Kinnigoli ಪೇಟೆ ಸಿಸಿ ಕೆಮರಾವೇ ಕಣ್ಮುಚ್ಚಿದೆ!
ಎಲ್ಲ ರಾಷ್ಟ್ರೀಕೃತ ಬ್ಯಾಂಕ್‌ಗಳ ಶಾಖೆಗಳು, ವ್ಯವಹಾರ ಮಳಿಗೆಗಳು, 6 ವಿದ್ಯಾಸಂಸ್ಥೆಗಳಿದ್ದರೂ ಕಾವಲಿನ ಕಣ್ಣಿಲ್ಲ; ಸಾರ್ವಜನಿಕರ ಹಣದಿಂದ ಸ್ಥಾಪಿಸಿದ್ದ ಕೆಮರಾವೂ ಕೆಟ್ಟಿದೆ, ನಿರ್ವಹಣೆ, ಮರುಸ್ಥಾಪನೆಗೆ ಆಡಳಿತಕ್ಕೆ ನಿರಾಸಕ್ತಿ
Team Udayavani, Nov 11, 2024, 4:50 PM IST
ಕಿನ್ನಿಗೋಳಿ: ಎಲ್ಲ ರಾಷ್ಟ್ರೀಯ ಬ್ಯಾಂಕ್‌ಗಳು ಕಾರ್ಯಾಚರಿಸುವ, ಸಹಕಾರಿ ಬ್ಯಾಂಕ್‌ಗಳ ಸರಮಾಲೆಯೇ ಇರುವ ವ್ಯಾಪಕ ಹಣಕಾಸು, ಉದ್ಯಮ, ವ್ಯವಹಾರ ಕೇಂದ್ರ ಸ್ಥಾನವಾಗಿರುವ ಕಿನ್ನಿಗೋಳಿ ಪೇಟೆಗೆ ಈಗ ಕಾವಲುಗಾರರೇ ಇಲ್ಲ. ಇಲ್ಲಿನ ಪ್ರಧಾನ ಸರ್ಕಲ್‌ನಲ್ಲಿ ಪೇಟೆಯ ಕಣ್ಗಾವಲಿಗಾಗಿ ಹಾಕಲಾಗಿದ್ದ ಸಿಸಿ ಕೆಮರಾ ಕಣ್ಮುಚ್ಚಿ ಯಾವುದೋ ಕಾಲವಾಗಿದೆ.
ಬೆಳೆಯುತ್ತಿರುವ ಕಿನ್ನಿಗೋಳಿ ಪೇಟೆಗೆ ಸುರಕ್ಷತೆ ಬೇಕು ಎಂಬ ಕಾರಣಕ್ಕಾಗಿ ಮುಖ್ಯ ರಸ್ತೆಯ ಸರ್ಕಲ್‌ನಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಸಿಸಿ ಕೆಮರಾ ಹಾಕಲಾಗಿತ್ತು. ಅದು ಕೆಲವು ಸಮಯ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಸ್ವಲ್ಪ ಕಾಲದ ಬಳಿಕ ಸಿಡಿಲು ಬಡಿದು ಸಿಸಿ ಕೆಮರಾ ಹಾಳಾದ ಅನಂತರ ಅದನ್ನು ಮತ್ತೆ ರಿಪೇರಿ ಮಾಡುವ ಗೋಜಿಗೆ ಯಾರೂ ಹೋಗಿಲ್ಲ. ಸ್ಥಳೀಯ ಆಡಳಿತ ಅದರ ಉಸ್ತುವಾರಿಯನ್ನೂ ಗಮನಿಸದೆ ಸಿಸಿ ಕೆಮರಾ ಮೂಲೆಗುಂಪಾಗಿದೆ. 1.30 ಲಕ್ಷ ರೂ. ವೆಚ್ಚದ ಸಿಸಿ ಕೆಮರಾ ವ್ಯವಸ್ಥೆಗೆ ಎಳ್ಳು ನೀರು ಬಿಡಲಾಗಿದೆ.
ಆಗ ಈ ಸಿಸಿ ಕೆಮರಾದ ಮೂಲ ಸಂಪರ್ಕ ಪಣಂಬೂರು ಎಸಿಪಿ ಕಚೇರಿಗೆ ಇತ್ತು. ಅಪಘಾತ, ವಾಹನ ತಪಾಸಣೆ, ಕೆಲವೊಂದು ದುಷ್ಕರ್ಮಿ ಕೃತ್ಯಗಳ ಮೇಲೆ ಕಣ್ಣಿಡಲು ಅದು ಅನುಕೂಲವಾಗಿತ್ತು. ಅಪಘಾತವಾದಾಗ ತುರ್ತು ಸ್ಪಂದನೆಗೂ ಅದು ಬಳಕೆಯಾಗುತ್ತಿತ್ತು. ಸರಿಯಾದ ಜಾಗದಲ್ಲಿ ಸಿಸಿ ಕೆಮರಾ ಇದ್ದಿದ್ದರಿಂದ ಕಳ್ಳರಿಗೆ ಸ್ವಲ್ಪ ಮಟ್ಟಿನ ಹೆದರಿಕೆಯೂ ಇರುತ್ತಿತ್ತು. ಆದರೆ, ಈಗ ಕಳ್ಳರಿಗೆ ಅದ್ಯಾವುದೂ ಇಲ್ಲ
ನಿಜವೆಂದರೆ, ಎಲ್ಲ ಕಡೆ ಕಳವು ಪ್ರಕರಣಗಳು ಹೆಚ್ಚುತ್ತಿರುವುದು, ಹಲ್ಲೆ ಮೊದಲಾದ ಘಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಪೇಟೆಗೆ ಸಿಸಿ ಕೆಮರಾದ ಅಗತ್ಯತೆ ಹೆಚ್ಚಾಗಿತ್ತು. ಆದರೆ, ಯಾರೂ ಇದರ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ. ಕಿನ್ನಿಗೊಳಿ ಪಟ್ಟಣ ಪಂಚಾಯತ್ ಆಗಿ ನಾಲ್ಕು ವರುಷ ಆಗುತ್ತ ಬಂತು.
ಇನ್ನಾದರೂ ಜನರ ಸುರಕ್ಷತೆಯ ದೃಷ್ಟಿಯಿಂದ ಸಿಸಿ ಟಿವಿ ಕೆಮರಾ ಮರು ಅಳವಡಿಕೆಗೆ ಕ್ರಮ ಕೈಗೊಳ್ಳಬೇಕು ಎನ್ನುವುದು ಜನರ ಆಗ್ರಹ.
ಟ್ರಾಫಿಕ್ ವ್ಯವಸ್ಥೆ ಇನ್ನೂ ಸುಸೂತ್ರವಿಲ್ಲ
ಕಿನ್ನಿಗೋಳಿ ಪಟ್ಟಣ ಹಲವು ಊರುಗಳ ಕೇಂದ್ರ ಸ್ಥಾನ. ಕಟೀಲು, ಮೂಲ್ಕಿ, ಪಕ್ಷಿಕೆರೆ, ಮೂಡುಬಿದಿರೆ, ಐಕಳ, ಮುಂಡ್ಕೂರು ಭಾಗದಿಂದ ಬರುವವರಿಗೆ ಇದುವೇ ಸಂಪರ್ಕ ಕೇಂದ್ರ. ಇಲ್ಲಿ ದಿನಕ್ಕೆ ನೂರಾರು ಬಸ್‌ಗಳ ಓಡಾಟವಿದೆ. ಸಾವಿರಾರು ವಾಹನಗಳ ಓಡಾಟವೂ ಇದೆ. ಆದರೆ, ಇಲ್ಲಿನ ಟ್ರಾಫಿಕ್ ವ್ಯವಸ್ಥೆ ಸುಸೂತ್ರವಿಲ್ಲ. ಸರಿಯಾದ ಟ್ರಾಫಿಕ್ ಸಿಬಂದಿಯ ನಿಯೋಜನೆಯು ಆಗುತ್ತಿಲ್ಲ . ಪೇಟೆಯಲ್ಲಿ ಹಾಗೂ ಬಸ್ ನಿಲ್ದಾಣದಲ್ಲಿ ಗುತ್ತಕಾಡು ಹೋಗುವ ಆಟೋರಿಕ್ಷಾ ಪಾರ್ಕಿಂಗ್ ಬಳಿ ವಾಹನಗಳು ಎಡಕ್ಕೆ ತಿರುಗಿ ಹೋಗಿ ಎಂಬ ಸೂಚನ ಫಲಕವಿದ್ದರೂ ಮಕ್ಕಳ ಶಾಲಾ ವಾಹನಗಳು ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತವೆ. ವಾಹನಗಳು, ಅಟೋರಿಕ್ಷಾಗಳ ಬೇಕಾಬಿಟ್ಟಿ ನಿಲುಗಡೆಯಿಂದ ಸಮಸ್ಯೆಯಾಗಿದೆ. ಆದರೆ, ಇದರ ಯಾವುದರ ಮೇಲೂ ಸರಿಯಾದ ಕಣ್ಗಾವಲು ಇಲ್ಲ. ಖಾಯಂ ಟ್ರಾಫಿಕ್ ಪೊಲೀಸರೇ ಇಲ್ಲ.
ಎಟಿಎಂ ಲೂಟಿಗೆ ಯತ್ನ ನಡೆದಿತ್ತು
ಹಿಂದೆ ಕಿನ್ನಿಗೋಳಿ ಮುಖ್ಯ ರಸ್ತೆಯಲ್ಲಿ ಪೊಲೀಸ್ ಚೌಕಿ ಇತ್ತು. ಅದಕ್ಕೆ ಸಿಸಿ ಕೆಮರಾ ಅಳವಡಿಸಿತ್ತು. ಬಳಿಕ ಸಿಸಿ ಟಿವಿಯೇ ಕಣ್ಮುಚ್ಚಿತ್ತು. ಮುಂದೆ ಅದು ಬ್ಯಾನರ್, ಬಂಟಿಂಗ್ ಕಟ್ಟುವ ತಾಣವಾಯಿತು. ಕಿನ್ನಿಗೋಳಿ ಪರಿಸರದಲ್ಲಿ ಕಳವು, ಬ್ಯಾಂಕ್ ಎ.ಟಿ.ಎಂ. ಲೂಟಿಗೆ ಪ್ರಯತ್ನ ನಡೆದಿತ್ತು. ಇಂಥ ಪ್ರಸಂಗಗಳು ಎದುರಾದಾಗ ಖಾಸಗಿ ಸಿಸಿ ಕೆಮರಾಗಳ ಮೊರೆ ಹೋಗಬೇಕಾದ ಅಗತ್ಯತೆ ಬರುತ್ತದೆ. ಹೀಗಾಗಿ ನಾಗರಿಕರ ಹಿತದೃಷ್ಟಿಯಿಂದ ಪೊಲೀಸ್ ಹೊರಠಾಣೆ ಹಾಗೂ ಸಿಸಿ ಕೆಮರಾ ಆಳವಡಿಕೆ ಅಗತ್ಯವಾಗಿದೆ.
ಹೊರಠಾಣೆಯಾದರೂ ಬೇಕಾಗಿದೆ
ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಹಾಗೂ ಕಿನ್ನಿಗೋಳಿ ಪೇಟೆಯ ಟ್ರಾಫಿಕ್ ನಿರ್ವಹಣೆ, ಅಪಘಾತ ಮತ್ತಿತರ ಸಂದರ್ಭದ ತುರ್ತು ಸ್ಪಂದನೆಗೆ ಇಲ್ಲಿ ಪೊಲೀಸ್ ಠಾಣೆಯೊಂದರ ಅಗತ್ಯವಿದೆ. ಆದರೆ, ಪೊಲೀಸ್ ಹೊರಠಾಣೆಯೂ ಇಲ್ಲಿಲ್ಲ. ಆರು ಶಿಕ್ಷಣ ಸಂಸ್ಥೆಗಳು, ಹತ್ತಿರದಲ್ಲಿಯೇ ಕಟೀಲು ದೇಗುಲ ಇದೆ. ಕಿನ್ನಿಗೋಳಿ ಪರಿಸರದಲ್ಲಿ ಹಲವು ಮನೆಗಳ ವಸತಿ ಗೃಹಗಳು ತಲೆ ಎತ್ತುತ್ತಿವೆ. ಸದ್ಯಕ್ಕೆ ಇಲ್ಲಿ ಏನೇ ಆದರೂ ಮೂಲ್ಕಿಯಿಂದಲೇ ಪೊಲೀಸರು ಬರಬೇಕಾದ ಸ್ಥಿತಿ ಇದೆ. ಹೊರ ಠಾಣೆ ಬೇಕು ಎಂದು ಹಲವು ಸಂಘ ಸಂಸ್ಥೆಗಳು ಮನವಿ ಮಾಡಿವೆ.
-ರಘುನಾಥ ಕಾಮತ್ ಕೆಂಚನಕೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
Doctor; ಖ್ಯಾತ ಹೃದ್ರೋಗ ತಜ್ಞ ಡಾ.ಎಸ್.ಜಿ.ಸರ್ವೋತ್ತಮ ಪ್ರಭು ವಿಧಿವಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.