Mangaluru: ಪ್ಲಾಸ್ಟಿಕ್ ಮುಕ್ತ ಮನೆ ಘೋಷಣೆಯಾಗಲಿ
ಪ್ಲಾಸ್ಟಿಕ್ ನಿರ್ಮೂಲನೆಯಲ್ಲಿ ಹೊಸ ಪರಿಕಲ್ಪನೆಗಳನ್ನು ಸೃಷ್ಟಿಸಿದ ಜನಶಿಕ್ಷಣ ಟ್ರಸ್ಟ್ ನ ಶೀನ ಶೆಟ್ಟಿ ಅಭಿಮತ; ಸರಕಾರದಿಂದ ವ್ಯವಸ್ಥಿತ ಅಭಿಯಾನ, ಜನರ ಸಹಕಾರ ಅಗತ್ಯ; ಕಸ ವಿಂಗಡಣೆಗೆ ಗುಜರಿ ಮಾದರಿ!
Team Udayavani, Oct 30, 2024, 1:06 PM IST
ಮಹಾನಗರ: ಪ್ಲಾಸ್ಟಿಕ್ ತ್ಯಾಜ್ಯವಿರಲಿ, ಅಲ್ಲಲ್ಲಿ ಎಸೆಯುವ ಯಾವುದೇ ಕಸವಿರಲಿ ಅದರ ಮೂಲ ಉತ್ಪಾದಕರು, ಪ್ರಸರಣಕಾರರು ಜನರು. ಅದನ್ನು ನಿಯಂತ್ರಿಸುವ ಶಕ್ತಿ ಇರುವುದು ಕೂಡಾ ಜನರಲ್ಲೇ. ಆದರೆ, ಅವರಿಗೆ ಅವರ ಶಕ್ತಿಯ ಅರಿವು ಮೂಡಿಸುವ ಕೆಲಸವನ್ನು ಮಾಡುವುದು ನಮ್ಮ, ಆಡಳಿತದ ಜವಾಬ್ದಾರಿ. ಇದೊಂದು ಕೆಲಸ ಆಯಿತೆಂದರೆ ಪ್ಲಾಸ್ಟಿಕ್ ನಿಯಂತ್ರಣ ಅತ್ಯಂತ ಸುಲಭ. ನಾನು ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸಿಕೊಳ್ಳುತ್ತೇನೆ, ನನ್ನ ಮನೆಯನ್ನೂ ಪ್ಲಾಸ್ಟಿಕ್ ಮುಕ್ತಗೊಳಿಸುತ್ತೇನೆ ಎನ್ನುವ ಸ್ವಯಂಘೋಷಣೆಯನ್ನು ಪ್ರತಿಯೊಬ್ಬರೂ ಮಾಡಿಕೊಂಡರೆ ಜಗತ್ತಿನ ಅತಿ ದೊಡ್ಡ ಸಮಸ್ಯೆಗೆ ಪರಿಹಾರ ಸಿಗುತ್ತದೆ.
ಇದು ಬಯಲುಶೌಚ ಮುಕ್ತ ಗ್ರಾಮ, ಬಯಲು ಕಸ ಮುಕ್ತ ಗ್ರಾಮ, ಪ್ಲಾಸ್ಟಿಕ್ ನಿರ್ಮೂಲನೆ ಕುರಿತು ಕಳೆದೆರಡು ದಶಕಗಳಿಂದ ಸ್ವಯಂ ಸೇವೆ ಮಾಡುತ್ತಾ ಬಂದಿರುವ ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಎನ್.ಶೀನ ಶೆಟ್ಟಿ ಅವರ ಖಚಿತ ನುಡಿಗಳು.
ಗ್ರಾಮಗಳಲ್ಲಿ, ಅರೆನಗರಗಳಲ್ಲಿ ಎರಡು ದಶಕ ಹಿಂದೆಯೇ ಪ್ಲಾಸ್ಟಿಕ್ ನಿರ್ಮೂಲನೆಗಾಗಿ ಜನರೇ ಮನೆಯಿಂದ ಪ್ಲಾಸ್ಟಿಕ್ ಕಸವನ್ನು ಶುಚಿಗೊಳಿಸಿ, ಗ್ರಾಮ ಪಂಚಾಯತ್ ಆವರಣದಲ್ಲಿ ಪ್ಲಾಸ್ಟಿಕ್ ಕುಟೀರಗಳಲ್ಲಿ ಪ್ಲಾಸ್ಟಿಕ್ ಪರ್ವತ ನಿರ್ಮಿಸುವ ಪರಿಕಲ್ಪನೆ ಮೂಲಕ ಜಾಗೃತಿ ಮೂಡಿಸಿದವರು ಶೀನ ಶೆಟ್ಟಿ.
ಉದಯವಾಣಿ-ಸುದಿನದಲ್ಲಿ ಪ್ರಕಟವಾಗುತ್ತಿರುವ ‘ಪ್ಲಾಸ್ಟಿಕ್ ಚಕ್ರವ್ಯೂಹ’ ಸರಣಿಯ ಎಲ್ಲ ವರದಿಗಳನ್ನು ಗಮನಿಸಿ ದ್ದಷ್ಟೇ ಅಲ್ಲ, ಮಂಗಳೂರು ಮಹಾನಗರ ಪಾಲಿಕೆ, ಜಿಲ್ಲಾಡಳಿತ ಮಾತ್ರವಲ್ಲ, ರಾಜ್ಯ ಸರಕಾರದ ಗಮನಕ್ಕೂ ತಲುಪಿಸಿದ್ದಾರೆ.
ಅಭಿಯಾನ ಜನರಲ್ಲಿ ಜಾಗೃತಿ ಮೂಡಿಸಿದೆ. ನಾವು ಇದಕ್ಕೆ ಜಿಲ್ಲಾಡಳಿತ, ಸ್ಥಳೀಯಾಡಳಿತಗಳನ್ನು ಸೇರಿಸಿಕೊಂಡು ಕ್ರಿಯಾತ್ಮಕ ಅಭಿಯಾನದ ರೂಪು ಕೊಡಲಿದ್ದೇವೆ ಎಂದಿರುವ ಶೀನ ಶೆಟ್ಟಿ ಅವರು, ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಶೇ.100 ಕಡ್ಡಾಯ ಅನುಷ್ಠಾನ ಆಗಲೇಬೇಕು ಎಂದಿದ್ದಾರೆ. ಜತೆಗೆ ಪ್ಲಾಸ್ಟಿಕ್ ನಿಯಂತ್ರಣಕ್ಕೆ ಕಾರ್ಯಸಾಧುವಾದ ಹಲವು ಸಲಹೆಗಳನ್ನು ನೀಡಿದ್ದಾರೆ.
ಮೂಲದಲ್ಲೇ ಪ್ರತ್ಯೇಕಿಸಿದರೆ ಮೌಲ್ಯ!
ಪ್ಲಾಸ್ಟಿಕ್ ತ್ಯಾಜ್ಯವನ್ನು ಕಂಡ ಕಂಡಲ್ಲಿ ಎಸೆದರೆ ಅದು ಕಸ. ಆದರೆ, ಮೂಲದಲ್ಲೇ ಪ್ರತ್ಯೇಕಿಸಿ ಶುಚಿಗೊಳಿಸಿ ನೀಡಿದರೆ ಅದು ಮೌಲ್ಯಯುತ ವಸ್ತು. ಅದಕ್ಕೆ ಬೇಡಿಕೆ ಇದೆ. ಜತೆಗೆ ಅದರ ಮೌಲ್ಯವರ್ಧನೆಯೂ ಆಗುತ್ತದೆ. ಹೀಗಾಗಿ ಇದಕ್ಕೆ ಬೇರೆ ಯಾವ ಮಾದರಿಯೂ ಅಗತ್ಯವಿಲ್ಲ. ಮೂಲದಿಂದ ಪ್ಲಾಸ್ಟಿಕ್ ಕಸ ವಿಂಗಡಣೆಯೇ ಸುಸ್ಥಿರವಾದ ಮಾದರಿ.
ಮತ್ತೆ ಬೇಕು ವ್ಯವಸ್ಥಿತ ಅಭಿಯಾನ
ಇರಾ ಗ್ರಾ.ಪಂನಲ್ಲಿ ಆರಂಭವಾದ ಪ್ಲಾಸ್ಟಿಕ್ ಪರ್ವತ ಮಾದರಿ ಆಗ ಯಶಸ್ವಿಯಾಯಿತು, ದೇಶ-ವಿದೇಶಗಳಿಂದ ಜನ ಇದನ್ನು ನೋಡಲು ಬಂದಿದ್ದರು. ಬೆಳ್ತಂಗಡಿಯ ಹೊಸಂಗಡಿ, ಕಾಶಿಪಟ್ಣಗಳಲ್ಲೂ ಅನುಸರಿಸಲಾಗಿತ್ತು. ಆದರೆ ಅದು ಹೆಚ್ಚು ಕಾಲ ಮುಂದುವರಿಯಲಿಲ್ಲ, ಈಗ ಮತ್ತೆ ಅಂತಹ ಅಭಿಯಾನದ ಅಗತ್ಯವಿದೆ. ನಮ್ಮಲ್ಲಿ ಸ್ವತ್ಛ ಸಂಕೀರ್ಣ ಘಟಕಗಳಿವೆ, ಸ್ವತ್ಛ ವಾಹಿನಿ ವಾಹನಗಳಿವೆ, ಸಿಬಂದಿಗಳಿದ್ದಾರೆ. ಆದರೆ ವ್ಯವಸ್ಥೆ ಸರಿಯಾಗಿ ಇಲ್ಲ. ಮೂಲದಲ್ಲಿ ಕಸ ವಿಂಗಡಣೆ ಇಲ್ಲ, ಜನರಿಗೂ ಪ್ಲಾಸ್ಟಿಕ್ ಅಪಾಯದ ಮನವರಿಕೆಯಾಗಿಲ್ಲ. ಅದು ಅರಿವಾಗಬೇಕು.
ಸ್ವಯಂ ಘೋಷಣೆ ಉತ್ತಮ ಯೋಜನೆ
ಜನರಲ್ಲಿ ಪ್ಲಾಸ್ಟಿಕ್ ಅಪಾಯದ ಬಗ್ಗೆ ಅರಿವು ಮೂಡಿಸಿ, ಅವರೇ ತಮ್ಮಲ್ಲಿ ವ್ಯವಸ್ಥಿತವಾಗಿ ಹಸಿ ಕಸ, ಒಣಕಸ ಹಾಗೂ ಅಪಾಯಕಾರಿ ಕಸ ಪ್ರತ್ಯೇಕಿಸುವ, ನಿರ್ವಹಿಸುವ ವ್ಯವಸ್ಥೆ ಇರುವ ಬಗ್ಗೆ ಸ್ವಯಂ ಘೋಷಣೆ ಮಾಡುವುದು ಹಾಗೂ ವರ್ಷಕ್ಕೊಮ್ಮೆ ಸ್ವಯಂ ಘೋಷಣ ಪತ್ರ ನೀಡುವಂತೆ ಮಾಡಬೇಕು. ಇದು ಆಂದೋಲನವಾದಾಗ ಪ್ಲಾಸ್ಟಿಕ್ ನಿಯಂತ್ರಣ ಸುಲಭವಾಗಬಹುದು.
ಹಿಂದೆ ಲಾಯ್ಲ, ಬನ್ನೂರು, ಬಾಳೆಪುಣಿಯಲ್ಲಿ ಕಸಮುಕ್ತ ಮನೆ ಸ್ವಯಂ ಘೋಷಣೆ ಪತ್ರ ಯೋಜನೆ ಮಾಡಿದೆವು. 200ರಷ್ಟು ಮನೆಗಳು ಅದನ್ನು ಅನುಸರಿಸಿದವು. ಈ ಬಗ್ಗೆ ಸರಕಾರಕ್ಕೆ ಬರೆದಾಗ, ಎಲ್ಲ ಕಡೆ ಜಾರಿಗೆ ಅಧಿಸೂಚನೆ ಹೊರಡಿಸಿತು. ಆದರೆ, ಇದು ಜಾರಿಯಾಗಿಲ್ಲ.
ಕಸ ವಿಂಗಡಣೆಗೆ ಗುಜರಿಯೇ ಮಾದರಿ!
ವಿಕೇಂದ್ರಿತ ಕಸ ವಿಂಗಡಣೆಗೆ ಗುಜರಿ ಕೇಂದ್ರಗಳು ಮಾದರಿ. ಗುಜರಿಯವರು ಅಲ್ಲಲ್ಲೇ ಕಸಗಳನ್ನು ಪ್ರತ್ಯೇಕಿಸುತ್ತಾರೆ. ಹಾಗಾಗಿ ಮಂಗಳೂರಿನಂತಹ ದೊಡ್ಡ ನಗರಕ್ಕೆ ವಿಕೇಂದ್ರಿತ ಕಸ ಪ್ರತ್ಯೇಕಿಸುವ ವಾರ್ಡ್‌ವಾರು ಘಟಕಗಳಿದ್ದರೆ ಕೆಲಸ ಸುಲಭವಾಗುತ್ತದೆ. ಕಸ ವಿಂಗಡಣೆ ಸರಿಯಾದಾಗ ಕಸದ ಮೌಲ್ಯವರ್ಧನೆಯಾಗುತ್ತದೆ. ಇದು ಸುಸ್ಥಿರವಾದ ಕ್ರಮ ಎನ್ನುವುದು ಶೀನ ಶೆಟ್ಟಿ ಅವರ ಅಭಿಮತ.
ಸಾರ್ವಜನಿಕರ ಅಭಿಪ್ರಾಯ
ಪರ್ಯಾಯ ವಸ್ತುಗಳ ಬಳಸೋಣ
ಪ್ಲಾಸ್ಟಿಕ್ ನಿಯಂತ್ರಣ ನಮ್ಮ ಮನೆಯಿಂದಲೇ ಆಗಬೇಕು. ಎಲ್ಲರೂ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆಗೊಳಿಸಿ ಪರ್ಯಾಯಗಳನ್ನು ಬಳಸಬೇಕು. ಪ್ಲಾಸ್ಟಿಕ್ ಬ್ಯಾಗ್ ಬದಲು ಪೇಪರ್-ಬಟ್ಟೆ ಬ್ಯಾಗ್, ಪ್ಲಾಸ್ಟಿಕ್ ಬದಲು ಸ್ಟೀಲ್ ನೀರಿನ ಬಾಟಲಿ, ಪ್ಲಾಸ್ಟಿಕ್ ಬದಲು ತಿನ್ನಬಹುದಾದ ಐಸ್‌ಕ್ರೀಮ್ ಕಪ್, ಪ್ಲಾಸ್ಟಿಕ್ ಚಮಚದ ಬದಲಿಗೆ ಮರ/ ಸ್ಟೀಲ್ ಚಮಚ, ಪ್ಲಾಸ್ಟಿಕ್ ಸ್ಟ್ರಾ ಬದಲು ಪೇಪರ್ ಸ್ಟ್ರಾ ಬಳಸಬಹುದು.
-ಗೀತಾ ವಿ. ಮೈಂದನ್, ಮಂಗಳೂರು
ಮದುವೆಯಲ್ಲಿ ಬಾಟಲಿ ನೀರು ಬೇಕಾ?
ಮದುವೆ, ಸಭೆ ಸಮಾರಂಭಗಳಲ್ಲಿ ಬಾಟಲಿ ನೀರು ನೀಡದಿದ್ದರೆ ಪ್ರತಿಷ್ಠೆಗೆ ಕುಂದು ಎಂಬ ಭಾವನೆ ಇದೆ. ಜಾತ್ರೆಗಳಲ್ಲೂ ಇದರ ಬಳಕೆ ವಿಪರೀತ. ಅದರ ಅಗಾಧತೆ ಜಾತ್ರೆ ಮುಗಿದ ಮೇಲೆ ಕಾಣಬಹುದು. ಎಲ್ಲಿ ನೋಡಿದರೂ ಪ್ಲಾಸ್ಟಿಕ್ ಹರಡಿರುತ್ತದೆ.
– ದಯಾನಂದ ದೇವಾಡಿಗ, ಸುರತ್ಕಲ್
ಯಾರೂ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ?
ಪ್ಲಾಸ್ಟಿಕ್ ದುಷ್ಪರಿಣಾಮದ ಬಗ್ಗೆ ವ್ಯಾಪಾರಿಗಳಿಗೂ, ಅಧಿಕಾರಿಗಳಿಗೂ ಗೊತ್ತಿದೆ. ಆದರೂ ಯಾವುದೇ ಇಲಾಖೆಯವರು ಯಾಕೆ ಕ್ರಮ ಕೈಗೊಳ್ಳಲ್ಲುತ್ತಿಲ್ಲ?
-ಸೂರ್ಯ ಶೆಟ್ಟಿ, ಪೊಳಲಿ
ಪ್ಲಾಸ್ಟಿಕ್‌ನ್ನು ಒಳ್ಳೆಯ ದರಕ್ಕೆ ಖರೀದಿ ಮಾಡಿ
ಉಪಯೋಗಿಸಿ ಎಸೆಯುವ ಪ್ಲಾಸ್ಟಿಕ್‌ನ್ನು ಸ್ಥಳೀಯ ಆಡಳಿತವೇ ಕೆಜಿಗೆ 50 ರೂ.ನಂತೆ ಖರೀದಿಸಬೇಕು. ಆಗ ಮಹಿಳೆಯರು ಪ್ಲಾಸ್ಟಿಕ್ ಸಂಗ್ರಹಿಸಿಟ್ಟು ಗುಜರಿಯವನಿಗೆ ಮಾರುತ್ತಾರೆ. ನಮ್ಮಲ್ಲಿ ಇದನ್ನು ಯಾಕೆ ಪ್ರಯತ್ನಿಸಬಾರದು?
-ಕೆ.ಪಿ.ಎ. ರಹೀಮ್, ಮಂಗಳೂರು
ಪರಿಸರ ಪೂರಕ ಉತ್ಪನ್ನಕ್ಕೆ ಪ್ರೋತ್ಸಾಹ
ಮೆಕ್ಕೆಜೋಳ, ಬಿದಿರಿನಿಂದ ತಯಾರಿಸಿದ ಅನೇಕ ಉತ್ಪನ್ನಗಳು ಇವೆ. ಇವುಗಳ ಸಂಶೋಧನೆ, ಉತ್ಪಾದನೆ, ಮಾರಾಟ ಮತ್ತು ಖರೀದಿಯಲ್ಲಿ ರಿಯಾಯಿತಿ ನೀಡಬೇಕು. ಪರಿಸರ ಪೂರಕ ಉತ್ಪನ್ನಗಳು ಮಾರುಕಟ್ಟೆಗೆ ಬಂದರೆ ಆವರಿಸುತ್ತಿದ್ದಂತೆಯೇ, ಪರಿಸರಕ್ಕೆ ಮಾರಕವಾದವುಗಳನ್ನು ನಿಷೇಧಿಸುತ್ತಾ ಬರಬಹುದು.
-ಜುನೈದ್, ಕುಳೂರು
-ವೇಣುವಿನೋದ್ ಕೆ. ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕುಂಬಾರರ ಬದುಕಿನಲ್ಲಿಲ್ಲ ದೀಪಾವಳಿ ಬೆಳಕು: ಮಾರುಕಟ್ಟೆಗೆ ಲಗ್ಗೆ ಇಟ್ಟ ಪಿಂಗಾಣಿ ಹಣತೆ
ದರ್ಶನ್ ಗೆ ಜಾಮೀನು… ಕನಕ ದುರ್ಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಪತ್ನಿ ವಿಜಯಲಕ್ಷ್ಮೀ
Amritsar; ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಗ್ಯಾಂಗ್ ಸ್ಟರ್ ಗುಂಡಿಗೆ ಬಲಿ
UV Fusion: ಪ್ರಕೃತಿ ಅವಶ್ಯ ಮನುಜನಿಗೆ
Siddaramaiah; ಸಿಎಂ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಟಿ.ಜೆ.ಅಬ್ರಹಾಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.