ಇತಿಹಾಸ ಪ್ರಸಿದ್ಧವಾಗಿದ್ದ ಗ್ರಾಮದಲ್ಲಿ ಹಲವು ಸಮಸ್ಯೆ; ಮಳಲಿಗೆ ಮರಳಲಿ ಗತವೈಭವ
Team Udayavani, Aug 5, 2022, 12:22 PM IST
ಕೈಕಂಬ: ಒಂದು ಕಾಲದಲ್ಲಿ ವಾಣಿಜ್ಯ ನಗರಿಯಾಗಿ ಐತಿಹಾಸಿಕ ಪ್ರಸಿದ್ಧಿಯನ್ನು ಪಡೆದಿದ್ದ ಗ್ರಾಮದ ಗತ ವೈಭವ ಮರಳಲಿ ಎಂಬ ಆಶಯ ಸ್ಥಳೀಯರಿಂದ ವ್ಯಕ್ತವಾಗುತ್ತಿದೆ.
ತೆಂಕುಳಿಪಾಡಿ ಗ್ರಾಮ ವ್ಯಾಪ್ತಿಗೆ ಸೇರಿರುವ ಪಲ್ಗುಣಿ ನದಿಯ ಬಯಲು ಪ್ರದೇಶದಲ್ಲಿರುವ ಮಣೇಲ್ ಪೇಟೆ ಈಗೀನ ಮಳಲಿ ಈ ಹಿಂದೆ ವ್ಯಾಣಿಜ್ಯ ನಗರಿಯಾಗಿ, ವ್ಯಾಪಾರ ಚಟುವಟಿಕೆಯ ಕೇಂದ್ರವಾಗಿ ಪ್ರಸಿದ್ಧಿಯಾಗಿತ್ತು. ಆದರೆ ಈಗ ಇದು ಇತಿಹಾಸಕ್ಕೇ ಸೀಮಿತವಾಗಿದೆ.
ಇತಿಹಾಸದಲ್ಲಿ ಉಲ್ಲೇಖ
ಮಣ್ಣ್‌ದ ಇಲ್ಲ್ (ಮಣ್ಣಿನ ಮನೆ) ಎಂಬುದರಿಂದ “ಮಣೇಲ್’ ಎಂಬ ಹೆಸರು ಪಡೆದ ಈ ಪ್ರದೇಶವನ್ನು ಚೌಟ ವಂಶದ ಜೈನ ಮನೆತನದ ರಾಣಿ ಅಬ್ಬಕ್ಕ 15 ನೇ ಶತಮಾನದಲ್ಲಿ ಆಳುತ್ತಿದ್ದಳು. ರಾಣಿಯ ಸಂದರ್ಶನ ಪಡೆಯಲು ಮಣೇಲ್‌ಗೆ ಬಂದ ಇಟಲಿಯ ಬರಹಗಾರ ಪಿತ್ರೋದಲ್ಲಾವೆಲ್ಲ ತನ್ನ ಪುಸ್ತಕ “ಬ್ಯಾರ್ ಪುಟಡ್ ಕ್ಯುನ್’ (“ಬರಿಗಾಲ ರಾಣಿ’)ನಲ್ಲಿ ಇಲ್ಲಿನ ಕೃಷಿ ಮತ್ತು ವ್ಯಾಪಾರ ವಹಿವಾಟು, ಆಡಳಿತ ವ್ಯವಸ್ಥೆಗಳ ಬಗ್ಗೆ ಕೃತಿಯಲ್ಲಿ ವಿವರಿಸಿದ್ದಾನೆ.
ಅಲ್ಲದೇ 13ನೇ ಶತಮಾನದ ಶ್ರೀ ಸೂರ್ಯನಾರಾಯಣ ದೇವಸ್ಥಾನ, ಶ್ರೀ ಅನಂತನಾಥ ಸ್ವಾಮಿ ಜೈನ ಬಸದಿ ಪ್ರದೇಶಗಳ ಬಗ್ಗೆಯೂ ತಿಳಿಸಿ ದ್ದಾನೆ. ಬೆರ್ಮರಗುಡ್ಡೆಯಲ್ಲಿ ಬೆರ್ಮರೆ ದೈವಸ್ಥಾನ ನಾರಾಯಣ, ದೇವರ ಗುಡ್ಡೆಯಲ್ಲಿ ಸೂರ್ಯನಾರಾಯಣ ದೇವಸ್ಥಾನವನ್ನು ಮತ್ತು ಕಟ್ಟೆಮಾರ್ ಮನೆಯ ಹತ್ತಿರದಲ್ಲಿಯೇ ಇದ್ದ ಮನೆಯನ್ನು ರಾಣಿ ಅಬ್ಬಕ್ಕನ ಮನೆಯೆಂದು ಹೇಳಿರುವುದು ಇಲ್ಲಿನ ಇತಿಹಾಸಕ್ಕೆ ಬಲವಾದ ಸಾಕ್ಷಿಯನ್ನು ನೀಡಿದೆ. ಇದರಲ್ಲಿ ಕೆಲವು ಭಾಗಗಳು ಪ್ರಸ್ತುತ ಮೊಗರು ಹಾಗೂ ಬಡಗುಳಿಪಾಡಿ ಗ್ರಾಮ ವ್ಯಾಪ್ತಿಗೆ ಸೇರಿದೆ. ರಾಣಿ ಅಬ್ಬಕ್ಕ ಉಳ್ಳಾಲದಿಂದ ನದಿಯಲ್ಲಿ ದೋಣಿ ಮೂಲಕ ಬಂದು ಮಣೇಲ್ ಬಚ್ಚಿತ್ತಿಲ್ ಎಂಬಲ್ಲಿ ಸಣ್ಣ ಹೊಳೆಗೆ ಅಡ್ಡವಾಗಿ ಕಟ್ಟ ಕಟ್ಟಿ ಅದರ ನೀರನ್ನು ಹಲವು ಕಿ.ಮೀ. ದೂರದವರೆಗೆ ಹರಿಯುವಂತೆ ಮಾಡಿ ಬೇಸಾಯ ಮಾಡುತ್ತಿದ್ದಳು. ಅಲ್ಲದೇ ಗುರುಪುರ ನದಿಯ ಬದಿ ಪ್ರದೇಶವಾದ ಅಮುಚದ ಬಾಗಿಲು ಎಂಬಲ್ಲಿ ದೋಣಿಯಲ್ಲಿ ತಂದ ಸರಕು ಇಳಿಸುವ ಮತ್ತು ಸಾಗಿಸುವ ವ್ಯವಸ್ಥೆ ಮಾಡಿಸಿದ್ದಳು ಎನ್ನಲಾಗುತ್ತಲಾ ಈ ಸ್ಥಳದಲ್ಲಿ ಹಳೆಯ ಕಲ್ಲಿನ ರಚನೆ, ಕುರುವೆಮಾರು ಮಾರುತಿ ದೇವಸ್ಥಾನದ ಹತ್ತಿರದ ಬಂಡೆಯ ಮೇಲೆ ರಾಣಿ ಅಬ್ಬಕ್ಕ ನಿರ್ಮಿಸಿದ ಬುರುಜುವಿನ ತಳಪಾಯದ ರಚನೆ ಈಗಲೂ ಕಾಣಸಿಗುತ್ತದೆ. ಗುರುಪುರ ಸೇತುವೆ ನಿರ್ಮಾಣದ ಮೊದಲು ಮಂಗಳೂರು – ಮಣೇಲ್‌ಗೆ ನೇರ ವಾಣಿಜ್ಯ ವ್ಯವಹಾರ ನಡೆಯುತ್ತಿತ್ತು. ಬಂದರಿನಿಂದ ದೋಣಿಯಲ್ಲಿ ಸರಕುಗಳು ಕೂಳೂರು, ಗುರುಪುರ, ಮಲ್ಲೂರು, ಅಡೂxರಿನಿಂದ ಮಣೇಲ್‌ಗೆ ಬರುತ್ತಿತ್ತು. ಮಣೇಲ್ ಪೇಟೆಯಿಂದಲೇ ಪರಿಸರದ ಪ್ರದೇಶಗಳಿಗೆ ಸರಕು ಸಾಮಗ್ರಿಗಳ ರವಾನೆಯಾಗುತ್ತಿತ್ತು. ಇದರಿಂದಲೇ “ಮಣೇಲ್’ ಪ್ರಸಿದ್ಧ ಪೇಟೆಯಾಗಿತ್ತು. ಪೊಳಲಿ ಜಾತ್ರಾ ಸಂದರ್ಭದಲ್ಲಿ ಪೊಳಲಿ ಚೆಂಡು ಮಣೇಲ್ ಮತ್ತು ಅಮ್ಮುಂಜೆ ಗ್ರಾಮಸ್ಥರ ನಡುವೆ ನಡೆಯುವುದು ವಾಡಿಕೆ.
“ಮಣೇಲ್‌ದ ಕರ’ ಭಾರಿ ಪ್ರಸಿದ್ಧಿ
ಮಳಲಿಯ ಮಡಿಕೆ (ಮಣೇಲ್‌ದ ಕರ)ಭಾರಿ ಹೆಸರು ವಾಸಿ ಯಾಗಿದೆ. ಮಳಲಿಯಲ್ಲಿ ಜೇಡಿಮಣ್ಣು ಸಿಗುವ ಕಾರಣ ಇಲ್ಲಿನ ಮಣ್ಣಿನ ಮಡಿಕೆ ಹೆಚ್ಚು ಪ್ರಸಿದ್ಧಿ. ಇಲ್ಲಿ ಕುಂಬಾರರ ಕುಟುಂಬ ಹೆಚ್ಚು. 1958ರಲ್ಲಿ ಇಲ್ಲಿ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ಸ್ಥಾಪನೆಯಾಗಿತ್ತು.
ಚಿತ್ರಣವೇ ಬದಲಾಗಿದೆ
ಸುತ್ತಮುತ್ತ ಅಭಿವೃದ್ಧಿ ಚಟುವಟಿಕೆಗಳು ಗರಿಗೆದರಿದಂತೆ ಮಣೇಲ್ ನಿಧಾನವಾಗಿ ಮಳಲಿ ಎಂಬ ಹೆಸರು ಪಡೆದು ಗಂಜಿ ಮಠ ಗ್ರಾ.ಪಂ. ಗೆ ಸೇರುವ ಮೊದಲು ಮಳಲಿ ಟೌನ್ ಪಂ.ಆಗಿತ್ತು. ಹಿಂದಿನ ವ್ಯಾಪಾರ ವ್ಯವಹಾರ ಇಲ್ಲದೇ ಈಗ ಮಳಲಿ ಪೇಟೆ ಹೆಸರಿಗೆ ಮಾತ್ರ ಪೇಟೆಯಾಗಿ ಉಳಿದಿದೆ.
ಹಲವು ಬೇಡಿಕೆ
ರಾಣಿ ಅಬ್ಬಕ್ಕನಿಗೆ ಮಣೇಲಿನ ರಾಣಿ ಎಂದು ಹೆಸರು ಕೊಟ್ಟ ಈ ಪ್ರದೇಶದ ರಕ್ಷಣೆಗೆ ಮಳಲಿ ಪೇಟೆಯ ಹಳೆಯ ಮಾರ್ಗಕ್ಕೆ “ಮಣೇಲ್ ರಾಣಿ ಅಬ್ಬಕ್ಕ ರಸ್ತೆ’ ಎಂದು ನಾಮಕರಣ ಮಾಡಿ ಫಲಕ ಅಳವಡಿಸಬೇಕು ಹಾಗೂ ಅಲ್ಲಿ ಪ್ರತಿಮೆ ಸ್ಥಾಪಿಸಬೇಕು, ರಾಣಿ ಇದ್ದ ಅರಮನೆ, ಸೂರ್ಯನಾರಾಯಣ ದೇವಸ್ಥಾನ, ಶ್ರೀ ಅನಂತನಾಥ ಸ್ವಾಮಿ ಜೈನ ಬಸದಿ ಇರುವ ಪ್ರದೇಶಕ್ಕೆ “ಅಬ್ಬಕ್ಕ ನಗರ’ ಎಂದು ಪರಿಗಣಿಸಿ ಫಲಕವನ್ನು ಸ್ಥಾಪಿಸಿ ರಾಣಿಯ ಹೆಸರು ಜನಮಾನಸದಲ್ಲಿ ಅಚ್ಚಳಿಯದೇ ಶಾಶ್ವತವಾಗಿ ಉಳಿಯುವಂತೆ ಮಾಡಬೇಕು ಎಂದು ಗ್ರಾಮಸ್ಥರು ಈಗಾಗಲೇ ಜಿಲ್ಲಾಧಿಕಾರಿಗೆ ಮನವಿಯನ್ನು ಸಲ್ಲಿಸಿದ್ದಾರೆ. ಇದಕ್ಕೆ ಸ್ಪಂದಿಸಿರುವ ಜಿಲ್ಲಾಧಿಕಾರಿಯವರು ಸ್ಥಳ ಪರಿಶೀಲನೆ ನಡೆಸಿ ಗ್ರಾಮ ಸಭೆಯಲ್ಲಿ ಮಂಡಿಸಿ, ಗ್ರಾಮಸ್ಥರ ಅಭಿಪ್ರಾಯದೊಂದಿಗೆ ನಿಯಮಾನುಸಾರ ಅಗತ್ಯ ಕ್ರಮ ಕೈಗೊಂಡು ಸಭೆಯ ನಡವಳಿಯೊಂದಿಗೆ ವರದಿ ನೀಡುವಂತೆ ಸೂಚಿಸಿದ್ದಾರೆ.
ಅಮುಚದ ಬಾಗಿಲಿನಲ್ಲಿ ಮಳಲಿ -ಪೊಳಲಿ ಸಂಪರ್ಕಿಸುವ ವೆಂಟೆಡ್ ಡ್ಯಾಂ ನಿರ್ಮಾಣವಾಗುತ್ತಿದೆ. ಜತೆಗೆ ಲಘು ವಾಹನ ಸಂಚಾರಕ್ಕೆ ಸೇತುವೆ ನಿರ್ಮಾಣವೂ ನಡೆಯುತ್ತಿದೆ. ಇದರೊಂದಿಗೆ ಮಳಲಿಯಲ್ಲಿ 400 ಮೀಟರ್ ಹಾಗೂ ಪೊಳಲಿ ಸಮೀಪ ಸುಮಾರು 1.5 ಕಿ.ಮೀ. ಸಂಪರ್ಕ ರಸ್ತೆ ನಿರ್ಮಾಣವಾಗಬೇಕು. ಇದರ ಕಾಮಗಾರಿ ಪೂರ್ಣಗೊಂಡಿಲ್ಲ. ಈ ಕಾಮಗಾರಿ ಶೀಘ್ರ ನಡೆದರೆ ಮಳಲಿ ಪೊಳಲಿಗೆ ಹತ್ತಿರ ವಾಗಲಿದೆ. ಮಳಲಿಯ ಅಮುಚದ ಬಾಗಿಲಿನ ದಾರಿಯಲ್ಲೇ ಪುತ್ತಿಗೆಯಿಂದ ಪೊಳಲಿಯ ಚೆಂಡು, ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಭಂಡಾರ ಪೊಳಲಿ ದೇವಸ್ಥಾನಕ್ಕೆ ಹೋಗುತ್ತದೆ. ಹೀಗಾಗಿ ಮಳಲಿಯ ಅಮುಚದ ಬಾಗಿಲಿನಿಂದ ಬಸ್‌ಗಳ ಓಡಾಟ ಮಾಡುವಂತಹ ದೊಡ್ಡ ಸೇತುವೆ ನಿರ್ಮಾಣವಾದರೆ ಉತ್ತಮ ಎಂಬುದು ಗ್ರಾಮಸ್ಥರ ಬೇಡಿಕೆಯಾಗಿದೆ. ಈ ಬಗ್ಗೆ ಒಮ್ಮೆ ಸರ್ವೆ ನಡೆಸಿ, ಅಂದಾಜು ಪಟ್ಟಿ ತಯಾರಿಸಲಾಗಿತ್ತು. ಬಳಿಕ ಯಾವುದೇ ಪ್ರಗತಿ ಕಾಣಲಿಲ್ಲ.
ಬೇಕಿದೆ ಹಲವು ಸೌಲಭ್ಯ
ಮಳಲಿ ಸರಕಾರಿ ಪ್ರಾಥಮಿಕ ಶಾಲೆ 130 ವರ್ಷಗಳ ಹಿಂದೆ ಸ್ಥಾಪನೆಯಾಗಿದ್ದು, ಇಲ್ಲಿ ಶಾಲಾ ಮೈದಾನ, ಬಯಲು ರಂಗ ಮಂಟಪದ ಕೊರತೆ ಇದೆ. ಮಳಲಿ ಮುಳ್ಳುಗುಡ್ಡೆ ಅಂಗನವಾಡಿ ಕೇಂದ್ರ ಖಾಸಗಿ ಜಾಗದಲ್ಲಿ ನಡೆಯುತ್ತಿದ್ದು, ಸ್ವಂತ ಜಾಗ ಬೇಕಿದೆ. ಆದರೆ ತೆಂಕುಳಿಪಾಡಿ ಗ್ರಾಮದಲ್ಲಿ ಸರಕಾರಿ ಜಾಗವೇ ಇಲ್ಲ. ಹೀಗಾಗಿ ಅಂಗನವಾಡಿ ಕೇಂದ್ರಕ್ಕೆ ಖಾಸಗಿಯವರಿಂದ ಜಾಗ ಪಡೆದರೆ ನೂತನ ಅಂಗನವಾಡಿ ಕೇಂದ್ರ ನಿರ್ಮಾಣ ಮಾಡಬಹುದಾಗಿದೆ. ಅಲ್ಲದೇ ತೆಂಕುಳಿಪಾಡಿ ಗ್ರಾಮಕ್ಕೆ ರುದ್ರಭೂಮಿ ಇಲ್ಲ. ಹೀಗಾಗಿ ಇಲ್ಲಿನವರು ಅಂತ್ಯಕ್ರಿಯೆಗೆ ಬಂಟ್ವಾಳ ತಾಲೂಕಿನ ಅಮ್ಮುಂಜೆ, ಬಡಕ ಬೈಲು ಶಶ್ಮಾನಕ್ಕೆ ಹೋಗಬೇಕಾಗಿದೆ.
ವಿಶೇಷತೆ
ತೆಂಕುಳಿಪಾಡಿ ಗ್ರಾಮ 995.83 ಹೆಕ್ಟೇರ್ ವಿಸ್ತೀರ್ಣ ಹೊಂದಿದ್ದು, ಇಲ್ಲಿನ ಜನಸಂಖ್ಯೆ 4,767. ಮಂಗಳೂರಿನಿಂದ ಸುಮಾರು 25 ಕಿ.ಮೀ. ದೂರದಲ್ಲಿದ್ದು, ಇದರ ಸುತ್ತ ಮೂಳೂರು, ಅಡೂxರು, ಕಂದಾವರ, ಬಡಗುಳಿಪಾಡಿ, ಮೊಗರು ಗ್ರಾಮಗಳು ಇದ್ದು, ಒಂದೆಡೆ ಪಲ್ಗುಣಿ ನದಿಯ ಹರಿಯುತ್ತದೆ. ತೆಂಕುಳಿಪಾಡಿಯಲ್ಲಿ ಕಾಡುಗಳು ಹೆಚ್ಚಾಗಿದ್ದು, ಅದರಲ್ಲಿ ಹುಲಿಗಳಿತ್ತು. ಹೀಗಾಗಿ ತುಳುವಿನಲ್ಲಿ ಪಿಲಿಗಳ ಪಾಡಿ ಎಂದು ಕರೆಯಲಾಗುತ್ತಿತ್ತು. ಬಳಿಕ ಅದನ್ನು ಉಳಿಪಾಡಿ ಎಂದು ಕರೆದು ದಕ್ಷಿಣದ ಭಾಗವನ್ನು ತೆಂಕುಳಿಪಾಡಿಯೆಂದು ಕರೆಯಲಾಯಿತು. ಪ್ರಕೃತಿ ಸೌಂದರ್ಯದ ಖನಿ ಯಂತಿರುವ ತೆಂಕುಳಿಪಾಡಿ ಗ್ರಾಮ ಸುತ್ತ ಗುಡ್ಡ ಪ್ರದೇಶ ಮಧ್ಯೆ ನದಿ ಬಯಲು ಪ್ರದೇಶ ಸದಾ ಹಸುರಾಗಿ ಕಾಣುವುದು.
ಕಾಜಿಲದಲ್ಲಿ ಹತ್ತಾರು ಸಮಸ್ಯೆ
ಕಾಜಿಲ ವ್ಯಾಪ್ತಿಯ ಗ್ರಾಮಸ್ಥರು ರೇಷನ್‌ಗಾಗಿ ಕಿನ್ನಿಕಂಬಳಕ್ಕೆ ಅಲೆದಾಡಬೇಕು. ಇದು ಬಹುದೂರವಿರುವುದರಿಂದ ಇಲ್ಲೇ ನ್ಯಾಯಬೆಲೆ ಅಂಗಡಿ ಸ್ಥಾಪನೆಯಾಗಲಿ ಎನ್ನುವುದು ಸ್ಥಳೀಯರ ಬೇಡಿಕೆ. ಇಲ್ಲಿನ ಅಂಗನವಾಡಿ ಕೇಂದ್ರವು ಖಾಸಗಿ ಹಾಗೂ ಗುಂಡಿ ಪ್ರದೇಶದಲ್ಲಿದ್ದು ಇಲ್ಲಿಗೆ ಹೋಗುವ ದಾರಿಯೂ ದುರ್ಗಮವಾಗಿದೆ. ಹೀಗಾಗಿ ಶ್ರೀ ಕೋರ್ದಬ್ಬು ದೈವಸ್ಥಾನ ಹತ್ತಿರ ಅಂಗನವಾಡಿ ಕೇಂದ್ರ ನಿರ್ಮಾಣವಾದರೆ ಅನುಕೂಲವಾಗುತ್ತದೆ ಎನ್ನುತ್ತಾರೆ ಗ್ರಾಮಸ್ಥರು. ಕಾಜಿಲ ಪದ್ಮನಾಭ ಅವರ ಮನೆಯ ಬಳಿಯಿಂದ ಕೊಡಂಗೆ ತನಕ ತೋಡಿಗೆ ತಡೆಗೋಡೆ ರಚನೆಯಾಗಬೇಕು, ಗುರುಪುರದ ಸಮೀಪದಲ್ಲಿರುವ ಪೊಳಲಿ ದ್ವಾರದ ಬಳಿ ಇರುವ ತೋಡಿನಲ್ಲಿ ಗುಡ್ಡದ ನೀರು ದೊಡ್ಡ ಪ್ರಮಾಣದಲ್ಲಿ ಹರಿದು ಬರುವುದರಿಂದ ಮಣ್ಣು ಕೊಚ್ಚಿಹೋಗಿ ಹಲವು ಮನೆಗಳಿಗೆ ಅಪಾಯವಿದೆ. ಹೀಗಾಗಿ ಇಲ್ಲಿ ತಡೆಗೋಡೆ ನಿರ್ಮಿಸಬೇಕಿದೆ. ಕೊಡಂಗೆ ಮುಖ್ಯ ರಸ್ತೆಯಿಂದ ಕಂಗ್ಲಿಹಿತ್ಲು ಕಾಜಿಲ ಕಟ್ಟ ಕಾಜಿಲ ಶ್ರೀ ಕೋರ್ದಬ್ಬು ದೈವಸ್ಥಾನ ಮುಖ್ಯ ರಸ್ತೆ ತನಕ 15 ಮನೆಗಳಿದ್ದು, ಇಲ್ಲಿಗೆ ಸಂಪರ್ಕ ರಸ್ತೆ ಇಲ್ಲದೇ ಇರುವುದರಿಂದ ಹೊಸದಾಗಿ ರಸ್ತೆ ನಿರ್ಮಾಣವಾಗಬೇಕಿದೆ.
ಅಂತರ್ಜಲ ಮಟ್ಟ ಏರಿಕೆ: ಮಳವೂರು ಡ್ಯಾಂನಿಂದ ಮಳಲಿ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದ್ದು, ಇದು ಸ್ಥಳೀಯ ಕೃಷಿಕರಿಗೆ ವರದಾನವಾಗಿದೆ. ಮಳಲಿ- ಪೊಳಲಿ ಡ್ಯಾಂನಿಂದ ಮೂಲರಪಟ್ಣದವರೆಗೆ ಅಂತರ್ಜಲ ಮಟ್ಟ ಏರಲಿದೆ. – ಶೇಖರ, ಕೃಷಿಕರು
ತೆಂಕುಳಿಪಾಡಿ ಗ್ರಾಮ ಹಲವು ಬೇಡಿಕೆ: ಅಗತ್ಯ ಕ್ರಮದ ಭರವಸೆ: ತೆಂಕುಳಿಪಾಡಿ ಗ್ರಾಮ ಕೃಷಿ ಅಧಾರಿತವಾಗಿದ್ದು, ಡ್ಯಾಮ್ ಬಳಿಯ ಈಗ ನಿರ್ಮಾಣವಾಗುವ ಸೇತುವೆಯಲ್ಲಿ ಲಘು ವಾಹನ ಮಾತ್ರ ಹೋಗಬಹುದು. ತೆಂಕುಳಿಪಾಡಿ – ಪೊಳಲಿಗೆ ಬಸ್ ಹೋಗುವಂತಹ ಸೇತುವೆ ಅಗತ್ಯ. ಈಗಾಗಲೇ ಸರ್ವೆ ನಡೆಸಲಾಗಿದೆ. ಗ್ರಾಮಸ್ಥರಿಂದ ಹಲವಾರು ಬೇಡಿಕೆಗಳಿವೆ. ಈ ಬಗ್ಗೆ ಜಿಲ್ಲಾಧಿಕಾರಿಯವರೂ ಸ್ಪಂದಿಸಿದ್ದಾರೆ. ಮುಂದಿನ ದಿನಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. – ನೋಣಯ್ಯ ಕೋಟ್ಯಾನ್, ಅಧ್ಯಕ್ಷರು, ಗಂಜಿಮಠ ಗ್ರಾಮ ಪಂಚಾಯತ್
ಗ್ರಂಥಾಲಯ ಸ್ಥಾಪನೆಯಾಗಲಿ: ಮಳಲಿಯಲ್ಲಿ ರಾಣಿ ಅಬ್ಬಕ್ಕನ ಹೆಸರಿನಲ್ಲಿ ಒಂದು ಸಾರ್ವಜನಿಕ ಗ್ರಂಥಾಲಯ ಸ್ಥಾಪನೆಯಾಗಬೇಕು. ಈ ಮೂಲಕ ಮುಂದಿನ ಪೀಳಿಗೆಗೆ ಮಳಲಿಯ ಚರಿತ್ರೆ ತಿಳಿಯಲು ಸಹಾಯವಾಗುತ್ತದೆ. ಪುತ್ಥಳಿ ನಿರ್ಮಾಣ ಮಾಡಬೇಕು. – ಅಕ್ಷಯ್ ಕುಮಾರ್ ಜೈನ್, ನಿವೃತ್ತ ಪ್ರಾಂಶುಪಾಲರು, ಕರಾವಳಿ ಕಾಲೇಜು, ಮಂಗಳೂರು
–ಸುಬ್ರಾಯ್ ನಾಯಕ್ ಎಕ್ಕಾರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.