ಮೂಲ್ಕಿ: ರಸ್ತೆಯಲ್ಲೇ ಉದ್ಯಮಿಯ ಕೊಲೆ
Team Udayavani, Jun 6, 2020, 7:11 AM IST
ಮೂಲ್ಕಿ: ಇಲ್ಲಿಯ ಹೆದ್ದಾರಿಯ ವಿಜಯ ಬ್ಯಾಂಕ್ ಮತ್ತು ಎಚ್.ಡಿ. ಎಫ್.ಸಿ. ಬ್ಯಾಂಕ್ ಸಮೀಪದಲ್ಲಿ ಜನ ಸಂಚಾರವಿರುವಾಗಲೇ ಕಾರು ಮತ್ತು ಇತರ ವಾಹನಗಳ ಮೂಲಕ ಬಂದ ಸುಮಾರು 8 ಮಂದಿಯ ಗುಂಪೊಂದು ಮೂಡುಬಿದಿರೆಯ ಉದ್ಯಮಿ ಅಬ್ದುಲ್ ಲತೀಫ್ (38) ಎಂಬವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬಾಟಲಿಯಿಂದ ಇರಿದು ಕೊಲೆ ಮಾಡಿದೆ.
ಅಬ್ದುಲ್ ಲತೀಫ್ ಅವರು ಹತ್ತಿರದ ಸಂಬಂಧಿಗಳ ಜತೆಗೆ ಬ್ಯಾಂಕಿನ ಬಳಿಗೆ ಬಂದಿದ್ದರು. ಉಳಿದವರು ಒಳಗೆ ಹೋಗಿದ್ದರೆ ಲತೀಫ್ ಕಾರಿನಲ್ಲಿಯೇ ಇದ್ದರು. ಬ್ಯಾಂಕಿನಿಂದ ಹೊರಕ್ಕೆ ಬರುತ್ತಿದ್ದ ತನ್ನ ಹತ್ತಿರದ ಸಂಬಂಧಿಯ ಮೇಲೆ ತಂಡ ಹಲ್ಲೆಗೆ ಮುಂದಾಗುತ್ತಿದ್ದಂತೆ ಅದನ್ನು ತಡೆಯಲು ಧಾವಿಸಿದ ಲತೀಫ್ ಮೇಲೆಯೇ ಮಾರಕಾಸ್ತ್ರದಿಂದ ಇರಿದು ಪರಾರಿಯಾದರು. ತೀವ್ರವಾಗಿ ಗಾಯಗೊಂಡ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಫಲಕಾರಿಯಾಗಲಿಲ್ಲ ಎಂದು ತಿಳಿದು ಬಂದಿದೆ.
ಘಟನೆಯಲ್ಲಿ ಮುನೀರ್ ಸಹಿತ ಇತರ ಇಬ್ಬರಿಗೂ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಆರೋಪಿಗಳು ಪರಾರಿಯಾಗಿದ್ದರು. ಮೂಲ್ಕಿ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಮೂಲ್ಕಿ ಇನ್ಸ್ಪೆಕ್ಟರ್ ಜಯರಾಮ ಗೌಡ ಅವರ ನೇತೃತ್ವದ ತಂಡ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದು, ಬ್ಯಾಂಕಿನ ಸಿ.ಸಿ. ಕೆಮರಾದಿಂದ ಘಟನೆಯ ವಿವರಗಳನ್ನು ಕಲೆ ಹಾಕಿಕೊಂಡು ಆರೋಪಿಗಳ ಚಹರೆಯನ್ನು ದಾಖಲಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.