ಸ್ವಚ್ಛತೆಗೆ ಒತ್ತು; ಪಚ್ಚನಾಡಿ ತ್ಯಾಜ್ಯಕ್ಕೆ ಮುಕ್ತಿ: ಸಚಿವ ಬೈರತಿ
Team Udayavani, Feb 2, 2022, 5:53 PM IST
“ಮಂಗಳೂರು ನಗರ ವಿವಿಧ ಆಯಾಮಗಳಲ್ಲಿ ಅಭಿವೃದ್ಧಿಗೊಳ್ಳುತ್ತಿದೆ. ಹೀಗಾಗಿ ತ್ಯಾಜ್ಯದ ನಿರ್ವಹಣೆ ಕೂಡ ಮುಂಬರುವ ದಿನಗಳಲ್ಲಿ ನಗರಕ್ಕೆ ಬಹುದೊಡ್ಡ ಸವಾಲು. ಇದರ ಬಗ್ಗೆಯೇ ಆದ್ಯತೆ ನೀಡಬೇಕಾಗುತ್ತದೆ. ಆದರೆ ಅದಕ್ಕೂ ಮುನ್ನ ಪಚ್ಚನಾಡಿಯಲ್ಲಿ ತ್ಯಾಜ್ಯ ಕುಸಿತದಿಂದ ಆದ ಅನಾಹುತ ಸರಿಪಡಿಸಿ ಮುಂದಿನ ಕೆಲವೇ ತಿಂಗಳಲ್ಲಿ ತ್ಯಾಜ್ಯಕ್ಕೆ ಮುಕ್ತಿ ನೀಡಲು ವಿಶೇಷ ಆದ್ಯತೆ ನೀಡಲಾಗುತ್ತದೆ’ ಎಂದವರು ರಾಜ್ಯ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್. ನಗರಕ್ಕೆ ಆಗಮಿಸಿದ ಅವರು ಉದಯವಾಣಿ-ಸುದಿನ ಜತೆಗೆ ವಿಶೇಷ ಸಂದರ್ಶನದಲ್ಲಿ ಮಾತನಾಡಿದರು.
ನಗರದ ಅಭಿವೃದ್ಧಿಗೆ ಮುಂದಿನ ರಾಜ್ಯ ಬಜೆಟ್‌ನಲ್ಲಿ ವಿಶೇಷ ಯೋಜನೆ ಸಿಗಬಹುದೇ?
ಸದ್ಯ ಮಂಗಳೂರು ನಗರದಲ್ಲಿ ಸ್ಮಾರ್ಟ್‌ಸಿಟಿ, ಅಮೃತ್ ಸಹಿತ ವಿವಿಧ ಯೋಜನೆಯಡಿ ಕೆಲಸ ನಡೆಯುತ್ತಿದೆ. ಈ ಪೈಕಿ ಕೆಲವು ಯೋಜನೆಯ ಹಣ ಇನ್ನೂ ಪೂರ್ಣವಾಗಿ ಖರ್ಚಾಗಿಲ್ಲ. ಹೀಗಾಗಿ ಅದರ ಪೂರ್ಣ ಬಳಕೆಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರಸ್ತೆ, ಫುಟ್‌ಪಾತ್ ಸಹಿತ ವಿವಿಧ ಕಾರಣಗಳಿಗೆ 100 ಕೋ.ರೂ. ಗಳನ್ನು ಹೆಚ್ಚುವರಿಯಾಗಿ ನೀಡಲು ಮುಖ್ಯಮಂತ್ರಿಯವರಿಗೆ ಮನವಿ ಮಾಡಲಾಗಿದೆ. ಬಜೆಟ್‌ನಲ್ಲಿ ಪ್ರತ್ಯೇಕ ಯೋಜನೆ ಬಗ್ಗೆ ಕೆಲವೇ ದಿನಗಳಲ್ಲಿ ಚರ್ಚಿಸಲಾಗುವುದು.
ನಗರದಲ್ಲಿ ಒಳಚರಂಡಿ ಸಮಸ್ಯೆ ಕಾಡುತ್ತಲೇ ಇದೆಯಲ್ಲವೇ?
ಈ ಬಗ್ಗೆ ವಿವರ ಪಡೆದುಕೊಳ್ಳಲಾಗಿದೆ. ಸದ್ಯ ಸ್ಮಾರ್ಟ್‌ಸಿಟಿ ಸಹಿತ ಪಾಲಿಕೆ ವತಿಯಿಂದ ಕುಡ್ಸೆಂಪ್ ಮೂಲಕ ಕೆಲಸ ನಡೆಯುತ್ತಿದೆ. ಇದರ ಬಗ್ಗೆ ವಿಶೇಷ ಆದ್ಯತೆ ನೀಡಲಾಗುವುದು ಹಾಗೂ ಮುಂಬರುವ ದಿನದಲ್ಲಿ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ನಗರದಲ್ಲಿ ಸ್ವಚ್ಛತೆಯ ಸಮಸ್ಯೆ ಮತ್ತೆ ಎದುರಾಗಿದೆ ಅನಿಸುತ್ತಿದೆಯೇ?
ಹೌದು. ಎಲ್ಲ ಯೋಜನೆಗಳಿಗಿಂತಲೂ ಮುಖ್ಯವಾಗಿ ನಗರ ಸ್ವಚ್ಛತೆಗೆ ಆದ್ಯತೆ ನೀಡಬೇಕು. ತ್ಯಾಜ್ಯ, ಕಸ, ಎಲ್ಲೆಂದರಲ್ಲಿ ಇರುವುದು, ರಸ್ತೆ ಬದಿ ಮಣ್ಣು ರಾಶಿ. ಇವೆಲ್ಲ ನಗರದ ಸೌಂದರ್ಯಕ್ಕೆ ಬಹುದೊಡ್ಡ ಹೊಡೆತ. ಹೀಗಾಗಿ ಇದನ್ನು ಸರಿಪಡಿಸುವ ಬಗ್ಗೆ ಸೂಚನೆ ನೀಡಲಾಗಿದೆ. 1 ತಿಂಗಳ ಬಳಿಕ ಮತ್ತೆ ಬರಲಿದ್ದೇನೆ. ಆಗ ಇಂತಹುದೇ ಪರಿಸ್ಥಿತಿ ಕಂಡರೆ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು.
ನಗರ ಸ್ವಚ್ಚವಾಗಿದ್ದರೂ ತ್ಯಾಜ್ಯರಾಶಿಯನ್ನು ಒಳಗೊಂಡ ಪಚ್ಚನಾಡಿಯ ತ್ಯಾಜ್ಯ ಸಮಸ್ಯೆಗೆ ಪರಿಹಾರ ದೊರಕಿಲ್ಲ..
ಪಚ್ಚನಾಡಿಯಲ್ಲಿ ವ್ಯಾಪಿಸಿರುವ ತ್ಯಾಜ್ಯವನ್ನು ತೆರವು ಮಾಡಲು ಈಗಾಗಲೇ ಸರಕಾರ 60 ಕೋಟಿ ರೂಪಾಯಿ ನೀಡಿದೆ. ಅಲ್ಲಿನ ಎಲ್ಲ ತ್ಯಾಜ್ಯವನ್ನು ಪೂರ್ಣವಾಗಿ ತೆಗೆಯಲು ಸೂಚನೆ ನೀಡಲಾಗಿದೆ.
ಸ್ಮಾರ್ಟ್‌ಸಿಟಿ ಯೋಜನೆ ಅಂದಾಗ ಕಾಂಕ್ರೀಟ್ ಪರಿಕಲ್ಪನೆ ಮೂಡಿಬರುತ್ತಿದೆ. ಆದರೆ ಮಾಲಿನ್ಯಕಾರಕ ನಗರದ ಪಟ್ಟಿಯಲ್ಲಿ ಮಂಗಳೂರಿನ ಹೆಸರು ಕೂಡ ಉಲ್ಲೇಖವಾಗುತ್ತಿದೆ. ಹೀಗಾಗಿ ಪರಿಸರ ಸಹಿತ ಸುಸ್ಥಿರ ಅಭಿವೃದ್ಧಿಗೆ ಹೇಗೆ ಆದ್ಯತೆ ನೀಡುವಿರಿ?
ಸ್ಮಾರ್ಟ್‌ಸಿಟಿ ಆಗುವ ನಗರದ ಮೂಲಸೌಕರ್ಯವಾದ ರಸ್ತೆ, ಚರಂಡಿ ವ್ಯವಸ್ಥೆಗಳನ್ನು ಉನ್ನತೀಕರಿಸಬೇಕಾಗುತ್ತದೆ. ಜತೆಗೆ ನಗರದಲ್ಲಿ ವೆನ್ಲಾಕ್-ಲೇಡಿಗೋಶನ್‌ಆಸ್ಪತ್ರೆ ಅಭಿವೃದ್ಧಿ, ವಿವಿಧ ಮಾರುಕಟ್ಟೆ, ಕ್ರೀಡಾಂಗಣ ಅಭಿವೃದ್ಧಿ, ಪಾರ್ಕ್ ಹಾಗೂ ಸಾರಿಗೆ ಹಬ್ ನಿರ್ಮಾಣಕ್ಕೂ ಆದ್ಯತೆ ನೀಡಲಾಗುತ್ತಿದೆ. ಜತೆಗೆ ನಗರದ ಆಯ್ದ ಸ್ಥಳಗಳಲ್ಲಿ ಗಿಡಗಳನ್ನು ನೆಡಲು ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಲಾಗುವುದು. ಈ ಮೂಲಕ ಪರಿಸರ ಪೂರಕ ಸ್ಮಾರ್ಟ್‌ಸಿಟಿಗೆ ಆದ್ಯತೆ ಕಲ್ಪಿಸಲಾಗುವುದು.
-ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ
Kambala: ಕೋಣಗಳ ಸಂಖ್ಯೆ ದುಪ್ಪಟ್ಟು-ಕಂಬಳ ಆಸಕ್ತಿ ಮೂರುಪಟ್ಟು!
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
Daily Horoscope: ವಧೂವರಾನ್ವೇಷಿಗಳಿಗೆ ಯಶಸ್ಸಿನ ಭರವಸೆ, ಸ್ವರ್ಣೋದ್ಯಮಿಗಳಿಗೆ ಹೇರಳ ಲಾಭ
Child Care: ಶಿಶು ಮರಣ ತಗ್ಗಿಸಲು ಮನೆಮಟ್ಟದ ಎಳೆ ಮಕ್ಕಳ ಆರೈಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.