ತಣ್ಣೀರುಬಾವಿ ಬೀಚ್; ಬ್ಲೂ ಫ್ಲ್ಯಾಗ್‌ನ ಮಹತ್ವದ ಕಾಮಗಾರಿಗೆ ಅಸ್ತು
ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ನಿರೀಕ್ಷೆ
Team Udayavani, Sep 23, 2022, 2:19 PM IST
ಮಹಾನಗರ: ಪಡುಬಿದ್ರಿ ಬೀಚ್ ಅಂತಾರಾಷ್ಟ್ರೀಯ ಬ್ಲೂಫ್ಲ್ಯಾಗ್ ಮಾನ್ಯತೆ ಪಡೆದಿರುವ ಬೆನ್ನಲ್ಲೇ ಮಂಗಳೂರಿನ ತಣ್ಣೀರು ಬಾವಿ ಬೀಚ್ ಕೂಡ ಬ್ಲೂಫ್ಲ್ಯಾಗ್ ಮಾನ್ಯತೆಗಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಇದಕ್ಕೆ ಪೂರ್ವ ಭಾವಿಯಾಗಿ ಬೀಚ್‌ನಲ್ಲಿ ಹಲವು ಮಹತ್ವದ ಕಾಮಗಾರಿಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ.
ಕೇಂದ್ರ ಅರಣ್ಯ ಮಂತ್ರಾಲಯದ ಚೆನ್ನೈನಲ್ಲಿರುವ “ಎನ್‌ಸಿಎಸ್‌ಸಿಎಂ’, ಹೊಸ ದಿಲ್ಲಿಯ “ಸೈಕೋಮ್’ ಸಂಸ್ಥೆಯ ಪ್ರತಿನಿಧಿಗಳ ತಂಡ ಕೆಲವು ತಿಂಗಳ ಹಿಂದೆ ತಣ್ಣೀರುಬಾವಿ ಬೀಚ್‌ಗೆ ಭೇಟಿ ನೀಡಿ ಪ್ರಾಥಮಿಕ ಪರಿಶೀಲನೆ ನಡೆಸಿತ್ತು. ಇಲ್ಲಿನ ತೀರ ಪ್ರದೇಶದ ಬಗ್ಗೆ ಪ್ರತಿನಿಧಿಗಳು ಅಧ್ಯಯನ ನಡೆಸಿ ಕೇಂದ್ರ ಸರಕಾರಕ್ಕೆ ವರದಿ ನೀಡಿದ್ದರು.
ಇದರ ಆಧಾರದಲ್ಲಿ ತಣ್ಣೀರುಬಾವಿ ಬೀಚ್‌ನಲ್ಲಿ ಕೈಗೊಳ್ಳಬೇಕಾದ ಸೌಕರ್ಯಗಳನ್ನು ತುರ್ತಾಗಿ ನಡೆಸಲು ವರದಿ ಸಲ್ಲಿಸಲಾಗಿತ್ತು. ಇದರಂತೆ ಈಗಾಗಲೇ ಟೆಂಡರ್ ಕರೆದು ಯೋಜನಾ ಸಂಸ್ಥೆಯನ್ನು ನಿಗದಿ ಮಾಡಲಾಗಿದ್ದು, ವಿವಿಧ ಕಾಮಗಾರಿ ನಡೆಸಲು ನಿರ್ದೇಶನ ನೀಡಲಾಗಿದೆ. ಕಾಮಗಾರಿ ಪೂರ್ಣವಾದ ಬಳಿಕ ಅದನ್ನು ಪರಿಶೀಲಿಸಿ ಕೇಂದ್ರ ಸರಕಾರವು ಡೆನ್ಮಾರ್ಕ್‌ನಲ್ಲಿರುವ ಫೌಂಡೇಶನ್ ಫಾರ್ ಎನ್ವಿರಾನ್ಮೆಂಟ್ ಎಜುಕೇಶನ್ ಸಂಸ್ಥೆಗೆ ವರದಿ ಕಳುಹಿಸಿ ಬ್ಲೂ ಫ್ಲ್ಯಾಗ್ ಮಾನ್ಯತೆ ನೀಡಲು ಕೋರಲಾಗುತ್ತದೆ. ಇದರ ಆಧಾರದಂತೆ ಡೆನ್ಮಾರ್ಕ್ ತಂಡ ತಣ್ಣೀರುಬಾವಿಗೆ ಆ ಬಳಿಕ ಆಗಮಿಸಿ, ಮಾನ್ಯತೆ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಿದೆ.
ದೇಶದ ಎಂಟು ಬೀಚ್‌ಗಳಿಗೆ ಬ್ಲೂ ಫ್ಲ್ಯಾಗ್ ಮಾನ್ಯತೆ ಕಳೆದ ವರ್ಷ ಅ. 11ರಂದು ದೊರೆತಿದ್ದು, ಈ ಪೈಕಿ ರಾಜ್ಯದ ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಕಾಸರಕೋಡು, ಉಡುಪಿ ಪಡುಬಿದ್ರೆಯ ಕಡಲ ತೀರಗಳು ಬ್ಲೂ ಫ್ಲ್ಯಾಗ್ ಮಾನ್ಯತೆ ಹೊಂದಿವೆ. ಪ್ರವಾಸೋದ್ಯಮ ಇಲಾಖೆ ದ.ಕ. ಉಪನಿರ್ದೇಶಕ ಮಾಣಿಕ್ಯ ಅವರು “ಸುದಿನ’ ಜತೆಗೆ ಮಾತನಾಡಿ, “ಬ್ಲೂ ಫ್ಲ್ಯಾಗ್ ಮಾನ್ಯತೆಯ ಪೂರ್ವಭಾವಿ ಕಾಮಗಾರಿಗಳಿಗೆ ಸೆ. 27ರಂದು ಚಾಲನೆ ನೀಡಲಾ ಗ ವುದು. ಬಳಿಕ ಇಲ್ಲಿ ವಿವಿಧ ಆಯಾಮದ ಕೆಲಸಗಳು ನಡೆಯಲಿವೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಇಲ್ಲಿ ಮಹತ್ವದ ಬದಲಾವಣೆ ನಿರೀಕ್ಷಿಸಲಾಗಿದೆ’ ಎಂದರು.
ಏನಿದು ಬ್ಲೂಫ್ಲ್ಯಾಗ್?
ಕಡಲ ತೀರ (ಬೀಚ್)ಗಳಲ್ಲಿನ ಸ್ವಚ್ಛತೆ, ಪರಿಸರ ಸ್ನೇಹಿ ವಾತಾವರಣ ಮತ್ತಿತರ ಅಂಶಗಳನ್ನು ಪರಿಗಣಿಸಿ ಪರಿಸರ ಶಿಕ್ಷಣ ವೇದಿಕೆ (ಎಫ್.ಇ.ಇ.-ಫೌಂಡೇಶನ್ ಫಾರ್ ಎನ್ವಿರಾನ್ಮೆಂಟ್ ಎಜುಕೇಷನ್) ಬ್ಲೂ ಫ್ಲ್ಯಾಗ್ ಪ್ರಮಾಣ ಪತ್ರ ನೀಡುತ್ತದೆ. ಅಂತಾರಾಷ್ಟ್ರೀಯ ಮಟ್ಟದ ಡೆನ್ಮಾರ್ಕ್‌ನಲ್ಲಿರುವ ಈ ಸಂಸ್ಥೆಯು ಪರಿಸರ ಶಿಕ್ಷಣ ಹಾಗೂ ಮಾಹಿತಿ, ನೀರಿನ ಗುಣಮಟ್ಟ, ಪರಿಸರ ನಿರ್ವಹಣೆ, ಸಂರಕ್ಷಣೆ, ಭದ್ರತೆ ಹಾಗೂ ಸೇವೆ ಎಂಬ ಪ್ರಮುಖ ಭಾಗಗಳಲ್ಲಿ 33 ಮಾನದಂಡಗಳನ್ನಿಟ್ಟುಕೊಂಡು ಈ ಮಾನ್ಯತೆ ನೀಡುತ್ತದೆ. ಇದನ್ನು ಭಾರತ ಸಹಿತ 47 ರಾಷ್ಟ್ರಗಳು ಮಾನ್ಯ ಮಾಡಿವೆ. ಇಂತಹ ಪ್ರಮಾಣಪತ್ರ ಪಡೆದ ಬೀಚ್‌ಗಳಲ್ಲಿ ನೀಲಿ ಬಣ್ಣದ ಧ್ವಜಾರೋಹಣ ಮಾಡಲಾಗುತ್ತದೆ. ವಿದೇಶಗಳಲ್ಲಿ ಇಂತಹ ಪ್ರಮಾಣಪತ್ರ ಪಡೆದ ಬೀಚ್‌ಗಳಿಗೆ ಪ್ರವಾಸಿಗರು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಹೀಗಾಗಿ ಭಾರತೀಯ ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಇಂತಹ ಪ್ರಮಾಣಪತ್ರ ಪಡೆಯುವುದು ಅತ್ಯಂತ ಪ್ರಮುಖವಾಗಿದೆ.
ಬೀಚ್‌ನಲ್ಲಿ ಕೈಗೊಳ್ಳಬಹುದಾದ ನಿರೀಕ್ಷಿತ ಕಾಮಗಾರಿ
*ಶುದ್ಧ ಕುಡಿಯುವ ನೀರು
*ಸುಸಜ್ಜಿತ ಶೌಚಾಲಯ
*ಸೋಲಾರ್ ಪವರ್
*ತ್ಯಾಜ್ಯ ನಿರ್ವಹಣಾ ಘಟಕ
*ಪ್ರವಾಸಿಗರಿಗೆ ಅತ್ಯುತ್ತಮ ಕಾಲುದಾರಿ
*ಲ್ಯಾಂಡ್‌ಸ್ಕೇಪಿಂಗ್ ಲೈಟಿಂಗ್
*ಕುಳಿತುಕೊಳ್ಳಲು ವ್ಯವಸ್ಥೆ
*ಹೊರಾಂಗಣ ಕ್ರೀಡಾಕೂಟದ ಪರಿಕರ, ವ್ಯವಸ್ಥೆ
*ಸಿಸಿಟಿವಿ/ ಕಂಟ್ರೋಲ್ ರೂಂ
*ಪ್ರಥಮ ಚಿಕಿತ್ಸಾ ಕೇಂದ್ರ
*ಭದ್ರತೆಗಾಗಿ ವಾಚ್ ಟವರ್
*ಬೀಚ್ ಸುತ್ತ ಪರಿಸರ ಸೂಕ್ತ ವ್ಯವಸ್ಥೆ
*ಪಾರ್ಕಿಂಗ್ ವ್ಯವಸ್ಥೆ
ಸೆ. 27: ಶಂಕುಸ್ಥಾಪನೆ: ಬಹುನಿರೀಕ್ಷಿತ ತಣ್ಣೀರುಬಾವಿ ಬೀಚ್‌ನಲ್ಲಿ ಅಭಿವೃದ್ಧಿ ಚಟುವಟಿಕೆಗಳು ವಿವಿಧ ಹಂತದಲ್ಲಿ ನಡೆಯಲಿದೆ. ಈ ಮುಖೇನ ಬ್ಲೂ ಫ್ಲ್ಯಾಗ್ ಮಾನ್ಯತೆ ಶೀಘ್ರ ಪ್ರಾಪ್ತವಾಗಲಿದೆ. ಈ ಸಂಬಂಧ ಕೈಗೊಳ್ಳಬೇಕಾಗಿರುವ ಕಾಮಗಾರಿಗಳಿಗೆ ಸೆ. 27ರಂದು ಶಂಕುಸ್ಥಾಪನೆ ನಡೆಸಲು ನಿರ್ಧರಿಸಲಾಗಿದೆ. –ಡಾ| ಭರತ್ ಶೆಟ್ಟಿ ವೈ., ಶಾಸಕರು
ವರದಿ ಆಧಾರಿತ ಯೋಜನೆ: ತಣ್ಣೀರುಬಾವಿ ಬೀಚ್ ಬ್ಲೂ ಫ್ಲ್ಯಾಗ್ ಮಾನ್ಯತೆಗೆ ಸಂಬಂಧಿಸಿದ ಈಗಾಗಲೇ ಶಿಫಾರಸು ಆಗಿದೆ. ಇದರ ಆಧಾರದಲ್ಲಿ ಕೇಂದ್ರ ಅರಣ್ಯ ಮಂತ್ರಾಲಯದ ಸಂಸ್ಥೆಯು ಪರಿಶೀಲನೆ ನಡೆಸಿದೆ. ಅವರ ವರದಿ ಆಧಾರಿತವಾಗಿ ಕೇಂದ್ರ ಸರಕಾರವು ಪ್ರವಾಸೋದ್ಯಮ ಪೂರಕ ವಿವಿಧ ಕಾಮಗಾರಿಯನ್ನು ಇಲ್ಲಿ ಕೈಗೆತ್ತಿಕೊಳ್ಳಲು ಟೆಂಡರ್ ಅಂತಿಮಗೊಳಿಸಲಾಗಿದೆ. ಕಾಮಗಾರಿ ಆದ ಬಳಿಕ ಬ್ಲೂ ಫ್ಲ್ಯಾಗ್ ಮಾನ್ಯತೆ ದೊರೆಯಲಿದೆ. –ಡಾ| ವೈ.ಕೆ. ದಿನೇಶ್‌ಕುಮಾರ್, ಪ್ರಾದೇಶಿಕ ನಿರ್ದೇಶಕರು, ದ.ಕ. ಪರಿಸರ ಇಲಾಖೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.