ದ್ರವತ್ಯಾಜ್ಯ ನಿರ್ವಹಣೆಯೇ ಇಲ್ಲಿನ ಮುಖ್ಯ ಸಮಸ್ಯೆ
ಶಿಕ್ಷಣ ಕ್ಷೇತ್ರದ ಹೆಬ್ಬಾಗಿಲು ಬೆಳ್ಮ ಗ್ರಾಮಕ್ಕೆ ಸಿಗಬೇಕಿದೆ ಮೂಲಸೌಕರ್ಯ
Team Udayavani, Jul 18, 2022, 11:09 AM IST
ಉಳ್ಳಾಲ: ದ.ಕ. ಜಿಲ್ಲಾ ಕೇಂದ್ರ ಸ್ಥಾನವಾಗಿರುವ ಮಂಗಳೂರಿನಿಂದ ಆಗ್ನೇಯ ಭಾಗದಲ್ಲಿ 15 ಕಿ. ಮೀ. ದೂರದಲ್ಲಿರುವ ಗ್ರಾಮ ಬೆಳ್ಮ. ವೈದ್ಯಕೀಯ ಶಿಕ್ಷಣ ಸಹಿತ ಉನ್ನತ ಶಿಕ್ಷಣ ಸಂಸ್ಥೆಗಳ ಹೆಬ್ಟಾಗಿಲು ಈ ಗ್ರಾಮ. ಕೋಟೆಕಾರು-ಮುನ್ನೂರು-ಬೆಳ್ಮ ಗ್ರಾಮದ ಸಂಗಮ ಪ್ರದೇಶವಾಗಿರುವ ಯೇನಪೊಯದಿಂದ ನಾಟೆಕಲ್‌ನಲ್ಲಿರುವ ಕಣಚೂರು ವೈದ್ಯಕೀಯ ಕಾಲೇಜಿನವರೆಗೆ ನಾಲ್ಕು ವೈದ್ಯಕೀಯ ಕಾಲೇಜು ಸಂಪರ್ಕಿಸುವ ತೊಕ್ಕೊಟ್ಟು – ಮಂಗಳೂರು ವಿವಿ ಮುಖ್ಯ ರಸ್ತೆ ಬೆಳ್ಮ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸೇರಿದೆ. ಬೆಳ್ಮ ಗ್ರಾಮದ ದೇರಳಕಟ್ಟೆಯಲ್ಲಿ ಪ್ರಮುಖ ಸಮಸ್ಯೆ ದ್ರವ ತ್ಯಾಜ್ಯ ನಿರ್ವಹಣೆ. ಅಭಿವೃದ್ಧಿಯೊಂದಿಗೆ ಈ ಪ್ರದೇಶದಲ್ಲಿ ವಾಣಿಜ್ಯ ಸಂಕೀರ್ಣಗಳು, ಹಾಸ್ಟೆಲ್‌ಗಳು ಸಹಿತ ಬಹುಮಹಡಿ ಕಟ್ಟಡಗಳಿಂದ ಹರಿಯುವ ದ್ರವ ತ್ಯಾಜ್ಯದಿಂದ ಇಲ್ಲಿನ ನಿವಾಸಿಗಳು ತೊಂದರೆಯನ್ನು ಎದುರಿಸುತ್ತಿದ್ದಾರೆ.
ಪ್ರಮುಖವಾಗಿ ಕೃಷಿ ಭೂಮಿಯೊಂದಿಗೆ ಗುಡ್ಡ ಪ್ರದೇಶ, ತಗ್ಗು ಪ್ರದೇಶಗಳನ್ನು ಹೊಂದಿರುವ ಬೆಳ್ಮ ಗ್ರಾಮದಲ್ಲಿ ಮಾಗಂದಡಿ ಗುಡ್ಡೆ, ಬದ್ಯಾರ್ ಗುಡ್ಡೆ, ಅಂಬೇಡ್ಕರ್ ಪದವು (ಹಿಂದೆ ಕನಕೂರು ಪದವು ಎಂಬ ಹೆಸರಿತ್ತು) ಕಲ್ಲುಗುಡ್ಡೆ ಸಹಿತ ಕನಕೂರು, ರೆಂಜಾಡಿ, ಬೆಳ್ಮ ದೋಟ, ಮಾಗಂದಡಿ, ಮರ್ಕೆದು, ಬರಿಕೆ ಈ ಪ್ರದೇಶಗಳು ಜನವಸತಿ ಪ್ರದೇಶಗಳಾಗಿದ್ದು, ದೇರಳಕಟ್ಟೆ ಗ್ರಾಮದ ಕೇಂದ್ರ ಸ್ಥಾನವಾಗಿದೆ.
ದ್ರವತ್ಯಾಜ್ಯದ ಕೇಂದ್ರ ಬಿಂದು: ಉಳ್ಳಾಲ ತಾಲೂಕು ಮತ್ತು ವೈದ್ಯಕೀಯ ಶಿಕ್ಷಣ ಕೇಂದ್ರಗಳ ಬಿಂದು ದೇರಳಕಟ್ಟೆ. ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಮುಖ್ಯ ರಸ್ತೆಯ ಒಂದು ಭಾಗದಲ್ಲಿದ್ದು, ಕೋಟೆಕಾರು ಗ್ರಾಮಕ್ಕೆ ಸೇರಿದರೆ, ಇನ್ನೊಂದು ಭಾಗದಲ್ಲಿರುವ ವಾಣಿಜ್ಯ ಸಂಕೀರ್ಣಗಳು, ವಸತಿ ಸಮುಚ್ಚಯಗಳು ಬೆಳ್ಮ ಗ್ರಾಮದ ವ್ಯಾಪ್ತಿಯಲ್ಲಿವೆ.
ವಾಣಿಜ್ಯ, ವಸತಿ ಸಂಕಿರ್ಣಗಳು ದ್ರವತ್ಯಾಜ್ಯ ಸಂಗ್ರಹಕ್ಕೆ ಬೇಕಾದಷ್ಟು ಪ್ರಮಾಣದ ಎಸ್‌ಟಿಪಿ ರಚನೆ ಮಾಡದಿರುವುದು ಪ್ರಮುಖ ಸಮಸ್ಯೆ. ಇಲ್ಲಿ ಹರಿಯುವ ದ್ರವತ್ಯಾಜ್ಯದಿಂದ ಬೆಳ್ಮ ಗ್ರಾಮದ ಶೇ. 30ರಷ್ಟು ಜನರಿಗೆ ತೊಂದರೆಯಾಗುತ್ತಿದೆ. ಒಳಚರಂಡಿ ನಿರ್ಮಾಣಕ್ಕೆ ಬೇಕಾದ ಅನುದಾನ ಗ್ರಾ. ಪಂ.ಗಿಲ್ಲ. ಈ ಗ್ರಾಮವನ್ನು ಪಟ್ಟಣ ಪಂ.ಆಗಿ ಮೇಲ್ದರ್ಜೆಗೇರಿಸಿದರೆ ಮಾತ್ರ ಸಮಸ್ಯೆ ಬಗೆಹರಿಯಲು ಸಾಧ್ಯ. ದ್ರವತ್ಯಾಜ್ಯ ನಿರ್ವಹಣೆಗೆ ಅನುದಾನ ನೀಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಪ್ರಮುಖ ಬೇಡಿಕೆಗಳು: ಬೆಳ್ಮ ಗ್ರಾಮದಲ್ಲಿ ಮುಖ್ಯ ರಸ್ತೆಗಳು ಅಭಿವೃದ್ಧಿಯಾಗಿದ್ದು, ಪೊಯ್ದೆಲ್, ಬೆಳ್ಮ – ಬರುವ, ಗ್ರೀನ್ ಗ್ರೌಂಡ್, ಬದ್ಯಾರ್, ಪೆಲತ್ತಡಿ ನಿತ್ಯಾನಂದ ನಗರ ಅಡ್ಡ ರಸ್ತೆ, ಬಡಕ ಬೈಲ್, ಸಂಪರ್ಕಿಸುವ ಒಳರಸ್ತೆಗಳು ಅಭಿವೃದ್ಧಿಯಾಗಬೇಕಾಗಿದೆ. ನಿತ್ಯಾನಂದ ನಗರ, ಕಾನೆಕೆರೆ, ರೆಂಜಾಡಿ ಸಹಿತ ಎತ್ತರದಲ್ಲಿರುವ ಜನವಸತಿ ಪ್ರದೇಶಗಳಿಗೆ ಬೇಸಗೆಯಲ್ಲಿ ನೀರಿನ ಸಮಸ್ಯೆಯಿದೆ. ಗ್ರಾಮಕ್ಕೊಂದು ಕ್ರೀಡಾಂಗಣ, ರಸ್ತೆಗಳಿಗೆ ಚರಂಡಿ, ಬಸ್ಸು ತಂಗುದಾಣ, ದೇರಳಕಟ್ಟೆಯಲ್ಲಿ ಸುಸಜ್ಜಿತ (ತರಕಾರಿ-ಮೀನು) ಮಾರುಕಟ್ಟೆ, ದೇರಳಕಟ್ಟೆ ರೆಂಜಾಡಿ ಮಾರ್ಗವಾಗಿ ಎಲಿಯಾರ್‌ಪದವು ಹರೇಕಳ ಗ್ರಾಮದ ಕಡವು ಮತ್ತು ಪಾವೂರು ಸಂಪರ್ಕಿಸುವ ಪ್ರದೇಶಗಳಿಗೆ ಸರಕಾರಿ ಬಸ್, ಬೆಳ್ಮ-ಅಡ್ಕರೆ ಮಾರ್ಗವಾಗಿ ಕೊಣಾಜೆ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ಸರಕಾರಿ ಬಸ್ ಸಂಚಾರ ಇಲ್ಲಿನ ಪ್ರಮುಖ ಬೇಡಿಕೆಗಳು. ನಿವೇಶನ ರಹಿತರಿಗೆ ಭೂಮಿ ಮಂಜೂರಾಗಿದೆ. ಘನತ್ಯಾಜ್ಯ ನಿರ್ವಹಣೆಗೆ ಭೂಮಿ ಮಂಜೂರು ಆಗಿದ್ದು, ಯೋಜನೆ ಕಾರ್ಯಗತವಾಗಬೇಕಾಗಿದೆ. ಅಂಚೆ ಕಚೇರಿಯಲ್ಲಿ ಆಧಾರ್ ತಿದ್ದುಪಡಿಗೆ ಅವಕಾಶ ನೀಡಬೇಕು ಎನ್ನುವುದು ಸ್ಥಳೀಯರ ಬೇಡಿಕೆಯಾಗಿದೆ.
ಹಲವು ಗ್ರಾಮಗಳ ಕೇಂದ್ರ ಸ್ಥಾನವಾಗಿರುವ ದೇರಳಕಟ್ಟೆ ಜಂಕ್ಷನ್ ಅಭಿವೃದ್ಧಿಗೆ 4.5 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದು ಕಾರ್ಯಗತಗೊಳ್ಳಲು ಬಗ್ಗೆ ಬೆನ್ನು ಹಿಡಿಯಬೇಕಾಗಿದೆ.
ಜಲವಾಚಕ ಸ್ಥಳನಾಮ ʼಬೊಲ್ಮ’ ಈಗ ಬೆಳ್ಮ
ʼಬೊಳಮೆ’ ʼಬೊಳ್ʼ ಮತ್ತು ʼಮೆ’ ಒಂದಾಗಿ ಬೊಲ್ಮ ಈಗಿನ ಬೆಳ್ಮ ಎಂದಾಗಿದೆ. ಯಥೇತ್ಛವಾಗಿ ನೀರು ಹರಿಯುವ ಸ್ಥಳ ಜಲವಾಚಕ ಸ್ಥಳನಾಮವಾಗಿದೆ. ತುಳುವಿನ ಆಧಾರದಲ್ಲಿ ಎತ್ತರ ಮತ್ತು ತಗ್ಗು ಪ್ರದೇಶವನ್ನು ಹೊಂದಿರುವುದುರಿಂದ ಮಳೆಯ ನೆರೆ ನೀರು ನಿಂತುದುದರಿಂದ “ಬೊಲ್ಲದ ಮಾಗಣೆ ಬೊಲ್ಮವಾಗಿ ಪ್ರಸ್ತುತ ಬೆಳ್ಮವಾಗಿ ಹೆಸರು ಪಡೆದುಕೊಂಡಿತು. ಚೌಟ ಅರಸರು ಮತ್ತು ಬಂಗರಸರ ಕಾಲದಲ್ಲಿ ಅವರ ಆಡಳಿತದ ಗಡಿಗುರುತು ಇದೇ ಗ್ರಾಮದಲ್ಲಿತ್ತು ಎನ್ನುವುದು ಪ್ರತೀತಿ. ಬೆಳ್ಮ ಗ್ರಾಮದ ದೇರಳಕಟ್ಟೆಯಲ್ಲಿ ಹಿಂದೆ ದೇರಣ್ಣ ಆಳ್ವ ಎಂಬವರು ಅಶ್ವತ್ಥ ಮರಕ್ಕೆ ಕಟ್ಟೆ ಕಟ್ಟಿಸಿದ್ದು, ಈ ಪ್ರದೇಶದಲ್ಲಿ ಸಂಚರಿಸುವವರಿಗೆ ಬೆಲ್ಲ ನೀರು ನೀಡುತ್ತಿದ್ದರು. ಬಳಿಕ ಈ ಪ್ರದೇಶ ದೇರಣ್ಣ ಆಳ್ವ ಕಟ್ಟೆ ಎಂಬುದಾಗಿ ಪ್ರಸಿದ್ಧಿಯನ್ನು ಪಡೆದು ಪ್ರಸ್ತುತ ದೇರಳಕಟ್ಟೆಯಾಗಿದೆ.
ಬಸ್ ಸಂಚಾರ ಆರಂಭಿಸಿ: ಅಭಿವೃದ್ಧಿಯಾಗುತ್ತಿರುವ ಬೆಳ್ಮ ಗ್ರಾಮದಲ್ಲಿ ದ್ರವತ್ಯಾಜ್ಯ ನಿರ್ವಹಣೆಗೆ ಈಗಾಗಲೇ ಪ್ರಸ್ತಾವನೆಯನ್ನು ಸಲ್ಲಿಸಿದ್ದು, ಸರಕಾರ ಅನುದಾನ ನೀಡಬೇಕು. ದೇರಳಕಟ್ಟೆ -ರೆಂಜಾಡಿ ಮಾರ್ಗವಾಗಿ ಪಾವೂರು ಹರೇಕಳ ಮತ್ತು ದೇರಳಕಟ್ಟೆ ಅಡ್ಕರೆ ಮಾರ್ಗವಾಗಿ ಕೊಣಾಜೆಗೆ ಸರಕಾರಿ ಬಸ್ ಸಂಚಾರಕ್ಕೆ ಮನವಿಯನ್ನು ಸಲ್ಲಿಸಿದ್ದು ಶೀಘ್ರ ಬಸ್ ಸಂಚಾರ ಆರಂಭಿಸಬೇಕು. –ಅಬ್ದುಲ್ ಸತ್ತಾರ್ ಸಿ.ಎಂ., ಅಧ್ಯಕ್ಷರು, ಬೆಳ್ಮ ಗ್ರಾಮ ಪಂಚಾಯತ್
ಕಠಿನ ನಿಯಮ ರೂಪಿಸಬೇಕು: ಅಭಿವೃದ್ಧಿ ಹೊಂದುತ್ತಿರುವ ಬೆಳ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ದ್ರವತ್ಯಾಜ್ಯದೊಂದಿಗೆ ಘನತ್ಯಾಜ್ಯದ ಸಮಸ್ಯೆಯಿದ್ದು, ವಾಣಿಜ್ಯ, ವಸತಿ ಸಂಕೀರ್ಣಕ್ಕೆ ಅನುಮತಿ ನೀಡುವ ಸಂದರ್ಭದಲ್ಲಿ ಕಠಿನ ನಿಯಮಗಳನ್ನು ಪಂಚಾಯತ್ ರೂಪಿಸಬೇಕು. ದ್ರವತ್ಯಾಜ್ಯ ನಿರ್ವಹಣೆಯಾಗಬೇಕಾದರೆ ಒಳಚರಂಡಿ ಯೋಜನೆ ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಕಾರ್ಯ ನಿರ್ವಹಿಸಿ ಜನರ ಸಮಸ್ಯೆಗೆ ಪರಿಹಾರ ನೀಡಬೇಕು. –ಸುಬ್ರಹ್ಮಣ್ಯ ಭಟ್ ಪಾವನ, ದೇರಳಕಟ್ಟೆ
ಶೈಕ್ಷಣಿಕ ಕೇಂದ್ರ
ಸ್ಥಳೀಯ ನಿವಾಸಿ ತಿಮ್ಮಪ್ಪ ಮೇಲಾಂಟ ಅವರು ದೇರಳಕಟ್ಟೆ ಜಂಕ್ಷನ್‌ನಲ್ಲಿ ನೀಡಿದ ಜಾಗದಲ್ಲಿ ಸರಕಾರಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಪ್ರಸ್ತುತ ಪದವಿಪೂರ್ವ ಕಾಲೇಜು ಆಗಿ ಸಾವಿರಾರು ವಿದ್ಯಾರ್ಥಿಗಳು ಜ್ಞಾನಾರ್ಜನೆ ನಡೆಸಿದ್ದು, ಗ್ರಾಮದಲ್ಲಿ ಒಟ್ಟು ಸರಕಾರಿ ಅನುದಾನಿತ, ಖಾಸಗಿಯಾಗಿ 6 ಶಾಲೆಗಳಿವೆ. ಒಂದು ಅಂಗನವಾಡಿ ಕೇಂದ್ರ, ಆರೋಗ್ಯ ಉಪಕೇಂದ್ರವಿದೆ.
-ವಸಂತ ಎನ್. ಕೊಣಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.