ಕಾಲಮಿತಿಯೊಳಗೆ ಯೋಜನೆ ಪೂರ್ಣಗೊಳಿಸಿ: ಬೈರತಿ
ಮಂಗಳೂರು ಪಾಲಿಕೆ, ಸ್ಮಾರ್ಟ್ ಸಿಟಿ, ಮುಡಾ ಪ್ರಗತಿ ಪರಿಶೀಲನೆ ಸಭೆ
Team Udayavani, Feb 2, 2022, 5:59 PM IST
ಲಾಲ್‌ಬಾಗ್: ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಸ್ಮಾರ್ಟ್‌ಸಿಟಿ, ಕುಡಿಯುವ ನೀರಿನ ಯೋಜನೆ ಬಹುತೇಕ ಕಾಮಗಾರಿಗಳು ವಿಳಂಬ ರೀತಿಯಲ್ಲಿ ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಕಾಲಮಿತಿಯೊಳಗೆ ಯೋಜನೆ ಪೂರ್ಣಗೊಳಿಸದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಪಾಲಿಕೆ, ಸ್ಮಾರ್ಟ್ ಸಿಟಿ, ಮುಡಾ ಕಾಮ ಗಾರಿಗಳ ಬಗ್ಗೆ ಪಾಲಿಕೆ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು. ಟೆಂಡರ್ ವಹಿಸಿಕೊಂಡು ಕಾಮಗಾರಿ ನಿರ್ವಹಿಸದ ಗುತ್ತಿಗೆದಾರರ ಗುತ್ತಿಗೆ ರದ್ದು ಪಡಿಸಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಹಾಗೂ ಈಗಾಗಲೇ ಕೈಗೆತ್ತಿಕೊಂಡ ಕಾಮಗಾರಿಯನ್ನು 3 ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಸ್ಮಾರ್ಟ್ ಸಿಟಿಯ ಪ್ರಧಾನ ಕಾಮಗಾರಿ 200 ಕೋ.ರೂ. ಗಳ “ಜಲಾಭಿಮುಖ’ (ವಾಟರ್ ಫ್ರಂಟ್)ಯೋಜನೆಯ ಎಲ್ಲ ಕಾಮಗಾರಿಗಳಿಗೆ ಈ ತಿಂಗಳಾಂತ್ಯದೊಳಗೆ ಟೆಂಡರ್ ಪ್ರಕ್ರಿಯೆ ಮುಗಿಸಿ ಕಾರ್ಯಾದೇಶ ನೀಡಬೇಕು ಎಂದು ನಿರ್ದೇಶನ ನೀಡಿದರು.
ಗುತ್ತಿಗೆದಾರರ ವಿರುದ್ಧ
ಕ್ರಿಮಿನಲ್ ಕೇಸ್
ಕುಡಿಯುವ ನೀರು, ಒಳಚರಂಡಿ, ಸ್ಮಾರ್ಟ್‌ಸಿಟಿ ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರರು ಕೆಲಸ ಮಾಡದೆ ಇದ್ದರೆ ಅವರ ಗುತ್ತಿಗೆಯನ್ನೇ ರದ್ದು ಮಾಡಲಾಗುವುದು. ಅಂತವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಮರು ಟೆಂಡರ್ ಪ್ರಕ್ರಿಯೆ ಕೈಗೆತ್ತಿಕೊಳ್ಳಬೇಕು ಎಂದು ಸೂಚಿಸಿದರು.
ಟಿಡಿಆರ್ ನೀಡಲು ಸೂಚನೆ
ಶಾಸಕ ಡಾ|ವೈ. ಭರತ್ ಶೆಟ್ಟಿ ಮಾತನಾಡಿ, “ಈಗಾಗಲೇ ಅಭಿವೃದ್ಧಿ ಕಾಮಗಾರಿಗಳಿಗೆ ಜಾಗ ಬಿಟ್ಟುಕೊಟ್ಟವರಿಗೆ ಟಿಡಿಆರ್ ನೀಡುವಲ್ಲಿ ವಿಳಂಬವಾಗುತ್ತಿದೆ. ಸುಮಾರು 12 ವರ್ಷಗಳಿಂದ ಟಿಡಿಆರ್ ನೀಡದೆ ಬಾಕಿಯಾಗಿದೆ’ ಎಂದರು. ಸಚಿವರು ಮಾತನಾಡಿ, ಹಿಂದಿನವರಿಗೇ ಟಿಡಿಆರ್ ಕೊಟ್ಟಿಲ್ಲವೆಂದರೆ ಯಾರೂ ಮುಂದೆ ಜಾಗ ಬಿಡಲ್ಲ. ಹಾಗಾಗಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಗರದಲ್ಲಿ ಅಭಿವೃದ್ಧಿ ಕೆಲಸಗಳಿಗಾಗಿ ಜಾಗ ಬಿಟ್ಟು ಕೊಟ್ಟವರಿಗೆ ಟಿಡಿಆರ್ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಕುಡಿಯುವ ನೀರು;
ಯಾವಾಗ ಪೂರ್ಣ?
ದಿನದ 24×7 ಕುಡಿಯುವ ನೀರು ಒದಗಿಸುವ ಯೋಜನೆಯ ಪೈಕಿ ಒಟ್ಟು 1,388 ಕಿ.ಮೀ. ಪೈಪ್‌ಲೈನ್ ಮಾಡಬೇಕಾದ ಗುರಿಯಲ್ಲಿ ಸದ್ಯ ಕೇವಲ 250 ಕಿ.ಮೀ. ಪೈಪ್‌ಲೈನ್ ಕಾಮಗಾರಿ ಪೂರ್ತಿಯಾಗಿದೆ. ಉಳಿದದ್ದು ತಡವಾಗಿದ್ದು ಯಾಕೆ? ಎಂದು ಸಚಿವರು ಅಧಿಕಾರಿಗಳನ್ನು ಪ್ರಶ್ನಿಸಿದರು. ಕೆಲವೊಂದು ತಾಂತ್ರಿಕ ಸಮಸ್ಯೆ ಹಾಗೂ ಡಿಪಿಆರ್ ಆಗಿ 7 ತಿಂಗಳು ಯೋಜನೆ ಮ್ಯಾಪ್ ಸಿದ್ಧಪಡಿಸಲು ಬೇಕಾಯಿತು ಎಂದು ಅಧಿಕಾರಿಗಳು ಉತ್ತರ ನೀಡಿದರು. ಇದಕ್ಕೆ ಸಿಟ್ಟುಗೊಂಡ ಸಚಿವರು “2020ರಲ್ಲೇ ಯೋಜನೆ ಆರಂಭವಾಗಿದೆ. ಆಗ ಡಿಪಿಆರ್ ಮಾಡುವಾಗ ಕಣ್ಮುಚ್ಚಿಕೊಂಡು ಕೂತಿದ್ರಾ? ಆಗ ಎಲ್ಲ ಮಾಡಿ ಮತ್ತೆ 7 ತಿಂಗಳು ಏನು ಮಾಡಿದ್ದು? ಕೆಲಸ ಮುಗಿಸುವ ಜವಾಬ್ದಾರಿ ಇಲ್ಲವೇ? ಎಂದು ಪ್ರಶ್ನಿಸಿದರು. 2023ರ ನವೆಂಬರ್ ಒಳಗೆ ಕುಡಿಯುವ ನೀರಿನ ಎಲ್ಲ ಕಾಮಗಾರಿಗಳು ಮುಗಿಯಬೇಕು. ಪ್ರತಿ ತಿಂಗಳು ಗುರಿ ನಿಗದಿ ಮಾಡಿಕೊಂಡು ಕೆಲಸ ಮಾಡಿ ಎಂದು ಸೂಚಿಸಿದರು.
ಝಡ್ ಆರ್ ನಿಯಮಾವಳಿ ಕಿರಿಕ್
ಝಡ್ ಆರ್ ನಿಯಮಾವಳಿಯಲ್ಲಿ ಮೂಡುಬಿದಿರೆ ವ್ಯಾಪ್ತಿಯವರಿಗೆ ಸಮಸ್ಯೆ ಆಗುತ್ತಿದೆ. ಇದನ್ನು ಸರಿಪಡಿಸಬೇಕು ಎಂದು ಶಾಸಕ ಉಮಾನಾಥ ಕೋಟ್ಯಾನ್ ಮನವಿ ಮಾಡಿದರು. ಅಧಿಕಾರಿಗಳು ಈ ಬಗ್ಗೆ ಗಮನ ನೀಡುವಂತೆ ಸಚಿವರು ಸೂಚಿಸಿದರು. ಮುಖ್ಯ ಸಚೇತಕ ಸುಧೀರ್ ಶೆಟ್ಟಿ ಮಾತನಾಡಿ, ನಗರಕ್ಕೆ ಸಮರ್ಪಕ ನೀರು ಪೂರೈಕೆ ಕಾಮಗಾರಿಗಾಗಿ 250 ಕೋ.ರೂ.ಗಳ ಹೆಚ್ಚುವರಿ ಅನುದಾನ ನೀಡಬೇಕು ಎಂದರು. ಸದಸ್ಯರ ಗೌರವಧನವನ್ನು 15,000 ರೂ. ಗಳಿಗೆ ಏರಿಕೆ ಮಾಡಬೇಕು ಎಂದು ಸದಸ್ಯೆ ಶಕೀಲಾ ಕಾವಾ ಮನವಿ ಮಾಡಿದರು. ಶಾಸಕರಾದ ಡಾ|ಭರತ್ ಶೆಟ್ಟಿ ವೈ., ಉಮಾನಾಥ ಕೋಟ್ಯಾನ್, ವಿ. ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮೇಯರ್ ಪ್ರೇಮಾನಂದ ಶೆಟ್ಟಿ, ಉಪ ಮೇಯರ್ ಸುಮಂಗಲಾ, ಮುಡಾ ಅಧ್ಯಕ್ಷ ರವಿಶಂಕರ ಮಿಜಾರು, ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ., ಕೆಯುಐಡಿಎಫ್ಸಿ ಎಂಡಿ ಡಾ| ರೇಜು, ಸ್ಮಾರ್ಟ್ ಸಿಟಿ ಎಂಡಿ ಪ್ರಶಾಂತ್ ಮಿಶ್ರಾ, ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಉಪಸ್ಥಿತರಿದ್ದರು.
ರಸ್ತೆ ಅಗೆದದ್ದು ನೋಡುವಾಗ ಹೊಟ್ಟೆ ಉರಿಯುತ್ತೆ!
ಸಚಿವ ಬೈರತಿ ಬಸವರಾಜ್ ಮಾತನಾಡಿ, ನಗರದ ಅಲ್ಲಲ್ಲಿ ರಸ್ತೆಗಳನ್ನು ಅಗೆದಿರುವುದನ್ನು ನೋಡಿದಾಗ ಹೊಟ್ಟೆ ಉರಿಯುತ್ತೆ. ಅಲ್ಲಲ್ಲಿ ರಸ್ತೆಯುದ್ದಕ್ಕೂ ಕಟ್ಟಡ ತ್ಯಾಜ್ಯ, ಸ್ವಚ್ಛತೆ ಇಲ್ಲದ್ದನ್ನು ನೋಡುವಾಗ ಅಧಿಕಾರಿಗಳು ಏನು ಮಾಡುತ್ತಾರೆ ಎಂಬ ಪ್ರಶ್ನೆ ಮೂಡುತ್ತಿದೆ. ಅಗೆದಿರುವ ರಸ್ತೆಗಳನ್ನು ಸಂಬಂಧಪಟ್ಟ ಗುತ್ತಿಗೆದಾರರಿಂದ ಮುಚ್ಚಿಸುವ, ರಸ್ತೆ ಬದಿಗಳಲ್ಲೇ ಸುರಿದಿರುವ ಕಟ್ಟಡ ತ್ಯಾಜ್ಯವನ್ನು ಪ್ರತೀ ವಾರ ಸ್ಥಳ ಭೇಟಿ ಅಭಿಯಾನ ರೀತಿಯಲ್ಲಿ ಪರಿಶೀಲನೆ ಮಾಡಿ ತೆರವುಗೊಳಿಸಬೇಕು. ಮುಂದಿನ ತಿಂಗಳು ಮತ್ತೆ ಮಂಗಳೂರಿಗೆ ಬಂದು ಪರಿಶೀಲನೆ ಮಾಡಲಿದ್ದೇನೆ. ಸರಿಯಾಗದಿದ್ದರೆ ಅದೇ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು ಎಂದು ಅಧಿಕಾರಿಗಳಿಗೆ ಸೂಚಿಸಿದರು.
“ರಸ್ತೆ, ಚರಂಡಿ ಅಭಿವೃದ್ಧಿಯೇ
ಸ್ಮಾರ್ಟ್‌ಸಿಟಿಯಾ’?
ಮಂಜುನಾಥ ಭಂಡಾರಿ ಮಾತನಾಡಿ, ಮಂಗಳೂರು ಸ್ಮಾರ್ಟ್ ಸಿಟಿ ಉದ್ದೇಶ ಇಲ್ಲಿನ ಜಲಾಭಿಮುಖ ಅಭಿವೃದ್ದಿಯೊಂದಿಗೆ ಹೂಡಿಕೆದಾರರನ್ನು ಆಕರ್ಷಿಸುವ ಮೂಲಕ ಪ್ರವಾಸೋದ್ಯಮ ಹಬ್ ಆಗಿ ಮಾಡುವುದಾಗಿತ್ತು. ಇದೇ ಆಧಾರದಲ್ಲಿ ಮಂಗಳೂರು ಆಯ್ಕೆಯಾಗಿತ್ತು. ಆದರೆ ಅಲ್ಲಿ ಏನೂ ಮಾಡದೆ ರಸ್ತೆ, ಚರಂಡಿ ಕೆಲಸವನ್ನೇ ಮಾಡಲಾಗುತ್ತಿದೆ. ರಸ್ತೆ, ಚರಂಡಿ ಮಾತ್ರ ಮಾಡಲು ಸ್ಮಾರ್ಟ್‌ಸಿಟಿ ಬೇಕಾ? ಎಂದು ಪ್ರಶ್ನಿಸಿದರು. ಜಿಲ್ಲಾಧಿಕಾರಿ ಡಾ|ರಾಜೇಂದ್ರ ಕೆ.ವಿ. ಉತ್ತರಿಸಿ “ತಾಂತ್ರಿಕ ಹಾಗೂ ಇತರ ಸಮಸ್ಯೆಗಳಿಂದ ಜಲಾಭಿಮುಖ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಲ್ಲಿ ಸ್ವಲ್ಪ ವಿಳಂಬವಾಗಿದೆ. ಉದ್ದೇಶ ಹಳಿ ತಪ್ಪಿಲ್ಲ. ಮುಂದೆ ಜಲಾಭಿಮುಖೀ ಯೋಜನೆಯನ್ನೇ ಕೈಗೆತ್ತಿಕೊಳ್ಳಲಾಗುವುದು’ ಎಂದರು.
ಪಂಪ್‌ವೆಲ್ ಬಸ್‌ನಿಲ್ದಾಣ
4 ಕಡೆಗೆ ಸ್ಥಳಾಂತರ!
ಪಂಪ್‌ವೆಲ್‌ನಲ್ಲಿ ಗುರುತಿಸಲಾದ ಜಾಗದಲ್ಲಿ ಖಾಸಗಿ- ಸಾರ್ವಜನಿಕ ಮಾದರಿಯಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಲು ಇನ್ನೂ ಆಗಿಲ್ಲ. ಟೆಂಡರ್‌ನಲ್ಲಿ ಯಾರೂ ಭಾಗವಹಿಸುತ್ತಿಲ್ಲ ಯಾಕೆ ಎಂದು ಮಂಜುನಾಥ ಭಂಡಾರಿ ಕೇಳಿದರು. ಪ್ರತಿಕ್ರಿಯಿಸಿದ ಸಚಿವರು, “ಒಂದೇ ಕಡೆ 440 ಕೋ.ರೂ. ವೆಚ್ಚ ಹೂಡಿಕೆ ಮಾಡಿ ಬಸ್‌ನಿಲ್ದಾಣ ಮಾಡಬೇಕಾದ ಕಾರಣದಿಂದ ಹೂಡಿಕೆದಾರರು ಹೂಡಿಕೆಗೆ ಮುಂದೆ ಬರುತ್ತಿಲ್ಲ. ಹೀಗಾಗಿ ಒಂದೇ ಕಡೆ ಬಸ್‌ನಿಲ್ದಾಣ ಮಾಡುವುದಕ್ಕಿಂತ ನಗರದ ನಾಲ್ಕು ಕಡೆಯಲ್ಲಿ ಪ್ರತ್ಯೇಕ ಬಸ್ ನಿಲ್ದಾಣ ಮಾಡಿದರೆ ಹೂಡಿಕೆಯೂ ವಿಭಜನೆಯಾಗಿ ಹೂಡಿಕೆ ಮಾಡುವವರಿಗೆ ಅನುಕೂಲವಾಗಲಿದೆ. ಈ ಬಗ್ಗೆ ಚರ್ಚಿಸಲಾಗುವುದು ಎಂದು ಸಚಿವರು ಹೇಳಿದರು.
ಅಧಿಕಾರಿಗಳಿಗೆ ಸಂಬಳ ಯಾಕೆ ಕೊಡೋದು?
ನಗರದ ಅನೇಕ ಕಡೆಗಳಲ್ಲಿ ಸ್ವತ್ಛತೆಯ ಕೊರತೆ ಇದೆ. ಇದನ್ನು ಸರಿಮಾಡದಿದ್ದರೆ ಅಧಿಕಾರಿಗಳಿಗೆ ಸರಕಾರ ಸಂಬಳ ಕೊಡುವುದ್ಯಾಕೆ? ಈ ಕೂಡಲೇ ರಸ್ತೆ ಬದಿಗಳಲ್ಲಿರುವ ಕಸ, ಕಟ್ಟಡ ತ್ಯಾಜ್ಯಗಳನ್ನು ತೆರವುಗೊಳಿಸಬೇಕು. ಎಲ್ಲೂ ಗಲೀಜು ಇರಬಾರದು ಎಂದು ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು. ಪಾಲಿಕೆ ಆಯುಕ್ತರು ಪ್ರತೀ ವಾರ್ಡ್‌ಗೆ ತೆರಳಿ ರಸ್ತೆ ಅಗೆದಿರುವುದು, ಸ್ವತ್ಛತೆ ಸಮಸ್ಯೆ ಇದ್ದರೆ ಸ್ಥಳದಲ್ಲೇ ಸೂಕ್ತ ಕ್ರಮ ಕೈಗೊಳ್ಳಬೇಕು. ಪ್ರತಿ ವಾರ್ಡ್‌ನಲ್ಲೂ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳುವಂತೆ ಸೂಚಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.