ಉದಯವಾಣಿ ಸಂದರ್ಶನ: ಕಾಂಗ್ರೆಸ್ ಲೆಕ್ಕ ಕೇಳಿದ್ದೇ ತಪ್ಪಾ?: ಡಿ.ಕೆ. ಶಿವಕುಮಾರ್
Team Udayavani, Aug 1, 2020, 6:37 AM IST
– ಸುರೇಶ್ ಪುದುವೆಟ್ಟು
ಮಂಗಳೂರು: ಜನತೆ ಕೋವಿಡ್ 19 ಸೋಂಕಿನಿಂದ ನರಳುತ್ತಿರುವ ಈ ಸಂದರ್ಭದಲ್ಲಿ ಕಾಂಗ್ರೆಸ್ ಸರಕಾರಕ್ಕೆ ಸಹಕಾರ ನೀಡುತ್ತಿದೆ.
ಈ ವಿಚಾರದಲ್ಲಿ ರಾಜಕೀಯ ನಮಗೆ ಇಷ್ಟವಿಲ್ಲ. ಆದರೆ ಕೋವಿಡ್ 19 ನಿರ್ವಹಣೆಯ ಹೆಸರಿನಲ್ಲಿ ಸರಕಾರದ ಭ್ರಷ್ಟಾಚಾರವನ್ನು ನಾವು ಸಹಿಸುವುದಿಲ್ಲ. ಹಾಗಾಗಿಯೇ ನಾವು ಲೆಕ್ಕ ಕೊಡಿ ಎಂದು ಆಗ್ರಹಿಸಿರುವುದು. ಅದು ತಪ್ಪಾ? – ಇದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಎತ್ತಿರುವ ಪ್ರಶ್ನೆ.
ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಡಿ.ಕೆ. ಶಿವಕುಮಾರ್ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ಶುಕ್ರವಾರ ಆಗಮಿಸಿದ್ದರು. ಈ ವೇಳೆ ‘ಉದಯವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಬಿಜೆಪಿ ಸರಕಾರದ ವಿರುದ್ಧ ಕಾಂಗ್ರೆಸ್ ಮಾಡಿರುವ ಭ್ರಷ್ಟಾಚಾರ ಆರೋಪ ಮತ್ತು ಕರಾವಳಿಯಲ್ಲಿ ಕಾಂಗ್ರೆಸನ್ನು ತಳಮಟ್ಟದಿಂದ ಗಟ್ಟಿಗೊಳಿಸುವ ವಿಚಾರವಾಗಿ ಮಾತನಾಡಿದರು.
ಕೋವಿಡ್ 19 ಸಲಕರಣೆ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಕಾಂಗ್ರೆಸ್ ಆರೋಪ ಸುಳ್ಳು ಎಂದು ಬಿಜೆಪಿಯವರು ಹೇಳುತ್ತಿದ್ದಾರಲ್ಲ?
– ಭ್ರಷ್ಟಾಚಾರದ ಬಗ್ಗೆ ವಿಪಕ್ಷದವರು ಮಾತ್ರ ಹೇಳುತ್ತಿಲ್ಲ; ಮಾಧ್ಯಮಗಳಲ್ಲೂ ವರದಿ ಬರುತ್ತಿದೆ. ಉದಾಹರಣೆಗೆ, ಕೇಂದ್ರ ಸರಕಾರ 4 ಲಕ್ಷ ರೂ.ಗಳಿಗೆ ಖರೀದಿಸಿದ ವೈದ್ಯಕೀಯ ಸಲಕರಣೆಗಳನ್ನು ರಾಜ್ಯ ಸರಕಾರ 6ರಿಂದ 18 ಲಕ್ಷ ರೂ.ಗಳಿಗೆ ಖರೀದಿ ಮಾಡಿದೆ. ಅವ್ಯವಹಾರ ನಡೆದಿದೆ ಎಂಬುದು ಇಷ್ಟರಿಂದಲೇ ಅರ್ಥ ವಾಗುವುದಿಲ್ಲವೇ? ಸರಕಾರ ಭ್ರಷ್ಟಾಚಾರದಿಂದ ತುಂಬಿದೆ.
ಈ ಗಂಭೀರ ಆರೋಪವನ್ನು ಮುಂದೆ ತಾರ್ಕಿಕವಾಗಿ ಯಾವ ಹಂತಕ್ಕೆ ತಲುಪಿಸುತ್ತೀರಿ?
– ಜನತಾ ನ್ಯಾಯಾಲಯದ ಮುಂದೆ ಈ ವಿಚಾರವನ್ನು ಇರಿಸಲಿದ್ದೇವೆ. ಸರಕಾರದ ಭ್ರಷ್ಟಾಚಾರಕ್ಕೆ ಅವರೇ ಉತ್ತರ ನೀಡಲಿದ್ದಾರೆ.
ಈ ಬಗ್ಗೆ ಸರಕಾರ ಯಾವುದೇ ತನಿಖೆ ಮಾಡಿದರೂ ನಿಮಗೆ ಒಪ್ಪಿಗೆಯೇ?
– ನಾವು ಮಾಡಿದ ಆರೋಪ ನಿಜ ಆಗಿದ್ದರೂ, ಅಲ್ಲವಾಗಿದ್ದರೂ ಅದು ಅಧಿಕೃತವಾಗಲು ತನಿಖೆ ಮಾಡಿಸಿ. ಈ ಬಗ್ಗೆ ಮಾಧ್ಯಮಗಳಲ್ಲಿ ಬಂದಿರುವ ವಿಚಾರವೂ ತನಿಖೆಯಾಗಲಿ.
ರಾಜ್ಯದಲ್ಲಿ ಸರಕಾರ ಒಂದು ವರ್ಷ ಪೂರ್ಣ ಗೊಳಿಸಿದ್ದು, ವಿಪಕ್ಷ ದೃಷ್ಟಿಯಲ್ಲಿ ಈ ಸರಕಾರದ ಸಾಧನೆಗಳೇನು?
– ಒಂದು ವರ್ಷದಲ್ಲಿ ಈ ಸರಕಾರದ ಸಾಧನೆ ಏನಿದೆ ಹೇಳಿ; ಬರೇ ಶೂನ್ಯ. ಬರೀ ಕಿತ್ತಾಟ, ಜಗಳ; ಅಧಿಕಾರ ಉಳಿಸಿಕೊಳ್ಳಲು ಏನು ಮಾಡಬೇಕೋ ಅದನ್ನು ಬಿಟ್ಟು ಬೇರೇನೂ ಮಾಡಿಲ್ಲ. ತಮ್ಮ ಕುರ್ಚಿ ಭದ್ರ ಮಾಡಿದ್ದು ಮಾತ್ರ ಅವರ ಸಾಧನೆ. 11,000 ಬೆಡ್ ಒದಗಿಸಿದ್ದೇವೆ ಎಂದು ಸರಕಾರ ಜಾಹೀರಾತಿನಲ್ಲಿ ತಿಳಿಸುತ್ತಿದೆ. ಅಧಿಕಾರಿಗಳು 5,000 ಬೆಡ್ ಅನ್ನುತ್ತಾರೆ. ಕೋವಿಡ್ 19 ನಿರ್ವಹಣೆ ಮಾಡುತ್ತಿದ್ದ ಬೆಂಗಳೂರಿನ ಪೊಲೀಸ್ ಆಯುಕ್ತರ ಸಹಿತ ಮುಖ್ಯ ನೆಲೆಯ ಮೂವರು ಅಧಿಕಾರಿಗಳನ್ನು ಎತ್ತಂಗಡಿ ಮಾಡಿದ್ದಾರೆ. ಈ ಮೂಲಕ ಸರಕಾರ ವಿಫಲವಾಗಿದೆ ಎಂಬುದನ್ನು ಅವರೇ ತೋರಿಸಿಕೊಟ್ಟಿದ್ದಾರೆ.
ಕೋವಿಡ್ 19 ನಿರ್ವಹಣೆಯಲ್ಲಿಯಡಿಯೂರಪ್ಪ ಸರಕಾರ ವಿಫಲವಾಗಿದೆ ಎನ್ನುತ್ತೀರಾ?
– ಯಡಿಯೂರಪ್ಪನವರು ಕೋವಿಡ್ 19ನಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಆಡಳಿತ ಮುನ್ನಡೆಸುವಲ್ಲಿ ಸೋತಿದ್ದಾರೆ. ಅವರು ಎಲ್ಲದರಲ್ಲಿಯೂ ವಿಫಲವಾಗಿದ್ದಾರೆ. ರಾಜ್ಯದ ಜನರಿಗೂ ಇದು ಗೊತ್ತಾಗಿದೆ.
ಕಾಂಗ್ರೆಸ್ ಬಲಪಡಿಸುವಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ನಿಮ್ಮ ಯೋಜನೆ- ಯೋಚನೆಗಳೇನು?
– ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತ. ಕಾರ್ಯಕರ್ತನ ಭಾವನೆಗಳೇ ನನ್ನ ಭಾವನೆಗಳು. ರಾಜ್ಯದಲ್ಲಿ ಕಾಂಗ್ರೆಸ್ ಬಲಪಡಿಸುವ ಕಾರ್ಯವನ್ನು ನಮ್ಮ ಪಕ್ಷದ ಎಲ್ಲ ಹಿರಿಯ-ಕಿರಿಯ ನಾಯಕರು, ಕಾರ್ಯಕರ್ತರು ಸೇರಿ ಮಾಡಲಿದ್ದೇವೆ. ಪಕ್ಷದ ಜವಾಬ್ದಾರಿ ನನಗೆ ಇರುವ ಹಿನ್ನೆಲೆಯಲ್ಲಿ ಎಲ್ಲರನ್ನೂ ಜತೆಗೂಡಿಸಿ ಮುನ್ನಡೆಯಲಿದ್ದೇವೆ.
ನಿಮ್ಮ ಅಧಿಕಾರವಧಿಯಲ್ಲಿ ಕೆಪಿಸಿಸಿಯೊಳಗೆ ಬದಲಾವಣೆಗಳು ಇವೆಯೇ?
– ಮಾಡಲೇಬೇಕಿದೆ. ಆವಶ್ಯಕತೆಯಿದೆ. ಅನಿವಾರ್ಯತೆ ಕೂಡ ಇದೆ.
ನಿಮ್ಮ ಮುಂದಿರುವ ಹಲವಾರು ಸವಾಲುಗಳನ್ನು ಹೇಗೆ ಎದುರಿಸುವಿರಿ?
– ಸವಾಲುಗಳು ಸಹಜ. ಪಕ್ಷದೊಳಗೆ ಎಲ್ಲರನ್ನು ಒಟ್ಟಾಗಿ ಕರೆದುಕೊಂಡು ಹೋಗುವುದೇ ಮುಖ್ಯ ಆಶಯ. ಆ ಮೂಲಕ ಒಟ್ಟಾಗಿ ಪಕ್ಷವನ್ನು ಬಲಪಡಿಸು ವುದೇ ನಮ್ಮೆಲ್ಲರ ಆದ್ಯತೆ ಮತ್ತು ಸಂಕಲ್ಪ.
– ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಬಲಪಡಿಸಲು ಮುಂದಿನ ಯೋಜನೆಗಳೇನು?
ಎಲ್ಲ ನಾಯಕರು, ಕಾರ್ಯಕರ್ತರ ಮೂಲಕ ಕರಾವಳಿಯಲ್ಲಿ ಮತ್ತೆ ಪಕ್ಷದ ಬಲ ವರ್ಧನೆಗೆ ವಿಶೇಷ ಒತ್ತು ನೀಡ ಲಾಗು ವುದು. ಜನರ ಆಶೀರ್ವಾದ ಕಾಂಗ್ರೆಸ್‌ಗೆ ಮತ್ತೆ ದೊರೆಯುವಂತೆ ಶ್ರಮಿಸಲಿದ್ದೇವೆ.
20 ಲಕ್ಷ ಕೋ.ರೂ. ಎಲ್ಲಿಗೆ ಹೋಗಿದೆ?
– ಕೇಂದ್ರ ಸರಕಾರ ಕೋವಿಡ್ 19 ನಿರ್ವಹಣೆಗಾಗಿ 20 ಲಕ್ಷ ಕೋ.ರೂ. ಪರಿಹಾರ ಪ್ರಕಟಿಸಿದೆಯಲ್ಲವೇ? 20 ಲಕ್ಷ ಕೋ.ರೂ. ಕೊಟ್ಟಿದ್ದೇನೆ ಅನ್ನುತ್ತಿದ್ದಾರೆ. ಆದರೆ, ಈ ಹಣ ಯಾರಿಗೆ ಬಂದಿದೆ ಎಂಬುದನ್ನು ಅವರು ಹೇಳಿದರೆ ಉತ್ತಮ. ಹಳ್ಳಿಯಲ್ಲಿ ಕಲಾವಿದನಾಗಿರುವವನಿಗೆ ಬಂದಿದೆಯೇ? ಅಡುಗೆಯವರಿಗೆ ಬಂದಿದೆಯೇ? ಚಪ್ಪಾಳೆ ತಟ್ಟಿ, ಜಾಗಟೆ ಬಾರಿಸಿ ಅಂದರು. ಭಾವನಾತ್ಮಕವಾಗಿ ದೇಶವನ್ನು ಕೊಂಡೊಯ್ಯಲು ಸಾಧ್ಯವೇ? ವಲಸೆ ಕಾರ್ಮಿಕರು ಸಾವಿರಾರು ಕಿ.ಮೀ. ನಡೆಯುವಂತೆ ಮಾಡಿದ್ದೇ ಇವರ ಸಾಧನೆ.
ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಶುಕ್ರವಾರ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದು ಸಮಾಲೋಚನೆ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
Udupi: ಉದ್ಘಾಟನೆ ಕಾಣದ ಸರಕಾರಿ ಕಟ್ಟಡಗಳು
Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Mangaluru: ನಂತೂರು ವೃತ್ತ; ಸಂಚಾರ ಸ್ವಲ್ಪ ನಿರಾಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.