ಸಿಗದ ನಿರೀಕ್ಷಿತ ರ್‍ಯಾಂಕ್; ಗಮನಾರ್ಹ ಸಾಧನೆಗೆ ತೃಪ್ತಿ
Team Udayavani, Oct 3, 2022, 12:42 PM IST
ಮಹಾನಗರ: ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲ ಯವು ಸ್ಥಳೀಯ ಸಂಸ್ಥೆಗಳಿಗೆ ನಡೆಸಿದ “ಸ್ವಚ್ಛ ಸರ್ವೇಕ್ಷಣಾ’ ರ್‍ಯಾಂಕಿಂಗ್‌ನಲ್ಲಿ ಮಂಗಳೂರು ಪಾಲಿಕೆ 5ನೇ ಸ್ಥಾನ ಗಳಿಸಿದ್ದು, ಸ್ವಚ್ಛತೆಯ ವಿಷಯದಲ್ಲಿ ಪಾಲಿಕೆ ಮತ್ತಷ್ಟು ಸುಧಾರಣೆಯ ಅಗತ್ಯವನ್ನು ಬೊಟ್ಟು ಮಾಡಿದೆ.
ಕಳೆದ ವರ್ಷಕ್ಕೆ (9 ರ್‍ಯಾಂಕ್) ಹೋಲಿಕೆ ಮಾಡಿದರೆ ಈ ಬಾರಿ ರ್‍ಯಾಂಕಿಂಗ್‌ನಲ್ಲಿ ತುಸು ಸುಧಾರಣೆ ಕಂಡಿದೆ. ಆದರೆ ಪಾಲಿಕೆ ನಿರೀಕ್ಷೆ ಮೊದಲ ಮೂರು ರ್‍ಯಾಂಕ್‌ಗ್‌ನಲ್ಲಿತ್ತು.
ಕೈತಪ್ಪಿದ್ದೆಲ್ಲಿ? ಮೂಲಗಳ ಪ್ರಕಾರ ನಗರದ ಶೌಚಾಲಯಗಳ ನಿರ್ವಹಣೆಯ ಲೋಪವು ರ್‍ಯಾಂಕಿಂಗ್‌ನಲ್ಲಿ ಕುಸಿತ ಕಾಣು ವಂತಾಯಿತು. ಜತೆಗೆ ನಗರದ ಚರಂಡಿ ವ್ಯವಸ್ಥೆ, ಜಲಮೂಲಗಳ ಸ್ವಚ್ಛತೆಯ ಕಡೆಗೆ ಮಂಗಳೂರು ಪಾಲಿಕೆಯ ಶ್ರಮ ಹೆಚ್ಚು ಫಲ ನೀಡಲಿಲ್ಲ.
ಈ ಬಾರಿ ಪಚ್ಚನಾಡಿ ತ್ಯಾಜ್ಯ ದುರಂತವೇ ರ್‍ಯಾಂಕಿಂಗ್ ಹಿನ್ನೆಡೆಗೆ ಮತ್ತೂಂದು ಕಾರಣ ಎನ್ನಲಾಗುತ್ತಿದೆ. ಪಚ್ಚನಾಡಿಯಲ್ಲಿ ಸುಮಾರು 9 ಲಕ್ಷ ಟನ್ ಕಸ ಶೇಖರಣೆಗೊಂಡಿದೆ. ಸದ್ಯ ಈ ತ್ಯಾಜ್ಯವನ್ನು ಬಯೋಮೈನಿಂಗ್ ಮೂಲಕ ಕರಗಿಸಲಾಗುತ್ತಿದೆ. ಆದರೆ ಕೇಂದ್ರದ ತಂಡ ಆರು ತಿಂಗಳುಗಳ ಹಿಂದೆಯೇ ಸರ್ವೇಗೆ ಬಂದಿತ್ತು. ಆ ವೇಳೆ ಬಯೋಮೈನಿಂಗ್ ವ್ಯವಸ್ಥೆ ಇನ್ನೂ ಆರಂಭಿಗೊಂಡಿರಲಿಲ್ಲ. ಸದ್ಯ ಈ ವ್ಯವಸ್ಥೆ ಆರಂಭಿಕ ಹಂತದಲ್ಲಿದ್ದು, ಮುಂದಿನ ವರ್ಷ ರ್‍ಯಾಂಕಿಂಗ್‌ನಲ್ಲಿ ಮಂಗಳೂರು ನಗರ ಮತ್ತಷ್ಟು ಸುಧಾರಣೆ ಕಾಣಬಹುದು ಎನ್ನುವುದು ಅಧಿಕಾರಿಗಳ ಅಭಿಪ್ರಾಯ.
ಮಂಗಳೂರು ಪಾಲಿಕೆಯು 2016ರಲ್ಲಿ ಸ್ವಚ್ಛ ಸರ್ವೇಕ್ಷಣೆಯಲ್ಲಿ ಸ್ಪರ್ಧಿಸಿರಲಿಲ್ಲ, 2017ರಲ್ಲಿ ದೇಶದಲ್ಲಿ 63ನೇ ರ್‍ಯಾಂಕ್, 2018ರಲ್ಲಿ 52 (ರಾಜ್ಯದಲ್ಲಿ 2ನೇ ರ್‍ಯಾಂಕ್), 2019ರಲ್ಲಿ 165 (ರಾಜ್ಯದಲ್ಲಿ 4ನೇ ಸ್ಥಾನ), 2020ರಲ್ಲಿ ಸ್ಪರ್ಧಿಸಿರಲಿಲ್ಲ. 2021ರಲ್ಲಿ 275 ರಾಜ್ಯದಲ್ಲಿ 9ನೇ ರ್‍ಯಾಂಕ್ ಪಡೆದುಕೊಂಡಿತ್ತು.
ಈ ವರ್ಷ ಸ್ವಚ್ಛ ಸರ್ವೇಕ್ಷಣೆಗೆ ಸಂಬಂಧಿಸಿ ಕೇಂದ್ರ ಸರಕಾರದ ವಿವಿಧ ಹಂತದ ಸರ್ವೇಯನ್ನು ನಗರ ಎದುರಿಸಿತ್ತು. ಈ ಪೈಕಿ “ಓಡಿಎಫ್++ ಸರ್ವೇಕ್ಷಣಾ ಗಾರ್ಬೆಜ್’ ಸಮೀಕ್ಷೆ ಸಹಿತ 3 ಸರ್ವೇ ನಡೆದಿತ್ತು. ಬಳಿಕ ಸಾರ್ವಜನಿಕರ ತೊಡಗಿಸಿಕೊಳ್ಳುವಿಕೆಯೂ ಬಹು ಮುಖ್ಯ ಪಾತ್ರವಹಿಸಿತ್ತು. ಈ ಎಲ್ಲ ಸಮೀಕ್ಷೆಗಳ ಬಳಿಕ ಪರಿಶೀಲಿಸಿ ಅಂಕ ನೀಡಲಾಗಿದೆ.
ಹೇಗಿದೆ ಸರ್ವೇ ವರದಿ? ಸ್ವಚ್ಛ ಸರ್ವೇಕ್ಷಣೆಯಲ್ಲಿ ಮಂಗಳೂರು ಪಾಲಿಕೆಯ ಫಲಿತಾಂಶವನ್ನು ಕೇಂದ್ರ ಸರಕಾರ ಹೊರಡಿಸಿದ್ದು, ಅದಕ್ಕೆ ತಕ್ಕಂತೆ ಶೇ.100ರಲ್ಲಿ ಅಂಕ ನೀಡಿದೆ. ಅದರಂತೆ ನಗರದ ರಸ್ತೆಗಳ ಸ್ವಚ್ಛತೆ, ಮಾರುಕಟ್ಟೆ ಪ್ರದೇಶ ಸ್ವಚ್ಛತೆ, ವಸತಿ ಪ್ರದೇಶಗಳ ಸ್ವಚ್ಛತೆ, ಗಾರ್ಬೇಜ್ ಡಂಪ್ ವ್ಯವಸ್ಥೆಗೆ ಶೇ.90ಕ್ಕೂ ಹೆಚ್ಚಿನ ಅಂಕ ಲಭಿಸಿದೆ. ನಗರದ ಮನೆಗಳಿಂದ ತ್ಯಾಜ್ಯ ಸಂಗ್ರಹಣೆ, ವಸತಿ ಪ್ರದೇಶಗಳಲ್ಲಿ ಪ್ರತೀ ದಿನ ಗುಡಿಸುವುದಕ್ಕೆ ಶೇ.75ಕ್ಕಿಂತ ಶೇ.90 ಅಧಿಕ ಅಂಕ ಬಂದಿದೆ. ಆದರೆ ನಗರದ ಸಾರ್ವಜನಿಕ ಶೌಚಾಲಯ ಸ್ವಚ್ಛತೆ, ನಗರದ ಸೌಂದರ್ಯ, ಕಾಲುವೆಗಳ ಸ್ವಚ್ಛತೆ, ಜಲಮೂಲಗಳ ಸ್ವಚ್ಛತೆ, ನಾಗರಿಕರ ಕುಂದುಕೊರತೆಗಳ ಪರಿಹಾರದ ವಿಷಯದಲ್ಲಿ ಶೇ.50ಕ್ಕಿಂತ ಶೇ.75ರೊಳಗೆ ಅಂಕ ಪಡೆದುಕೊಂಡಿದೆ.
ಫಲಿತಾಂಶದಲ್ಲಿ ಸುಧಾರಣೆ: ಸ್ವಚ್ಛ ಸರ್ವೇಕ್ಷಣೆಯುಲ್ಲಿ ಮಂಗಳೂರು ಪಾಲಿಕೆಗೆ ಈ ಬಾರಿ 5ನೇ ರ್‍ಯಾಂಕ್ ಲಭಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಫಲಿತಾಂಶದಲ್ಲಿ ಸುಧಾರಣೆಯಾಗಿದೆ. ನಾವು ಯಾವೆಲ್ಲಾ ವಿಭಾಗದಲ್ಲಿ ಸುಧಾರಣೆ ಮಾಡಬೇಕು ಎಂಬ ಬಗ್ಗೆ ಅರಿವಾಗಿದ್ದು, ಆ ಕ್ಷೇತ್ರದಲ್ಲಿ ಮತ್ತಷ್ಟು ಕೆಲಸ ನಿರ್ವಹಿಸುತ್ತೇವೆ. ಕಳೆದ ಎರಡು ವರ್ಷಗಳಿಂದ ಪಚ್ಚನಾಡಿ ತ್ಯಾಜ್ಯ ದುರಂತವೂ ರ್‍ಯಾಂಕಿಂಗ್ ಹಿನ್ನಡೆಗೆ ಕಾರಣವಾಯಿತು. -ಅಕ್ಷಯ್ ಶ್ರೀಧರ್, ಪಾಲಿಕೆ ಆಯುಕ್ತರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.