ಮಂಗಳೂರು: ಕಡಲ ನಗರಿಯ “ಓವರ್ ಹೆಡ್’ ವಿದ್ಯುತ್ ಲೈನ್ “ಭೂಗತ’!
Team Udayavani, Feb 8, 2024, 11:20 AM IST
ಮಹಾನಗರ: ಸ್ಮಾರ್ಟ್ ಸಿಟಿಯಾಗಿ ಬದಲಾಗಿರುವ ಕಡಲನಗರಿ ಮಂಗಳೂರು ವ್ಯಾಪ್ತಿಯ “ಓವರ್ ಹೆಡ್’ ವಿದ್ಯುತ್ ಲೈನ್‌ಗಳನ್ನು “ಭೂಗತ ವಿದ್ಯುತ್ ಕೇಬಲ್’ಗೆ ಬದಲಾಯಿಸುವ ಮಹತ್ವದ ಚಿಂತನೆ ಇಂಧನ ಇಲಾಖೆಯಲ್ಲಿ ಮೂಡಿದ್ದು ಹೊಸ ನಿರೀಕ್ಷೆ ಹುಟ್ಟುಹಾಕಿದೆ.
ಸಬ್ ಸ್ಟೇಶನ್‌ನಿಂದ ವಿದ್ಯುತ್ ಸಂಪರ್ಕ ಕಲ್ಪಿಸುವ ಪ್ರದೇಶ ವ್ಯಾಪ್ತಿಯ “ಓವರ್ ಹೆಡ್’ ವಿದ್ಯುತ್ ಲೈನ್ ಗಳನ್ನು ಭೂಗತ ವಿದ್ಯುತ್ ಕೇಬಲ್‌ಗೆ ಬದಲಾಯಿಸುವುದು ಈ ಚಿಂತನೆಯ ಉದ್ದೇಶ. ಸದ್ಯ ನಗರದ ಸ್ಟೇಟ್‌ಬ್ಯಾಂಕ್ ಪರಿಸರ, ಮಂಗಳಾದೇವಿ, ಕಾರ್ ಸ್ಟ್ರೀಟ್ ವ್ಯಾಪ್ತಿಯಲ್ಲಿ ಅನುಷ್ಠಾನದಲ್ಲಿರುವ ಭೂಗತ ಕೇಬಲ್ ಯೋಜನೆಯನ್ನು ಮುಂದೆ ನಗರದ ಎಲ್ಲೆಡೆಯೂ ಅನುಷ್ಠಾನಿಸಲು ಉದ್ದೇಶಿಸಲಾಗಿದೆ.
ಮಂಗಳೂರು ಪರಿಧಿಯಲ್ಲಿ ಸಾಮಾನ್ಯವಾಗಿ ಉಪ್ಪಿನಂಶದಿಂದ ಕೂಡಿದ ಹವಾಮಾನ, ವಾತಾವರಣದಿಂದಾಗಿ ಕಂಬಗಳ ಮೂಲಕ ಹಾದುಹೋಗುವ ವಿದ್ಯುತ್ ತಂತಿಗಳಿಂದ ಆಗಾಗ್ಗೆ ಸಮಸ್ಯೆಗಳು ಸಾಮಾನ್ಯ. ನಗರ ಸೌಂದರ್ಯಕ್ಕೂ ಉತ್ತಮವಲ್ಲ. ಹಾಗಾಗಿ ಭೂಗತ ಕೇಬಲ್ ಅಳವಡಿಕೆಯ ಅಗತ್ಯವಿದೆ ಎಂದು ಇತ್ತೀಚೆಗೆ ವಿ.ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಅವರು ಇಂಧನ ಸಚಿವರ ಗಮನ ಸೆಳೆದಿದ್ದರು. ಶಾಸಕ ವೇದವ್ಯಾಸ ಕಾಮತ್ ಈ ಬಗ್ಗೆ ಧ್ವನಿಗೂಡಿಸಿ ನಗರದಲ್ಲಿ ಭೂಗತ ಕೇಬಲ್ ಅಳವಡಿಕೆಯ ಅಗತ್ಯದ ಬಗ್ಗೆ ವಿವರಿಸಿದ್ದರು.
ಬೈಕಂಪಾಡಿ ಕೈಗಾರಿಕೆ ವ್ಯಾಪ್ತಿ:
ಭೂಗತ ಕೇಬಲ್‌ಗೆ ಆಗ್ರಹ ಕೈಗಾರಿಕೆ ಪ್ರದೇಶವಿರುವ ಬೈಕಂಪಾಡಿ ವ್ಯಾಪ್ತಿಯಲ್ಲಿ ವಿದ್ಯುತ್ ಸುರಕ್ಷೆ ದೃಷ್ಟಿಯಿಂದ 33 ಕೆವಿ ಭೂಗತ ಕೇಬಲ್ ಅಳವಡಿಸುವಂತೆ ಕೆನರಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಸರಕಾರವನ್ನು ಆಗ್ರಹಿಸಿದೆ. ಬೈಕಂಪಾಡಿ ವ್ಯಾಪ್ತಿಯಲ್ಲಿ ಭಾರೀ ಗಾಳಿ ಮಳೆ ಸಂದರ್ಭ ವಿದ್ಯುತ್ ಲೈನ್‌ಗಳಲ್ಲಿ ಸಮಸ್ಯೆಗಳು ಉಂಟಾಗುತ್ತದೆ. ಜತೆಗೆ ಕೈಗಾರಿಕೆಗಳ
ಮೇಲ್ಭಾಗದಲ್ಲಿ ತಂತಿಗಳು ಇರುವುದರಿಂದ ಆತಂಕಕ್ಕೂ ಕಾರಣವಾಗುತ್ತದೆ. ಹೀಗಾಗಿ ಕೈಗಾರಿಕೆ ಪ್ರದೇಶವ ವ್ಯಾಪ್ತಿಯಲ್ಲಿ ವಿದ್ಯುತ್
ಲೈನ್‌ಗಳನ್ನು ಭೂಗತ ವ್ಯವಸ್ಥೆಯಡಿ ಮಾಡಿಕೊಡುವಂತೆ ಕೆಸಿಸಿಐ ಇಂಧನ ಇಲಾಖೆಯ ಗಮನಸೆಳೆದಿದೆ.
ಸದ್ಯ ಭೂಗತ ಕೇಬಲ್ ಎಲ್ಲಿದೆ?
ಮಂಗಳೂರು ವಿಭಾಗ ವ್ಯಾಪ್ತಿಯ ನೆಹರೂ ಮೈದಾನ, ಕಂಕನಾಡಿ, ಅತ್ತಾವರ, ಮಣ್ಣಗುಡ್ಡೆ ಕುದ್ರೋಳಿ ಸಹಿತ ಸಬ್‌ಸ್ಟೇಶನ್ ಇರುವ ಭಾಗಕ್ಕೆ ಭೂಗತ ವಿದ್ಯುತ್ ಕೇಬಲ್ ಮೂಲಕವೇ ಈಗಾಗಲೇ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಈ ಪೈಕಿ ನಗರದಲ್ಲಿ ಇದೇ ಮೊದಲ ಬಾರಿಗೆ ನೆಹರೂ ಮೈದಾನ ಸಬ್‌ಸ್ಟೇಶನ್‌ನಿಂದ ಸರಬರಾಜಾಗುವ ವಿದ್ಯುತ್ ಸಂಪರ್ಕಗಳಿಗೆ ಭೂಗತ
ವಿದ್ಯುತ್ ಕೇಬಲ್ ಅಳವಡಿಸಲಾಗಿದೆ.
ಪಾಂಡೇಶ್ವರದಿಂದ ಆರ್‌ಟಿಒ, ಕೆ.ಎಸ್. ರಾವ್ ರಸ್ತೆ, ಪಿವಿಎಸ್, ಡೊಂಗರಕೇರಿ, ಕಾರ್‌ಸ್ಟ್ರೀಟ್ ವ್ಯಾಪ್ತಿಯ ವಿದ್ಯುತ್ ಕೇಬಲ್
ಗಳು ಈ ಮೂಲಕ ಭೂಗತವಾಗಿದೆ. ಮೆಸ್ಕಾಂನ “ಮೋಡೆಲ್ ಸಬ್‌ಡಿವಿಶನ್ ಪ್ರೊಜೆಕ್ಟ್’ ಎಂಬ ಯೋಜನೆ ಇದಾಗಿದೆ. ಇದರ ಜತೆಗೆ ಸ್ಮಾರ್ಟ್‌ಸಿಟಿ ವತಿಯಿಂದ ಮಂಗಳಾದೇವಿ ರಸ್ತೆ, ಮಾರ್ನಮಿಕಟ್ಟೆ, ಮೋರ್ಗನ್ಸ್‌ಗೆàಟ್, ರಾಮಕೃಷ್ಣ ಮಠ ರಸ್ತೆ, ನ್ಯೂ ಪಾಂಡೇಶ್ವರ ರೋಡ್, ಕಾರ್ ಸ್ಟ್ರೀಟ್ ಪರಿಸರದಲ್ಲಿ ಭೂಗತ ಕೇಬಲ್ ಹಾಕಲಾಗಿದೆ. ಇಂತಹ ಪರಿಕಲ್ಪನೆಯನ್ನು ನಗರ ವ್ಯಾಪ್ತಿಯ ಎಲ್ಲೆಡೆಯೂ ವಿಸ್ತರಿಸುವ ಬಗ್ಗೆ ಚರ್ಚೆ ಶುರುವಾಗಿದೆ.
ಜಪ್ಪು-ತೊಕ್ಕೊಟು ಮಧ್ಯೆ ಭೂಗತ ಕೇಬಲ್
ಮೆಸ್ಕಾಂನ ಮಂಗಳೂರು ವೃತ್ತ ವ್ಯಾಪ್ತಿಯ ಮಂಗಳೂರು ವಿಭಾಗದಲ್ಲಿ ನಿರಂತರ ವಿದ್ಯುತ್ ಪೂರೈಕೆಗೆ ಪೂರಕವಾಗಿ ಮಂಗಳೂರು ತಾಲೂಕಿನ ಅಡ್ಯಾರು, ಕುಡುಪು, ಮೂಡುಬಿದಿರೆಯ ಕಡಲಕೆರೆ (ಮಾರ್ಪಾಡಿ), ಪುತ್ತೂರಿನ ಅಲಂಕಾರು ಬಳಿ
110/33/11 ಕೆವಿ ಸಾಮರ್ಥ್ಯದ ಉಪ ಕೇಂದ್ರವನ್ನು ಸ್ಥಾಪಿಸಲು ಉದ್ದೇಶಿಸಿದೆ.
ಉಳ್ಳಾಲದ ತೊಕ್ಕೊಟ್ಟು, ಮಂಗಳೂರಿನ ನಂದಿಗುಡ್ಡೆ ಸಹಿತ ಜಿಲ್ಲೆಯ 8 ಉಪ ಕೇಂದ್ರಗಳ (33/11 ಕೆವಿ ಸಾಮರ್ಥ್ಯ) ಮೇಲಿನ ಅಧಿಕ ಹೊರೆಯನ್ನು ನಿರ್ವಹಿಸುವ ಸಲುವಾಗಿ ಈ ಉಪ ಕೇಂದ್ರಗಳ 5 ಎಂವಿಎ ಶಕ್ತಿ ಪರಿವರ್ತಕವನ್ನು 10 ಎಂವಿಎ ಶಕ್ತಿ
ಪರಿವರ್ತಕ್ಕೆ ಉನ್ನತೀಕರಣವನ್ನೂ ಕೈಗೆತ್ತಿಕೊಳ್ಳಲಾಗಿದೆ. ಮೂಡುಬಿದಿರೆ, ಕೊಣಾಜೆ, ಮಂಗಳೂರನ ಜಪ್ಪು ಉಪ ಕೇಂದ್ರ ಸಹಿತ ಕೆಲವು ಉಪಕೇಂದ್ರದ ಉನ್ನತೀಕರಣ ಹಾಗೂ ಜಪ್ಪು ಉಪಕೇಂದ್ರದಿಂದ ತೊಕ್ಕೊಟ್ಟು ಉಪ ಕೇಂದ್ರದ ನಡುವಿನ 6.25 ಕಿ.ಮೀ. ವ್ಯಾಪ್ತಿಯಲ್ಲಿ 33 ಕೆವಿ ಭೂಗತ ಕೇಬಲ್ ಲಿಂಕ್ ಲೈನ್ ಕಾಮಗಾರಿಯನ್ನು ಮೆಸ್ಕಾಂ ನಡೆಸುತ್ತಿದೆ ಎಂದು ಮೆಸ್ಕಾಂ ಎಂಡಿ ಪದ್ಮಾವತಿ ತಿಳಿಸಿದ್ದಾರೆ.
“ಭೂಗತ ಕೇಬಲ್’ ಲಾಭವೇನು?
ಭೂಗತ ಕೇಬಲ್ ಹಾಕುವುದರಿಂದ ರಸ್ತೆಯ ಬದಿ ಮೇಲ್ಭಾಗದಲ್ಲಿ ವಿದ್ಯುತ್ ತಂತಿಗಳು ಜೋತು ಬೀಳುವುದು, ಮಳೆ ಗಾಳಿಗೆ ಮರಗಳು ಬಿದ್ದು, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವುದು ತಪ್ಪುತ್ತದೆ. ವಿದ್ಯುತ್ ಸಂಬಂಧಿತ ಅವಘಡಗಳೂ
ಕಡಿಮೆಯಾಗುತ್ತವೆ. ರಸ್ತೆ ಬದಿ ಅಲ್ಲಲ್ಲಿ ವಿದ್ಯುತ್ ಕಂಬಗಳು, ಮೇಲ್ಭಾಗದಲ್ಲಿ ತಂತಿಗಳು ಇಲ್ಲದಾಗುವುದರಿಂದ ರಸ್ತೆಗಳ ಸೌಂದರ್ಯ ಕೂಡ ಹೆಚ್ಚುತ್ತದೆ. ನಗರದ ಸ್ಮಾರ್ಟ್‌ನೆಸ್ ವರ್ಧನೆ ಆಗುತ್ತದೆ. ವಿದ್ಯುತ್ ವಿತರಣೆ ಪ್ರಕ್ರಿಯೆಯಲ್ಲಿ ಆಗುತ್ತಿರುವ ನಷ್ಟದ ಪ್ರಮಾಣವನ್ನು ಕಡಿಮೆ ಮಾಡುವಲ್ಲಿಯೂ ಇದು ಪೂರಕ ಎನ್ನುತ್ತಾರೆ ಮೆಸ್ಕಾಂ ಅಧಿಕಾರಿಗಳು.
ಹಂತ ಹಂತವಾಗಿ ಜಾರಿ
ಮಂಗಳೂರಿನಲ್ಲಿ ಹಂತಹಂತವಾಗಿ ಭೂಗತ ಕೇಬಲ್ ಅಳವಡಿಕೆ ಹೆಚ್ಚಿಸಲು ವಿಶೇಷ ಆದ್ಯತೆ ನೀಡಲಾಗುವುದು. ಹಂತ ಹಂತವಾಗಿ ಇದರ ಜಾರಿಗೆ ಉದ್ದೇಶಿಸಲಾಗುವುದು. ಈ ಮೂಲಕ ವಿದ್ಯುತ್ ಸಮಸ್ಯೆಗಳಿಗೆ ಪೂರ್ಣ ಪರಿಹಾರ
ಸಿಗುವಂತೆ ಮಾಡಲಾಗುವುದು.
ಕೆ.ಜೆ. ಜಾರ್ಜ್, ಇಂಧನ ಸಚಿವರು
*ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.