![Bollywood: ರಿಷಬ್ ಶೆಟ್ಟಿ ʼಛತ್ರಪತಿ ಶಿವಾಜಿʼ ತಂಡದಿಂದ ಹೊರಬಿತ್ತು ಬಿಗ್ ಅಪ್ಡೇಟ್](https://www.udayavani.com/wp-content/uploads/2025/02/9-22-415x249.jpg)
![Bollywood: ರಿಷಬ್ ಶೆಟ್ಟಿ ʼಛತ್ರಪತಿ ಶಿವಾಜಿʼ ತಂಡದಿಂದ ಹೊರಬಿತ್ತು ಬಿಗ್ ಅಪ್ಡೇಟ್](https://www.udayavani.com/wp-content/uploads/2025/02/9-22-415x249.jpg)
Team Udayavani, Jan 29, 2025, 2:37 PM IST
ಮಹಾನಗರ: ಮೂವತ್ತೈದು ವರ್ಷಗಳಲ್ಲಿ ಮಂಗಳೂರಿನಲ್ಲಿ ರಂಗ ಮಂದಿರ ನಿರ್ಮಾಣಕ್ಕೆ ಹಲವು ಪ್ರಯತ್ನಗಳು ನಡೆದಿವೆ. ಹಲವಾರು ಬಾರಿ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ಕೂಡಾ ಹಾಕಲಾಗಿದೆ. ಹಾಗೆ ಹಾಕಿದ ಕಲ್ಲುಗಳೆಲ್ಲ ಶಿಲಾ ಶಾಸನಗಳಂತೆ ಇತಿಹಾಸದ ಕಥೆಗಳನ್ನು ಹೇಳುತ್ತಿವೆ. ಹಾಗೆ ಹಾಕಿದ ಪ್ರತಿ ಕಲ್ಲು ಕಲ್ಲಿನಲೂ ರಂಗ ಮಂದಿರ ನಿರ್ಮಾಣ ಪ್ರಯತ್ನದ ಕಥೆ-ವ್ಯಥೆಗಳೇ ಕೇಳಿಸುತ್ತಿವೆ.
ಮಂಗಳೂರಿನಲ್ಲಿ ರಂಗ ಮಂದಿರ ನಿರ್ಮಾಣಕ್ಕೆ ಎಲ್ಲರಿಗೂ ಅಪಾರವಾದ ಆಸಕ್ತಿಯಂತೂ ಇತ್ತು. ಹಾಗಾಗಿ ಜಾಗ ನಿಗದಿ ಮಾಡುವುದು, ಕಲ್ಲು ಹಾಕುವುದು ಆಗಾಗ ನಡೆಯುತ್ತಲೇ ಬಂದಿದೆ. ಆದರೆ ಆ ಕಲ್ಲುಗಳೆಲ್ಲವೂ ರಂಗ ಮಂದಿರದ ಕನಸಿಗೇ ಬಿದ್ದ ಕಲ್ಲುಗಳು ಎನ್ನುವುದು ಬಳಿಕವಷ್ಟೇ ಗೊತ್ತಾಗುತ್ತಿತ್ತು. ಯಾಕೆಂದರೆ ಪ್ರತಿ ಬಾರಿಯೂ ಇಲ್ಲಿನ ಜನ ಹೊಸ ಆಸೆ, ಕನಸಿನೊಂದಿಗೆ ಅಡಿಗಲ್ಲು ಹಾಕುವ ಕಾರ್ಯಕ್ರಮವನ್ನು ಎದುರ್ಗೊಳ್ಳುತ್ತಿದ್ದರು. ಇನ್ನು ಗ್ಯಾರಂಟಿ.. ರಂಗ ಮಂದಿರ ಎಂದು ಖುಷಿಯಾಗಿದ್ದರು. ಆದರೆ ನಾನಾ ಕಾರಣಗಳಿಂದಾಗಿ ಕಲ್ಲುಗಳು ಕಲ್ಲಾಗಿಯೇ ಉಳಿದವು, ಕಟ್ಟಡವಾಗಲಿಲ್ಲ. ನಾಮಫಲಕಗಳು ಶಿಲಾ ಶಾಸನಗಳಾದವು, ಹೆಮ್ಮೆಯಾಗಲಿಲ್ಲ.
ಈ 35 ವರ್ಷಗಳಲ್ಲಿ ನಗರದ ವಿವಿಧೆಡೆ ರಂಗಮಂದಿರಕ್ಕಾಗಿ ಭೂಮಿಯನ್ನು ಗುರುತು ಮಾಡಲಾಗಿದ್ದು, ಹಲವು ಶಿಲಾನ್ಯಾಸಗಳನ್ನು ನಡೆಸಲಾಗಿದೆ. ಮುಖ್ಯಮಂತ್ರಿಗಳೇ ಬಂದು ಶಿಲಾನ್ಯಾಸವನ್ನೂ ನೆರವೇರಿಸಿದ್ದಾರೆ. ಮೊದಲಾಗಿ ಶಿಲಾನ್ಯಾಸ ನಡೆದಿರುವುದು ನಗರದ ಕದ್ರಿಪಾರ್ಕ್ ಬಳಿಯ ಜಿಂಕೆ ವನದಲ್ಲಿ. ಅನಂತರ ವಿವಿಧ ಸ್ಥಳಗಳನ್ನು ನಿಗದಿ ಪಡಿಸಲಾಯಿತಾದರೂ, ಅಂತಿಮವಾಗಿ ಬೊಂದೇಲ್‌ನಲ್ಲಿ ಶಿಲಾನ್ಯಾಸ ನಡೆಯಿತು. ಇಲ್ಲಿ ಶಿಲಾನ್ಯಾಸ ನಡೆದು 15 ವರ್ಷಗಳಾದರೂ ರಂಗಮಂದಿರ ಮಾತ್ರ ಕನಸಾಗಿಯೇ ಉಳಿಯಿತು.
ರಂಗ ಮಂದಿರಕ್ಕೆ ಬೊಂದೇಲ್ ಜಾಗವೇ ಸೂಕ್ತ
ಬೊಂದೇಲ್‌ನಲ್ಲಿ ಸದ್ಯ ನಿರ್ಮಾಣಕ್ಕೆ ಉದ್ದೇಶಿಸಿದ ರಂಗ ಮಂದಿರದ ಜಾಗ ನಗರದಿಂದ ಕೊಂಚ ದೂರ ಇದೆ. ನಗರದ ಒಳಗೇ ನಿರ್ಮಿಸಿದರೆ ಹೆಚ್ಚು ಅನುಕೂಲಕರ ಎಂಬ ವಾದ ಕೆಲವರದ್ದು. ಆದರೆ, ನಾಟಕ, ಯಕ್ಷಗಾನ, ಸಂಗೀತ ಸಹಿತ ಕಲಾ ಚಟುವಟಿಕೆಯನ್ನು ಆಸ್ವಾದಿಸಲು ನಗರದಿಂದ ಸ್ವಲ್ಪ ದೂರದಲ್ಲಿರುವ ಜಾಗವೇ ಸೂಕ್ತ ಎನ್ನುವುದು ಹೆಚ್ಚಿನವರ ಅಭಿಪ್ರಾಯ.
ಬೋಂದೆಲ್‌ನ ಜಾಗದಲ್ಲಿ ವಾಹನಗಳ ಪಾರ್ಕಿಂಗ್, ಅನ್ಯ ಕಾರ್ಯಕ್ರಮಗಳಿಗೆ ಬೇಕಾದಷ್ಟು ಜಾಗವೂ ಸಿಗುತ್ತದೆ. ನಗರಕ್ಕೆ ಬರುವ ಜಂಜಾಟ ಇರುವುದಿಲ್ಲ. ಕಲಾಚಟುವಟಿಕೆಯನ್ನು ನಗರದ ಗಜಿಬಿಜಿಯ ಮಧ್ಯೆ ಆಸ್ವಾದಿಸುವ ವಿಶಾಲ ಜಾಗದಲ್ಲಿ ಆಸ್ವಾದಿಸುವುದೇ ಸೂಕ್ತ ಎಂಬುದು ಹೆಚ್ಚಿನವರ ಒಲವು. ಈಗ ಒಂದು ಜಾಗ ಅಂತಿಮವಾಗಿದೆ, ಇನ್ನು ಗೊಂದಲ ಬೇಡ ಎನ್ನುವುದು ಕಲಾಭಿಮಾನಿಗಳ ಕಳಕಳಿ.
2010ರಲ್ಲಿ ಬೊಂದೇಲ್‌ನಲ್ಲಿ ಶಿಲಾನ್ಯಾಸ
ರಂಗ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನಡೆಸಿರುವ ಇನ್ನೊಂದು ಸ್ಥಳ ಬೊಂದೇಲ್. ಇಲ್ಲಿನ ಮಹಿಳಾ ಪಾಲಿಟೆಕ್ನಿಕ್ ಮುಂಭಾಗದಲ್ಲಿ ಮೈದಾನದ ಬಳಿಯಲ್ಲಿ ಸುಮಾರು 3 ಎಕ್ರೆ ಪ್ರದೇಶವನ್ನು ನಿಗದಿ ಮಾಡಲಾಗಿತ್ತು. ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರು 2010ರ ಆಗಸ್ಟ್‌ನಲ್ಲಿ ಶಿಲಾನ್ಯಾಸ ನೆರವೇರಿಸಿದ್ದರು. ಕೆಲವೊಂದು ತಾಂತ್ರಿಕ ಕಾರಣಗಳಿಂದಾಗಿ ಮತ್ತು ಶಿಲಾನ್ಯಾಸ ನಡೆದ ಸ್ಥಳಕ್ಕೆ ಪ್ರವೇಶಕ್ಕೆ ಸಂಬಂಧಿಸಿದಂತೆ ಸಮಸ್ಯೆಯಾದ ಕಾರಣ ಕಾಮಗಾರಿ ನಡೆಯಲಿಲ್ಲ. ಇಲ್ಲಿ ಶಿಲಾನ್ಯಾಸದ ಮಾಡುವ ವೇಳೆ ವೇಳೆ ಕಾಮಗಾರಿಯ ವೆಚ್ಚ 15 ಕೋ.ರೂ.ಗೆ ಏರಿಕೆಯಾಗಿತ್ತು.
ಸ್ಥಳ ಈಗ ಹೇಗಿದೆ?
ರಂಗ ಮಂದಿರ ನಿರ್ಮಾಣ ಸ್ಥಳವಾದ ಬೋಂದೆಲ್‌ನಲ್ಲಿ ಕ್ರೀಡಾಂಗಣವಿದ್ದು, ಶಿಲಾನ್ಯಾಸ ಫಲಕ ಹುಲ್ಲು ಪೊದೆಗಳಿಂದ ಆವೃತವಾಗಿದೆ. ಇಲ್ಲಿನ ಸ್ಥಳೀಯ ಯುವಕರು ಕ್ರೀಡಾಂಗಣ ಅಭಿವೃದ್ಧಿಗೆ, ಪೆವಿಲಿಯನ್ ನಿರ್ಮಾಣ ಮಾಡುವಂತೆ ಸ್ಥಳೀಯ ಜನಪ್ರತಿನಿಧಿಗಳಿಗೆ ಮನವಿಯನ್ನೂ ನೀಡಿದ್ದಾರೆ. ಇಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೂ ಉದ್ದೇಶಿಸಲಾಗಿತ್ತು. ಇದೀಗ ಮೈದಾನಕ್ಕಾಗಿ ಗುಡ್ಡಗಳನ್ನು ಅಗೆದು ಸಮತಟ್ಟುಗೊಳಿಸಲಾಗಿದೆ.
ಬೊಂದೇಲ್‌ನಲ್ಲಿ ಶಿಲಾನ್ಯಾಸ ನೆರವೇರಿಸಿರುವ ಪ್ರದೇಶದ ಭೂ ವಿನ್ಯಾಸವು ರಂಗ ಮಂದಿರ ನಿರ್ಮಾಣಕ್ಕೆ ಪೂರಕವಾಗಿತ್ತು ಎನ್ನುತ್ತಾರೆ ರಂಗಮಂದಿರ ನಿರ್ಮಾಣ ಹೋರಾಟಗಾರರು.
2001: ಕದ್ರಿಪಾರ್ಕ್ ಬಳಿ ಅಡಿಗಲ್ಲು
ಜಿಲ್ಲೆಯಲ್ಲಿ ರಂಗಮಂದಿರ ನಿರ್ಮಾಣಕ್ಕೆ ಮೊದಲ ಬಾರಿಗೆ ಶಿಲಾನ್ಯಾಸ ನಡೆದಿರುವುದು 2001ರಲ್ಲಿ. ರಾಜ್ಯೋತ್ಸವ ದಿನ ನ.1ರಂದು ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಕದ್ರಿ ಪಾರ್ಕ್ ಮುಂಭಾಗದ ಜಿಂಕೆ ವನದಲ್ಲಿ ಶಿಲಾನ್ಯಾಸ ನೆರವೇರಿದ್ದರು. ಆಗ ಸುಮಾರು 4 ಕೋ.ರೂ. ವೆಚ್ಚದಲ್ಲಿ ರಂಗಮಂದಿರ ಕಟ್ಟಡ ನಿರ್ಮಾಣಕ್ಕೆ ಉದ್ದೇಶಿಸಲಾಗಿತ್ತು. ಉದ್ದೇಶಿತ ಜಾಗ ತೋಟಗಾರಿಕಾ ಇಲಾಖೆಯ ಸ್ವಾಧೀನದಲ್ಲಿದ್ದರಿಂದ ಅದನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವರ್ಗಾಯಿಸುವಲ್ಲಿ ಆದ ಸಮಸ್ಯೆಯಿಂದಾಗಿ ಜಿಂಕೆ ಪಾರ್ಕ್‌ನಲ್ಲಿ ರಂಗಮಂದಿರ ನಿರ್ಮಾಣದ ಯೋಜನೆಯನ್ನು ಕೈ ಬಿಡಬೇಕಾಯಿತು.
ಈ ಸ್ಥಳ ಈಗ ಹೇಗಿದೆ?
ಜಿಂಕೆ ವನವಿದ್ದ ಪ್ರದೇಶವನ್ನು ತೋಟಗಾರಿಕ ಇಲಾಖೆಯಿಂದಲೇ ಸುಸಜ್ಜಿತ ಪಾರ್ಕ್ ಆಗಿ ಅಭಿವೃದ್ಧಿಪಡಿಸಲಾಗಿದ್ದು, ಸಂಗೀತ ಕಾರಂಜಿ ಮೊದಲಾದವುಗಳನ್ನು ಅಳವಡಿಸಲಾಗಿದೆ. ಪ್ರವಾಸಿಗರ ಆಕರ್ಷಣೆಯ ತಾಣವೂ ಆಗಿದ್ದ ಇದು ಈಗ ನಿರ್ವಹಣೆ ಇಲ್ಲದೆ ಸೊರಗಿದೆ.
ನೆಹರೂ ಮೈದಾನ -ಉರ್ವ ಬಳಿಯೂ ಸ್ಥಳ ನಿಗದಿ
ಆರಂಭದಲ್ಲಿ ನೆಹರೂ ಮೈದಾನ ಬಳಿಯ ಕಾರ್ಪೋರೇಶನ್ ಬ್ಯಾಂಕ್ ಪಾರ್ಕ್ ಬಳಿ, ಉರ್ವ ಮಾರುಕಟ್ಟೆ ಬಳಿಯೂ ರಂಗ ಮಂದಿರಕ್ಕೆ ನಿರ್ಮಾಣ ಸ್ಥಳ ನಿಗದಿ ಪಡಿಸಲಾಗಿತ್ತು. ಆದರೆ ವಿವಿಧ ಕಾರಣಗಳಿಂದಾಗಿ ಅಲ್ಲಿಯೂ ರಂಗ ಮಂದಿರ ನಿರ್ಮಾಣ ಸಾಧ್ಯವಾಗಿಲ್ಲ.
ಕರಾವಳಿ ಉತ್ಸವ ಮೈದಾನದ ಪಕ್ಕವೂ ಜಾಗ!
ಮಂಗಳಾ ಕ್ರೀಡಾಂಗಣದ ಬಳಿಯ ಕರಾವಳಿ ಉತ್ಸವ ಮೈದಾನದ ಪಕ್ಕದಲ್ಲಿಯೂ ರಂಗ ಮಂದಿರ ನಿರ್ಮಾಣಕ್ಕೆ ಸ್ಥಳ ನಿಗದಿ ಪಡಿಸಲಾಗಿತ್ತು. ಇಲ್ಲಿ ಪ್ರಸ್ತುತ ಒಳಾಂಗಣ ಕ್ರೀಡಾಂಗಣ ಸಹಿತ ವಿವಿಧ ಕ್ರೀಡೆಗಳಿಗೆ ಸಂಬಂಧಿಸಿದ ಅಂಕಣಗಳು ನಿರ್ಮಾಣವಾಗಿದೆ. ಈ ಸ್ಥಳ ಸಂಪೂರ್ಣವಾಗಿ ಕ್ರೀಡಾ ಚಟುವಟಿಕೆಗಳಿಗೆ ಮೀಸಲಿರಿಸಲಾಗಿದೆ.
-ಭರತ್ ಶೆಟ್ಟಿಗಾರ್
You seem to have an Ad Blocker on.
To continue reading, please turn it off or whitelist Udayavani.