Mangaluru: ಸೆಂಟ್ರಲ್ ಮಾರ್ಕೆಟ್ ಬಳಿ ಅಡ್ಡಾದಿಡ್ಡಿ ಸಂಚಾರ
ಜಂಕ್ಷನ್ ಆಸುಪಾಸು ರಸ್ತೆಯಲ್ಲೇ ಬೇಕಾಬಿಟ್ಟಿ ಪಾರ್ಕಿಂಗ್, ಅಲ್ಲೇ ಕಂಡ ಕಂಡಲ್ಲಿ ವ್ಯಾಪಾರ
Team Udayavani, Jan 2, 2025, 3:21 PM IST
ಸೆಂಟ್ರಲ್ ಮಾರ್ಕೆಟ್: ನಾಲ್ಕು ದಿಕ್ಕುಗಳಿಂದ ನುಗ್ಗಿ ಬರುವ ವಾಹನಗಳು, ರಸ್ತೆಯಲ್ಲಿಯೇ ಅಡ್ಡಾದಿಡ್ಡಿ ಪಾರ್ಕಿಂಗ್, ರಸ್ತೆಯ ಅಂಚಿನಲ್ಲೇ ವ್ಯಾಪಾರಸ್ಥರು, ಇವೆಲ್ಲದರ ನಡುವೆ ನುಸುಳಿಕೊಂಡು ಪಾದಚಾರಿಗಳ ಅಪಾಯದ ನಡೆದಾಟ: ಸೆಂಟ್ರಲ್ ಮಾರ್ಕೆಟ್ ಜಂಕ್ಷನ್ ಪರಿಸರದಲ್ಲಿ ದಿನದ ಎಲ್ಲ ಹೊತ್ತಿನಲ್ಲಿ ಕಾಣುವ ಚಿತ್ರಣ.
ಸದಾ ವಾಹನ ಮತ್ತು ಜನರಿಂದ ಗಿಜಿಗುಡುತ್ತಿರುವ ಜಂಕ್ಷನ್‌ನಲ್ಲಿ ದಿನದಿಂದ ದಿನಕ್ಕೆ ವಾಹನ ಸಂಚಾರ ದುಸ್ತರವಾಗುತ್ತಿದೆ. ಇಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಯಾವುದೇ ರೀತಿಯಲ್ಲಿಯೂ ವ್ಯವಸ್ಥೆ ಮಾಡಿಕೊಡದಿರುವುದು, ನಿಯಮ ಪಾಲನೆ ಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು ಇಲ್ಲಿನ ಅವ್ಯವಸ್ಥೆಗೆ ಮುಖ್ಯ ಕಾರಣ.
ಎಲ್ಲ ದಿಕ್ಕುಗಳಿಂದಲೂ ಆಗಮನ, ನಿರ್ಗಮನ
ಬೀಬಿ ಅಲಾಬಿ ರಸ್ತೆ, ಭವಂತಿ ಸ್ಟ್ರೀಟ್, ಲೇಡಿಗೋಶನ್, ಐಡಿಯಲ್ ರಸ್ತೆ ಸೇರಿದಂತೆ ನಾಲ್ಕು ರಸ್ತೆಗಳು ಈ ಜಂಕ್ಷನ್‌ನಲ್ಲಿ ಸಂಗಮಿಸುತ್ತವೆ. ಈ ನಾಲ್ಕು ದಿಕ್ಕಿನ ರಸ್ತೆಗಳಲ್ಲಿಯೂ ದ್ವಿಮುಖ ಸಂಚಾರವಿದೆ. ಹಾಗಾಗಿ ವಾಹನಗಳು ಯಾವುದೇ ನಿರ್ಬಂಧವಿಲ್ಲದೆ ನುಗ್ಗುತ್ತವೆ. ಇದು ವಾಹನ ದಟ್ಟಣೆ, ಪದೇ ಪದೇ ಟ್ರಾಫಿಕ್ ಜಾಮ್ ಉಂಟು ಮಾಡುತ್ತಿದೆ. ಐಡಿಯಲ್ ಕಡೆಗಿನ ರಸ್ತೆಯನ್ನಾದರೂ ಏಕಮುಖ ಮಾಡಿದರೆ ಸಂಚಾರ ಸಮಸ್ಯೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು ಎನ್ನುತ್ತಾರೆ ಇಲ್ಲಿ ಕಾರ್ಯನಿರ್ವಹಿಸುವ ಪೊಲೀಸ್ ಸಿಬಂದಿ. ಭವಂತಿ ಸ್ಟ್ರೀಟ್(ರೂಪವಾಣಿ) ರಸ್ತೆ ಏಕಮುಖವಾಗಿತ್ತು. ಈಗ ಸೆಂಟ್ರಲ್ ಮಾರ್ಕೆಟ್ ಕಟ್ಟಡ ಕಾಮಗಾರಿ ಆರಂಭವಾದ ಬಳಿಕ ದ್ವಿಮುಖಗೊಂಡಿರುವುದರಿಂದಲೂ ಸಮಸ್ಯೆ ಹೆಚ್ಚಾಗಿದೆ.
ಪೊಲೀಸರು ಹೈರಾಣ, ಪಾದಚಾರಿಗಳ ಗೋಳು
ಇಲ್ಲಿ ಇಬ್ಬರು ಪೊಲೀಸ್ ಸಿಬಂದಿ ಪಾಳಿಯಲ್ಲಿ ದಿನದ ಹೆಚ್ಚಿನ ಹೊತ್ತು ಟ್ರಾಫಿಕ್ ನಿರ್ವಹಣೆಯಲ್ಲಿ ತೊಡಗುತ್ತಾರೆ. ಆದರೆ ಅವರಿಂದ ಪರಿಣಾಮಕಾರಿ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ರಸ್ತೆ ಮತ್ತು ಜಂಕ್ಷನ್‌ನ ಅವ್ಯವಸ್ಥೆಯಿಂದಾಗಿ ವಾಹನಗಳಿಗೆ ಯಾವ ರೀತಿಯ ಸೂಚನೆ ನೀಡುವುದು ಎಂಬ ಗೊಂದಲ ಪೊಲೀಸರಲ್ಲಿದೆ. ಪದೇ ಪದೇ ವಾಹನ ಸವಾರರು, ಚಾಲಕರು ವಾಗ್ವಾದಕ್ಕಿಳಿಯುತ್ತಾರೆ. ವಾಹನ ಚಾಲಕರ ನಡುವೆಯೂ ಘರ್ಷಣೆಗಳು ಸಂಭವಿಸುತ್ತವೆ. ಇದರ ನಡುವೆ ಪೊಲೀಸರು ಹೈರಾಣಾಗುತ್ತಿದ್ದಾರೆ. ಇಲ್ಲಿ ಈ ಹಿಂದೊಮ್ಮೆ ಪೊಲೀಸ್ ಚೌಕಿ ಇತ್ತು. ಈಗ ಅದು ಕೂಡ ಇಲ್ಲವಾಗಿದೆ. ಲೇಡಿಗೋಶನ್ ರಸ್ತೆಯೂ ಸೇರಿದಂತೆ ಅಕ್ಕಪಕ್ಕದ ಬಹುತೇಕ ಎಲ್ಲ ರಸ್ತೆ, ಫುಟ್‌ಪಾತ್‌ಗಳು ವ್ಯಾಪಾರಸ್ಥರ ಪಾಲಾಗಿದೆ. ಹಾಗಾಗಿ ಪಾದಚಾರಿಗಳು ರಸ್ತೆಯ ನಡುವೆಯೇ ನಡೆದಾಡಬೇಕಾಗಿದೆ. ಇದು ಕೂಡ ವಾಹನಗಳ ಸುಗಮ ಸಂಚಾರಕ್ಕೆ ತೊಡಕಾಗಿದೆ.
ರಸ್ತೆಯಲ್ಲಿಯೇ ಪಾರ್ಕಿಂಗ್
ಇಲ್ಲಿನ ಬಹುತೇಕ ಎಲ್ಲ ರಸ್ತೆಗಳು ಕೂಡ ವ್ಯಾಪಾರಿಗಳು, ಗ್ರಾಹಕರ ವಾಹನ ಮತ್ತು ಪ್ಯಾಸೆಂಜರ್ ವಾಹನಗಳ ಪಾರ್ಕಿಂಗ್‌ನಿಂದ ಭರ್ತಿಯಾಗಿವೆ. ನಡುವೆ ಇರುವ ಸ್ವಲ್ಪ ಸ್ಥಳಾವಕಾಶದಲ್ಲಿ ಸಾವಿರಾರು ವಾಹನಗಳು ಸಂಚರಿಸುವ ಅನಿವಾರ್ಯತೆ ಇದೆ. ಈ ಹಿಂದೊಮ್ಮೆ ಕೆಲವು ಸ್ಥಳಗಳಲ್ಲಿ ‘ನೋ ಪಾರ್ಕಿಂಗ್’ ಸೂಚನಾ ಫಲಕ ಅಳವಡಿಸಲಾಗಿತ್ತು. ಆದರೆ ಸೆಂಟ್ರಲ್ ಮಾರ್ಕೆಟ್ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಅದನ್ನು ತೆರವು ಮಾಡಲಾಗಿದೆ. ದೊಡ್ಡ ದೊಡ್ಡ ವಾಣಿಜ್ಯ ಸಂಕೀರ್ಣಗಳಿಗೆ ಬರುವ ಗ್ರಾಹಕರೆಲ್ಲರೂ ರಸ್ತೆಯಲ್ಲಿಯೇ ವಾಹನ ಪಾರ್ಕಿಂಗ್ ಮಾಡುತ್ತಾರೆ.
ಏನು ಮಾಡಬಹುದು?
ಭಾರೀ ವ್ಯಾಪಾರ ಚಟುವಟಿಕೆಯ, ಜನ ಮತ್ತು ವಾಹನಗಳ ಅತಿಯಾದ ಓಡಾಟವಿರುವ ಈ ಪ್ರದೇಶದಲ್ಲಿ ವಾಹನ ಸಂಚಾರ, ಪಾರ್ಕಿಂಗ್‌ಗೆ ಸರಿಯಾದ ಜಾಗವಿಲ್ಲ. ಸದ್ಯ ನಿರ್ಮಾಣ ಹಂತದಲ್ಲಿರುವ ಸೆಂಟ್ರಲ್ ಮಾರ್ಕೆಟ್ ಕಟ್ಟಡದ ಬಳಿ ಪಾರ್ಕಿಂಗ್‌ಗೆ ಒಂದಷ್ಟು ಸ್ಥಳಾವಕಾಶವಿದೆಯಾದರೂ ಅದನ್ನು ಸಮರ್ಪಕವಾಗಿ ಬಳಕೆ ಮಾಡಲು ವ್ಯವಸ್ಥೆಯಾಗಬೇಕಿದೆ. ಜತೆಗೆ ಇಲ್ಲಿನ ರಸ್ತೆಗಳು ವಾಹನಗಳ ಸುಗಮ ಸಂಚಾರಕ್ಕೆ ಮುಕ್ತವಾಗಬೇಕು. ಇದಕ್ಕೆ ಪೂರಕವಾಗಿ ಪಾಲಿಕೆ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಕ್ರಮ ವಹಿಸಬೇಕಾಗಿದೆ. ಪ್ರಧಾನ ರಸ್ತೆಯಲ್ಲಿ ದ್ವಿಮುಖ ಸಂಚಾರವೇ ಇಲ್ಲಿ ಅಡ್ಡಾದಿಡ್ಡಿ ಓಡಾಟಕ್ಕೆ ಕಾರಣ. ಇದನ್ನು ನಿಯಂತ್ರಿಸಬೇಕಾಗಿದೆ. ಬೀದಿ ಬದಿಯಲ್ಲೇ ವ್ಯಾಪಾರ ಮಾಡುವುದರಿಂದ ಸಂಚಾರಕ್ಕೆ ತೊಡಕಾಗಿದೆ. ಗ್ರಾಹಕರೂ ಅಲ್ಲೇ ನಿಂತಿರುತ್ತಾರೆ.
ಪೊಲೀಸರೇ ಕ್ರಮ ವಹಿಸಲಿ
ಬೀದಿ ಬದಿ ವ್ಯಾಪಾರಸ್ಥರನ್ನು ಒಮ್ಮೆ ತೆರವು ಮಾಡಿದರೆ ಮತ್ತೆ ಬಂದು ವ್ಯಾಪಾರ ಮಾಡುತ್ತಾರೆ. ಇದರಿಂದಾಗಿಯೇ ವಾಹನ ಸಂಚಾರಕ್ಕೆ ತೊಡಕಾಗುತ್ತಿದೆ. ಕಟ್ಟಡಗಳಲ್ಲಿ ಪಾರ್ಕಿಂಗ್ ಇಲ್ಲದೆಯೂ ಸಮಸ್ಯೆಯಾಗಿದೆ. ರಸ್ತೆಯ ಅಂಚಿನಲ್ಲಿ ವ್ಯಾಪಾರ ಮಾಡುವವರನ್ನು ಪೊಲೀಸರೇ ತೆರವು ಮಾಡಿಸಿದರೆ ವಾಹನ ಸಂಚಾರಕ್ಕೆ ಅನುಕೂಲವಾಗಬಹುದು ಎನ್ನುತ್ತಾರೆ ಸ್ಥಳೀಯ ಕಾರ್ಪೋರೆಟರ್ ಪೂರ್ಣಿಮಾ.
ಪಾಲಿಕೆಯ ಸಹಕಾರ ಬೇಕು
ಬೀದಿಬದಿ ವ್ಯಾಪಾರಸ್ಥರು, ಪಾರ್ಕಿಂಗ್ ಸಮಸ್ಯೆಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಪಾಲಿಕೆಯವರಿಗೆ ಸೂಚನೆ ನೀಡಿದ್ದೇವೆ. ಪಾಲಿಕೆಯವರು ಕೂಡ ಸಹಕರಿಸಬೇಕು. ಇನ್ನೊಮ್ಮೆ ಖುದ್ದು ಪರಿಶೀಲನೆ ನಡೆಸುತ್ತೇನೆ. ಬಳಿಕ ಸಾಧ್ಯವಿರುವ ಕ್ರಮ ತೆಗೆದುಕೊಳ್ಳುತ್ತೇವೆ.
-ನಜ್ಮಾ ಫಾರೂಕಿ, ಎಸಿಪಿ, ಸಂಚಾರ ವಿಭಾಗ
-ಸಂತೋಷ್ ಬೊಳ್ಳೆಟ್ಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.