Mangaluru: 500 ಮನೆಗಳಿಗೆ ತಲುಪಿದ ಸಿಎನ್‌ಜಿ ಅನಿಲ; ಶೀಘ್ರ ಇನ್ನಷ್ಟು ಕಡೆ ವಿಸ್ತರಣೆ
ಗೈಲ್ ಗ್ಯಾಸ್ ಪೈಪ್‌ಲೈನ್ ಯೋಜನೆಯಡಿ ಸರಬರಾಜು; 41 ಸಾವಿರ ಮನೆಗಳಿಗೆ ಕನೆಕ್ಷನ್
Team Udayavani, Jan 16, 2025, 2:25 PM IST
ಮಹಾನಗರ: ಯಾವುದೇ ಸಿಲಿಂಡರ್‌ನ ಆವಶ್ಯಕತೆ ಇಲ್ಲದೆ ನೇರವಾಗಿ ಪೈಪ್ ಲೈನ್ ಮೂಲಕವೇ ಮನೆ ಮನೆಗಳಿಗೆ ಅಡುಗೆ ಅನಿಲ ಸರಬರಾಜು ಮಾಡುವ ಗೈಲ್ ಗ್ಯಾಸ್ ಪೂರೈಕೆ ನಗರದಲ್ಲಿ ಆರಂಭಗೊಂಡಿದೆ. ಆರಂಭಿಕ ಹಂತದಲ್ಲಿ ಸುರತ್ಕಲ್, ಹೊಸಬೆಟ್ಟು, ಇಡ್ಯಾ, ಪಣಂಬೂರು. ಕಾವೂರು, ಬೊಂದೇಲ್ ಮತ್ತಿತರ ಭಾಗದ 500 ಮನೆಗಳಿಗೆ ಈಗ ಅನಿಲ ಸರಬರಾಜು ನಡೆಯುತ್ತಿದ್ದು, ಶೀಘ್ರವೇ ಅದು ಇತರ ಭಾಗಗಳಿಗೆ ವಿಸ್ತರಣೆಯಾಗಲಿದೆ.
ಹಿಂದಿನ ಲೆಕ್ಕಾಚಾರ ಪ್ರಕಾರ, ಈ ವ್ಯವಸ್ಥೆ ಹಿಂದೆಯೇ ಆರಂಭವಾಗಬೇಕಾಗಿತ್ತು. ಗುತ್ತಿಗೆದಾರರಿಂದ ಪೈಪ್‌ಲೈನ್ ಅಳವಡಿಕೆಗೆ ವಿಳಂಬ, ತೀವ್ರ ಮಳೆ ನಡುವೆ ನಿಧಾನಗತಿ ಕಾಮಗಾರಿ, ಜಾಗದ ಸಮಸ್ಯೆ, ಇತರ ಪೈಪ್‌ಲೈನ್‌ಗಳಿಗೆ ತೊಂದರೆಯಾಗುವುದು ಇತ್ಯಾದಿ ಸವಾಲುಗಳನ್ನು ಎದುರಿಸಿದ ಗೈಲ್ ಸಂಸ್ಥೆ ಈಗ ಮೊದಲ ಹಂತದ ಪೂರೈಕೆಯಲ್ಲಿ ಸಫಲವಾಗಿದೆ.
ಕೊಚ್ಚಿನ್-ಮಂಗಳೂರು ಗ್ಯಾಸ್‌ಪೈಪ್‌ಲೈನ್‌ನ ರಿಸೀವಿಂಗ್ ಸ್ಟೇಶನ್ ಮಂಗಳೂರಿನ ಅರ್ಕುಳದಲ್ಲಿದೆ. ಅಲ್ಲಿಂದ ಸಿಟಿ ಗ್ಯಾಸ್‌ಗಾಗಿ ಪ್ರತ್ಯೇಕ ಕೊಳಾಯಿ ಮೂಲಕ ಕೂಳೂರು ಎಂಸಿಎಫ್ ಆವರಣದಲ್ಲಿ ಗೈಲ್‌ಗ್ಯಾಸ್‌ನವರ ಮದರ್ ಸ್ಟೇಶನ್ ತಲಪುತ್ತಿದೆ. ಅಲ್ಲಿಂದ ಸದ್ಯಕ್ಕೆ ಅನಿಲ ಪೂರೈಕೆ ನಡೆಯುತ್ತಿದೆ.
ಎಂಸಿಎಫ್‌ನಲ್ಲಿರುವ ಮದರ್ ಸ್ಟೇಶನ್‌ನಿಂದಲೇ ಮಂಗಳೂರು ನಗರಕ್ಕೆ ಅನಿಲ ಪೂರೈಕೆ ನಡೆಯಲಿದೆ. ಆದರೆ ತಾಂತ್ರಿಕ ಕಾರಣಗಳಿಂದ ಪೈಪ್‌ಲೈನ್ ಕಾಮಗಾರಿ ಅರ್ಧಕ್ಕೆ ನಿಂತಿರುವುದರಿಂದ ಹಿನ್ನಡೆಯಾಗಿದೆ. ಆದರೂ ಅನ್ಯ ದಾರಿಗಳ ಮೂಲಕ ನಗರದ ಕೆಲವು ಭಾಗಗಳಲ್ಲಿ ಪೂರೈಕೆ ಮಾಡುವ ಪ್ರಯತ್ನ ನಡೆಯುತ್ತಿದೆ.
ಅರ್ಕುಳದಿಂದಲೇ ಪೂರೈಕೆಗೆ ಸಿದ್ಧತೆ
ಇದುವರೆಗಿನ ಯೋಜನೆ ಪ್ರಕಾರ ಎಂಸಿಎಫ್ನ ಮದರ್ ಸ್ಟೇಶನ್‌ನಿಂದಲೇ ಮಂಗಳೂರು ನಗರ ಸುತ್ತಮುತ್ತ ಸಿಎನ್‌ಜಿ ಪೂರೈಸುವ ಯೋಜನೆ ಇತ್ತು. ಈಗ ಸಮಸ್ಯೆ ಎದುರಾಗಿರುವುದರಿಂದ ಅರ್ಕುಳದಿಂದಲೇ ಪೂರೈಸುವುದಕ್ಕೆ ಗೈಲ್‌ಗ್ಯಾಸ್ ಮುಂದಾಗಿದೆ. ಅರ್ಕುಳದ ರಿಸೀವಿಂಗ್ ಸ್ಟೇಶನ್ ಪಕ್ಕದಲ್ಲೇ ಜಾಗವನ್ನು ಪಡೆದು ಅಲ್ಲಿ ಸ್ಟೇಶನ್ ಸ್ಥಾಪಿಸಿಕೊಂಡು ಅಲ್ಲಿಂದ ನಗರದ ಗ್ಯಾಸ್‌ಪೈಪ್ ಜಾಲಕ್ಕೆ ಪೂರೈಕೆ ಮಾಡುವ ಬಗ್ಗೆ ಚಿಂತಿಸಲಾಗುತ್ತಿದೆ.
ನಗರಕ್ಕೆ ಪೂರೈಸಲು ಸಮಸ್ಯೆ ಏನು?
ಅರ್ಕುಳದಿಂದ ಮದರ್ ಸ್ಟೇಶನ್ ತಲುಪಿದ ಸಿಎನ್‌ಜಿ ಗ್ಯಾಸನ್ನು ಸ್ಥಳೀಯ ಪೈಪ್‌ಲೈನ್ ಮೂಲಕ ಮನೆಗಳಿಗೆ ತಲುಪಿಸಲಾಗುತ್ತದೆ. ನಗರದ ಭಾಗಕ್ಕೆ ಅನಿಲ ಪೂರೈಸಲು ಕೂಳೂರು ನದಿಯನ್ನು ದಾಟಿ ಪೈಪ್ ಹಾಕುವ ಪ್ರಕ್ರಿಯೆ ನಡೆಯಬೇಕಾಗಿದೆ. ಅದು ತೀರಾ ವಿಳಂಬಗೊಂಡಿದೆ ಹಾಗೂ ಇದಕ್ಕೆ ಈ ವರೆಗೆ ನಡೆಸಿದ ಕಾಮಗಾರಿ ವಿಫಲಗೊಂಡಿದೆ. ಹಾಗಾಗಿ ನಗರಕ್ಕೆ ಗ್ಯಾಸ್ ಪೂರೈಸಲು ಆಗುತ್ತಿಲ್ಲ.
– ಒಟ್ಟು ನೋಂದಣಿ: 1,25,000
– ಮೀಟರ್ ಜೋಡಣೆ: 41,200
– ಗ್ಯಾಸ್ ಪಡೆಯುತ್ತಿರುವ ಮನೆಗಳು: 500
ಪರಿಸರ ಸ್ನೇಹಿ, ಸುರಕ್ಷಿತ, ಮೀಟರ್ ಓದಿದರೆ ರಿಯಾಯಿತಿ!
ಸಿಎನ್‌ಜಿ ಅನಿಲ ಪರಿಸರ ಸ್ನೇಹಿ ಹಾಗೂ ಸುರಕ್ಷಿತವಾಗಿದೆ, ಹಾಗಾಗಿ ಜನರು ಎಲ್‌ಪಿಜಿ ಬದಲು ಸಿಎನ್‌ಜಿ ಬಳಸುವುದು ಉತ್ತಮ ಆಯ್ಕೆ. ಎರಡು ತಿಂಗಳಿಗೊಮ್ಮೆ ತಮ್ಮ ಬಳಕೆಗೆ ಅನುಸಾರವಾಗಿ ಶುಲ್ಕ ಪಾವತಿಸಿದರೆ ಆಯಿತು. ಸಿಲಿಂಡರ್ ಬುಕ್ ಮಾಡುವುದು, ಕಾಯುವುದು, ಅದನ್ನು ಸಾಗಿಸುವ ಕಿರಿಕಿರಿ ಇರುವುದಿಲ್ಲ. ಮನೆಯಲ್ಲೇ ಅಳವಡಿಸಿದ ಮೀಟರ್‌ನಲ್ಲಿ ಎಷ್ಟು ಯುನಿಟ್ ಖರ್ಚಾಗಿದೆಯೋ ಅದಕ್ಕನುಗುಣವಾಗಿ ಬಿಲ್ ಬರುತ್ತದೆ. ಜನರೇ ಸ್ವಯಂ ಆಗಿ ಮೀಟರ್ ರೀಡಿಂಗ್ ನಡೆಸಿ ತಾವೇ ಅನ್‌ಲೈನ್ ಮೂಲಕ ಬಿಲ್ ಪಾವತಿಸುವುದಾದರೆ ದರದಲ್ಲಿ ರಿಯಾಯಿತಿ ಕೊಡುಗೆಯೂ ಇದೆ!
ಆರಂಭಿಕ ಹಿನ್ನಡೆಗಳ ಹೊರತಾಗಿ ಮನೆ ಮನೆಗೆ ಸಿಎನ್‌ಜಿ ತಲಪಿಸುವ ಕೆಲಸ ನಡೆದಿದೆ, ಜನರು ಈ ಅನಿಲದ ಮಹತ್ವ ಅರಿತುಕೊಂಡು ಮನೆಗೆ ಸಂಪರ್ಕ ಕಲ್ಪಿಸಲು ಮುಂದಾಗುವುದು ಅವರಿಗೂ ಲಾಭ. ಹಂತ ಹಂತವಾಗಿ ನಗರದೆಲ್ಲೆಡೆ ಸಿಎನ್‌ಜಿ ಲಭಿಸುವಂತಾಗಲಿದೆ..
-ಸಾಯಿಶಂಕರ್, ಜನರಲ್ ಮ್ಯಾನೇಜರ್, ಗೈಲ್‌ಗ್ಯಾಸ್
-ವೇಣುವಿನೋದ್ ಕೆ.ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿಗೆ ಅವಕಾಶ
ಶೂನ್ಯ ಇಂಗಾಲದ ಗುರಿ: ಜಾಗತಿಕ ಸಹಭಾಗಿತ್ವ ಅಗತ್ಯ
Bigg Boss ಫಿನಾಲೆ ಯಾವಾಗ?; ಗೆದ್ದವರಿಗೆ ಸಿಗುವ ಬಹುಮಾನ ಎಷ್ಟು? – ಇಲ್ಲಿದೆ ಮಾಹಿತಿ
ಆಗಸ್ಟ್ 15ಕ್ಕೆ ತೆರೆಗೆ ಬರಲಿದೆ ಅರ್ಜುನ್ ಜನ್ಯಾ ನಿರ್ದೇಶನದ ʼ45ʼ ಸಿನಿಮಾ
Mumbai Unsafe; ಒಂದು ಘಟನೆಯಿಂದ ಹೀಗೆ ಹೇಳುವುದು ಸರಿಯಲ್ಲ: ಸಿಎಂ ಫಡ್ನವಿಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.