ಮತ್ತೆ ಶ್ರೀಮಂತವಾಗಲಿ ಶಿಮಂತೂರು: ಹಲವು ಬೇಡಿಕೆ
ಕಿಂಡಿ ಅಣೆಕಟ್ಟು, ಕೃಷಿ, ಆರೋಗ್ಯ, ಜಾನುವಾರು ಕೇಂದ್ರಗಳು ಬೇಡಿಕೆ
Team Udayavani, Jul 29, 2022, 4:02 PM IST
ಮೂಲ್ಕಿ: ಒಂದು ಕಾಲದಲ್ಲಿ ಅರಮನೆ ಹೊಂದಿದ್ದು, ಇಲ್ಲಿಂದಲೇ ಸಾವಂತರು ಆಡಳಿತ ನಡೆಸುತ್ತಿದ್ದ ಊರು ಶಿಮಂತೂರು. ಗ್ರಾಮಕ್ಕೆ ಅವಶ್ಯವಿರುವ ಸೌಕರ್ಯಗಳು ಮತ್ತೆ ದೊರಕಿದರೆ ಅಂದಿನ ವೈಭವ ಮತ್ತೆ ಮರುಕಳಿಸಬಹುದು. ಗ್ರಾಮ ಸುಭೀಕ್ಷೆಯಾದೀತು ಎಂಬುದು ಗ್ರಾಮಸ್ಥರ ಕನಸು.
ಅಂದಿನಿಂದ ಇಂದಿನವರೆಗೂ ಇಲ್ಲಿ ಕೃಷಿಯೇ ಮುಖ್ಯ ಕಾಯಕ. ಹಿಂದೆ ಕಿಲ್ಪಾಡಿ ಗ್ರಾಮ ಪಂಚಾಯತ್‌ಗೆ ಸೇರಿದ್ದು, ಅತಿಕಾರಿಬೆಟ್ಟು ಗ್ರಾ.ಪಂ. ಸ್ಥಾನ ಪಡೆದ ಬಳಿಕ ಅದಕ್ಕೆ ಸೇರಿಕೊಂಡಿರುವ ಗ್ರಾಮವಾಗಿದೆ. ಸುಮಾರು 2200 ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ 600 ಮನೆಗಳಿವೆ.
ನಾಲ್ಕು ಪ್ರಸ್ತಾವಿತ ಕಿಂಡಿ ಅಣೆಕಟ್ಟು ನಿರ್ಮಿಸಿದಲ್ಲಿ ಅಂತರ್ಜಲ ವೃದ್ಧಿಯಿಂದ ಕೃಷಿಗೆ ಬೇಕಾದಷ್ಟು ನೀರು ಸಿಗುವುದು ಸಾಧ್ಯವಾಗುತ್ತದೆ. ಈ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಲು ಗ್ರಾಮಸ್ಥರ ಒತ್ತಾಯ ಇದೆ.
ಕೃಷಿಗೆ ಪೂರಕವಾಗಿ ಇರುವ ಇಲ್ಲಿಯ ತಕ್ಕಣ ಪಾದೆ, ಕುಲಂದ ಕಟ್ಟ ಮತ್ತು ಮೂಡುಮನೆ ಕಟ್ಟ ಮುಂತಾದ ಮೂರು ಅಣೆಕಟ್ಟುಗಳಿದ್ದು ಈ ಮೂರು ಅಣೆಕಟ್ಟಿನ ನಿರ್ವಹಣೆಯನ್ನು ಇಲ್ಲಿಯ ಯುವಕರ ತಂಡದಿಂದಲೇ ಪಂಚಾಯತ್‌ನ ಪೋತ್ಸಾಹದ ಮೂಲಕ ಮಾಡಲಾಗುತ್ತಿದೆ.
ಇಲ್ಲಿಯ ಮಾಡ್ರದ ಗುತ್ತು ಕೆರೆ ಮೂರು ಎಕ್ರೆಯಷ್ಟು ವಿಶಾಲವಾಗಿದೆ. ಇದನ್ನು ಅಭಿವೃದ್ಧಿಗೊಳಿಸುವ ಅಮೃತ ಜಲ ಯೋಜನೆಗೆ ಗ್ರಾಮ ಪಂಚಾಯತ್ ನಿಂದ ಪ್ರಯತ್ನ ನಡೆದರೆ ಈ ಪ್ರದೇಶದ ನೂರಾರು ಮನೆಗಳಿಗೆ ನೀರಿನ ಸೌಕರ್ಯ ದೊರೆತಂತಾಗುತ್ತದೆ.
ಆರೋಗ್ಯ, ಕೃಷಿ ಹಾಗೂ ಜಾನುವಾರು ಕೇಂದ್ರದ ಅಗತ್ಯ
ಅಂಚೆ ಕಚೇರಿ ಸಹಕಾರಿ ಸಂಘ ಇಲ್ಲಿದೆ. ಇಲ್ಲಿ ಜಾನುವಾರು ಸಾಕಾಣಿಕೆಯಲ್ಲಿ ಹೆಚ್ಚಿನ ಕೃಷಿಕರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಗ್ರಾಮಕ್ಕೆ ಕೃಷಿ ಮಾಹಿತಿ ಮತ್ತು ಸಲಕರಣೆಗಳ ಕೇಂದ್ರದ ಅಗತ್ಯವಿದೆ.
ಇಲ್ಲಿಯ ಜನರಿಗೆ ಆರೋಗ್ಯ ಚಿಕಿತ್ಸೆಗಾಗಿ ಮೂಲ್ಕಿ ಆಸ್ಪತ್ರೆಯನ್ನೇ ಅವಲಂಬಿಸಬೇಕಾಗಿದೆ. ಆದುದರಿಂದ ಪ್ರಾಥಮಿಕ ಆರೋಗ್ಯ ಉಪ ಕೇಂದ್ರ ಹಾಗೂ ಜಾನುವಾರು ಆರೋಗ್ಯ ಕೇಂದ್ರ ಸರಕಾರ ನೀಡಬೇಕು ಎಂಬುದು ಇಲ್ಲಿನ ಜನರ ಬಹುದಿನದ ಬೇಡಿಕೆ.
ಇಲ್ಲಿಯ ಜನರು ಅಂಚೆ ಕಚೇರಿ, ಬ್ಯಾಂಕ್, ಕೃಷಿ ಗೊಬ್ಬರ ಮುಂತಾದವುಗಳಿಗೆ ಒಂದು ಕಾಲದಲ್ಲಿ ಮೂಲ್ಕಿಯನ್ನು ಅವಲಂ ಬಿಸಿರಬೇ ಕಾಗಿತ್ತು. ಈಗ ಅಂಚೆ ಕಚೇರಿ, ಸಹಕಾರ ಸಂಘದ ಮೂಲಕ ಗೊಬ್ಬರ ಹಾಗೂ ರೇಶನ್ ಮತ್ತು ಬ್ಯಾಂಕಿಂಗ್ ಸೇವೆಯನ್ನು ಕೂಡ ಪಡೆಯಲಾಗುತ್ತಿದೆ.
ಬಸ್ ಸೌಕರ್ಯಕ್ಕೆ ಆಗ್ರಹ
ಶಿಮಂತೂರು ದೇವಸ್ಥಾನ ಸಂಪರ್ಕಿ ಸುವ ರಸ್ತೆ ಇದ್ದರೂ ಬಸ್ ಸಂಚಾರ ಇಲ್ಲ. ಬಸ್ ಸಂಚಾರ ವ್ಯವಸ್ಥೆಯಾದಲ್ಲಿ ಪುರಾತನ ದೇಗುಲಕ್ಕೆ ಭೇಟಿ ನೀಡುವವರ ಸಂಖ್ಯೆಯೂ ಹೆಚ್ಚಳವಾಗಲಿದೆ. ಜತೆ ಜತೆಗೆ ಆರ್ಥಿಕತೆಗೂ ಬಲ ಬರುತ್ತದೆ. ಈ ಪರಿಸರದ ವಿದ್ಯಾರ್ಥಿಗಳು ಶಾಲಾ, ಕಾಲೇಜುಗಳಿಗೆ ಖಾಸಗಿ ವಾಹನ ಅವಲಂಬಿಸುವುದು ಅಥವಾ ನಡೆದುಕೊಂಡು ಹೋಗುವುದು ತಪ್ಪುತ್ತದೆ.
ಶಿಮಂತೂರಿನ ವಿಶೇಷ
- ಇಲ್ಲಿಯ ಶಿಮಂತೂರು ಆದಿಜನಾರ್ದನ ದೇವಸ್ಥಾನ ಮೂಲ್ಕಿಯ ಬಪ್ಪನಾಡು ದೇವಸ್ಥಾನಕ್ಕಿಂತ ಮೊದಲು ಅರಸರಿಂದ ನಿರ್ಮಿಸಿದ ಕುರಿತು ದಾಖಲೆ ಇದೆ. ಮೂಲ್ಕಿ ಮಾಗಣೆಯಲ್ಲಿ ಇದು ಅತ್ಯಂತ ಪುರಾತನ ದೇವಸ್ಥಾನ.
- ಸಹೋದರರಾದ ಬಾರೆಯರು ನಿರ್ಮಿಸಿದ ಶಿಮಂತೂರು ಕಂಬಳ ಗದ್ದೆ ವಿಸ್ತಾರವಾಗಿ ಇರುವ ಒಂದು ಪ್ರದೇಶ. ಇವರ ವಸ್ತ್ರ ಮುಂತಾದ ವಿವಿಧ ಕುರುಹುಗಳ ಹಲವಾರು ದಾಖಲೆಗಳು ಇಲ್ಲಿದೆ.
- ಪುನರೂರಿನಿಂರ ಶಿಮಂತೂರಿಗೆ ಕಾಂತಾಬಾರೆ ಬೂದಾಬಾರೆಯರು ನಿರ್ಮಿಸಿದ ನೀರು ಹರಿದು ಹೋಗುವ ತೋಡು ಈಗಲೂ ದಾಖಲೆಯಾಗಿ ಇದೆ.
- ದಿ| ನಾರಾಯಣ ಅಂಚನ್ ಯಕ್ಷಗಾನದಲ್ಲಿ ಭಾಗವತರಾಗಿ ಕಲಾವಿದರಾಗಿ ಗುರುಗಳಾಗಿಯೂ ಅಪಾರ ಶಿಷ್ಯ ವೃಂದ ಹೊಂದಿದವರಾಗಿದ್ದರು.
- ಯಕ್ಷಗಾನದ ಛಂದಸ್ಸು ಬ್ರಹ್ಮ ಎಂಬುದಾಗಿ ಯಕ್ಷಗಾನ ಪ್ರಪಂಚದಲ್ಲಿ ಹೆಸರು ಮಾಡಿ ಡಾಕ್ಟರೇಟ್ ಪದವಿ ಪಡೆದಿರುವ ಶಿಮಂತೂರು ಡಾ| ನಾರಾಯಣ ಶೆಟ್ಟಿ ಅವರು ಶಿಮಂತೂರಿನವರು.
- ಪ್ರಸಿದ್ಧ ತುಳು ಯಕ್ಷಗಾನ ಪ್ರಸಂಗ ಕರ್ತ ಹಾಗೂ ವಾಗ್ಮಿ ದಿ| ಕುಬೆವೂರು ಪುಟ್ಟಣ್ಣ ಶೆಟ್ಟಿಯವರು ಶಿಮಂತೂರಿನವರು.
- ಸರಕಾರಿ ಮನೆ ನಿವೇಶನಗಳಲ್ಲಿ 35 ಮನೆ ಇರುವ ಪ್ರದೇಶ ಕುಚ್ಚಿಗುಡ್ಡೆ ಮತ್ತು ಸುಮಾರು 50ಕ್ಕೂ ಮಿಕ್ಕಿ ಮನೆಯಿರುವ ಪ್ರದೇಶ ಅಂಗರ ಗುಡ್ಡೆ ಪ್ರದೇಶ.
- ಹಿಂದಿ ಚಿತ್ರ ನಟ ಸುನೀಲ್ ಶೆಟ್ಟಿ ಶಿಮಂತೂರು ಗ್ರಾಮದವರು.
ಶಿಮಂತೂರು ಹೆಸರಿನ ಐತಿಹ್ಯ
ಮೂಲ್ಕಿ ಸೀಮೆಯ ಅರಸರು ತನ್ನ ಪಟ್ಟದ ದೇವರು ಶ್ರೀ ಆದಿಜನಾರ್ದನ ದೇವಾಲಯದ ಸಮೀಪದಲ್ಲಿಯೇ 13ನೇ ಶತಮಾನದಲ್ಲಿ ಮೂಲ್ಕಿ ಅರಮನೆ ಇಲ್ಲಿ ಇತ್ತು. ಸಾವಂತರು ಆಡಳಿತ ನಡೆಸುತ್ತಿದ್ದರು. ಅವರು ಇದ್ದ ಅರಮನೆಯ ಪ್ರದೇಶ ಮುಂದೆ ಶಮಂತರು ಎಂದು ಕರೆಯಲ್ಪಟ್ಟು ಮುಂದಕ್ಕೆ ಶಿಮಂತೂರು ಎಂದು ಈ ಗ್ರಾಮದ ವ್ಯಾಪ್ತಿಯನ್ನು ಕರೆಯಲಾಯಿತು ಎಂದು ದಾಖಲೆಗಳು ತಿಳಿಸುತ್ತವೆ. ಮೂಲ್ಕಿ ಸೀಮೆಯರಸರು ಪಡುಪಣಂಬೂರಿನಲ್ಲಿ ಅರಮನೆ ನಿರ್ಮಿಸಿ ಅಲ್ಲಿಗೆ ಆಡಳಿತೆಯ ಚಟುವಟಿಕೆಗಳನ್ನು ಶಿಮಂತೂರಿನಿಂದ ಸ್ಥಳಾಂತರಿಸಿರುವುದು ದಾಖಲೆಗಳು ಹೇಳುತ್ತವೆ. ಈಗ ಮೂಲ್ಕಿಯ ಅರಮನೆ ಇರುವುದು ಮತ್ತು ಅರಸರು ಕೂಡ ವಾಸ ಇರುವುದು (ಒಳಲಂಕೆ) ಪಡುಪಂಬೂರಿನಲ್ಲಿ. ಶಿಮಂತೂರಿನಲ್ಲಿ (ಶಿಮಂತೂರು ಬಾವ) ಮಂತ್ರಿಗಳ ನಿವಾಸ ಇದ್ದ ಮನೆಯ ಹಳೆಯ ಕಟ್ಟಡ ಈಗಲೂ ದಾಖಲೆಯಾಗಿ ಇದೆ.
ಶಿಮಂತೂರು ಗ್ರಾಮದ ಮೂಲಕ ಉತ್ತಮ ರೀತಿಯ ಅಗಲವಾದ ರಸ್ತೆ ಪ್ರಧಾನ ಮಂತ್ರಿ ಸಡಕ್ ಯೋಜನೆಯಲ್ಲಿ ಬಹಳಷ್ಟು ಹಿಂದೆಯೇ ನಿರ್ಮಾಣವಾಗಿದೆ. ನೀರಿನ ಭರ ಇಲ್ಲ. ಆದರೆ ಕೃಷಿಗೆ ಸಾಕಷ್ಟು ಪ್ರಮಾಣದ ನೀರು ಒದಗಿಸುವಲ್ಲಿ ಕಿಂಡಿ ಅಣೆಕಟ್ಟುಗಳ ನಿರ್ಮಾಣದ ಅಗತ್ಯ ಇದೆ. ಆರೋಗ್ಯ ಮತ್ತು ಕೃಷಿ ಸವಲತ್ತು ಅಗತ್ಯವಿದೆ. ಹೈನುಗಾರಿಕೆ ಪ್ರೋತ್ಸಾಹಿಸುವ ಯೋಜನೆ ಅಗತ್ಯವಿದೆ.. – ಮನೋಹರ ಕೋಟ್ಯಾನ್, ಅಧ್ಯಕ್ಷರು ಅತಿಕಾರಿ ಬೆಟ್ಟು ಗ್ರಾ. ಪಂ.
ಆರೋಗ್ಯ ಕೇಂದ್ರ ಬೇಕು: ಶಿಮಂತೂರು ಫಲವತ್ತಾದ ಭೂಮಿ. ಕೃಷಿ ಮತ್ತು ಹೈನುಗಾರಿಕೆಯೇ ಇಲ್ಲಿನ ಪ್ರಮುಖ ಆದಾಯ ಮೂಲ. ಅದಕ್ಕೆ ಪೂರಕವಾಗಿ ಕೇಂದ್ರಗಳನ್ನು ಸ್ಥಾಪಿಸಬೇಕು. ಮೂಲ ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಿದರೆ ಹೆಚ್ಚು ಪ್ರಯೋಜನವಾಗುತ್ತದೆ. – ಉದಯ ಕುಮಾರ್ ಶೆಟ್ಟಿ ಶಿಮಂತೂರು, ಗ್ರಾಮಸ್ಥರು
-ಸರ್ಮೋತ್ತಮ್ ಅಂಚನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.