

Team Udayavani, Jan 30, 2025, 2:29 PM IST
ಮಹಾನಗರ: ನಗರದಲ್ಲಿ ದಿನ ದಿಂದ ದಿನಕ್ಕೆ ಆಟೋರಿಕ್ಷಾಗಳ ಸಂಖ್ಯೆ ಹೆಚ್ಚುತ್ತಿದೆ. ಅದೇ ಹೊತ್ತಿಗೆ ರಸ್ತೆ ವಿಸ್ತರಣೆ, ಕಟ್ಟಡಗಳ ನಿರ್ಮಾಣ ಸಹಿತ ವಿವಿಧ ಕಾರಣಗಳಿಂದಾಗಿ ಆಟೋ ಸ್ಟಾ éಂಡ್‌ಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗಾಗಿ ರಿಕ್ಷಾಗಳ ನಿಲುಗಡೆಗೆ ಸ್ಥಳಾವಕಾಶದ ಕೊರತೆ ಕಾಡುತ್ತಿದೆ. ಹಲವೆಡೆ ಬಸ್ ಶೆಲ್ಟರ್‌ಗಳ ಮುಂಭಾಗವೇ ಆಟೋಗಳನ್ನು ನಿಲ್ಲಿಸುವುದರಿಂದ ಬಸ್‌ಗಳ ನಿಲುಗಡೆಗೆ ಅಡ್ಡಿಯಾಗಿ ಸಮಸ್ಯೆ ಉಂಟಾಗುತ್ತಿದೆ.
ಆಟೋರಿಕ್ಷಾ ನಿಲ್ಲಿಸಲು ಸೂಕ್ತ ಜಾಗ ಸಿಗದೆ ಇರುವುದರಿಂದ ಕೆಲವು ಕಡೆ ಬಸ್ ನಿಲ್ಲುವ ಜಾಗದಲ್ಲೇ ಆಟೋಗಳನ್ನು ನಿಲ್ಲಿಸಲಾಗುತ್ತದೆ. ಹಾಗಾಗಿ ಬಸ್‌ಗಳು ಬಸ್ ಶೆಲ್ಟರ್‌ಗಳ ಬಳಿ ಹೋಗದೆ ರಸ್ತೆಯ ನಡುವೆಯೇ ನಿಲ್ಲಿಸಬೇಕಾಗುತ್ತದೆ. ಇದರಿಂದಾಗಿ ಇತರ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಬಸ್ ಹತ್ತುವ, ಇಳಿಯುವ ಪ್ರಯಾಣಿಕರು ಕೂಡ ಅಪಾಯಕ್ಕೆ ಸಿಲುಕುತ್ತಿದ್ದಾರೆ.
ಬಸ್ ನಿಲ್ದಾಣಗಳ ಪಕ್ಕ ಆಟೋರಿಕ್ಷಾಗಳ ನಿಲುಗಡೆಯಿಂದ ನಗರದ ಹಲವಾರು ಕಡೆಗಳಲ್ಲಿ ಬಸ್‌ಗಳ ನಿಲುಗಡೆಗೆ ತೊಂದರೆಯಾಗುತ್ತಿದೆ. ಹಲವಾರು ಬಾರಿ ಆಟೋರಿಕ್ಷಾ ಮತ್ತು ಬಸ್ ಸಿಬಂದಿಯ ನಡುವಿನ ವಾಗ್ವಾದಕ್ಕೂ ಕಾರಣವಾಗಿದೆ. ಪೊಲೀಸರು ಇದರ ಬಗ್ಗೆ ಗಮನ ಹರಿಸದೇ ಇರುವುದರಿಂದ ಇಂತಹ ಅನಧಿಕೃತ ಆಟೋರಿಕ್ಷಾ ನಿಲುಗಡೆ ಹೆಚ್ಚುತ್ತಿದೆ ಎಂಬ ದೂರು ಸಾರ್ವಜನಿಕರಿಂದ ಕೇಳಿಬರುತ್ತಿದೆ.
ಎಲ್ಲೆಲ್ಲಿ ಹೆಚ್ಚು ಸಮಸ್ಯೆ?
– ಬಿಜೆಪಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪ ಭಾರತ್ ಮಾಲ್ ಪಕ್ಕದ ಬಸ್ ತಂಗುದಾಣದ ಎದುರು.
– ಕ್ಲಾಕ್‌ಟವರ್ ಕಡೆಯಿಂದ ಆರ್‌ಟಿಒ ಕಚೇರಿ ಕಡೆಗೆ ಹೋಗುವ ರಸ್ತೆಯಲ್ಲಿ ರೈಲ್ವೆ ಸ್ಟೇಷನ್ ಕ್ರಾಸ್ ರಸ್ತೆ ಬಳಿ ಬಸ್ ಶೆಲ್ಟರ್ ಎದುರಿನಲ್ಲಿ.
– ಬಂಟ್ಸ್‌ಹಾಸ್ಟೆಲ್‌ನಿಂದ ಜ್ಯೋತಿ(ಅಂಬೇಡ್ಕರ್ ವೃತ್ತ) ಕಡೆಗೆ ಹೋಗುವಲ್ಲಿ ಇರುವ ಬಸ್ ತಂಗುದಾಣದಲ್ಲಿ ಆಟೋರಿಕ್ಷಾಗಳು ನಿಲ್ಲುತ್ತವೆ.
– ಇಲ್ಲಿ ಕಾಂಕ್ರೀಟ್ ಅಳವಡಿಸಿ ಬಸ್‌ಬೇ ರೀತಿಯಲ್ಲಿ ಸ್ಥಳಾವಕಾಶ ಮಾಡಿಕೊಟ್ಟಿದ್ದರೂ ಅದು ಆಟೋರಿಕ್ಷಾಗಳ ಪಾಲಾಗುತ್ತಿದೆ.
ಸಂಚಾರಕ್ಕೆ ಅಡ್ಡಿಯಾದರೆ ಕ್ರಮ
ಬೆಳಗ್ಗಿನ ವೇಳೆ ಬಸ್‌ಗಳ ಅಡ್ಡಾದಿಡ್ಡಿ ನಿಲುಗಡೆಯಿಂದ ಸಮಸ್ಯೆಯಾಗುತ್ತಿದ್ದು ಇದನ್ನು ಸರಿಪಡಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡುವುದು ನಮ್ಮ ಉದ್ದೇಶ. ಬಸ್ ತಂಗುದಾಣಗಳ ಬಳಿ ಅನಧಿಕೃತವಾಗಿ ನಿಲುಗಡೆ ಮಾಡಿ ಬಸ್‌ಗಳ ನಿಲುಗಡೆಗೆ ಅಡ್ಡಿ ಮಾಡುತ್ತಿರುವ ಆಟೋರಿಕ್ಷಾಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು.
-ನಜ್ಮಾ ಫಾರೂಕಿ, ಎಸಿಪಿ, ಸಂಚಾರ ವಿಭಾಗ
ಆಟೋ ಸ್ಟ್ಯಾಂಡ್ ಮಾಡಿಕೊಡಿ
ಹಿಂದೆ ನಗರದಲ್ಲಿ 400ಕ್ಕೂ ಅಧಿಕ ಆಟೋಸ್ಟಾಂಡ್‌ಗಳಿದ್ದವು. ಈಗ 241 ನಿಲ್ದಾಣಗಳು ಮಾತ್ರ ಇವೆ. ಅದರಲ್ಲಿಯೂ ಅಧಿಕೃತವಾಗಿರುವುದು ಕೇವಲ ಸುಮಾರು 100 ಮಾತ್ರ. ಹಿಂದೆ 7,000 ಇದ್ದ ಆಟೋಗಳ ಸಂಖ್ಯೆ ಈಗ 10,000 ದಾಟಿದೆ. ನಗರದಲ್ಲಿದ್ದ ಆಟೋ ಸ್ಟಾಂಡ್ ತೆರವು ಮಾಡಿದ್ದರಿಂದ ಚಾಲಕರಿಗೆ ಭಾರಿ ಸಮಸ್ಯೆಯಾಗಿದೆ. ಆಟೋ ನಿಲ್ದಾಣಗಳ ಕೊರತೆ ಬಗ್ಗೆ ಪಾಲಿಕೆ, ಪೊಲೀಸರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕೆಲವೆಡೆ ಬಸ್‌ಗಳು ಬಸ್ ಶೆಲ್ಟರ್ ಬಳಿ ಹೋಗದೆ ರಸ್ತೆಯಲ್ಲೇ ನಿಲುಗಡೆಯಾಗುತ್ತವೆ. ಹಾಗಾಗಿ ಆ ಜಾಗದಲ್ಲಿ ಆಟೋಗಳನ್ನು ನಿಲುಗಡೆ ಮಾಡಲಾಗುತ್ತಿದೆ.
-ಭರತ್ ಕುಮಾರ್, ಅಧ್ಯಕ್ಷರು, ದ.ಕ ಜಿಲ್ಲಾ ಆಟೋರಿಕ್ಷಾ ಚಾಲಕರು, ಮಾಲಕರ ಸಂಘಗಳ ಒಕ್ಕೂಟ
-ಸಂತೋಷ್ ಬೊಳ್ಳೆಟ್ಟು
You seem to have an Ad Blocker on.
To continue reading, please turn it off or whitelist Udayavani.