Mangaluru:ಮಂದಾರದ ಬದುಕು ಕಸಿದ ಪ್ಲಾಸ್ಟಿಕ್ ಪರ್ವತ..ಈ ಸ್ಥಿತಿಗೆ ಪ್ಲಾಸ್ಟಿಕ್ ನೇರ ಕಾರಣ!
ಸುದೀರ್ಘ ವರ್ಷಗಳಿಂದ ನೆಲೆಸಿದ್ದ ಮನೆಯನ್ನೇ ಖಾಲಿ ಮಾಡಬೇಕಾಯಿತು
Team Udayavani, Oct 19, 2024, 6:04 PM IST
ಮಹಾನಗರ: ಸುಮಾರು ಐದು ವರ್ಷಗಳ ಹಿಂದೆ (2019ರ ಆಗಸ್ಟ್ 2) ಪಚ್ಚನಾಡಿ ಪರಿಸರದಲ್ಲಿ ಉಂಟಾದ ತ್ಯಾಜ್ಯ ದುರಂತ ಇನ್ನೂ ಕಣ್ಣಿಗೆ ಕಟ್ಟುವಂತಿದೆ. ವಯನಾಡ್ ದುರಂತವನ್ನೇ ಹೋಲುವ ರೀತಿಯಲ್ಲಿ ಪಚ್ಚನಾಡಿ ಡಂಪಿಂಗ್ ಯಾರ್ಡ್‌ನಿಂದ ಜಾರಿಬಂದ ತ್ಯಾಜ್ಯ ರಾಶಿ ಕೆಳಭಾಗದ ಹಲವಾರು ಮನೆ, ದೈವಸ್ಥಾನ, ನಾಗಬನ ಎಲ್ಲವನ್ನೂ ಆವರಿಸಿತ್ತು.
ಸುಮಾರು 2 ಕಿ.ಮೀ. ಉದ್ದಕ್ಕೆ ಜಾರಿ ಬಂದ ತ್ಯಾಜ್ಯರಾಶಿ ಮಂದಾರ ಪ್ರದೇಶದ 25 ಮನೆಗಳ ನಿವಾಸಿಗಳ ಬದುಕನ್ನು ಅಕ್ಷರಶಃ ಬೀದಿಗೆ ತಂದು ನಿಲ್ಲಿಸಿದೆ. ಅವರೆಲ್ಲ ಸುದೀರ್ಘ ವರ್ಷಗಳಿಂದ ನೆಲೆಸಿದ್ದ ಮನೆಯನ್ನೇ ಖಾಲಿ ಮಾಡಬೇಕಾಯಿತು. ಈ ದುರಂತಕ್ಕೆ
ಪ್ರಮುಖ ಕಾರಣವಾಗಿದ್ದು ಪಚ್ಚನಾಡಿ ಡಂಪಿಂಗ್ ಯಾರ್ಡ್‌ನಲ್ಲಿ ಪರ್ವತದಂತೆ ಶೇಖರಣೆಯಾಗಿದ್ದ ತ್ಯಾಜ್ಯ ಸಹಿತ ಪ್ಲಾಸ್ಟಿಕ್.
ಮಂಗಳೂರು ನಗರದಲ್ಲಿ ಪ್ರತೀ ದಿನ ಸುಮಾರು 350 ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಇದರಲ್ಲಿ ಸುಮಾರು 70ರಿಂದ 80 ಟನ್ ಪ್ಲಾಸ್ಟಿಕ್ ತ್ಯಾಜ್ಯವೇ ಇದೆ. ಮೊದಲು ಹಸಿ ಕಸ, ಒಣ ಕಸ ಪ್ರತ್ಯೇಕಿಸುವ ವಿಧಾನ ಇರಲಿಲ್ಲ. ಹೀಗಾಗಿ ಎಲ್ಲವನ್ನೂ ಪ್ಲಾಸ್ಟಿಕ್‌ನಲ್ಲಿ ಕಟ್ಟಿ ಎಸೆಯಲಾಗುತ್ತಿತ್ತು. ಅದನ್ನು ಪಚ್ಚನಾಡಿ ಡಂಪಿಂಗ್ ಯಾರ್ಡ್‌ಗೆ ತೆಗೆದುಕೊಂಡು ಹೋಗಿ ಗುಂಡಿ ಮಾಡಿ
ಮುಚ್ಚಲಾಗುತ್ತಿತ್ತು. ಭೂಭರ್ತಿ ಮಾಡಿದ ತ್ಯಾಜ್ಯ ಮಣ್ಣಿನಲ್ಲಿ ಕರಗಿ ಹೋಗಬೇಕು ಎನ್ನುವುದು ಕ್ರಮ.
ಆದರೆ, ಈ ಪ್ಲಾಸ್ಟಿಕ್ ತಾನೂ ಕರಗದೆ, ಹಸಿಕಸವನ್ನೂ ಕರಗಲು ಬಿಡದೆ ಪರ್ವತಾಕಾರವಾಗಿ ಬೆಳೆಯಿತು. ಪ್ಲಾಸ್ಟಿಕ್ ಬಾಟಲ್, ಚೀಲ, ಗೃಹೋಪಯೋಗಿ ವಸ್ತುಗಳು ಸಹಿತ ಪ್ಲಾಸ್ಟಿಕ್ ತ್ಯಾಜ್ಯ ಮಣ್ಣಿನಡಿ ಕರಗದೆ ಭಾರೀ ಮಳೆಗೆ ಕುಸಿದು ದುರಂತಕ್ಕೆ ಕಾರಣವಾಗಿತ್ತು. ಇಷ್ಟೆಲ್ಲ ಆದರೂ ನಮಗೆ ಬುದ್ಧಿ ಬಂದಿಲ್ಲ. ಕನಿಷ್ಠ ಹಸಿ ಕಸ, ಪ್ಲಾಸ್ಟಿಕ್ ಸಹಿತ ಒಣಕಸವನ್ನು ಪ್ರತ್ಯೇಕಿಸುವ ಪ್ರಕ್ರಿಯೆ ಪೂರ್ಣ ಹಂತದಲ್ಲಿ ನಡೆಯುತ್ತಿಲ್ಲ. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಸೆಯುವುದು ಮುಂದುವರಿದಿದೆ.
ಅಪಾಯಕಾರಿ ಪ್ಲಾಸ್ಟಿಕ್ ಬಳಕೆ ಕಡಿಮೆಯಾಗುವ ಬದಲಿಗೆ ಪ್ರತಿಯೊಂದರ ಪ್ಯಾಕೇಜಿಂಗ್‌ಗೂ ಪ್ಲಾಸ್ಟಿಕ್ ಬೇಕೇಬೇಕು ಎನ್ನುವಷ್ಟು ಅವಲಂಬನೆ ಶುರುವಾಗಿದೆ.
ಪ್ಲಾಸ್ಟಿಕ್ ನಮ್ಮ ಜೀವನವನ್ನೇ ಕಸಿಯಿತು
ಪಚ್ಚನಾಡಿ ಭೂ ಕುಸಿತದ ಸಂತ್ರಸ್ತರು ಹೇಳುವಂತೆ “ನಮ್ಮ ಈ ಪರಿಸ್ಥಿತಿಗೆ ಪ್ಲಾಸ್ಟಿಕ್ ನೇರ ಕಾರಣ. ಮಂಗಳೂರಿನ ಬುದ್ದಿವಂತ ಜನರು ಉಪಯೋಗಿಸುತ್ತಿದ್ದ ಪ್ಲಾಸ್ಟಿಕ್ ಪಚ್ಚನಾಡಿಯಲ್ಲಿ ಗುಡ್ಡೆ ಹಾಕಲಾಗುತ್ತಿತ್ತು. ಅಲ್ಲಿನ ಅವೈಜ್ಞಾನಿಕ ನಿರ್ವಹಣೆಯ ನೇರ ಪರಿಣಾಮದಿಂದ ದುರಂತ ಸಂಭವಿಸಿ ನಮ್ಮ ಜೀವನವನ್ನೇ ಕಸಿಯಿತು. ಇನ್ನಾದರೂ ಜನತೆ ಎಚ್ಚೆತ್ತುಕೊಳ್ಳಬೇಕಿದೆ. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು. ಇಲ್ಲವಾದರೆ ನಮ್ಮಲ್ಲಿ ಆದ ಪರಿಸ್ಥಿತಿ ಇತರ ಕಡೆಯಲ್ಲೂ ಉಂಟಾಬಹುದು” ಎನ್ನುತ್ತಾರೆ. ಈ ನಿವಾಸಿಗಳು ಈಗ ಗೃಹಮಂಡಳಿಯ ಕ್ವಾರ್ಟರ್ಸ್‌ನಲ್ಲಿದ್ದಾರೆ.
ಸಣ್ಣ ಪ್ಯಾಕ್ ನಿಷೇಧಿಸಿ, ಪೇಪರ್ ಪ್ಯಾಕ್ ಬಳಸಿ
ಕಡಿಮೆ ಬೆಲೆಯ ಸಣ್ಣ ಪುಟ್ಟ ಪ್ಲಾಸ್ಟಿಕ್ ಪ್ಯಾಕ್‌ಗಳನ್ನು ಸಂಪೂರ್ಣ ನಿಷೇಧ ಮಾಡಬೇಕು. ಸಣ್ಣ ಪುಟ್ಟ ಚೂರುಗಳು ಅತ್ಯಧಿಕ ಸಂಖ್ಯೆಯಲ್ಲಿ ಮಣ್ಣು ಸೇರುತ್ತಿವೆ. ಅದರ ಬದಲಾಗಿ ಪೇಪರ್ ಪ್ಯಾಕೇಜಿಂಗ್‌ಗೆ ಅವಕಾಶ ನೀಡಬೇಕು. ಗುಟ್ಕಾ, ಕಾಫಿಪುಡಿ, ತಿಂಡಿಕಟ್ಟು, ಶ್ಯಾಂಪೂ ಇತ್ಯಾದಿ ಮತ್ತು 50 ಗ್ರಾಂ ಕೆಳಗಿನ ಎಲ್ಲಾ ವಸ್ತುಗಳನ್ನು ಪ್ಲಾಸ್ಟಿಕ್ ಮುಕ್ತಗೊಳಿಸಬೇಕು. ಏಕಬಳಕೆ ಪ್ಲಾಸ್ಟಿಕ್ ಚೀಲ ತಯಾರಿಸುವುದನ್ನೇ ನಿಷೇಧಿಸಬೇಕು.
ಪ್ರಕಾಶ್ ಮಲ್ಲಾರ್, ಮಂಗಳೂರು
9 ಲಕ್ಷ ಟನ್ ತ್ಯಾಜ್ಯ; ಹೆಚ್ಚಿನದು ಪ್ಲ್ಯಾಸ್ಟಿಕ್ !
ಪಚ್ಚನಾಡಿಯ ಮಂದಾರದಲ್ಲಿನ ಕೆಲ ಪ್ರದೇಶ ಇನ್ನೂ ಬೃಹತ್ ಪ್ರಮಾಣದ ತ್ಯಾಜ್ಯದಲ್ಲಿಯೇ ಮುಳುಗಿದೆ. ದುರಂತದ ಕಾರಣದಿಂದಾಗಿ ಆರಂಭದಲ್ಲಿ ಸುಮಾರು 9 ಲಕ್ಷ ಟನ್ ಪಾರಂಪರಿಕ ತ್ಯಾಜ್ಯ ಈ ಪರಿಸರದಲ್ಲಿ ರಾಶಿ ಬಿದ್ದಿತ್ತು. ಇದರಲ್ಲಿ ಶೇ.60ಕ್ಕೂ ಅಧಿಕ ಪ್ಲಾಸ್ಟಿಕ್‌ನಿಂದ ಕೂಡಿದ ವಸ್ತುಗಳೇ ಆಗಿದೆ. ಇದಾದ ಕೆಲ ವರ್ಷದ ಬಳಿಕ ತ್ಯಾಜ್ಯ ಸಂಸ್ಕರಣೆಗೆ ಬಯೋಮೈನಿಂಗ್ ವ್ಯವಸ್ಥೆ ಪರಿಚಯಿಸಿದರೂ ಇನ್ನೂ ಈ ವ್ಯವಸ್ಥೆಗೆ ತಾರ್ಕಿಕ ಅಂತ್ಯ ಸಿಕ್ಕಿಲ್ಲ.
ಎಲ್ಲಿಗೆ ಬಂತು ಬಯೋಮೈನಿಂಗ್?
ಪಚ್ಚನಾಡಿಯಲ್ಲಿ ರಾಶಿ ಬಿದ್ದ ತ್ಯಾಜ್ಯ ಕರಗಿಸಲು ಬಯೋಮೈನಿಂಗ್ ವ್ಯವಸ್ಥೆ ಆರಂಭಗೊಂಡು ಎರಡು ವರ್ಷ ಕಳೆದರೂ ಇನ್ನೂ ಶೇ.10ರಷ್ಟೂ ಸಂಸ್ಕರಣೆಯಾಗಿಲ್ಲ. ಈ ಕಸದಿಂದ ಜಲ್ಲಿ ಕಲ್ಲು, ಗೊಬ್ಬರ ಸೇರಿದಂತೆ ವಿವಿಧ ಉತ್ಪನ್ನಗಳನ್ನು ತಯಾರು ಮಾಡಲು ಈಗಾಗಲೇ ಯೋಜನೆ ರೂಪಿಸಲಾಗಿದೆ. ಆದರೆ, 9 ಲಕ್ಷ ಟನ್ ತ್ಯಾಜ್ಯದಲ್ಲಿ ಸಂಸ್ಕರಣೆಯಾದದ್ದು ಸುಮಾರು 78,000 ಟನ್ ಮಾತ್ರ. ಮಳೆ ಇರುವಾಗ ಕೆಲಸ ಮಾಡಲು ಆಗದ ಕಾರಣ ಈ ಬಾರಿ ಮೇ ತಿಂಗಳಿನಿಂದ ಬಯೋಮೈನಿಂಗ್ ಕೆಲಸ ನಡೆದಿಲ್ಲ. ಅಲ್ಲದೆ, ಅಧಿಕ ಬಿಸಿಲು ಇರುವಾಗ ಭೂಭರ್ತಿಯಾದ ತ್ಯಾಜ್ಯವನ್ನು ಬೇರ್ಪಡಿಸಿ ತೆಗೆಯುವ ಸಂದರ್ಭ ಗ್ಯಾಸ್ ಹೊರಬಂದು ಬೆಂಕಿ
ಅವಘಡ ಉಂಟಾಗುವ ಸಂದರ್ಭವೂ ಎದುರಾಗಿತ್ತು.
*ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
udupi: ಮಗನ ಅರಸುತ್ತಾ ಬಂದ ತಾಯಿ: ಇಬ್ಬರು ಮಕ್ಕಳ ಸಹಿತ ವೃದ್ಧೆಯ ರಕ್ಷಣೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.