲ್ಯಿಯಂ, ಫೋಸ್ಪರ್ಗಳನ್ನು ಐಸ್‌ಕ್ರೀಂಗಳು ಹೊಂದಿವೆ. ಮೂಳೆಗಳನ್ನು ಬಲಿಷ್ಠಗೊಳಿ ಸುವುದರ ಜತೆಗೆ ಕಿಡ್ನಿಗಳಲ್ಲಿ ಕಲ್ಲುಗಳು ಉಂಟಾಗುವುದನ್ನು ತಡೆಯಲು ಇದು ಸಹಕಾರಿ.
ಮನಸ್ಥಿತಿಯ ನಿಯಂತ್ರಣ
ಐಸ್‌ಕ್ರೀಂ ತಿನ್ನುವುದರಿಂದ ಮನಸ್ಥಿತಿಯ ಏರುಪೇರು ಹತೋಟಿಗೆ ಬರುತ್ತವೆ ಎಂಬುದನ್ನು ವೈಜ್ಞಾನಿಕ ಸಂಶೋಧನೆಗಳು ದೃಢಪಡಿಸಿವೆ. ಒತ್ತಡ ನಿವಾರಣೆ ಮತ್ತು ಸಂತೋಷಕ್ಕೆ ಕಾರಣವಾಗಿರುವ ಥ್ರೋಂಬೋಟೊನಿನ್ ಹಾರ್ಮೋನ್‌ಗಳ ಉತ್ಪಾದನೆ ಇವು ಸಹಕಾರಿಯಾಗಿವೆ. ಅಲ್ಲದೆ ನರಮಂಡಲದ ಒತ್ತಡ ನಿವಾರಣೆ ಮತ್ತು ನಿದ್ರಾಹೀನತೆಯನ್ನು ಗುಣಪಡಿಸಲೂ ಇವು ಉಪಯುಕ್ತ.
ದೇಹದ ತೂಕ ಇಳಿಕೆ
ತಂಪು ದೇಹದ ಉಷ್ಣಾಂಶ ಹೆಚ್ಚಳಕ್ಕೆ ಕಾರಣ. ತಂಪು ಪದಾರ್ಥಗಳು ದೇಹ ಸೇರುತ್ತಿದ್ದಂತೆಯೇ ದೇಹದ ಉಷ್ಣಾಂಶ ಹೆಚ್ಚಾಗುತ್ತದೆ. ಈ ಪ್ರಕ್ರಿಯೆಯಲ್ಲಿ ದೇಹವು ಕ್ಯಾಲೊರೀಸ್ ಮತ್ತು ಕೊಬ್ಬನ್ನು ಸುಡುತ್ತೆ. ಇದರಿಂದಾಗಿ ದೇಹದ ತೂಕ ಇಳಿಸಬಹುದು.
ತಾಜಾ ಹಣ್ಣಿನ ಸವಿ ನೀಡುವ ನ್ಯಾಚುರಲ್
ಪ್ರಕೃತಿ ಸಹಜವಾಗಿ ಬೆಳೆದ ಹಣ್ಣುಗಳನ್ನು ಸವಿದಷ್ಟೇ ಸುಮಧುರವಾದ ರುಚಿಯಿರುವ ಐಸ್‌ಕ್ರೀಮ್ ನ್ಯಾಚ್ಯುರಲ್. ಇದರ ವೈಶಿಷ್ಟ್ಯವೆಂದರೆ ಇದು ಯಾವುದೇ ಕೃತಕ ಸುವಾಸನೆ ಹೊಂದಿರದೇ ಸಂಪೂರ್ಣ ತಾಜಾ ಹಣ್ಣು ಹಾಗೂ ಒಣ ಹಣ್ಣನ್ನು ಬಳಸಿ ತಯಾರಿಸಲಾಗುತ್ತದೆ.
ಮಂಗಳೂರಿನ ಹೆಮ್ಮೆ
ನ್ಯಾಚುರಲ್ಸ್ ಐಸ್‌ಕ್ರೀಮ್ ಅನ್ನು ಮೊದಲು ಭಾರತದ ಮಾರುಕಟ್ಟೆ ಮೂಲಕ ವಿಶ್ವಕ್ಕೆ ರುಚಿ ತೋರಿಸಿದವರು ಮಂಗಳೂರು ಮೂಲದ ರಘುನಂದನ್ ಕಾಮತ್. ಅವರು ವಾಯವ್ಯ ಮುಂಬಯಿಯ ಉಪನಗರ ಜುಹೊದಲ್ಲಿ 1984ರಲ್ಲಿ ನ್ಯಾಚ್ಯುರಲ್ಸ್ ಐಸ್‌ಕ್ರೀಮ್ ಉದ್ಯಮ ಆರಂಭಿಸಿದರು.
ಮಾಹಿತಿ : ಪ್ರಸನ್ನ ಹೆಗಡೆ ಊರಕೇರಿ, ಭರತ್‌ರಾಜ್ ಕರ್ತಡ್ಕ, ಶಿವ ಸ್ಥಾವರಮಠ, ಕಾರ್ತಿಕ್ ಅಮೈ, ಧನ್ಯಾ ಬಾಳೆಕಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ
B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ
Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.