Nanthoor ಜಂಕ್ಷನ್: ಮೇಲ್ಸೇತುವೆ ಅನುಷ್ಠಾನಕ್ಕೆ ಮುನ್ನುಡಿ!
ಸರ್ವಿಸ್ ರಸ್ತೆ ರಚನೆಯ ಪೂರ್ವಭಾವಿ ಕೆಲಸಕ್ಕೆ ಚಾಲನೆ; ರಸ್ತೆ ಅಭಿವೃದ್ಧಿ ಕಾಮಗಾರಿಗೆ ವೇಗ; ಮಳೆ ನಿಂತ ತತ್‌ಕ್ಷಣ ಪ್ರಧಾನ ಕಾಮಗಾರಿ ಆರಂಭ; ಈಡೇರುವ ಹಂತದಲ್ಲಿದೆ ಬಹುಕಾಲದ ಬೇಡಿಕೆ
Team Udayavani, Sep 11, 2024, 6:53 PM IST
ನಂತೂರು: ಸಂಚಾರ ದಟ್ಟಣೆ ಯಿಂದ ವಾಹನ ಚಾಲಕರು, ಸವಾರರು ಮಾತ್ರವಲ್ಲದೆ ಸಾರ್ವಜನಿಕರಿಗೆ ನಿತ್ಯ ಸಮಸ್ಯೆಯ ತಾಣವಾಗಿರುವ ನಂತೂರು ಜಂಕ್ಷನ್‌ನಲ್ಲಿ ಬಹುನಿರೀಕ್ಷಿತ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ರಸ್ತೆ ವಿಸ್ತರಣೆಯೊಂದಿಗೆ, ವಾಹನ ಮೇಲ್ಸೇತುವೆ (ಫ್ಲೈ ಓವರ್ ಸ್ವರೂಪ) ನಿರ್ಮಾಣಕ್ಕೆ ಸಂಬಂಧಿಸಿದ ಪೂರ್ವಭಾವಿ ಕಾಮಗಾರಿಗಳು ಭರದಿಂದ ನಡೆಯುತ್ತಿದೆ.
15 ದಿನಗಳಿಂದ ಕಾಮಗಾರಿ ನಡೆಯುತ್ತಿದ್ದು, ರಸ್ತೆ ಬದಿ ಭೂ ಸ್ವಾಧೀನ ಮಾಡಲಾಗಿರುವ ಸ್ಥಳವನ್ನು ಸಮತಟ್ಟು ಮಾಡಿ, ವಿದ್ಯುತ್ ಕಂಬಗಳನ್ನು ತೆರವು ಗೊಳಿಸಿ ಬದಿಯಲ್ಲಿ ಅಳವಡಿಸುವ ಕೆಲಸ ಪ್ರಸ್ತುತ ನಡೆಯುತ್ತಿದೆ. ಮಳೆಗಾಲ ಮುಗಿದ ತತ್‌ಕ್ಷಣ ಮುಖ್ಯ ಕಾಮಗಾರಿಗೆ ಚಾಲನೆ ನೀಡಲು ನಿರ್ಧರಿಸಿರುವುದರಿಂದ ಪೂರಕ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ.
ಸುಗಮ ಸಂಚಾರಕ್ಕೆ ಸರ್ವಿಸ್ ರಸ್ತೆ
ರಾ.ಹೆ. 66ರಲ್ಲಿ ನಂತೂರು ಪದವು ಕಡೆಯಿಂದ ನಂತೂರು ಜಂಕ್ಷನ್ ಮೂಲಕ ವಾಗಿ ಪಂಪ್‌ವೆಲ್ ಕಡೆಗೆ ಸರ್ವಿಸ್ ರಸ್ತೆ ಕಾಮಗಾರಿ ನಡೆಯುತ್ತಿದೆ. ರಾ.ಹೆ.73ರಲ್ಲಿ ಬಿಕರ್ನಕಟ್ಟೆ ಕಡೆಯಿಂದ ಮಂಗಳೂರು ನಗರ ಪ್ರವೇಶಿಸುವ (ಮಲ್ಲಿಕಟ್ಟೆ ಕಡೆಗೆ) ವರೆಗೆ ಕಾಮಗಾರಿ ಗಳು ನಡೆಯಲಿವೆ. ಎರಡೂ ಬದಿಗಳಲ್ಲಿ ಸರ್ವಿಸ್ ರಸ್ತೆ ನಿರ್ಮಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡು ವುದು ಈ ಕಾಮಗಾರಿಯ ಉದ್ದೇಶ.
40 ಮೀ. ಅಗಲದ ಓವರ್‌ಪಾಸ್
ಕೆಪಿಟಿ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ 66 ಮತ್ತು ಬಿ.ಸಿ.ರೋಡ್ ಕಡೆಯಿಂದ ರಾ.ಹೆ.73 ಸಂಧಿಸುವ ಸ್ಥಳವಾಗಿರುವುದರಿಂದ ನಂತೂರು ಜಂಕ್ಷನ್ ಅತೀ ಹೆಚ್ಚು ವಾಹನ ದಟ್ಟಣೆಯಿಂದ ಕೂಡಿರುವ ಸ್ಥಳವಾಗಿದೆ. ಹೆದ್ದಾರಿ ಅಭಿವೃದ್ಧಿ ಮಾಡ ಬೇಕು ಎನ್ನುವುದು ಸಾರ್ವಜನಿಕರ, ವಾಹನ ಸವಾರರ ಬಹುಕಾಲದ ಬೇಡಿಕೆ. ಅದಕ್ಕೀಗ ಕಾಲ ಕೂಡಿ ಬಂದಿದ್ದು, ಸುಮಾರು 40 ಮೀ. ಅಗಲದ ಚತುಷ್ಪಥ ಓವರ್‌ಪಾಸ್ ನಿರ್ಮಾಣವಾಗಲಿದೆ. ಎರಡು ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ.
2007ರಲ್ಲಿ ಆಗುವುದರಲ್ಲಿತ್ತು!
ಸುರತ್ಕಲ್-ಬಿ.ಸಿ.ರೋಡ್ ಮಧ್ಯೆ 2005ರಲ್ಲಿ ಚತುಷ್ಪಥ ಕಾಮಗಾರಿ ಕೈಗೆತ್ತಿ ಕೊಂಡಾಗ 2007ರೊಳಗೆ ನಂತೂರಿನಲ್ಲಿ ಫ್ಲೈ ಓವರ್ ನಿರ್ಮಿಸುವ ಪ್ರಸ್ತಾವವಿತ್ತು. ಆದರೆ ನಂತೂರಿನಲ್ಲಿ ಸಕಾಲದಲ್ಲಿ ಭೂಸ್ವಾ ಧೀನವಾಗದೆ ಕಾಮಗಾರಿ ನಡೆಯಲಿಲ್ಲ. ಇದೇ ಕಾರಣಕ್ಕಾಗಿ ಹೆದ್ದಾರಿ ಪ್ರಾಧಿಕಾರ ಈ ಕಾಮಗಾರಿಯನ್ನು ಕೈಬಿಟ್ಟಿತ್ತು. ಬಳಿಕ ಜಿಲ್ಲಾಡಳಿತ ಎಚ್ಚೆತ್ತು ಭೂಸ್ವಾಧೀನ ಮಾಡಿ ದ್ದರೂ ಗುತ್ತಿಗೆ ವಹಿಸಿಕೊಂಡಿದ್ದ ಸಂಸ್ಥೆ ಯೋಜನ ವೆಚ್ಚ ದುಪ್ಪಟ್ಟು ಆಗಿರುವ ಹಿನ್ನೆಲೆಯಲ್ಲಿ ಮತ್ತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ನಿರಾಕರಿಸಿತ್ತು. ಹೀಗಾಗಿ ಯೋಜನೆ ಬಾಕಿಯಾಗಿತ್ತು.
ಗೊಂದಲದ ಗೂಡು!
ನಂತೂರು ವೃತ್ತ ವಾಹನ ಚಾಲಕರ ಪಾಲಿಗೆ ಗೊಂದಲದ ಗೂಡು. ಪರಿಣಾಮ ವಾಹನ ಸಂಚಾರ ಪದೇಪದೆ ಸ್ಥಗಿತಗೊಳ್ಳುವುದು ಇಲ್ಲಿ ನಿರಂತರವಾಗಿ ಕಾಡುವ ಸಮಸ್ಯೆ. ಕೆಲವು ಬಾರಿ ಒಂದು ಕಿಲೋ ಮೀಟರ್‌ವರೆಗೆ ವಾಹನಗಳು ಸಾಲುಗಟ್ಟಿ ನಿಲುತ್ತವೆ. ಆನೇಕ ಅಪಘಾತಗಳು ಸಂಭವಿಸಿ ಸಾವು ನೋವುಗಳಿಗೂ ಕಾರಣ. ದ್ವಿಚಕ್ರ, ಕಾರು, ರಿಕ್ಷಾಗಳ ಚಾಲಕರು ಆತಂಕದಿಂದಲೇ ವಾಹನ ಚಲಾಯಿಸಬೇಕಾದ ಪರಿಸ್ಥಿತಿ. ಮತ್ತೂಂದೆಡೆ ಆಗಾಗ ಸಂಚಾರ ತಡೆ ತಲೆದೋರುತ್ತಿದೆ.
ಕಾಮಗಾರಿ ಕಾರಣ ಸಂಚಾರ ದಟ್ಟನೆಯ ಆತಂಕ!
ಸರ್ವಿಸ್ ರಸ್ತೆ ನಿರ್ಮಾಣ ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಟ್ಟರೂ, ಕಾಮಗಾರಿ ಆರಂಭವಾದ ಬಳಿಕ ವಾಹನ ದಟ್ಟನೆ ಸಮಸ್ಯೆ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆಯಿದೆ. ಪಡೀಲ್- ಪಂಪ್‌ವೆಲ್ ರಸ್ತೆ ಕಾಮಗಾರಿ ಪೂರ್ಣಗೊಂಡರೆ ಪಡೀಲ್ ಕಡೆಯಿಂದ ನಗರಕ್ಕೆ ಬರುವ ಮತ್ತು ನಗರದಿಂದ ಹೊರ ಹೋಗುವ ವಾಹನಗಳು ಈ ರಸ್ತೆಯನ್ನು ಬಳಸಿದರೆ ಸ್ವಲ್ಪ ದಟ್ಟನೆ ಕಡಿಮೆಯಾಗಬಹುದು ಎಂದು ಅಂದಾಜಿಸಲಾಗಿದೆ. ಆದರೆ ಕೆಪಿಟಿಯಿಂದ ಪಂಪ್‌ವೆಲ್ ಕಡೆಗೆ ಸಾಗುವ ವಾಹನಗಳು ಹೆದ್ದಾರಿಯಲ್ಲೇ ಸಾಗಬೇಕಾದ ಅನಿವಾರ್ಯತೆಯಿದೆ. ಸದ್ಯ ಕಲ್ಲಡ್ಕ, ಮೆಲ್ಕಾರ್ ಭಾಗದಲ್ಲಿ ಫ್ಲೈ ಓವರ್ ಕಾಮಗಾರಿಯಿಂದಾಗಿ ವಾಹನ ದಟ್ಟನೆ ಸಮಸ್ಯೆ ಬಿಗಡಾಯಿಸಿದೆ. ಇದೇ ರೀತಿ ನಂತೂರಿನಲ್ಲೂ ಕಾಮಗಾರಿ ವೇಳೆ ದಟ್ಟನೆ ಕಾಡದಂತೆ ಮುನ್ನೆಚ್ಚರಿಕಾ ಸೂತ್ರವನ್ನು ಈಗಲೇ ಆಡಳಿತ ವ್ಯವಸ್ಥೆ ಕೈಗೊಳ್ಳಬೇಕಿದೆ.
ಮಳೆಗಾಲದ ಬಳಿಕ ಕಾಮಗಾರಿಗೆ ಚಾಲನೆ
ನಂತೂರಿನಲ್ಲಿ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯ ಭಾಗವಾಗಿ ಪೂರ್ವಭಾವಿ ಕೆಲಸಗಳು ಆರಂಭಿಸಲಾಗಿದೆ. ಮಳೆಗಾಲ ಮುಗಿದ ಬಳಿಕ ಕಾಮಗಾರಿಗೆ ಚಾಲನೆ ನೀಡಲಾಗುವುದು. ಎರಡು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ.
-ಅಬ್ದುಲ್ಲಾ ಜಾವೇದ್ ಅಝ್ಮಿ, ಯೋಜನ ನಿರ್ದೇಶಕರು, ಎನ್‌ಎಚ್‌ಎಐ ಮಂಗಳೂರು
ಕೆಪಿಟಿಯಲ್ಲಿ ಬಾಕಿಯಾದ ಕಾಮಗಾರಿ
ಕೆಪಿಟಿ ಜಂಕ್ಷನ್‌ನಲ್ಲಿಯೂ ಓವರ್‌ಪಾಸ್ ನಿರ್ಮಾಣಕ್ಕಾಗಿ ಎಚ್‌ಎಚ್‌ಎಐ ಅನುಮೋದನೆ ನೀಡಿದೆ. ಇದಕ್ಕಾಗಿ ಸರ್ವಿಸ್ ರಸ್ತೆ ರಚಿಸಲು ಮರಗಳನ್ನು ತೆರವುಗೊಳಿಸಿರುವುದಕ್ಕೆ ಪರಿಸರ ಪ್ರೇಮಿಗಳು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಗುತ್ತಿಗೆಗಾರರು ಕಾಮಗಾರಿ ಮುಂದುವರಿಸಲು ಆಸಕ್ತಿ ವಹಿಸದೆ ಸದ್ಯ ಕಾಮಗಾರಿ ಬಾಕಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.