ಮಂದಾರ: ವ್ಯಾಪಿಸಿದೆ ತ್ಯಾಜ್ಯ ರಾಶಿ; ಸ್ಥಳಕ್ಕೆ ಸಂಸದ, ಶಾಸಕರ ಭೇಟಿ
Team Udayavani, Aug 14, 2019, 11:35 PM IST
ಮಹಾನಗರ: ಪಚ್ಚನಾಡಿಯ ತ್ಯಾಜ್ಯರಾಶಿ ಜಾರಿಕೊಂಡು ಕುಡುಪು ಮೀಪದ ಮಂದಾರದ ಜನವಸತಿ ಪ್ರದೇಶಕ್ಕೆ ನುಗ್ಗುತ್ತಿರುವ ಸನ್ನಿವೇಶ ಬುಧವಾರವೂ ಮುಂದುವರಿದಿದ್ದು, ನೂರಾರು ಅಡಿಕೆ ಮರ-ತೆಂಗಿನ ಮರವನ್ನು ಧರಶಾಯಿಯನ್ನಾಗಿಸಿದೆ.
ಕಿಲೋಮೀಟರ್ ದೂರದಲ್ಲಿ ವ್ಯಾಪಿಸಿದ ತ್ಯಾಜ್ಯದಿಂದ ಕಲುಷಿತ ನೀರು ಮಳೆ ನೀರಿನೊಂದಿಗೆ ಬೆರೆತು ಮಂದಾರ ಪ್ರದೇಶವೇ ಈಗ ಕೊಳಚೆಮಯವಾಗಿದ್ದು, ಇಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಆವರಿಸಿಕೊಂಡಿದೆ.
ಮಂದಾರ ಜನವಸತಿ ಪ್ರದೇಶದ ಜನ ಅನುಭವಿಸುತ್ತಿರುವ ತೊಂದರೆಯನ್ನು ಪರಿಶೀಲಿಸುವ ಹಿನ್ನೆಲೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ಡಿ. ವೇದವ್ಯಾಸ ಕಾಮತ್ ಮತ್ತು ಡಾ| ಭರತ್ ಶೆಟ್ಟಿ ವೈ. ಅವರು ಬುಧವಾರ ಸ್ಥಳಕ್ಕೆ ಭೇಟಿ ನೀಡಿದರು.
ನಳಿನ್ ಕುಮಾರ್ ಕಟೀಲು ಮಾತನಾಡಿ, ಈ ಘಟನೆಯ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಲಾಗಿದೆ. ವಿವಿಧ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಮತ್ತು ತಜ್ಞರ ತಂಡವನ್ನು ಶೀಘ್ರದಲ್ಲಿ ಇಲ್ಲಿ ಕಳುಹಿಸಿಕೊಡುವ ಬಗ್ಗೆ ಅವರು ಭರವಸೆ ನೀಡಿದ್ದಾರೆ. ತಜ್ಞರು ನೀಡುವ ವರದಿಯ ಆಧಾರದ ಮೇಲೆ ಶಾಶ್ವತ ಪರಿಹಾರ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಪಚ್ಚನಾಡಿಯ ಡಂಪಿಂಗ್ ಯಾರ್ಡ್‌ನಲ್ಲಿ ಸೇರಿದ ನೀರು ಹರಿದು ಹೋಗಿ ಆಸುಪಾಸಿನ ಬಾವಿಗಳನ್ನು ಸೇರುತ್ತಿವೆ. ಕುಡಿಯುವ ನೀರಿನ ಯೋಜನೆಗಳು ಹಾಳಾಗುತ್ತಿವೆ. ಅವೈಜ್ಞಾನಿಕವಾಗಿ ಈ ಡಂಪಿಂಗ್ ಯಾರ್ಡ್‌ಗೆ ಕಳೆದ ಆರೇಳು ವರ್ಷಗಳಿಂದ ಪಾಲಿಕೆಯಲ್ಲಿ ಆಡಳಿತ ಮಾಡುತ್ತಿದ್ದ ಸರಕಾರ, ಹಿಂದಿನ ರಾಜ್ಯ ಸರಕಾರ, ಆಗಿನ ಉಸ್ತುವಾರಿ ಸಚಿವರು, ಆಗಿನ ಮೇಯರುಗಳೇ ನೇರ ಕಾರಣ. ಮಾನವ ನಿರ್ಮಿತ ಅವ್ಯವಸ್ಥೆಯಿಂದಲೇ ಜನರು ತೊಂದರೆಯನ್ನು ಅನುಭವಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಪೂಜಾ ಪೈ, ಬಿಜೆಪಿ ಮುಖಂಡರಾದ ದಿವಾಕರ್, ವಸಂತ ಜೆ. ಪೂಜಾರಿ, ಕಿರಣ್ ಕುಮಾರ್ ಕೋಡಿಕಲ್, ಪ್ರಶಾಂತ್ ಪೈ, ಅಜಯ್ ಕುಲಶೇಖರ್, ರವೀಂದ್ರ ನಾಯಕ್, ಸಂದೀಪ್ ಪಚ್ಚನಾಡಿ, ರಾಮ್ ಅಮೀನ್ ಮುಂತಾದವರು ಉಪಸ್ಥಿತರಿದ್ದರು.
ಆರೋಗ್ಯ ತಪಾಸಣೆ/ ರೇಶನ್ ಕಿಟ್
ಮಂದಾರದ 26 ಮನೆಗಳ ನಿರಾಶ್ರಿತರಿಗೆ ಸದ್ಯ ಕುಲಶೇಖರದ ಬೈತುರ್ಲಿಯಲ್ಲಿರುವ ಗೃಹಮಂಡಳಿಯ ಫ್ಲ್ಯಾಟ್‌ನಲ್ಲಿ ಆಶ್ರಯ ನೀಡಲಾಗಿದ್ದು, ಜಿಲ್ಲಾಡಳಿತ, ಸ್ಥಳೀಯ ಮಹಾನಗರ ಪಾಲಿಕೆ ಆಡಳಿತದಿಂದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಆರೋಗ್ಯಾಧಿಕಾರಿಗಳು ಸಂತ್ರಸ್ತರ ಆರೋಗ್ಯ ತಪಾಸಣೆ ನಡೆಸುವ ಜತೆಗೆ, ಕಂದಾಯ ಇಲಾಖೆ ವತಿಯಿಂದ ಸಂತ್ರಸ್ತ ಕುಟುಂಬಗಳಿಗೆ ರೇಶನ್ ಕಿಟ್ ಒದಗಿಸಲಾಗಿದೆ. ಇದೇ ವೇಳೆ ಯೆಯ್ನಾಡಿಯ ಪ್ರಣವ ಸೌಹಾರ್ದ ಸೊಸೈಟಿ, ಪದವಿನಂಗಡಿ ಮಹಿಳಾ ಮಂಡಲ ಸಹಿತ ಕೆಲವರು ರೇಶನ್ ಕಿಟ್‌ನ ನೆರವು ನೀಡಿದ್ದಾರೆ. ಮಾಜಿ ಮೇಯರ್‌ಗಳಾದ ಭಾಸ್ಕರ್ ಕೆ, ಕವಿತಾ ಸನಿಲ್, ಆಯುಕ್ತ ಮೊಹಮ್ಮದ್ ನಝೀರ್, ಅಧಿಕಾರಿಗಳು ಅವರು ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ತ್ಯಾಜ್ಯದ ಕಲುಷಿತ ನೀರು ಮಳೆ ನೀರಿನೊಂದಿಗೆ ಬೆರೆತು ಮಂದಾರ ಪ್ರದೇಶವೇ ಕೊಳಗೇರಿಯಾಗಿದ್ದು, ಇಲ್ಲಿ ಸಾಂಕ್ರಾಮಿಕ ರೋಗಗಳ ಭೀತಿಯೂ ಕಾಡುತ್ತಿದೆ. ವಿಪರೀತ ದುರ್ನಾತದ ಜತೆಗೆ, ಮುನ್ನುಗ್ಗುತ್ತಿರುವ ತ್ಯಾಜ್ಯ ರಾಶಿ ಇನ್ನೂ ಮುಂದುವರಿದಲ್ಲಿ ಕುಡುಪು ರಸ್ತೆ ಬಳಿ ಹರಿಯುವ ದೊಡ್ಡ ಹೊಳೆ ನೀರನ್ನು ಸಂಪರ್ಕಿಸಲಿದೆ. ಈ ಹೊಳೆ ನೀರು ಮರವೂರು ಅಣೆಕಟ್ಟಿಗೆ ಸೇರುತ್ತದೆ. ಇದು ಪಚ್ಚನಾಡಿ ರೈಲ್ವೇ ಸೇತುವೆಯ ಸಣ್ಣ ಹೊಳೆಗೂ ಸಂಪರ್ಕವನ್ನು ಹೊಂದಿದೆ. ಇದರಿಂದಾಗಿ ಮಂದಾರ ಮಾತ್ರವಲ್ಲದೆ, ಆಸುಪಾಸಿನ ಪ್ರದೇಶಗಳಲ್ಲೂ ಸಾಂಕ್ರಾಮಿಕ ರೋಗ ಹರಡುವ ಭೀತಿಯನ್ನು ಸ್ಥಳೀಯರು ವ್ಯಕ್ತಪಡಿಸುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.