Fake CBI ಅಧಿಕಾರಿಗಳ ಬಲೆಯಿಂದ ಸಂಗೀತ ಕಲಾವಿದ ಪಾರು
ಪಾರ್ಸೆಲ್ ಹೆಸರಿನಲ್ಲಿ ವಂಚನೆಗೆ ಯತ್ನ; ಬ್ಯಾಂಕ್‌ನ ಮಾಹಿತಿಗಾಗಿ ಒತ್ತಡ
Team Udayavani, May 18, 2024, 7:25 AM IST
ಮಂಗಳೂರು: ಪಾರ್ಸೆಲ್ ಹೆಸರಿನ ವಂಚನೆ ವ್ಯಾಪಕವಾಗಿ ನಡೆಯುತ್ತಿದ್ದು ಮಂಗಳೂರಿನಲ್ಲಿ ಮತ್ತೊಂದು ಪ್ರಕರಣ ವರದಿಯಾಗಿದೆ.
ಸಂಗೀತ ಕಲಾವಿದರೊಬ್ಬರನ್ನು ಯಾಮಾರಿಸಿ ಅವರ ಖಾತೆಯಿಂದ ಹಣ ದೋಚಲು ನಕಲಿ ಸಿಬಿಐ ಅಧಿಕಾರಿಗಳು ಯತ್ನಿಸಿದ್ದು ಅದೃಷ್ಟವಶಾತ್ ಆ ಕಲಾವಿದರು ಹಣ ಕಳೆದುಕೊಂಡಿಲ್ಲ.
ಮಂಗಳೂರಿನ ಸಂಗೀತ ಕಲಾವಿದ ರೊನಾಲ್ಡ್ ವಿನ್ಸೆಂಟ್ ಕ್ರಾಸ್ತಾ ಅವರಿಗೆ ಕಳೆದ ಎಪ್ರಿಲ್ 2 ರಂದು ಅಪರಿಚಿತರಿಂದ ಕರೆ ಬಂದಿತ್ತು. ಹಿಂದಿ ಭಾಷೆಯಲ್ಲಿ ಮಾತನಾಡಿದ ಅಪರಿಚಿತರು “ನಿಮ್ಮ ಹೆಸರಿನಲ್ಲಿ ಪಾರ್ಸೆಲ್ ಬುಕ್ ಆಗಿದೆ’ ಎಂದರು. ರೊನಾಲ್ಡ್ ಅವರು ಆನ್‌ಲೈನ್‌ನಲ್ಲಿ ಪತ್ನಿ ಮತ್ತು ಮಗಳ ಹೆಸರಿನಲ್ಲಿ ಕೆಲವು ವಸ್ತುಗಳನ್ನು ಬುಕ್ ಮಾಡಿದ್ದರು. ಹಾಗಾಗಿ ಅವರಿಂದಲೇ ಕರೆ ಬಂದಿರಬಹುದು ಎಂದು ಭಾವಿಸಿದ್ದರು. ಕರೆ ಮಾಡಿದ ವ್ಯಕ್ತಿ “ನಿಮ್ಮ ಹೆಸರಿನ ಪಾರ್ಸೆಲ್ ಮುಂಬಯಿಯಿಂದ ಮಲೇಷ್ಯಾಕ್ಕೆ ಬುಕ್ ಆಗಿದ್ದು ಅದರಲ್ಲಿ 140 ಗ್ರಾಂ ಎಂಡಿಎಂಎ ಡ್ರಗ್ಸ್, 16 ನಕಲಿ ಪಾಸ್‌ಪೋರ್ಟ್, 58 ಸಿಮ್ ಕಾರ್ಡ್ ಇದೆ. ಅದರ ಬಗ್ಗೆ ಸಿಬಿಐ ಕಚೇರಿಯಲ್ಲಿ ಎಫ್ಐಆರ್ ಆಗಿದೆ. ನಾವು ಸಿಬಿಐ ಕಚೇರಿಯಿಂದ ಮಾತನಾಡುತ್ತಿದ್ದೇವೆ. ನಿಮ್ಮನ್ನು ಬಂಧಿಸಬೇಕಾಗುತ್ತದೆ. ಅದರಿಂದ ತಪ್ಪಿಸಬೇಕಾದರೆ ನಮ್ಮ ಇನ್‌ಸ್ಪೆಕ್ಟರ್ ಜತೆ ಮಾತನಾಡಿ. ಬೇರೆ ಯಾರಿಗೂ ಹೇಳಬೇಡಿ’ ಎಂದು ಹೇಳಿದರು. ಕೂಡಲೇ ಸುನಿಲ್ ಕುಮಾರ್ ಎಂಬ ವ್ಯಕ್ತಿ ವೀಡಿಯೋ ಕಾಲ್‌ನಲ್ಲಿ ಮಾತನಾಡಲು ಆರಂಭಿಸಿದ. “ನಾನು ಸಿಬಿಐನ ಇನ್‌ಸ್ಪೆಕ್ಟರ್ ಆಗಿದ್ದು ಕೂಡಲೇ ಅಗತ್ಯ ಮಾಹಿತಿಯನ್ನು ನೀಡಿ. ನಾವು ಅದನ್ನು ನ್ಯಾಯಾಲಯಕ್ಕೆ ತಿಳಿಸಬೇಕಿದೆ. ಇಲ್ಲ ವಾದರೇ ನೀವೇ ಖುದ್ದಾಗಿ ಹೊಸ ದಿಲ್ಲಿಗೆ ಬರಬೇಕು’ ಎಂದು ಹೇಳಿದ. ಪೊಲೀಸ್ ಕಚೇರಿ ಯಲ್ಲಿ ವಾಕಿಟಾಕಿಯಲ್ಲಿ ಮಾತನಾಡುವ ರೀತಿ ಯಂತೆಯೇ ಶಬ್ದಗಳು ಕೇಳಿಬರುತ್ತಿದ್ದವು. ಹಾಗಾಗಿ ಅವರು ಪೊಲೀಸರೆಂದು ನಂಬುವಂತೆ ಇತ್ತು.
ಸತತ 4 ತಾಸು ನಿರಂತರ ಮಾತು
ಎ. 2ರ ಬೆಳಗ್ಗೆ 8.30ಕ್ಕೆ ಕರೆ ಮಾಡಿದ್ದ ನಕಲಿ ಸಿಬಿಐ ಅಧಿಕಾರಿಗಳು ಮಧ್ಯಾಹ್ನ 12.30ರ ವರೆಗೂ ನಿರಂತರವಾಗಿ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳುತ್ತಿದ್ದರು. ವೀಡಿಯೋ ಕಾಲ್‌ನಲ್ಲೇ ಎಲ್ಲ ಕೇಳುತ್ತಿದ್ದರು. ರೊನಾಲ್ಡ್ ಅವರನ್ನು ಸ್ವಲ್ಪ ಆಚೆ ಕದಲುವುದಕ್ಕೂ ಬಿಡುತ್ತಿರಲಿಲ್ಲ. “ನಿಮ್ಮ ಮನೆಗೆ ಸಿಬಿಐ ದಾಳಿಯಾಗಿ ನಿಮ್ಮ ಬಂಧನವಾದರೆ ನಿಮ್ಮ ಮಾನ ಮರ್ಯಾದೆಯೂ ಹೋಗುತ್ತದೆ. ನೀವು ಸರಿಯಾಗಿ ಸ್ಪಂದಿಸದಿದ್ದರೆ 5 ನಿಮಿಷದಲ್ಲಿ ನಿಮ್ಮ ಬಂಧನವಾಗುತ್ತದೆ ಎಂದರು.
ಮನೆಯಲ್ಲಿರುವ ಸದಸ್ಯರ ಮಾಹಿತಿ, ಮಗಳ ಮಾಹಿತಿ, ಉದ್ಯೋಗ, ಆದಾಯ, ಬ್ಯಾಂಕ್ ಖಾತೆಯ ವಿವರ ಎಲ್ಲವನ್ನು ಕೂಡ ಕೇಳಿದರು. ಬ್ಯಾಂಕ್ ಖಾತೆಯಲ್ಲಿರುವ ಹಣದ ಪೈಸೆ ಪೈಸೆಯನ್ನು ಕೂಡ ಸರಿಯಾಗಿ ಹೇಳಬೇಕು. ಸ್ವಲ್ಪ ವ್ಯತ್ಯಾಸವಾದರೂ ನ್ಯಾಯಾಲಯದಲ್ಲಿ ಸಮಸ್ಯೆ ಯಾಗುತ್ತದೆ ಎಂದು ಬೆದರಿಸಿದರು.
ಮೊಬೈಲ್ ಕೆಮರಾದಿಂದ ಮುಖ ಸ್ವಲ್ಪ ಆಚೀಚೆಯಾದರೂ ಆಕ್ಷೇಪಿಸುತ್ತಿದ್ದರು. ಮನೆಯ ವಿಸ್ತೀರ್ಣ, ಗೂಗಲ್ ಟ್ರಾನ್ಸಾಕ್ಷನ್ ಮಾಹಿತಿ ಕೂಡ ಕೇಳಿದರು. ನೀರು ಕುಡಿಯುವುದಕ್ಕೂ ಬಿಡಲಿಲ್ಲ. ಎಟಿಎಂ ಪಿನ್ ಕೇಳಿದರು. ಕೂಡಲೇ ಬ್ಯಾಂಕ್‌ಗೆ ಹೋಗಿ ಆರ್‌ಟಿಜಿಎಸ್ ಮಾಡಿ.
ಬ್ಯಾಂಕ್‌ನವರಿಗಾಗಲಿ, ಪೊಲೀಸ್‌ನವರಿಗಾಗಲಿ ತಿಳಿಸಬೇಡಿ. ಅವರು ಕೂಡ ಇದರಲ್ಲಿ ಸೇರಿದ್ದಾರೆ. ಅವರಿಗೆ ಗೊತ್ತಾದರೆ ನಿಮಗೆ ಸಮಸ್ಯೆಯಾಗುತ್ತದೆ. ನಾವು ನಿಮಗೆ ಸಹಾಯ ಮಾಡುತ್ತೇವೆ. ನಿಮ್ಮ ಪ್ರಕರಣ ಮುಗಿದ ಕೂಡಲೇ ನಿಮಗೆ ಆರ್‌ಬಿಐನಿಂದ ಹಣವೂ ಬರುತ್ತದೆ. ಮತ್ತೆ 1.30ಕ್ಕೆ ಕರೆ ಮಾಡುತ್ತೇವೆ ಎಂದರು.
ಖಾತೆಯಲ್ಲಿ 3,000 ಕೋ.ರೂ !
“ನಿಮ್ಮ ಬ್ಯಾಂಕ್ ಖಾತೆಗೆ 3,000 ಕೋ.ರೂ. ಜಮೆಯಾಗಿದ್ದು ಅದರಿಂದ ಬೇರೆ ಬೇರೆ ವ್ಯಕ್ತಿಗಳ ಖಾತೆಗೆ ವರ್ಗಾವಣೆಯಾಗುತ್ತಿದೆ. ಕೂಡಲೇ ನಿಮ್ಮ ಬ್ಯಾಂಕ್ ಪಾಸ್ ಪುಸ್ತಕದ ಫೋಟೋ ಕಳುಹಿಸಿಕೊಡಿ’ ಎಂಬುದಾಗಿಯೂ ಹೇಳಿದರು !.ಗೆಳೆಯನಿಗೆ ತಿಳಿಸಿದರು.
ರೊನಾಲ್ಡ್ ಅವರು ನಡೆದ ವಿಚಾರವನ್ನು ತನ್ನ ಗೆಳೆಯನಿಗೆ ತಿಳಿಸಿದರು. ಅವರು ಕೂಡಲೇ ಸೈಬರ್ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು “ಇದೊಂದು ವಂಚನೆ. ಯಾವುದೇ ಮಾಹಿತಿ ನೀಡಬೇಡಿ’ ಎಂದರು. ನಕಲಿ ಅಧಿಕಾರಿಗಳು ಮೊದಲೇ ತಿಳಿಸಿದಂತೆ ಅದೇ ದಿನ ಮಧ್ಯಾಹ್ನದ ಬಳಿಕ ಮತ್ತೆ ಕರೆ ಮಾಡಿದರು. ಆಗ ರೊನಾಲ್ಡ್ ಅವರ ಗೆಳೆಯ ಕರೆ ಸ್ವೀಕರಿಸಿ ಮರು ಪ್ರಶ್ನೆಗಳನ್ನು ಕೇಳಿ ದಬಾಯಿಸಿದರು. ಆಗ ಕರೆ ಕಡಿತವಾಗಿದೆ.
ದೇವರೇ ಜ್ಞಾನ ನೀಡಿ ರಕ್ಷಿಸಿದರು
“ನಾನು ಆನ್‌ಲೈನ್‌ನಲ್ಲಿ ಕೆಲವು ವಸ್ತುಗಳನ್ನು ಬುಕ್ ಮಾಡಿದ್ದರಿಂದ ಆರಂಭದಲ್ಲಿ ಪಾರ್ಸೆಲ್ ವಿಚಾರವನ್ನು ನಂಬಿದ್ದೆ. ಅವರು ಮಾತನಾಡುವ ರೀತಿ ನೋಡಿದಾಗ ನಂಬದೆ ಇರಲು ಸಾಧ್ಯವೇ ಇರಲಿಲ್ಲ. ಸಿಬಿಐನ ದಾಖಲೆಗಳು, ನನ್ನ ಹೆಸರಿನಲ್ಲಿ ಸುಪ್ರೀಂ ಕೋರ್ಟ್‌ನಲ್ಲಿರುವ ಪ್ರಕರಣದ ದಾಖಲೆಗಳು…ಮೊದಲಾದವುಗಳನ್ನು ಕೂಡ ಕಳುಹಿಸಿಕೊಟ್ಟಿದ್ದರು. ಪೊಲೀಸ್ ಅಥವಾ ಸಿಬಿಐ ಅಧಿಕಾರಿಗಳೆಂದು ನಂಬದಿರಲು ಸಾಧ್ಯವೇ ಆಗಿರಲಿಲ್ಲ. ಆದರೆ ನನ್ನ ಬ್ಯಾಂಕ್ ಪಾಸ್ ಪುಸ್ತಕದ ಫೋಟೋ ಕೇಳಿದಾಗ ಸ್ವಲ್ಪ ಸಂದೇಹ ಬಂತು. ಅನಂತರ ಗೆಳೆಯ ತಿಳಿಸಿದಾಗ ಇದೊಂದು ವಂಚನೆ ಎಂಬುದು ಗೊತ್ತಾಯಿತು. ನಾನು ಕೆಲವೊಂದು ಮಾಹಿತಿ ನೀಡಿದ್ದೆ. ಆದರೆ ಎಟಿಎಂ ಪಿನ್ ನಂಬರ್, ಬೇರೆ ಕೆಲವು ಮಾಹಿತಿಗಳನ್ನು ನೀಡಿಲ್ಲ. ಆರ್‌ಟಿಜಿಎಸ್ ಮಾಡಿಲ್ಲ. ದೇವರೇ ನನಗೆ ಆ ಜ್ಞಾನ ನೀಡಿದರು. ಇಲ್ಲವಾದರೆ ಖಾತೆಗಳಲ್ಲಿರುವ ಎಲ್ಲ ಹಣ ದೋಚುತ್ತಿದ್ದರು.
-ರೊನಾಲ್ಡ್ ವಿನ್ಸೆಂಟ್ ಕ್ರಾಸ್ತಾ, ವಂಚನೆಯಿಂದ ರಕ್ಷಿಸಲ್ಪಟ್ಟ ಸಂಗೀತ ಕಲಾವಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.