ಕಾಡಾಗುತ್ತಿದೆ ಕೋಡಿಕಲ್‌ನ ಐದು ಎಕ್ರೆ ಸುಂದರ ಪಾರ್ಕ್!
ಮಹಾನಗರ ಪಾಲಿಕೆಯ ನಿರ್ಲಕ್ಷ್ಯಕ್ಕೆ 70 ಲಕ್ಷ ರೂ. ವ್ಯರ್ಥ
Team Udayavani, Sep 30, 2020, 5:08 AM IST
ಕೋಡಿಕಲ್ ಬಳಿಯ ಪಾರ್ಕ್‌ನಲ್ಲಿ ಗಿಡ,ಗಂಟಿ ಬೆಳೆದು ಕಾಡಿನ ರೀತಿ ಮಾರ್ಪಾಡಾಗಿದೆ.
ಮಹಾನಗರ: 5 ವರ್ಷಗಳ ಹಿಂದೆ ಮಹಾನಗರ ಪಾಲಿಕೆ ಸುಮಾರು 70 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ್ದ ಕೋಡಿಕಲ್ ಬಳಿಯ ಕಲ್ಲಕಂಡದಲ್ಲಿರುವ ಬೃಹತ್ ಪಾರ್ಕ್ ನಿರ್ವಹಣೆಯಿಲ್ಲದೆ, ಅತ್ತ ಸಾರ್ವಜನಿಕರ ಉಪಯೋಗಕ್ಕಿಲ್ಲದೆ ನಿರುಪಯುಕ್ತವೆನಿಸಿಕೊಂಡಿದೆ.
ಪಕ್ಕದಲ್ಲೇ ಫಲ್ಗುಣಿ ನದಿ ಹರಿಯುತ್ತಿದ್ದು, ಪ್ರಕೃತಿದತ್ತ ಪ್ರದೇಶ ಇದಾಗಿದೆ. ಒಂದು ವೇಳೆ ಸುವ್ಯವಸ್ಥಿತ ಪಾರ್ಕ್ ನಿರ್ಮಾಣವಾದರೆ ಸುತ್ತ¤ಲಿನ ಸಾರ್ವಜನಿಕರಿಗೆ ಇದು ಅನುಕೂಲವಾಗಲಿದೆ. ಆದರೆ ಐದು ವರ್ಷಗಳಿಂದ ಪಾಳು ಬಿದ್ದಿದ್ದು, ಪಾರ್ಕ್ ಸುತ್ತಲೂ ಗಿಡಗಂಟಿ ಬೆಳೆದು ಅಕ್ಕ ಪಕ್ಕದ ಮಂದಿ ಪಾರ್ಕ್‌ಗೆ ಬರಲು ಹೆದರುವಂತಾಗಿದೆ. ಅವ್ಯವಸ್ಥೆ ಸರಿಪಡಿಸಿ ಎಂದು ಸಾರ್ವಜನಿಕರು ಪಾಲಿಕೆಗೆ ಅನೇಕ ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಈ ಪಾರ್ಕ್ ಅಭಿವೃದ್ಧಿಗೆ ಕೆಲ ವರ್ಷಗಳ ಹಿಂದೆ ಒಂದು ಕೋಟಿ ರೂ. ಬಿಡುಗಡೆಗೊಂಡಿತ್ತು. ಇದರಲ್ಲಿ ಸುಮಾರು 70 ಲಕ್ಷ ರೂ. ವೆಚ್ಚದಲ್ಲಿ ಆವರಣ ಗೋಡೆ, ಮುಖ್ಯದ್ವಾರ, ಭದ್ರತೆ ಕೊಠಡಿ ನಿರ್ಮಿಸಲಾಗಿದೆ. ಒಂದು ವರ್ಷದಿಂದ ಈ ಪಾರ್ಕ್ ಸಮರ್ಪಕ ನಿರ್ವಹಣೆಯಿಲ್ಲದೆ ಅನಾಥವಾಗಿದೆ. ಪಾರ್ಕ್ ಒಳಗಡೆ ಹೈಮಾಸ್ಟ್ ಎಲ್‌ಇಡಿ ಲೈಟ್ ಕಂಬದ ವ್ಯವಸ್ಥೆ ಇದ್ದರೂ, ಇದು ಉರಿಯದೆ 8 ತಿಂಗಳು ಕಳೆದಿವೆ. ಪಾರ್ಕ್ ಸುತ್ತಲೂ ಗಿಡ-ಗಂಟಿ ಪಾರ್ಕ್ ಇರುವಂತಹ ಪ್ರದೇಶದಲ್ಲಿ ಗಿಡ- ಗಂಟಿಗಳು ಬೆಳೆದು ಪಾರ್ಕ್‌ನ ಅಸ್ತಿತ್ವದ ಬಗ್ಗೆಯೇ ಅನುಮಾನ ಮೂಡುತ್ತದೆ. ಇವುಗಳನ್ನು ಕಟಾವು ಮಾಡಿ ನಿರ್ವಹಣೆ ಮಾಡಬೇಕಾದರೆ ಲಕ್ಷಾಂತರ ರೂ. ಖರ್ಚು ಮಾಡಬೇಕಿದೆ.
ಇನ್ನು, ಮಕ್ಕಳ ಆಟದ ಉದ್ದೇಶದಿಂದ ಅನೇಕ ವರ್ಷಗಳ ಹಿಂದೆ ಅಳವಡಿಸಿದ ಜೋಕಾಲಿ ತುಕ್ಕು ಹಿಡಿದಿದೆ. ವಾಯು ವಿಹಾರದ ಉದ್ದೇಶದಿಂದಾಗಿ ಪಾರ್ಕ್ ಸುತ್ತಲೂ ಇಂಟರ್‌ಲಾಕ್ ಅಳವಡಿಸಲಾಗಿತ್ತು. ಆದರೆ, ನಿರ್ವಹಣೆಯಿಲ್ಲದೆ ಅವುಗಳು ಹಾಳಾಗಿವೆ. ಗಿಡ-ಗಂಟಿ, ಪೊದೆ ಬೆಳೆದ ಕಾರಣ ಸಾರ್ವಜನಿಕರು ಪಾರ್ಕ್‌ಗೆ ಬರಲು ಭಯಪಡುತ್ತಿದ್ದಾರೆ.
ಅಂದಾಜು ಪಟ್ಟಿ ತಯಾರಿ
ಕೋಡಿಕಲ್ ಪಾರ್ಕ್‌ಅನ್ನು ಸಂಪೂರ್ಣವಾಗಿ ವ್ಯವಸ್ಥಿತಗೊಳಿಸುವ ಉದ್ದೇಶದಿಂದ ಮಹಾನಗರ ಪಾಲಿಕೆ 3.50 ಕೋಟಿ ರೂ.ನ ಅಂದಾಜು ಪಟ್ಟಿಯನ್ನು ಈ ಹಿಂದೆ ತಯಾರು ಮಾಡಿ ನೀಲನಕ್ಷೆಯನ್ನು ಸಿದ್ಧಪಡಿಸಿತ್ತು. ಈ ಪ್ರದೇಶದಲ್ಲಿ ನೈಸರ್ಗಿಕವಾಗಿ ಬೆಳೆಯುವ ಗಿಡ, ಮರ ಹಾಗೂ ಹೂದೋಟ ನಿರ್ಮಿಸುವ ಯೋಜನೆ ಮಹಾನಗರ ಪಾಲಿಕೆಗೆ ಇತ್ತು. ಹತ್ತಿರವೇ ಫಲ್ಗುಣಿ ನದಿ ಹರಿಯುತ್ತಿದ್ದು, ಕೊಕ್ಕರೆ, ನವಿಲು, ಗಿಳಿ ಹಲವಾರು ಜಾತಿಯ ಪಕ್ಷಿ ಪ್ರಬೇಧಗಳು ಈ ಪಾರ್ಕ್‌ಗೆ ಬರುವಂತೆ ಆಕರ್ಷಿಸುವುದು ಪಾಲಿಕೆಯ ಯೋಚನೆಯಾಗಿತ್ತು. ಆದರೆ, ಪಾಲಿಕೆಯ ಈ ಯೋಜನೆ ಕಳೆದ ಐದು ವರ್ಷಗಳಿಂದ ಸಾಕಾರಗೊಂಡಿಲ್ಲ.
ಪಾರ್ಕ್ ಅಭಿವೃದ್ಧಿಗೆ ಕ್ರಮ
ಕೋಡಿಕಲ್ ಬಳಿಯ ಕಲ್ಲಕಂಡದಲ್ಲಿ ಸುಮಾರು 5 ಎಕ್ರೆ ಪ್ರದೇಶದಲ್ಲಿ ಪಾರ್ಕ್ ಇದೆ. ಈ ಪ್ರದೇಶದ ಅಭಿವೃದ್ಧಿಯ ನಿಟ್ಟಿನಲ್ಲಿ ಈಗಾಗಲೇ ಸ್ಥಳೀಯಾಡಳಿತ, ಶಾಸಕರ ಗಮನಸೆಳೆದಿದ್ದೇವೆ. ಸಾರ್ವಜನಿಕರ ಜತೆ ಸೇರಿ ಪಾರ್ಕ್‌ನಲ್ಲಿ ಸ್ವತ್ಛತಾ ಅಭಿಯಾನ ನಡೆಸಿದ್ದೇವೆ. ಪಾರ್ಕ್ ಹತ್ತಿರವೇ ಫಲ್ಗುಣಿ ನದಿ ಹರಿಯುತ್ತಿದ್ದು, ಈ ಪಾರ್ಕ್ ಅನ್ನು ಅಮ್ಯೂಸ್‌ಮೆಂಟ್ ಪಾರ್ಕ್ ಆಗಿ ಮಾರ್ಪಾಡು ಮಾಡಬೇಕು ಎಂಬ ಚಿಂತನೆಯೂ ಇದೆ.
-ಕಿರಣ್ ಕುಮಾರ್, ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯ
ಪಾರ್ಕ್ ಅಭಿವೃದ್ಧಿಗೊಳಿಸಿ
ಕೋಡಿಕಲ್ ಕಲ್ಲಕಂಡ ಬಳಿ ಇರುವ ಪಾರ್ಕ್ ಪಾಳು ಬಿದ್ದಿದೆ. ಸುತ್ತಮುತ್ತಲೂ ಜನವಸತಿ ಪ್ರದೇಶವಾಗಿದ್ದು, ನಮಗೆ ವ್ಯವಸ್ಥಿತ ಪಾರ್ಕ್‌ನ ಅಗತ್ಯವಿದೆ. ಹಿರಿಯ ನಾಗರಿಕರು, ಮಕ್ಕಳು ಸಹಿತ ಸಾರ್ವಜನಿಕರಿಗೆ ಇದರಿಂದ ಅನುಕೂಲವಾಗುತ್ತದೆ. ಖಾಸಗಿ ಸಹಭಾಗಿತ್ವದಲ್ಲಿ ಅಥವಾ ಸ್ಮಾರ್ಟ್‌ಸಿಟಿ ಯೋಜನೆಯಡಿ ಈ ಪಾರ್ಕ್‌ನ್ನು ಅಭಿವೃದ್ಧಿಪಡಿಸಿ, ಸಾರ್ವಜನಿಕರ ಉಪಯೋಗಕ್ಕೆ ಸಿಗುವಂತಾಗಬೇಕು.
-ಪಾಂಡುರಂಗ ಕುಕ್ಯಾನ್, ಸ್ಥಳೀಯರು
70 ಲಕ್ಷ ರೂ. ವೆಚ್ಚದಲ್ಲಿ ಆವರಣ ಗೋಡೆ, ಮುಖ್ಯದ್ವಾರ, ಭದ್ರತೆ ಕೊಠಡಿ
5 ವರ್ಷಗಳ ಹಿಂದೆ ಅಭಿವೃದ್ಧಿ ಕಾಮಗಾರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.