Lalbag: ಪ್ಲಾಸ್ಟಿಕ್ ನಿಷೇಧ ಜಾರಿಗೆ ತಂಡಗಳ ರಚನೆ
ಪ್ಲಾಸ್ಟಿಕ್ ಮುಕ್ತ ಮಂಗಳೂರಿಗಾಗಿ 'ಜಾಗೃತಿ' ಸೂತ್ರ ಸಂಕಲ್ಪ: ಮೇಯರ್ ಮನೋಜ್ ಕುಮಾರ್; ದುಬಾರಿ ದಂಡ, ಪಚ್ಚನಾಡಿಯಲ್ಲಿ ಪ್ಲಾಸ್ಟಿಕ್ ಸಂಸ್ಕರಣ ಘಟಕ: ಕಮಿಷನರ್ ಆನಂದ್ ಸಿ.ಎಲ್.
Team Udayavani, Nov 7, 2024, 1:07 PM IST
ಲಾಲ್‌ಬಾಗ್: ಮಂಗಳೂರು ನಗರವನ್ನು ಕಾಡುತ್ತಿರುವ ಪ್ಲಾಸ್ಟಿಕ್ ಸಮಸ್ಯೆಗೆ ಸೂಕ್ತ ನಿಯಂತ್ರಣ ಕ್ರಮ ಕೈಗೊಳ್ಳುವುದಾಗಿ ಮಂಗಳೂರು ಮೇಯರ್ ಮನೋಜ್ ಕುಮಾರ್ ಕೋಡಿಕಲ್ ಮತ್ತು ಪಾಲಿಕೆ ಆಯುಕ್ತ ಆನಂದ್ ಸಿ.ಎಲ್. ಭರವಸೆ ನೀಡಿದ್ದಾರೆ. ಅ. 18ರಿಂದ ಉದಯವಾಣಿ ಸುದಿನದಲ್ಲಿ ಪ್ರಕಟಗೊಂಡ ‘ಪ್ಲಾಸ್ಟಿಕ್ ಚಕ್ರವ್ಯೂಹ’ ಸರಣಿ ಜಾಗೃತಿ ವರದಿಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಪ್ಲಾಸ್ಟಿಕ್ ನಿಷೇಧವನ್ನು ಜಾರಿಗೆ ತರಲು ತಂಡಗಳ ರಚನೆ ಮಾಡುವುದಾಗಿ ಹೇಳಿದ್ದಾರೆ.
ಕಳೆದ ಹಲವು ದಿನಗಳಿಂದ ನಡೆದ ಸರಣಿಯಲ್ಲಿ ಓದುಗರು ಕೂಡಾ ಹಲವು ಸಲಹೆಗಳನ್ನು ನೀಡಿದ್ದಾರೆ. ಪ್ಲಾಸ್ಟಿಕ್ ನಿಯಂತ್ರಣದಲ್ಲಿ ಕೆಲಸ ಮಾಡಿರುವ ಹಲವು ಗಣ್ಯರು ಕೂಡಾ ಅಭಿಪ್ರಾಯ ಮಂಡಿಸಿದ್ದಾರೆ.
ಎಲ್ಲರ ಅಭಿಪ್ರಾಯಗಳ ಒಟ್ಟು ಸಾರವೇನೆಂದರೆ ಮಂಗಳೂರು ನಗರದ ತ್ಯಾಜ್ಯ ವಿಲೇವಾರಿಗೆ ಇಂದೋರ್ ಮಾದರಿ ಪೂರಕವಾಗಿದೆ. ಅದನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಆಡಳಿತ ಮತ್ತು ಅಧಿಕಾರಿಗಳು ಪ್ರಯತ್ನಿಸಬೇಕು. ಉಳಿದಂತೆ ಏಕ ಬಳಕೆ ಪ್ಲಾಸ್ಟಿಕ್ ಮಾರಾಟವನ್ನು ಪೂರ್ಣವಾಗಿ ನಿರ್ಬಂಧಿಸಬೇಕು, ತಪ್ಪಿತಸ್ಥರಿಗೆ ದಂಡ ವಿಧಿಸಬೇಕು, ಮನೆಯಿಂದ ನೀಡುವ ಕಸವನ್ನು ಹಸಿ ಮತ್ತು ಒಣ ಆಗಿ ವಿಂಗಡಿಸಿಯೇ ನೀಡಬೇಕು ಎನ್ನುವುದು ಪ್ರಮುಖ ಅಭಿಪ್ರಾಯ. ಎಲ್ಲದಕ್ಕಿಂತ ಹೆಚ್ಚಾಗಿ ಮುಂದಿನ ಪೀಳಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡಾದರೂ ನಾಗರಿಕರು ಪ್ಲಾಸ್ಟಿಕ್ ಬಳಕೆಯನ್ನು ಮಿತಗೊಳಿಸಬೇಕು ಎನ್ನುವುದು ಎಲ್ಲರ ಕಳಕಳಿಯಾಗಿತ್ತು.
ವ್ಯಾಪಾರಿಗಳಿಗೆ ಅರಿವು: ಮೇಯರ್
ನಗರದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ತರುವ ನಿಟ್ಟಿನಲ್ಲಿ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದೊಂದಿಗೆ ಬಳಕೆದಾರರಿಗೆ ವಿಶೇಷ ಅರಿವು ಕಾರ್ಯಕ್ರಮ ಆಯೋಜಿಸಲಾಗುವುದು. ಪ್ಲಾಸ್ಟಿಕ್ ಚಿಲ್ಲರೆ ಮಾರಾಟಗಾರರು, ಹೋಲ್‌ಸೇಲ್ ಮಾರಾಟಗಾರರಿಗೆ ಮಾಹಿತಿ ನೀಡಲಾಗುವುದು. ದಂಡ ಹಾಕಿ ಸುಧಾರಣೆ ತರುವ ಮುನ್ನ ವ್ಯವಸ್ಥೆಯಲ್ಲಿ ಆಶಾಭಾವ ವಾತಾವರಣ ಮೂಡಿಸಬೇಕಾಗಿದೆ ಎಂದು ಮೇಯರ್ ಮನೋಜ್ ಕುಮಾರ್ ತಿಳಿಸಿದರು.
ಪ್ಲಾಸ್ಟಿಕ್ ಉತ್ಪಾದಕರು ಹಾಗೂ ಬಳಕೆದಾರರು ಇದರ ನಿಯಂತ್ರಣದಲ್ಲಿ ಮುಖ್ಯ ಪಾತ್ರ ವಹಿಸುತ್ತಾರೆ. ಹೀಗಾಗಿ ಎರಡೂ ಕಡೆಯಲ್ಲಿ ಬದಲಾವಣೆ ಕಂಡುಕೊಂಡರೆ ಹೆಚ್ಚು ಲಾಭದಾಯಕವಾಗಲಿದೆ. ಇದಕ್ಕಾಗಿಯೇ ಹೆಚ್ಚು ಪ್ಲಾಸ್ಟಿಕ್ ಬಳಕೆ ಆಗುತ್ತಿರುವ ವಲಯಗಳಾದ ಅಂಗಡಿ ವ್ಯಾಪಾರಸ್ಥರು, ಹೊಟೇಲ್, ಕ್ಯಾಟರಿಂಗ್ ಸಹಿತ ವಿವಿಧ ಸ್ತರದವರನ್ನು ಕರೆದು ಸಭೆ ನಡೆಸಲಾಗುವುದು ಎಂದು ಹೇಳಿದರು.
ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ಜಾಗೃತಿಯ ಜತೆಗೆ ಪರ್ಯಾಯ ಬಳಕೆಯ ವಸ್ತುಗಳ ಅರಿವನ್ನೂ ಮೂಡಿಸಬೇಕಾಗಿದೆ. ಅದರಲ್ಲೂ ಮೀನು, ಮಾಂಸ ಕೊಂಡೊಯ್ಯಲು ಪ್ಲಾಸ್ಟಿಕ್ ಬಳಕೆ ಅಧಿಕವಾಗುತ್ತಿರುವ ಕಾರಣದಿಂದ ಅಲ್ಲಿನ ಸವಾಲನ್ನು ಎದುರಿಸುವ ಅವಲೋಕನ ನಡೆಸುವುದಾಗಿ ಹೇಳಿದರು.
ಪ್ಲಾಸ್ಟಿಕ್ ಸಂಗ್ರಹಕ್ಕೆ ಪ್ರತ್ಯೇಕ ದಿನ
ಪ್ಲಾಸ್ಟಿಕ್ ಮರು ಬಳಕೆಗೆ ವಿಶೇಷ ಆದ್ಯತೆ ನೀಡಬೇಕಿದೆ. ತ್ಯಾಜ್ಯದೊಟ್ಟಿಗೆ ಪ್ಲಾಸ್ಟಿಕ್ ನೀಡುವ ಕಾರಣದಿಂದ ಅದು ಮತ್ತೆ ಭೂಮಿಯೊಳಗೆ ಹೋಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಿದೆ. ಇದಕ್ಕಾಗಿ ಮನೆಯಲ್ಲಿಯೇ ಇದರ ಮರು ಬಳಕೆ ಸೂತ್ರ ಜಾರಿಗೆ ಮುಂದಾಗಬೇಕಿದೆ. ಪ್ಲಾಸ್ಟಿಕ್ ಅನ್ನು ಪ್ರತ್ಯೇಕ ದಿನ ಪಾಲಿಕೆಯಿಂದ ಸಂಗ್ರಹಿಸುವ ಸಾಧ್ಯತೆ ಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಆ ಮೂಲಕ ಪಡೆದ ಪ್ಲಾಸ್ಟಿಕ್ ಮರು ಬಳಕೆಗೆ ನೀಡುವ ಕುರಿತಂತೆ ಚಿಂತನೆ ನಡೆಸಲಾಗುವುದು ಎನ್ನುವುದು ಮೇಯರ್ ಮಾತು.
ಸಂಸ್ಕರಣ ಘಟಕದ ಟೆಂಡರ್: ಆಯುಕ್ತರು
ನಗರದಲ್ಲಿ ಉತ್ಪತ್ತಿಯಾಗುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಸ್ಕರಣೆ ಮಾಡಲು ಪಚ್ಚನಾಡಿಯಲ್ಲಿ ಪ್ಲಾಸ್ಟಿಕ್ ಸಂಸ್ಕರಣ ಘಟಕ ತೆರೆಯಲಾಗುವುದು ಕೇಂದ್ರ ಸರಕಾರದ ಸ್ವತ್ಛ ಭಾರತ್ ಮಿಷನ್ 2.0 ಯೋಜನೆಯಡಿ ಪ್ರತ್ಯೇಕ ಘಟಕ ನಿರ್ಮಾಣ ಮಾಡಲಾಗುತ್ತದೆ. ನಗರದಲ್ಲಿ ಉತ್ಪತ್ತಿಯಾಗುವ ಒಣ ಕಸವನ್ನು ಸಂಸ್ಕರಿಸಿ, ಅದರಿಂದ ಕರಗಿಸಿ ರಫ್ತು ಮಾಡಲಾಗುವುದು. ಘಟಕಕ್ಕೆ ಯಂತ್ರೋಪಕರಣ ಖರೀದಿಗೆ ಕೆಲವೆ ದಿನಗಳಲ್ಲಿ ಟೆಂಡರ್ ಕರೆಯಲಾಗುವುದು ಎಂದು ಆಯುಕ್ತರಾದ ಆನಂದ್ ಸಿ.ಎಲ್. ತಿಳಿಸಿದರು.
ಆರು ವಾರ್ಡ್‌ಗೆ ಒಂದು ತಂಡ
ನಗರದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಉತ್ಪನ್ನಗಳ ಮಾರಾಟ ಮತ್ತು ಬಳಕೆ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಪ್ರತೀ ಆರು ವಾರ್ಡ್‌ಗೊಂದು ತಂಡ ರಚನೆ ಮಾಡಲಾಗುವುದು. ನಗರದೆಲ್ಲೆಡೆ ಕಾರ್ಯಾಚರಣೆ ನಡೆಸಲು ಪ್ರತೀ ಆರು ವಾರ್ಡ್‌ಗೆ 5 ಮಂದಿಯ ಹತ್ತು ತಂಡ ರಚನೆ ಮಾಡಲಾಗುತ್ತದೆ. ಪಾಲಿಕೆಯ ಆರೋಗ್ಯ ನಿರೀಕ್ಷಕರು, ಪರಿಸರ ಅಭಿಯಂತ, ಮಲೇರಿಯಾ ಮೇಲ್ವಿಚಾರಕರು, ಕಂದಾಯ ಅಧಿಕಾರಿ ಸಹಿತ ಒಂದು ತಂಡದಲ್ಲಿ ಐದರಿಂದ ಆರು ಮಂದಿ ಅಧಿಕಾರಿಗಳು ಇರಲಿದ್ದಾರೆ ಎಂದು ಆಯುಕ್ತರಾದ ಆನಂದ್ ಸಿ.ಎಲ್. ವಿವರಿಸಿದರು.
ಶಾಲೆಗಳಲ್ಲೂ ಜಾಗೃತಿಗೆ ಕ್ರಮ
ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡದಂತೆ ಅಂಗಡಿ ಮಾಲಕರಿಗೆ ಮತ್ತು ಸಾರ್ವಜನಿಕರಿಗೆಅರಿವು ಮೂಡಿಸುತ್ತದೆ. ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡದಂತೆ ಅರಿವು ಮೂಡಿಸುವ ಕೆಲಸವನ್ನೂ ಮಾಡುತ್ತದೆ. ಒಂದು ವೇಳೆ ಬಳಕೆ ಮಾಡಿದರೆ ದಂಡ ಪ್ರಯೋಗದ ಜತೆ ಪ್ಲಾಸ್ಟಿಕ್‌ಗಳನ್ನು ವಶಪಡಿಸಿಕೊಳ್ಳಲು ನಿರ್ಧರಿಸಿದೆ. ಬಳಕೆ ಪುನರಾವರ್ತನೆಯಾದರೆ ದುಬಾರಿ ದಂಡದ ಜೊತೆಗೆ ಪರವಾನಿಗೆ ರದ್ದುಗೊಳಿಸಲು ನಿರ್ಧಾರವನ್ನೂ ಕೈಗೊಳ್ಳಲಾಗುತ್ತದೆ ಎಂದರು ಆಯುಕ್ತರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kota: ಪಾದಚಾರಿ ಮಾರ್ಗದಲ್ಲೂ ಹೊಂಡ!
Muddebihal: ಅತ್ಯಾಚಾರ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹಿಸಿ ಪ್ರತಿಭಟನೆ
Hagaribommanahalli: ಹಳಿ ದಾಟುತ್ತಿರುವಾಗ ರೈಲು ಡಿಕ್ಕಿ ಹೊಡೆದು ವ್ಯಕ್ತಿ ಸಾವು
Mangalore: ಲೋವರ್ ಬೆಂದೂರ್‌ವೆಲ್-ಕರಾವಳಿ ವೃತ್ತ ರಸ್ತೆ ಅವ್ಯವಸ್ಥೆ
Waqf issue: ಬಿಜೆಪಿ ಅಧಿಕಾರದಲ್ಲಿದ್ದಾಗ ಕತ್ತೆ ಕಾಯಿತಿದ್ದರಾ?: ಪ್ರಿಯಾಂಕ್ ಖರ್ಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.