Lalbagh: ಪಾಲಿಕೆ ಚುನಾವಣೆ ಸನ್ನಿಹಿತ; ಮೀಸಲಾತಿಯದೇ ಆತಂಕ!
ಐದು ವರ್ಷಕ್ಕೊಮ್ಮೆ ಹಲವು ವಾರ್ಡ್‌ಗಳ ಮೀಸಲಾತಿ ಬದಲು ಖಚಿತ; ಹಾಲಿಗಳಿಗೆ ಸೀಟಿನ ಚಿಂತೆ ಶುರು; ಮೀಸಲಾತಿ ಘೋಷಣೆ ವಿಳಂಬವಾದರೆ ಫೆಬ್ರವರಿಯಲ್ಲಿ ನಡೆಯುವ ಚುನಾವಣೆಯೇ ಮುಂದೂಡುವ ಸಾಧ್ಯತೆ
Team Udayavani, Oct 17, 2024, 3:45 PM IST
ಲಾಲ್‌ಬಾಗ್: ಮಂಗಳೂರು ಮಹಾನಗರ ಪಾಲಿಕೆಯ ಹಾಲಿ ಆಡಳಿತಾವಧಿ 2025ರ ಫೆ. 27ಕ್ಕೆ ಮುಕ್ತಾಯವಾಗಲಿದೆ. ನಿಗದಿಯಂತೆ ನಡೆದರೆ ಆಗಲೇ ಚುನಾವಣೆ ನಡೆಯಬೇಕು. ಆದರೆ, ಚುನಾವಣೆಗೆ ಮುನ್ನ ಮೀಸಲಾತಿ ಮರುವಿಂಗಡಣೆ ಮಾಡಬೇಕಾಗಿದೆ. ಅದು ಸಕಾಲದಲ್ಲಿ ನಡೆದರೆ ಮಾತ್ರ ಸಮಯಕ್ಕೆ ಸರಿಯಾಗಿ ಚುನಾವಣೆ ನಡೆಯಲಿದೆ. ಇದರ ನಡುವೆ, ವಾರ್ಡ್ ಮೀಸಲಾತಿ ಬದಲಾವಣೆಯಾದರೆ ತಮ್ಮ ವಾರ್ಡ್ ಉಳಿಯಬಹುದೇ ಅಥವಾ ಕೈತಪ್ಪಬಹುದೇ ಎಂಬ ಆತಂಕವೂ ಪ್ರಮುಖ ಕಾರ್ಪೊರೇಟರ್‌ಗಳಲ್ಲಿ ಮನೆ ಮಾಡಿದೆ.
ಪಾಲಿಕೆ ಚುನಾವಣೆ ನಡೆಯುವಾಗ ಪ್ರತೀ 10 ವರ್ಷಕ್ಕೊಮ್ಮೆ ವಾರ್ಡ್ ಪುನರ್ ವಿಂಗಡನೆ ಮಾಡಬೇಕಾಗುತ್ತದೆ. 2019ರಲ್ಲಿ ವಾರ್ಡ್ ವಿಂಗಡನೆ ಆಗಿರುವ ಕಾರಣದಿಂದ ಈ ಬಾರಿ ವಾರ್ಡ್ ವಿಂಗಡನೆ, ಸೇರ್ಪಡೆ ವಿಷಯ ಬರುವುದಿಲ್ಲ. ಆದರೆ ಪ್ರತೀ 5 ವರ್ಷಕ್ಕೊಮ್ಮೆ ಪಾಲಿಕೆ ವಾರ್ಡ್ ಮೀಸಲಾತಿ ಬದಲಾಗಬೇಕಾಗುತ್ತದೆ. ಈ ಕಾರಣದಿಂದ ಪಾಲಿಕೆ ಚುನಾವಣೆಗೆ ಮುನ್ನ ವಾರ್ಡ್ ಮೀಸಲಾತಿ ವಿಚಾರ ಹಾಲಿ ಸದಸ್ಯರನ್ನು ಹಾಗೂ ಟಿಕೆಟ್ ನಿರೀಕ್ಷಿತರ ಕುತೂಹಲಕ್ಕೆ ಕಾರಣವಾಗಿದೆ. ಹಾಲಿ ಇರುವ ವಾರ್ಡ್‌ನ ಕಾರ್ಪೋರೆಟರ್‌ಗಳ ಪೈಕಿ ಬಹುತೇಕ ಸದಸ್ಯರ ಕ್ಷೇತ್ರದ ಮೀಸಲಾತಿ ಅದಲು-ಬದಲಾಗುವ ಕಾರಣದಿಂದ ಯಾರಿಗೆ ಸ್ಪರ್ಧೆಯ ಅವಕಾಶ ಎಂಬುದೇ ಸದ್ಯದ ಕುತೂಹಲ!
2011ರ ಜನಗಣತಿ ಪ್ರಕಾರ ಎಸ್‌ಸಿ ಎಸ್‌ಟಿ ಮೀಸಲಾತಿ ನೀಡಲಾಗುತ್ತದೆ. ಈಗಾಗಲೇ ಇರುವ ವಾರ್ಡ್‌ನ ಇಂತಹ ಮೀಸಲಾತಿ ಬೇರೆ ವಾರ್ಡ್‌ಗೆ ಬದಲಾಗುವ ಸಾಧ್ಯತೆ ಇದೆ. ಆಗ ಹಾಲಿ ಸದಸ್ಯರಿಗೆ ಅವಕಾಶ ತಪ್ಪುವ ಸಾಧ್ಯತೆಯೂ ಇದೆ. ಉಳಿದಂತೆ ಇರುವ ಎಲ್ಲ ವಿಧದ ಮೀಸಲಾತಿಯನ್ನು ಸರಕಾರ ಆದ್ಯತೆ ನೆಲೆಯಲ್ಲಿ ವಿವಿಧ ‘ಕಾರಣಗಳ ನೆಪ’ದಿಂದ ಬದಲಾವಣೆ ಮಾಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಹೀಗೆ ವ್ಯತ್ಯಾಸವಾದರೆ ಕೆಲವರಿಗೆ ಟಿಕೆಟ್ ಕೈತಪ್ಪುವ ಪರಿಸ್ಥಿತಿ ಇದೆ.
ಮಹಿಳೆಯರಿಗೆ 50%; ಆದರೆ ಕ್ಷೇತ್ರ ಬದಲು!
ಪಾಲಿಕೆಯಲ್ಲಿ ಕಳೆದ ಬಾರಿ ಆರಂಭಗೊಂಡ ಶೇ.50 ಮಹಿಳಾ ಮೀಸಲಾತಿ ಹಾಗೇ ಮುಂದುವರಿಯಲಿದೆ ಆದರೆ, ಈಗ ಇರುವ ಮಹಿಳಾ ಮೀಸಲು ವಾರ್ಡ್ ಬದಲಾಗಬಹುದು! 2013ರಲ್ಲೇ ಶೇ. 50 ಮಹಿಳಾ ಮೀಸಲಾತಿ ಜಾರಿಯಾಗಿದ್ದರೂ ಕಾನೂನು ತೊಡಕುಗಳ ಹಿನ್ನೆಲೆಯಲ್ಲಿ ಇದು ಅನುಷ್ಠಾನವಾಗದೆ ಶೇ. 33 ಮೀಸಲಾತಿಯಲ್ಲಿ ಚುನಾವಣೆ ನಡೆದಿತ್ತು. 22 ಮಹಿಳೆಯರು ಗೆದ್ದಿದ್ದರು.
ವಾರ್ಡ್ ಮೀಸಲಾತಿಯಿಂದ ಆಕ್ರೋಶ!
2019ರಲ್ಲಿ ವಾರ್ಡ್‌ವಾರು ಮೀಸಲಾತಿ ಆಗಿನ ಕಾರ್ಪೋರೆಟರ್‌ಗಳ ಅಸಮಾಧಾನಕ್ಕೆ ಕಾರಣವಾಗಿತ್ತು. ಆಗ 60 ಸದಸ್ಯರ ಪೈಕಿ ಅರ್ಧದಷ್ಟು ಮಂದಿಗೆ ಮಾತ್ರ ಮರಳಿ ತಮ್ಮದೇ ಕ್ಷೇತ್ರ ಸಿಕ್ಕಿತ್ತು, ಉಳಿದೆಡೆ ಹೊಸಬರ ಎಂಟ್ರಿ ಆಗಿತ್ತು. ಇದು ಹಿರಿಯ ಸದಸ್ಯರನ್ನು ಕೆರಳಿಸಿತ್ತು. ಆಕ್ರೋಶ, ಬಂಡಾಯದ ಸಾಧ್ಯತೆಗಳನ್ನು ಮೊದಲೇ ಊಹಿಸಿದ್ದ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ನಾಮಪತ್ರ ಸಲ್ಲಿಸಲು ಒಂದು ದಿನ ಬಾಕಿ ಇರುವಾಗ ರಾತ್ರಿ ಪ್ರಕಟಿಸಿತ್ತು. ಬಿಜೆಪಿಯಲ್ಲಿಯೂ ಟಿಕೆಟ್ ವಂಚಿತರ ಆಕ್ರೋಶ ಜೋರಾಗಿತ್ತು.
ಹಿಂದಿನ ಫಲಿತಾಂಶಗಳು
2019: ಬಿಜೆಪಿ-44, ಕಾಂಗ್ರೆಸ್-14, ಎಸ್‌ಡಿಪಿಐ-2 ಸ್ಥಾನಗಳನ್ನು ಪಡೆದಿತ್ತು.
2013: ಕಾಂಗ್ರೆಸ್-35, ಬಿಜೆಪಿ-20, ಜೆಡಿಎಸ್-2, ಸಿಪಿಎಂ, ಎಸ್‌ಡಿಪಿಐ, ಪಕ್ಷೇತರ- ತಲಾ 1
ಮೀಸಲಾತಿ ಬದಲಾವಣೆಗೆ ಹಲವು ಅಡೆತಡೆ
ಕಾನೂನಿನ ಪ್ರಕಾರ ಮೀಸಲಾತಿಗೆ ನಿಯಮಾವಳಿಯನ್ನು ಆರಂಭದಲ್ಲಿ ಪ್ರಕಟಿಸಬೇಕು. ಅದರ ಆಧಾರದಲ್ಲಿ ಮೀಸಲಾತಿಯನ್ನು ರೂಪಿಸಬೇಕು. ಆದರೆ, ಇಲ್ಲಿಯವರೆಗೆ ಈ ಕ್ರಮ ಪಾಲನೆ ಆಗಿದ್ದು ಕಡಿಮೆ. ಹೀಗಾಗಿಯೇ ಮಂಗಳೂರಿನ ಕೆಲವು ವಾರ್ಡ್‌ಗಳ ನಿಗದಿತ ಮೀಸಲಾತಿ ಇನ್ನೂ ಬದಲಾವಣೆಯೇ ಆಗಿಲ್ಲ. ‘ಸಾಮಾನ್ಯ’ ಎಂಬ ಮೀಸಲಾತಿ ಇದ್ದ ಕೆಲವು ವಾರ್ಡ್‌ಗಳಲ್ಲಿ ಕೆಲವು ವರ್ಷದಿಂದ ಬದಲಾವಣೆಯೇ ಆಗಿಲ್ಲ!
2013 ಮಾ. 7ರಂದು ಮಂಗಳೂರು ಪಾಲಿಕೆ ಚುನಾವಣೆ ನಡೆದಿತ್ತು. 2019ರಲ್ಲಿ ಮಾ. 7ಕ್ಕೆ ಮತ್ತೆ ಚುನಾವಣೆ ನಡೆಯಬೇಕಿತ್ತು. ಆದರೆ ವಾರ್ಡ್ ಮೀಸಲಾತಿ ಪ್ರಶ್ನಿಸಿ ಕೆಲವು ಮಂದಿ ನ್ಯಾಯಾಲಯದ ಮೆಟ್ಟಿಲೇರಿದ ಪರಿಣಾಮ ಚುನಾವಣೆ ನಡೆದಿರಲಿಲ್ಲ. ಎರಡೂ ಪಕ್ಷದಲ್ಲಿ ಮೀಸಲಾತಿ ವಿಚಾರ ವಿವಿಧ ಪ್ರಕಾರವಾಗಿ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿ ಬಳಿಕ ಇದು ನ್ಯಾಯಾಲಯದ ಮೆಟ್ಟಿಲೇರಿತ್ತು.
ಮೀಸಲಾತಿ ವಿವಾದವನ್ನು ನ್ಯಾಯಾಲಯ ಬಗೆಹರಿಸಿ ಚುನಾವಣೆಯನ್ನು ಅ. 31ರೊಳಗೆ ಪೂರ್ಣಗೊಳಿಸಿ, ನ. 15ರೊಳಗೆ ಹೊಸ ಆಡಳಿತ ವ್ಯವಸ್ಥೆ ಸ್ಥಾಪನೆಯಾಗಬೇಕು ಎಂದು ರಾಜ್ಯ ಚುನಾವಣೆ ಆಯೋಗಕ್ಕೆ ಹೈಕೋರ್ಟ್ ಆ. 27ರಂದು ನಿರ್ದೇಶನ ನೀಡಿತ್ತು. ಇದೇ ಸಂದರ್ಭ ಮಂಗಳೂರು ಪಾಲಿಕೆಯ ಮೀಸಲಾತಿಯ ಕುರಿತಂತೆ ಹೈಕೋರ್ಟ್‌ನ ದ್ವಿಸದಸ್ಯ ಪೀಠದಲ್ಲಿ ಸಲ್ಲಿಕೆಯಾಗಿದ್ದ ಪುನರ್ ಪರಿಶೀಲನ ಅರ್ಜಿ ಕೂಡ ಅ. 11ರಂದು ವಜಾಗೊಂಡಿತ್ತು. ಕೊನೆಗೆ, ನ. 12ರಂದು ಮತದಾನ ನಡೆದಿತ್ತು.
ಫೆಬ್ರವರಿಯಲ್ಲಿ ಪಾಲಿಕೆ ಚುನಾವಣೆ ಅನುಮಾನ
2019ರ ನ. 12ರಂದು ಮಂಗಳೂರು ಪಾಲಿಕೆ ಚುನಾವಣೆ ನಡೆದಿತ್ತು. ಆದರೆ ಮೇಯರ್ ಮೀಸಲಾತಿ ವಿಳಂಬದಿಂದ ಫೆ.27ಕ್ಕೆ ಹೊಸ ಮೇಯರ್ ಅಧಿಕಾರ ಸ್ವೀಕರಿಸಿದರು. ಹೀಗಾಗಿ ಅಂದಿನಿಂದ ಐದು ವರ್ಷ ಆಡಳಿತ ಅವಧಿ ನಿಗದಿಯಾಗಿತ್ತು. ಚುನಾವಣೆ ನಡೆಯುವ ಕೆಲವು ತಿಂಗಳ ಮುನ್ನವೇ ಮತದಾರರ ಪಟ್ಟಿ ಆಗಬೇಕಿದೆ.
ಬೂತ್ ಬದಲಾವಣೆ ಇನ್ನಿತರ ಪ್ರಕ್ರಿಯೆ ನಡೆಸಲಾಗುತ್ತದೆ. ಆದರೆ, ಈ ಯಾವುದೇ ಪ್ರಕ್ರಿಯೆ ಇಲ್ಲಿಯವರೆಗೆ ನಡೆದಿಲ್ಲವಾದ್ದರಿಂದ ಪಾಲಿಕೆ ಚುನಾವಣೆ ನಿಗದಿತ ಸಮಯದಲ್ಲಿ ನಡೆಯುತ್ತದೆಯೇ? ಎಂಬ ಪ್ರಶ್ನೆಯೂ ಉಂಟು.
ಮೈಸೂರು, ತುಮಕೂರು, ಶಿವಮೊಗ್ಗ ಪಾಲಿಕೆ ಆಡಳಿತ ಅವಧಿ ಪೂರ್ಣವಾಗಿ ವರ್ಷ 1 ಕಳೆದಿದೆ. ಬಿಬಿಎಂಪಿ ಆಡಳಿತ ಅವಧಿ ಪೂರ್ಣವಾಗಿ 3 ವರ್ಷವೇ ಸಮೀಪಿಸಿದೆ. ಇಷ್ಟೂ ಸ್ಥಳಗಳಲ್ಲಿ ಇನ್ನೂ ಚುನಾವಣೆ ನಡೆಸದ ಕಾರಣದಿಂದ ಫೆಬ್ರವರಿಯಲ್ಲಿ ಪೂರ್ಣಗೊಳ್ಳಲಿರುವ ಮಂಗಳೂರು ಹಾಗೂ ದಾವಣಗೆರೆಯಲ್ಲಿ ಚುನಾವಣೆ ನಡೆಸುವ ಸಾಧ್ಯತೆ ಇದೆಯೇ? ಎಂಬುದು ಸದ್ಯದ ಕುತೂಹಲ.
-ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.