ಕದ್ರಿ ಸಂಗೀತ ಕಾರಂಜಿ; ಪ್ರವಾಸಿಗರಿಗೆ ತೆರೆದಿದ್ದಕ್ಕಿಂತ ಮುಚ್ಚಿದ್ದೇ ಹೆಚ್ಚು !
Team Udayavani, Feb 10, 2022, 7:41 PM IST
ಕದ್ರಿ: ದ.ಕ. ಜಿಲ್ಲೆಗೆ ಪ್ರವಾಸಿಗರನ್ನು ಆಕರ್ಷಿ ಸುವ ನಿಟ್ಟಿನಲ್ಲಿ ಕದ್ರಿ ಜಿಂಕೆ ಪಾರ್ಕ್‌ನಲ್ಲಿ ನಿರ್ಮಾಣ ಗೊಂಡ ಸಂಗೀತ ಕಾರಂಜಿ ಪ್ರವಾಸಿಗರಿಗೆ ತೆರೆದಿದ್ದಕ್ಕಿಂತ ಮುಚ್ಚಿದ್ದೇ ಹೆಚ್ಚು !
ನಾಲ್ಕು ವರ್ಷಗಳ ಹಿಂದೆ ಕದ್ರಿಯಲ್ಲಿ ಸಂಗೀತ ಕಾರಂಜಿ ಉದ್ಘಾಟನೆ ಗೊಂಡಿತ್ತು. ಈ ಪೈಕಿ ಎರಡು ವರ್ಷಗಳ ಕಾಲ ಕೋವಿಡ್ ಕಾರಣ ದಿಂದ ಪ್ರದರ್ಶನ ಸ್ಥಗಿತಗೊಂಡಿತ್ತು. ಉಳಿದ ಎರಡು ವರ್ಷಗಳಲ್ಲಿ ಮಳೆಗಾಲದ ನಿಟ್ಟಿನಲ್ಲಿ ಪ್ರತೀ ವರ್ಷ ಸುಮಾರು 4 ತಿಂಗಳ ಬಾಗಿಲು ಮುಚ್ಚಿತ್ತು. ಕೋವಿಡ್ ತೀವ್ರತೆ ಕಡಿಮೆಯಾದರೂ ಸಂಗೀತ ಕಾರಂಜಿಯಲ್ಲಿ ಸದ್ಯಕ್ಕೆ ನೀರು ಚಿಮ್ಮುವುದು ಅನುಮಾನ ಎನ್ನಲಾಗಿದೆ. ಕಾರಂಜಿ ಶೋ ಸಹಿತ ಮೂಲಸೌಕರ್ಯಕ್ಕೆಂದು ಟೆಂಡರ್ ಕರೆದರೂ, ಅದನ್ನು ವಹಿಸಲು ಬಿಡ್‌ದಾರರು ಮುಂದೆ ಬರದೆ ಅಂತಿಮಗೊಳ್ಳುತ್ತಿಲ್ಲ. ಮತ್ತೂಂದೆಡೆ ಸಂಘ-ಸಂಸ್ಥೆಗಳ ಸಿಎಸ್‌ಆರ್ ಅನುದಾನದಲ್ಲಿ ಅಥವಾ ಮುಡಾ ಮುಖೇನ ಅಭಿವೃದ್ಧಿ ಮಾಡಲು ಮಾತುಕತೆ ನಡೆಯುತ್ತಿದೆ. ಆದರೂ ಇನ್ನೂ ಅಂತಿಮಗೊಂಡಿಲ್ಲ.
ಕದ್ರಿ ಸಂಗೀತ ಕಾರಂಜಿಯಿಂದ ತಿಂಗಳಿಗೆ ಸುಮಾರು 70 ಸಾವಿರ ರೂ. ನಿರ್ವಹಣೆಯ ಖರ್ಚು ತಗಲುತ್ತದೆ. ಖರ್ಚಿನ ಶೇ. 10ರಷ್ಟು ಕೂಡ ಆದಾಯ ಬರುವುದಿಲ್ಲ.
ತಿಂಗಳಿಗೆ ಸುಮಾರು 35,000 ರೂ. ನಷ್ಟು ವಿದ್ಯುತ್ ಬಿಲ್ ಬರುತ್ತಿದೆ. ಅದರಂತೆ ಟೆಕ್ನೀಶಿಯನ್, ಸಿಬಂದಿಗೆ ತಿಂಗಳಿಗೆ ಒಟ್ಟಾರೆ ಸುಮಾರು 60 ಸಾವಿರ ರೂ. ಹಣ ಬೇಕು. ಕೋವಿಡ್‌ಗೂ ಮುನ್ನ ವಾರದಲ್ಲಿ ಒಂದು ದಿನ ಮಾತ್ರ ಕಾರಂಜಿ ಶೋ ನಡೆಯುತ್ತಿತ್ತು. ಕೇವಲ 5-7 ಮಂದಿ ವೀಕ್ಷಣೆಗೆ ಬರುತ್ತಿದ್ದಾರೆ. ಹೀಗಿದ್ದಾಗ ತಿಂಗಳಿಗೆ 5 ಸಾವಿರ ರೂ. ಕೂಡ ಆದಾಯ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟ ಉಂಟಾಗಿತ್ತು. ಅದನ್ನು ಸರಿದೂಗಿಸಿ ಪ್ರವಾಸಿಗರಿಗೆ ಆಕರ್ಷಿಸುವುದು ಇನ್ನೂ ಸವಾಲಾಗಿಯೇ ಇದೆ.
ಥೀಮ್‌ನಲ್ಲೂ ಬದಲಾವಣೆ ಅಗತ್ಯ
ನೀರಿನ ನರ್ತನ ಜತೆಗೆ ಯಕ್ಷಗಾನ, ಭೂತಾರಾಧನೆ, ಕಂಬಳ, ನಾಗಮಂಡಲ ಸಹಿತ ತುಳುನಾಡಿನ ಸಂಸ್ಕೃತಿ, ಪರಂಪರೆ, ಆಚರಣೆ ಸೇರಿದಂತೆ ವಿವಿಧ ಬಗೆಯ ಥೀಮ್‌ನಲ್ಲಿ ಸಂಗೀತ ಕಾರಂಜಿ ಪ್ರದರ್ಶನಗೊಳಿಸಲಾಗುತ್ತಿತ್ತು. ಶೋ ಪ್ರಾರಂಭವಾದಾಗಿನಿಂದಲೂ ಒಂದೇ ಕಲ್ಪನೆಯಲ್ಲಿ ಶೋ ಪ್ರದರ್ಶನಗೊಳಿಸಲಾಗುತ್ತಿದ್ದು, ವೀಕ್ಷಕರು ಕಡಿಮೆಯಾಗಲು ಇದು ಕೂಡ ಕಾರಣ ಎಂದು ಹೇಳಬಹುದು.
ಕದ್ರಿ ಸಂಗೀತ ಕಾರಂಜಿ ಉದ್ಘಾಟನೆಯಾದ ಬಳಿಕ ಮೂರು ತಿಂಗಳುಗಳ ಕಾಲ ಪ್ರವೇಶ ದರ ನಿಗದಿಪಡಿಸಿರಲಿಲ್ಲ. ಆದರೆ 2018ರ ಎ. 20 ರಿಂದ ಪ್ರದರ್ಶನಕ್ಕೆ ವಯಸ್ಕರಿಗೆ 50 ರೂ. ಮತ್ತು ಮಕ್ಕಳಿಗೆ 25 ರೂ. ನಿಗದಿಪಡಿಸಲಾಗಿತ್ತು. ಪ್ರವಾಸಿಗರ ಸಂಖ್ಯೆ ಕಡಿಮೆಯಾದ ಹಿನ್ನೆಲೆಯಲ್ಲಿ ಶೋ ದರ ಇಳಿಕೆಯಾಗಿದ್ದು, 6-12 ವರ್ಷದೊಳಗಿನವರಿಗೆ 15 ರೂ., ವಯಸ್ಕರಿಗೆ 30 ರೂ. ನಿಗದಿಯಾಗಿದೆ. ದರ ಕಡಿಮೆಯಾದರೂ, ಪ್ರವಾಸಿಗರ ಸಂಖ್ಯೆಯಲ್ಲೇನೂ ಗಮನಾರ್ಹ ಏರಿಕೆ ಕಂಡಿರಲಿಲ್ಲ.
5 ಕೋಟಿ ರೂ.ನಲ್ಲಿ ನಿರ್ಮಾಣ
ಕದ್ರಿ ಜಿಂಕೆ ಪಾರ್ಕ್ ಬಳಿ ಹಳೆ ಮೃಗಾಲಯದಲ್ಲಿ ಮುಡಾ ವತಿಯಿಂದ 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಸಂಗೀತ ಕಾರಂಜಿಯನ್ನು 2018ರ ಜ. 7ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದ್ದರು. ಕಾಮಗಾರಿ ಪೂರ್ಣಗೊಂಡು ಆರು ತಿಂಗಳ ಬಳಿಕ ಕಾರಂಜಿ ಉದ್ಘಾಟಿಸಲಾಗಿತ್ತು. ಅಂದಿನ ಶಾಸಕ ಜೆ.ಆರ್. ಲೋಬೋ ಅವರ ನೇತೃತ್ವದಲ್ಲಿ ಸಂಗೀತ ಕಾರಂಜಿ ತಲೆ ಎತ್ತಿತ್ತು. ಕಾರಂಜಿ ಕಾಮಗಾರಿಯನ್ನು ಬೆಂಗಳೂರಿನ ಬಿಎನ್‌ಎ ಟೆಕ್ನಾಲಜಿ ಕಂಪೆನಿ ವಹಿಸಿತ್ತು. ಇಲ್ಲಿ ಬಣ್ಣದ ಕಾರಂಜಿ ಮಾತ್ರವಲ್ಲದೆ, ಲೇಸರ್ ಲೈಟ್ ತಂತ್ರಜ್ಞಾನ ವ್ಯವಸ್ಥೆಯನ್ನು ಬಳಸಲಾಗಿದೆ.
ಸೊಳ್ಳೆ ಉತ್ಪತ್ತಿ ತಾಣವಾಗುತ್ತಿದೆ ಕಾರಂಜಿ ಕೊಳ
ಕದ್ರಿಯ ಜಿಂಕೆ ಉದ್ಯಾನವನದಲ್ಲಿರುವ ಸಂಗೀತ ಕಾರಂಜಿಯಲ್ಲಿ ನೀರು ಚಿಮ್ಮದೆ ಎರಡು ವರ್ಷ ಕಳೆಯುತ್ತಿದೆ. ಕಾರಂಜಿ ಕೊಳದಲ್ಲಿ ಪೈಪ್‌ಲೈನ್ ಸುತ್ತಮುತ್ತ ಕೊಳಚೆ ನೀರು ತುಂಬಿಕೊಂಡಿದೆ. ಸುತ್ತಲೂ ಪಾಚಿಯಿಂದಾಗಿ ಸೊಳ್ಳೆ ಉತ್ಪತ್ತಿ ತಾಣವಾಗಿ ಮಾರ್ಪಾಡಾಗುತ್ತಿದೆ. ಇದಕ್ಕೆ ಹೊಂದಿಕೊಂಡಿರುವ ಪಾರ್ಕ್‌ಗೆ ಪ್ರತೀ ದಿನ ಹತ್ತಾರು ಮಂದಿ ಆಗಮಿಸುತ್ತಿದ್ದು, ಆ ಪ್ರದೇಶದಲ್ಲಿ ಸೊಳ್ಳೆ ಕಾಟ ಹೆಚ್ಚಾಗಿ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ ಎನ್ನುತ್ತಾರೆ ಸ್ಥಳೀಯರು.
ಕಾರಂಜಿ ಆರಂಭಗೊಂಡಿಲ್ಲ
ಕದ್ರಿಯ ಜಿಂಕೆ ಪಾರ್ಕ್ ಮಾತ್ರ ಸಾರ್ವಜನಿಕರ ಪ್ರವೇಶಕ್ಕೆ ತೆರೆದಿದೆ. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಸಂಗೀತ ಕಾರಂಜಿ ಇನ್ನೂ ಆರಂಭಗೊಂಡಿಲ್ಲ. ಕಾರಂಜಿಯ ನಿರ್ವಹಣೆಯ ಕುರಿತಂತೆ ಟೆಂಡರ್ ಇನ್ನೂ ಅಂತಿಮಗೊಂಡಿಲ್ಲ. ಈ ಬಗ್ಗೆ ಜಿಲ್ಲಾಡಳಿತದ ಜತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ.
-ಜಾನಕಿ,
ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
MUST WATCH
ಹೊಸ ಸೇರ್ಪಡೆ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.