ಮೇಯರ್ ಅವಧಿ ವಿಸ್ತರಣೆ ಆಗಿ 2 ತಿಂಗಳು; ಇನ್ನೂ ಇತ್ಯರ್ಥವಾಗದ ಗೊಂದಲ
Team Udayavani, May 1, 2022, 11:17 AM IST
ಲಾಲ್‌ಬಾಗ್: ಮಂಗಳೂರು ಮಹಾನಗರ ಪಾಲಿಕೆ ಬಿಜೆಪಿ ಆಡಳಿತದ ಎರಡನೇ ಅವಧಿಯ ಮೇಯರ್ ಅಧಿಕಾರಾವಧಿ ಪೂರ್ಣಗೊಂಡು ಎರಡು ತಿಂಗಳುಗಳಾದರೂ ಮೂರನೇ ಅವಧಿಯ ಮೇಯರ್ ಚುನಾವಣೆಗೆ ಅನಿಶ್ಚಿತತೆ ಇನ್ನೂ ಮುಂದುವರಿದಿದೆ.
ಪಾಲಿಕೆ ಬಿಜೆಪಿ ಆಡಳಿತದ ಎರಡನೇ ಅವಧಿಯ ಮೇಯರ್ ಅಧಿಕಾರಾವಧಿ ಮಾ. 2ಕ್ಕೆ ಕೊನೆಗೊಂಡಿದ್ದರೂ ಕಾನೂನಾತ್ಮಕ ಕಾರಣಗಳ ಹಿನ್ನೆಲೆಯಲ್ಲಿ ಪ್ರಸ್ತುತ ಮೇಯರ್ ಪ್ರೇಮಾನಂದ ಶೆಟ್ಟಿ ಅವರ ಅಧಿಕಾರಾವಧಿ ಸರಕಾರದ ಮುಂದಿನ ಆದೇಶ ಬರುವವರೆಗೆ ವಿಸ್ತರಣೆಗೊಂಡಿದೆ. ಮೇಯರ್ ಅಧಿಕಾರಾವಧಿ ಪೂರ್ಣಗೊಂಡು ಸದ್ಯ ಎರಡು ತಿಂಗಳಾದರೂ ಮುಂದಿನ ಮೇಯರ್ ಚುನಾವಣೆ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಬಂದಿಲ್ಲ.
ಮಹಾರಾಷ್ಟ್ರದ ರಾಹುಲ್ ರಮೇಶ್ ಅವರು ಸುಪ್ರಿಂಕೋರ್ಟ್ ನಲ್ಲಿ ಬೇರೊಂದು ಪ್ರಕರಣಕ್ಕೆ ಸಂಬಂಧಿಸಿ ದೂರು ಸಲ್ಲಿಸಿದ ವೇಳೆ ನ್ಯಾಯಾಲಯವು ಸ್ಥಳೀಯ ಸಂಸ್ಥೆಯ ಮೀಸಲಾತಿ ವಿಚಾರವಾಗಿ ಬೊಟ್ಟು ಮಾಡಿ ಆದೇಶ ನೀಡಿದೆ. ಹೀಗಾಗಿ, ನ್ಯಾಯಾಲಯದ ಈ ಆದೇಶದ ಬಗ್ಗೆ ಮಂಗಳೂರು ಪಾಲಿಕೆಯ 23ನೇ ಅವಧಿಯ ಮೇಯರ್, ಉಪ ಮೇಯರ್ ಹಾಗೂ 4 ಸ್ಥಾಯೀ ಸಮಿತಿ ಚುನಾವಣೆ ಮಾ. 2ರಂದು ನಿಗದಿಪಡಿಸಿದ್ದರೂ ಚುನಾವಣೆಯನ್ನು ಮುಂದೂಡಲಾಗಿದೆ.
ಮೇಯರ್ ಚುನಾವಣೆ ಮುಂದೂಡಿಕೆಯಾದ ಪರಿಣಾಮ ಎರಡು ತಿಂಗಳುಗಳಿಂದ ಮಹಾನಗರ ಪಾಲಿಕೆ ಸಾಮಾನ್ಯ ಸಭೆ ನಡೆದಿಲ್ಲ. ಈಗಾಗಲೇ ರಚನೆಗೊಂಡಿರುವ ಸ್ಥಾಯೀ ಸಮಿತಿಗಳಿಗೂ ಯಾವುದೇ ರೀತಿಯ ಅಧಿಕಾರ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಸಾಮಾನ್ಯ ಸಭೆ ನಡೆಸಬಹುದೇ? ಎಂಬ ಬಗ್ಗೆ ನಿರ್ದೇಶನ ಪಡೆದುಕೊಳ್ಳಲು ಮಹಾನಗರ ಪಾಲಿಕೆಯಿಂದ ರಾಜ್ಯ ಸರಕಾರಕ್ಕೆ ಪತ್ರ ಬರೆಯಲಾಗಿದ್ದು, ಸರಕಾರದಿಂದ ತುರ್ತಾಗಿ ಸೂಕ್ತ ನಿರ್ದೇಶನ ಬಂದಿಲ್ಲ. ಇದೇ ಕಾರಣಕ್ಕೆ ಸದ್ಯ ಸಭೆ ಎರಡು ತಿಂಗಳುಗಳಿಂದ ಸಾಮಾನ್ಯ ಸಭೆ ನಡೆದಿಲ್ಲ. ಈ ಹಿಂದೆ ಕಾಂಗ್ರೆಸ್ ಆಡಳಿತಾವಧಿ 2019ರ ಮಾ. 11ಕ್ಕೆ ಮುಕ್ತಾಯವಾದ ಬಳಿಕ ಆಡಳಿತಾಧಿಕಾರಿಗಳ ನೇಮಕವಾಗಿತ್ತು. ಬಳಿಕ ಪಾಲಿಕೆ ಸದಸ್ಯರ ಚುನಾವಣೆಗಾಗಿ ಮೀಸಲಾತಿ ಪ್ರಕಟವಾಗಿ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನೆಮಾಡಿದ ಹಿನ್ನೆಲೆಯಲ್ಲಿ ಚುನಾವಣೆಯೂ ತಡವಾಗಿತ್ತು. ಪಾಲಿಕೆ ಚುನಾವಣೆ ನಡೆದ ಬಳಿಕ ಮೇಯರ್ ಮೀಸಲಾತಿ ಬರಲು ಮತ್ತೆ ಕೆಲವು ತಿಂಗಳು ಕಾಯಬೇಕಾಯಿತು. ಹೀಗಾಗಿ ಸುಮಾರು ಒಂದೂವರೆ ವರ್ಷಗಳ ಕಾಲ ಪಾಲಿಕೆ ಸಾಮಾನ್ಯ ಸಭೆ ನಡೆಯಲು ಸಾಧ್ಯವಾಗಿರಲಿಲ್ಲ. ಕಳೆದ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಹಲವು ತಿಂಗಳವರೆಗೆ ಪಾಲಿಕೆ ಸಭೆ ರದ್ದುಗೊಂಡಿತ್ತು.
ಸದ್ಯಕ್ಕೆ ಮಾಹಿತಿ ಇಲ್ಲ
ಮಂಗಳೂರು ಪಾಲಿಕೆ ಚುನಾವಣೆ ಯಾವಾಗ ನಡೆಯುತ್ತದೆ ಎಂಬ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ಚುನಾವಣೆ ಮುಂದೂಡಿಕೆಯಾದರೂ ಪಾಲಿಕೆ ಸಾಮಾನ್ಯ ಸಭೆ ನಡೆಸಬಹುದೇ ಎಂಬ ಬಗ್ಗೆ ನಿರ್ದೇಶನ ಪಡೆದುಕೊಳ್ಳಲು ರಾಜ್ಯ ಸರಕಾರಕ್ಕೆ ಪತ್ರ ಬರೆಯಲಾಗಿದೆ. ಸದ್ಯ ರಾಜ್ಯ ಸರಕಾರದಿಂದ ಯಾವುದೇ ರೀತಿಯ ಉತ್ತರ ಬಂದಿಲ್ಲ. ಈ ಕುರಿತು ಫಾಲೋಅಪ್ ಮಾಡಲಾಗುತ್ತಿದೆ. – ಅಕ್ಷಯ್ ಶ್ರೀಧರ್, ಮನಪಾ ಆಯುಕ್ತರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.