Mangaluru: ರಾಷ್ಟ್ರೀಯ ಹೆದ್ದಾರಿಯ ಸೂಚನ ಫಲಕಗಳ ನಿರ್ವಹಣೆಯೇ ಇಲ್ಲ
ತುಕ್ಕು ಹಿಡಿದ, ಬಣ್ಣ ಮಾಸಿದ, ಪೊದೆಗಳಿಂದ ಆವೃತ ಫಲಕಗಳು; ಇದ್ದೂ ಪ್ರಯೋಜನಕ್ಕಿಲ್ಲ
Team Udayavani, Dec 6, 2024, 3:05 PM IST
ಮಹಾನಗರ: ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅಲ್ಲಲ್ಲಿ ಸೂಚನ ಫಲಕಗಳನ್ನು ಅಳವಡಿಸಲಾಗಿದೆ. ತಿರುವುಗಳು, ರಸ್ತೆ ಉಬ್ಬು, ವೇಗದ ಮಿತಿಗಳು ಸಹಿತ ವಿವಿಧ ರೀತಿಯ ಸೂಚನೆಗಳು, ಪ್ರಮುಖ ದೂರವಾಣಿ ಸಂಖ್ಯೆಗಳನ್ನು ಈ ಫಲಕದಲ್ಲಿ ಅಳವಡಿಸಲಾಗುತ್ತದೆ. ಆದರೆ ಅವುಗಳನ್ನು ಸರಿಯಾಗಿ ನಿರ್ವಹಣೆ ಮಾಡದ ಪರಿಣಾಮ ಹೆದ್ದಾರಿಯಲ್ಲಿರುವ ಬಹುತೇಕ ಫಲಕಗಳು ತುಕ್ಕು ಹಿಡಿದು ಹೋಗಿವೆ. ಕೆಲವು ಫಲಕಗಳಲ್ಲಿ ಬಣ್ಣ ಮಾಸಿದ್ದು, ವಾಹನಗಳು ಢಿಕ್ಕಿಯಾಗಿ ಅಥವಾ ಇನ್ಯಾವುದೋ ಕಾರಣಕ್ಕೆ ನೆಲದಿಂದಲೇ ಮೇಲೆದ್ದು ಬಂದು ವಾಲಿ ನಿಂತಿದೆ. ಅವುಗಳನ್ನು ದುರಸ್ತಿ ಮಾಡುವ ಕೆಲಸಗಳು ಮಾತ್ರ ನಡೆಯುವುದೇ ಇಲ್ಲ.
ಸ್ಥಳೀಯರಿಂದಲೇ ನಿರ್ವಹಣೆ
ಕೆಲವು ಕಡೆಗಳಲ್ಲಿ ಸ್ಥಳೀಯ ಸಂಘ ಸಂಸ್ಥೆಗಳೇ ಸ್ವಯಂ ಪ್ರೇರಿತವಾಗಿ ಇಂತಹ ಫಲಕಗಳನ್ನು ಸ್ವತ್ಛಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುತ್ತಾರೆ. ಬೋರ್ಡ್‌ಗೆ ಅಂಟಿದ ಪಾಚಿ ಯನ್ನು ಸ್ವತ್ಛಗೊಳಿಸುವುದು, ಬಣ್ಣ ಬಳಿಯು ವುದು, ಅಗತ್ಯವಿದ್ದರೆ ಹೆಚ್ಚುವರಿ ಫಲಕಗಳನ್ನು ಅಳವಡಿ ಸುವುದು ಕೂಡ ಸ್ಥಳೀಯರು ಮಾಡುತ್ತಾರೆ.
ಫಲಕಗಳು ಯಾಕೆ ಅಗತ್ಯ?
ಹೆದ್ದಾರಿಯಲ್ಲಿ ವಾಹನಗಳು ವೇಗವಾಗಿ ಸಾಗುವು ದರಿಂದ ತಿರುವುಗಳು, ರಸ್ತೆ ಉಬ್ಬು ಮೊದಲಾದವುಗಳಿಗೆ ಸಂಬಂಧಿಸಿದಂತೆ 100-200 ಮೀ. ಮೊದಲೇ ಸೂಚನೆ ನೀಡಲಾಗುತ್ತದೆ. ಇದರಿಂದ ಚಾಲಕರಿಗೆ ವಾಹನವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಇದರಿಂದ ಅವಘಡಗಳನ್ನೂ ತಪ್ಪಿಸಬಹುದಾಗಿದೆ.
ತುಕ್ಕು ಹಿಡಿದಿವೆ- ಬಣ್ಣ ಮಾಸಿವೆ
ಪ್ರಸ್ತುತ ಹೆದ್ದಾರಿಗಳಲ್ಲಿ ಕಾಣಸಿಗುವ ಬಹುತೇಕ ಇಂತಹ ಸೂಚನಾ ಫಲಕಗಳ ಬಣ್ಣಗಳು ಬಿಸಿಲು – ಮಳೆಯ ನಿರಂತರ ಹೊಡೆತಕ್ಕೆ ಮಾಸಿದ್ದು, ಕೆಲವು ಪಾಚಿ ಕಟ್ಟಿದೆ. ತುಕ್ಕು ಹಿಡಿದು ಅಕ್ಷರಗಳೂ ಮಾಸಿ ಹೋಗಿವೆ. ಕೆಲವೆಡೆ ಪೊದೆಗಳಿಂದ ಆವೃತವಾಗಿ ಫಲಕಗಳೇ ಚಾಲಕ/ಸವಾರರಿಗೆ ಕಾಣಿಸದಂತಹ ಪರಿಸ್ಥಿತಿಯಿದೆ.
ಇಲಾಖೆ ಗಮನ ಹರಿಸಬೇಕು
ಹೆದ್ದಾರಿಯಲ್ಲಿ ರಸ್ತೆಗಳ ನಿರ್ವಹಣೆ ಮಾಡುವ ಗುತ್ತಿಗೆದಾರರೇ ಈ ಫಲಕಗಳನ್ನೂ ನಿರ್ವಹಣೆ ಮಾಡಬೇಕು. ಆದರೆ ರಸ್ತೆಯ ನಿರ್ವಹಣೆ ಮಾಡುವುದೇ ಅಪರೂಪ ಎನ್ನುವಂತಹ ಪರಿಸ್ಥಿತಿಯಲ್ಲಿ ಸೂಚನಾ ಫಲಕಗಳನ್ನು ನಿರ್ವಹಿಸುವ ಗೋಜಿಗೆ ಹೋಗುವುದಿಲ್ಲ. ಹೆದ್ದಾರಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ನಿರ್ವಹಣೆಗೆ ಒತ್ತು ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ವರದಿ: ಭರತ್ ಶೆಟ್ಟಿಗಾರ್
ಚಿತ್ರ: ಸತೀಶ್ ಇರಾ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.