Mangaluru: ಸ್ಮಾರ್ಟ್‌ಸಿಟಿಯಿಂದ ಬೀಚ್ ಸ್ವಚ್ಛತೆಗೆ ಆದ್ಯತೆ
Mangaluru: Smart City prioritizes beach cleanliness
Team Udayavani, Dec 2, 2024, 12:59 PM IST
ಮಹಾನಗರ: ಬೀಚ್‌ಗಳು ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆಯಾಗಿದ್ದು, ಮಂಗಳೂರು ಸ್ಮಾರ್ಟ್‌ಸಿಟಿ ಯೋಜನೆಯಡಿ ನಗರದ ಬೀಚ್‌ಗಳ ಸ್ವಚ್ಛತೆಗೂ ಆದ್ಯತೆ ನೀಡಲಾಗುವುದು ಎಂದು ಮಂಗಳೂರು ಸ್ಮಾರ್ಟ್‌ಸಿಟಿ ಯೋಜನೆಯ ಜನರಲ್ ಮ್ಯಾನೇಜರ್ ಅರುಣ್ ಪ್ರಭಾ ತಿಳಿಸಿದರು.
ದ.ಕ. ಜಿಲ್ಲಾಡಳಿತ, ಮಂಗಳೂರು ನಗರ ಪೊಲೀಸ್ ಕಮಿಷನರೆಟ್, ಕ್ರೆಡೈ ಮಂಗಳೂರು, ಸ್ಮಾರ್ಟ್‌ಸಿಟಿ ಮಂಗಳೂರು,ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಸ್ವಸ್ತಿಕ ನ್ಯಾಷನಲ್ ಬ್ಯುಸಿನೆಸ್ ಸ್ಕೂಲ್‌ನ ಎನ್ನೆಸ್ಸೆಸ್ ಘಟಕ ಹಾಗೂ ಪಣಂಬೂರು ಕುಳಾಯಿ ಮೊಗವೀರ ಸಭಾದ ಸಹಯೋಗದಲ್ಲಿ ರವಿವಾರ ಚಿತ್ರಾಪುರ ಬೀಚ್‌ನಲ್ಲಿ ನಡೆದ ಸ್ವಚ್ಛತಾ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.
ಚಿತ್ರಾಪುರ ಬೀಚ್ ಕರಾವಳಿಯವ ಸ್ವಚ್ಛ, ಸುಂದರ ಬೀಚ್ ಆಗಿದ್ದು ಇದಕ್ಕೆ ಸ್ಥಳೀಯರ ಮುತುವರ್ಜಿ ಕಾರಣವಾಗಿದೆ ಎಂದು ಅವರು ಹೇಳಿದರು.
ಮಂಗಳೂರು ಮಹಾನಗರ ಪಾಲಿಕೆಯ ಉಪ ಆಯುಕ್ತ ಚಂದ್ರಶೇಖರ್, ಕ್ರೆಡೈ ಮಂಗಳೂರು ಘಟಕದ ಅಧ್ಯಕ್ಷ ವಿನೋದ್ ಪಿಂಟೊ, ಪಣಂಬೂರು ಕುಳಾಯಿ ಮೊಗವೀರ ಸಭಾದ ಅಧ್ಯಕ್ಷ ಮಾಧವ ಸುವರ್ಣ, ಡಿಸಿಪಿ ಸಿದ್ದಾರ್ಥ ಗೋಯಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಮಂಗಳೂರು ಪ್ರಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಸ್ವಸ್ತಿಕ ನ್ಯಾಷನಲ್ ಬ್ಯುಸಿನೆಸ್ ಸ್ಕೂಲ್ ಅಧ್ಯಕ್ಷ ರಾಘವೇಂದ್ರ ಹೊಳ್ಳ, ಜಿಲ್ಲಾ ರೆಡ್ ಕ್ರಾಸ್ ಸೊಸೈಟಿ ನಿರ್ದೇಶಕ ಯತೀಶ್ ಬೈಕಂಪಾಡಿ, ಪತ್ರಕರ್ತರ ಸಂಘದ ಕೋಶಾಧಿ ಕಾರಿ ಪುಷ್ಪರಾಜ್ ಬಿ.ಎನ್., ಕಾರ್ಯಕಾರಿ ಸಮಿತಿ ಸದಸ್ಯ ರಾಜೇಶ್ ದಡ್ಡಂಗಡಿ, ಮೊಗವೀರ ಸಭಾದ ಕಾರ್ಯದರ್ಶಿ ನಾಗೇಶ್ ಪುತ್ರನ್, ಉಪಾಧ್ಯಕ್ಷ ಕೇಶವ ಅಮೀನ್, ಜಗನ್ನಾಥ ಪುತ್ರನ್, ಕೋಶಾಧಿ ಕಾರಿ ಪುರುಷೋತ್ತಮ ಕೋಟ್ಯಾನ್, ಸದಸ್ಯರಾದ ಪಿ. ದೇವೇಂದ್ರ, ರಮೇಶ್, ಕೆ.ಎಲ್. ಬಂಗೇರ, ಯೋಗೀಶ್ ಸಾಲ್ಯಾನ್,ಸ್ವಸ್ತಿಕ ನ್ಯಾಷನಲ್ ಬ್ಯುಸಿನೆಸ್ ಸ್ಕೂಲ್‌ನ ಎನ್ನೆಸ್ಸೆಸ್ ವಿದ್ಯಾರ್ಥಿ ಕಾರ್ಯದರ್ಶಿಗಳಾದ ಸಿಂಧು, ಸುದೀಪ್ ಉಪಸ್ಥಿತರಿದ್ದರು.