ಎಂಆರ್‌ಪಿಎಲ್ ಪರಿಸರದಲ್ಲಿ ಚಿರತೆ
Team Udayavani, May 3, 2020, 11:57 PM IST
ಮಂಗಳೂರು: ಸುರತ್ಕಲ್ ಸಮೀಪದ ಎಂಆರ್‌ಪಿಎಲ್ ಪರಿಸರದಲ್ಲಿ ಚಿರತೆಯೊಂದು ಕಾಣಿಸಿಕೊಂಡಿದ್ದು, ಸ್ಥಳೀಯವಾಗಿ ಆತಂಕಕ್ಕೆ ಕಾರಣವಾಗಿದೆ. ಚಿರತೆ ನಡೆದುಕೊಂಡು ಹೋಗುತ್ತಿರುವ ದೃಶ್ಯ ಎಂಆರ್‌ಪಿಎಲ್‌ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮೇ 1ರ ರಾತ್ರಿ ಎಂಆರ್‌ಪಿಎಲ್ ಪರಿಸರದಲ್ಲಿ ಚಿರತೆ ನಡೆದುಕೊಂಡು ಹೋಗುತ್ತಿರುವ ದೃಶ್ಯ ಮರುದಿನ ಬೆಳಗ್ಗೆ ಸಿಸಿ ಟಿವಿಯಲ್ಲಿ ಪರಿಶೀಲಿಸಿದಾಗ ಅರಿವಿಗೆ ಬಂದಿದೆ. ತತ್‌ಕ್ಷಣವೇ ಎಂಆರ್‌ಪಿಎಲ್ ಅಧಿಕಾರಿಗಳು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಮಂಗಳೂರಿನ ಅರಣ್ಯ ಇಲಾಖೆ ಸಿಬಂದಿ ಚಿರತೆ ಕಂಡುಬಂದ ಸ್ಥಳಕ್ಕೆ ಭೇಟಿ ನೀಡಿ ಚಿರತೆಯ ಚಲನವಲನಗಳ ಕುರುಹನ್ನು ಪರಿಶೀಲಿಸಿದ್ದಾರೆ. ಜತೆಗೆ ಚಿರತೆ ಹೋಗಿರಬಹುದಾದ ಸ್ಥಳಗಳಿಗೂ ಅರಣ್ಯ ಇಲಾಖೆ ಸಿಬಂದಿ ಭೇಟಿ ನೀಡಿದ್ದಾರೆ.
ಚಿರತೆಯನ್ನು ಸೆರೆ ಹಿಡಿಯುವ ನೆಲೆಯಲ್ಲಿ ಇಲಾಖೆಯವರು ಬೋನುಗಳನ್ನು ಪರಿಸರದಲ್ಲಿ ಜೋಡಿಸಿಟ್ಟಿದ್ದಾರೆ. ಸದ್ಯ ಅರಣ್ಯ ಇಲಾಖೆ ಸಿಬಂದಿ ಎಂಆರ್‌ಪಿಎಲ್ ವ್ಯಾಪ್ತಿಯಲ್ಲಿ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಜತೆಗೆ ಎಂಆರ್‌ಪಿಎಲ್‌ನ ಎಲ್ಲ ಭಾಗಗಳಲ್ಲಿರುವ ಸಿಸಿ ಟಿವಿ ದೃಶ್ಯಗಳನ್ನೂ ನಿರಂತರವಾಗಿ ಪರಿಶೀಲನೆ ನಡೆಸುತ್ತಿದ್ದಾರೆ. ರವಿವಾರ ಸಂಜೆಯವರೆಗೂ ಯಾವುದೇ ಸುಳಿವು ದೊರಕಿಲ್ಲ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
ಸಿಸಿ ಟಿವಿ ದೃಶ್ಯದಲ್ಲಿ ಕಂಡ ಪ್ರಕಾರ ಚಿರತೆ 6ರಿಂದ 7 ವರ್ಷ ಪ್ರಾಯದ್ದಾಗಿದೆ. ಅದನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುತ್ತಿದ್ದು, ಯಾರೂ ಗಾಬರಿಗೊಳ್ಳುವ ಅಗತ್ಯವಿಲ್ಲ ಎಂದು ಅರಣ್ಯ ಇಲಾಖೆ ಹಾಗೂ ಎಂಆರ್‌ಪಿಎಲ್‌ನ ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗೆ ಮಂಗಳೂರು ಹೊರವಲಯದ ಎಡಪದವು ಹಾಗೂ ತುಂಬೆಯಲ್ಲಿ ಚಿರತೆ ಪ್ರತ್ಯಕ್ಷಗೊಂಡಿತ್ತು. ಅವುಗಳನ್ನು ಅರಣ್ಯ ಇಲಾಖೆಯವರು ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದ್ದರು. ನಾಲ್ಕು ವರ್ಷಗಳ ಹಿಂದೆ ಎಂಆರ್‌ಪಿಎಲ್ ವ್ಯಾಪ್ತಿಯಲ್ಲಿ ಚಿರತೆ ಪ್ರತ್ಯಕ್ಷಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.