Mangaluru: ಅನಧಿಕೃತ ಫ್ಲೆಕ್ಸ್ , ಬ್ಯಾನರ್ ತೆರವು ಆರಂಭ
ಸುರತ್ಕಲ್‌ನಿಂದ ಮಹಾನಗರ ಪಾಲಿಕೆ ಅಧಿಕಾರಿಗಳ ಕಾರ್ಯಾಚರಣೆ ಆರಂಭ
Team Udayavani, Nov 17, 2024, 4:21 PM IST
ಮಹಾನಗರ: ನಗರದಲ್ಲಿ ಕಾನೂನುಬಾಹಿರವಾಗಿ, ಬೇಕಾಬಿಟ್ಟಿಯಾಗಿ ಹಾಕಿರುವ ಅನಧಿಕೃತ ಫ್ಲೆಕ್ಸ್, ಬ್ಯಾನರ್‌ಗಳ ವಿರುದ್ಧ ಮಹಾನಗರ ಪಾಲಿಕೆ ಸಮರ ಸಾರಲು ಮುಂದಾಗಿದೆ. ಇದರ ಭಾಗವಾಗಿ ಮೊದಲನೇ ಹಂತದಲ್ಲಿ ಸುರತ್ಕಲ್ ಭಾಗದಿಂದ ಬ್ಯಾನರ್ ತೆರವು ಆರಂಭವಾಗಿದೆ. ಶನಿವಾರ ಆರಂಭವಾಗಿರುವ ಈ ಕಾರ್ಯಾಚರಣೆ ಪಾಲಿಕೆ ವ್ಯಾಪ್ತಿಯ ಎಲ್ಲೆಡೆ ಮುಂದುವರಿಯಲಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ನಗರದ ಫ್ಲೆಕ್ಸ್, ಬ್ಯಾನರ್ ಹಾವಳಿ ಹೆಚ್ಚಾಗಿದ್ದು, ಸ್ಥಳೀಯಾಡಳಿತ ದಿಂದ ಯಾವುದೇ ಕ್ರಮ ವಹಿಸಲಾಗುತ್ತಿಲ್ಲ ಎಂಬ ದೂರುಗಳು
ಸಾರ್ವಜನಿಕ ವಲಯದಿಂದ ವ್ಯಕ್ತವಾಗಿತ್ತು. ಈ ನಿಟ್ಟಿನಲ್ಲಿ ‘ನಗರದಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್‌ಗಳ ಅಬ್ಬರ’ ಎಂಬ ಶೀರ್ಷಿಕೆಯಲ್ಲಿ ‘ಉದಯವಾಣಿ ಸುದಿನ’ ನ.16 ರಂದು ವಿಶೇಷ ವರದಿ ಪ್ರಕಟಿಸಿತ್ತು.
ಎಚ್ಚೆತ್ತುಕೊಂಡ ಪಾಲಿಕೆ ಸುರತ್ಕಲ್ ಸುತ್ತಮುತ್ತಲಿನ ಭಾಗದಲ್ಲಿ ಕಂದಾಯ ಅಧಿಕಾರಿ ಸುಶಾಂತ್ ಅವರ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಸಿದೆ. ಮುಂದಿನ ದಿನಗಳಲ್ಲಿ ಪಾಲಿಕೆ ಸೂಚಿಸಿದ ಸ್ಥಳದಲ್ಲಿ, ಅಧಿಕೃತ ಫ್ಲೆಕ್ಸ್, ಬ್ಯಾನರ್ ಅನ್ನೇ ಅಳವಡಿಸಬೇಕು ಎಂಬ ಸೂಚನೆ ನೀಡಲಾಗಿದೆ. ಮಂಗಳವಾರದಿಂದ ನಗರ ಭಾಗದಲ್ಲಿಯೂ ಅನಧಿಕೃತ ಬ್ಯಾನರ್, ಫ್ಲೆಕ್ಸ್ ತೆರವು ಕಾರ್ಯಾಚರಣೆ ಮುಂದುವರಿಯಲಿದೆ.
ಅನಧಿಕೃತ ಫ್ಲೆಕ್ಸ್‌ಗಳಿಂದ ಹಲವು ಸಮಸ್ಯೆ
ನಗರದಲ್ಲಿ ಬಟ್ಟೆಯ ಬ್ಯಾನರ್ ಹೊರತುಪಡಿಸಿ ಪ್ಲಾಸ್ಟಿಕ್‌ನ ಫ್ಲೆಕ್ಸ್‌ಗಳನ್ನು ಹಾಕಬಾರದು ಎಂಬ ನಿಯಮವಿದೆ. ಬಟ್ಟೆಯ ಬ್ಯಾನರ್ ಹಾಕಬೇಕಾದರೂ ಪಾಲಿಕೆಯಿಂದ ಅನುಮತಿ ಪಡೆಯಬೇಕು, ಅದರ ಉದ್ದಳತೆಗೆ ತಕ್ಕಂತೆ ಮೊತ್ತವನ್ನು ಪಾವತಿಸಬೇಕು. ನಿರ್ದಿಷ್ಟ ಅವಧಿಯಲ್ಲಿ ಮಾತ್ರ ಈ ಬ್ಯಾನರನ್ನು ಹಾಕಬಹುದು. ಬಳಿಕ ಅದು ಅನಧಿಕೃತ ಎಂದು ಪರಿಗಣಿತವಾಗುತ್ತದೆ.
ಆದರೆ, ನಗರದಲ್ಲಿ ಈಗ ಹಾಕಲಾಗುತ್ತಿರುವ ಬಹುತೇಕ ಎಲ್ಲ ಬ್ಯಾನರ್‌ಗಳು ಅನಧಿಕೃತವೇ ಆಗಿದೆ. ಯಾರ ಪರವಾನಿಗೆಯನ್ನೂ ಪಡೆಯದೆ, ಕಂಡ ಕಂಡಲ್ಲಿ ಮನಸಿಗೆ ಬಂದಂತೆ ಫ್ಲೆಕ್ಸ್‌ಗಳನ್ನ ಹಾಕಲಾಗುತ್ತದೆ. ರಸ್ತೆ ಬದಿಯಲ್ಲಿ ಪಾದಚಾರಿಗಳಿಗೆ ತೊಂದರೆಯಾಗುವಂತೆ, ರಸ್ತೆಯ ಮಧ್ಯ ಭಾಗದ ಡಿವೈಡರ್‌ಗಳಲ್ಲಿ ವಾಹನ ಸಂಚಾರಕ್ಕೆ ತಡೆಯಾಗುವಂತೆ ಅಪಾಯಕಾರಿಯಾಗಿ ಹಾಕಲಾಗುತ್ತಿದೆ. ಹಲವು ಕಡೆ ಫ್ಲೆಕ್ಸ್‌ಗಳು ಬಿದ್ದು ಗಾಯವೂ ಆಗಿದೆ. ಇಂಥ ಅನಧಿಕೃತ ಫ್ಲೆಕ್ಸ್, ಬ್ಯಾನರ್‌ಗಳ ತೆರವಿಗೆ ಮತ್ತು ಮತ್ತೆ ಹಾಕದಂತೆ ಕಠಿನ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ಕೇಳಿಬಂದಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.